RSS ಅಜೆಂಡಾದಂತೆ ಗುಪ್ತವಾಗಿ ಲಿಂಗಾಯತರನ್ನು ಹಣಿಯಲು ಮುಂದಾದ BJP: ಸ್ಪೋಟಕ ಮಾಹಿತಿ ಟ್ವೀಟ್ ಮಾಡಿದ ಕಾಂಗ್ರೆಸ್
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಅಜೆಂಡಾದಂತೆ ಗುಪ್ತವಾಗಿ ಲಿಂಗಾಯರನ್ನು ಹಣಿಯಲು ಬಿಜೆಪಿ ಮುಂದಾಗಿದೆ ಎಂದು ಕರ್ನಾಟಕ ಕಾಂಗ್ರೆಸ್ ರಾಜ್ಯ ಘಟಕ ಟ್ವೀಟ್ ಮಾಡಿದೆ
ಬೆಂಗಳೂರು, ಮಾರ್ಚ್ 17: ಮೇ ತಿಂಗಳಲ್ಲಿ ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ನಡುವಿನ ಆರೋಪ ಪ್ರತ್ಯಾರೋಪಗಳು ವ್ಯಾಪಕವಾಗಿವೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಅಜೆಂಡಾದಂತೆ ಗುಪ್ತವಾಗಿ ಲಿಂಗಾಯರನ್ನು ಹಣಿಯಲು ಬಿಜೆಪಿ ಮುಂದಾಗಿದೆ ಎಂದು ಕರ್ನಾಟಕ ಕಾಂಗ್ರೆಸ್ ರಾಜ್ಯ ಘಟಕ ಟ್ವೀಟ್ ಮಾಡಿದೆ. #ಲಿಂಗಾಯತವಿರೋಧಿಬಿಜೆಪಿ ಎಂಬ ಹ್ಯಾಶ್‌ಟ್ಯಾಗ್ ಅನ್ನು ತನ್ನ ಸರಣಿ ಟ್ವೀಟ್‌ಗಳಲ್ಲಿ ಬಳಸಿಕೊಂಡಿದೆ.
'ನಾಗಪುರದ ಅಜೆಂಡಾದಂತೆ ಗುಪ್ತವಾಗಿ ಲಿಂಗಾಯತರನ್ನು ಹಣಿಯಲು ಮುಂದಾಗಿದೆ ಬಿಜೆಪಿ. BSYರನ್ನು ಕಣ್ಣೀರು ಹಾಕಿಸಿ ಅಧಿಕಾರದಿಂದ ಇಳಿಸುವ ಮೂಲಕ ಈ ಅಜೆಂಡಾದ ಜಾರಿಗೆ ಚಾಲನೆ ಕೊಟ್ಟಂತಿದೆ. ಲಿಂಗಾಯತ ಸಮುದಾಯದ ಬಸವತತ್ವದ ವೈಚಾರಿಕ ಪ್ರಜ್ಞೆ ನಾಗಪುರಕ್ಕೆ ತತ್ವಕ್ಕೆ ವಿರುದ್ಧವಿರುವುದರಿಂದ ಈ ಹುನ್ನಾರವೇ?' ಎಂದು ರಾಜ್ಯ ಬಿಜೆಪಿಯನ್ನು ಕಾಂಗ್ರೆಸ್ ಪ್ರಶ್ನಿಸಿದೆ.

'ಬಿಜೆಪಿಯಲ್ಲಿ ಲಿಂಗಾಯತ ನಾಯಕರನ್ನು ಹತ್ತಿಕ್ಕುವ, ಲಿಂಗಾಯತ ಸಮುದಾಯವನ್ನ ನಿರ್ಲಕ್ಷಿಸುವ ಗುಪ್ತ ಅಜೆಂಡಾ ರೂಪುಗೊಂಡಿದೆಯೇ? ಬಿಜೆಪಿ ಶಾಸಕ ಶರಣು ಸಲಗರರಿಗೆ ಲಿಂಗಾಯತರಿಗೆ ಸಹಾಯ ಮಾಡುವುದೇ ಸಮಸ್ಯೆಯಂತೆ, ಲಿಂಗಾಯತರಿಗೆ ನೆರವಾಗಬಾರದು ಎಂದು ಬಿಜೆಪಿ ಕಚೇರಿಯಿಂದ ಸೂಚನೆ ಬಂದಿದೆಯೇ? ಹಾಗಾಗಿ ಈ ಅಸಹಾಯಕತೆಯೇ?' ಎಂದೂ ಕೆಪಿಸಿಸಿ ಪ್ರಶ್ನಿಸಿದೆ. ಈ ಟ್ವೀಟ್‌ನೊಂದಿಗೆ ಶಾಸಕ ಶರಣು ಸಲಗರರಿಗೆ ಸಂಬಂಧಿಸಿದ ವಿಡಿಯೊ ತುಣುಕೊಂದನ್ನೂ ಕಾಂಗ್ರೆಸ್ ಹಂಚಿಕೊಂಡಿದೆ.
'ಗೃಹಸಚಿವರ ಮನೆಯ ಮೇಲೆ ದಾಳಿ ಮಾಡಿ ಗೇಟು, ಪಾಟುಗಳನ್ನು ಹಾನಿಗೊಳಿಸಿದ್ದ ABVP ಕಾರ್ಯಕರ್ತರನ್ನು ಬಂಧಿಸಲಿಲ್ಲ.ಈಶ್ವರಪ್ಪ, ರಮೇಶ್ ಜಾರಕಿಹೊಳಿ, ಅರವಿಂದ್ ಲಿಂಬಾವಳಿಯನ್ನು ಬಂಧಿಸಿರಲಿಲ್ಲ. ಆದರೆ ಜಯಮೃತ್ಯುಂಜಯ ಸ್ವಾಮಿಗಳನ್ನು ಬಂಧಿಸಿ ಸಮಸ್ತ ಲಿಂಗಾಯತ ಸಮುದಾಯಕ್ಕೆ ಅವಮಾನಿಸಿದ #ಲಿಂಗಾಯತವಿರೋಧಿಬಿಜೆಪಿ ಯ ಕೇಡುಗಾಲ ಆರಂಭವಾಗಿದೆ' ಎಂದೂ ಕಾಂಗ್ರೆಸ್ ಹೇಳಿದೆ.

'BSYರವರಿಗೆ ಪ್ರಚಾರ ಸಮಿತಿಯ ನೇತೃತ್ವವಿಲ್ಲ. ಶೆಟ್ಟರ್‌ಗೆ ಅವರ ಕ್ಷೇತ್ರದಲ್ಲೇ ವೇದಿಕೆಗೆ ಆಹ್ವಾನವಿರಲಿಲ್ಲ. ಸೋಮಣ್ಣ ಅತಂತ್ರರಾಗಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಹೆಸರೇ ಹೆಸರೇ ಹೇಳುತ್ತಿಲ್ಲ. ಇದೆಲ್ಲವೂ ಜೋಶಿ, ಸಂತೋಷರ ತಂತ್ರವೇ? ಬಿಜೆಪಿಯಲ್ಲಿ ವ್ಯವಸ್ಥಿತವಾಗಿ ಲಿಂಗಾಯತ ನಾಯಕರನ್ನು ಮೂಲೆಗೆ ತಳ್ಳಲಾಗುತ್ತಿದೆ' ಎಂದೂ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಇದೇ ವೇಳೆ, ಗುರುವಾರ ಮೂಡಿಗೆರೆಯಲ್ಲಿ ನಡೆದ ಘಟನೆ ಬಗ್ಗೆ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದೆ.
'ವಿಜಯ ಸಂಕಲ್ಪ ಯಾತ್ರೆ ಮಾಡುತ್ತೇವೆ ಎಂದು ಹೋಗುವ ಬಿಜೆಪಿಗರು ಹಲವಾರು ಕಡೆ 'U ಟರ್ನ್ ಯಾತ್ರೆ' ಮಾಡಿದ್ದಾರೆ. ಯಾತ್ರೆಗೆಂದು ಹೋದ ಸಿಟಿ ರವಿ, ಬಿಎಸ್ ಯಡಿಯೂರಪ್ಪ ಅವರಿಗೆ ಕಾರ್ಯಕರ್ತರ ಪ್ರತಿಭಟನೆಯ ಬಿಸಿ ತಟ್ಟಿ ವಾಪಾಸಾದ ಘಟನೆ ಬಿಜೆಪಿಯ ಅವನತಿಗೆ ಸಾಕ್ಷಿ ಹೇಳುತ್ತಿತ್ತು. ಇದಲ್ಲವೇ ಅಮೃತಕಾಲ, ಇದಲ್ಲವೇ ಅಚ್ಛೆ ದಿನ್?' ಎಂದು ಕಾಂಗ್ರೆಸ್ ಕುಹಕವಾಡಿದೆ.

ಬಿಜೆಪಿಯ 'ಕಲಹ ಸಂಕಲ್ಪ ಯಾತ್ರೆ' ಯಶಸ್ವಿಯಾಗಿ ಮುಂದುವರೆದಿದೆ. ಬಿಜೆಪಿಗರು ಹೋದಲ್ಲಿ, ಬಂದಲ್ಲಿ ಸ್ವಂತ ಕಾರ್ಯಕರ್ತರ ಪ್ರತಿಭಟನೆ, ಆಕ್ರೋಶಗಳನ್ನು ಎದುರಿಸಬೇಕಾದ ದುಸ್ಥಿತಿಗೆ ಬಂದಿದೆ. ಚಿಕ್ಕಮಗಳೂರು ಶಾಸಕ ಎಂ ಪಿ ಕುಮಾರಸ್ವಾಮಿ ವಿರುದ್ಧ ಸಿ.ಟಿ ರವಿ, BSY ಅವರಿಗೆ ಕಾರ್ಯಕರ್ತರು ಘೇರಾವ್ ಹಾಕಿದ್ದು ನಾಚಿಕೆಗೆಡಲ್ಲವೇ ಎಂದೂ ಕೆಪಿಸಿಸಿ ಪ್ರಶ್ನಿಸಿದೆ.
'ಸಾಧನೆ ತೋರಿಸಿ ಮತ ಕೇಳಲಾಗದೆ #BJPRowdyMorcha ಮುಂದಿಟ್ಟುಕೊಂಡು ಚುನಾವಣೆ ಎದುರಿಸಲು ಮುಂದಾಗಿದೆ ಬಿಜೆಪಿ. ಪ್ರಧಾನಿಯಿಂದ ಹಿಡಿದು ಸಚಿವ, ಶಾಸಕರವರೆಗೂ ರೌಡಿಗಳೆದುರು ಕೈಮುಗಿದು, ತಲೆಬಾಗಿಸಿ ನಿಲ್ಲುತ್ತಿದ್ದಾರೆ. 'ರೌಡಿ ರಾಜಕೀಯ' ಮಾಡುವಂತಹ ಹೀನಾಯ ಸ್ಥಿತಿಗೆ ಬಿಜೆಪಿ ತಲುಪಬಾರದಿತ್ತು. ಬಿಜೆಪಿ ಸಂಸ್ಕೃತಿಯ ಅಸಲಿತನ ಬಯಲಾಗುತ್ತಿದೆ' ಎಂದು ಕಾಂಗ್ರೆಸ್ ಟೀಕಿಸಿದೆ.
ಬಿಜೆಪಿ ವಿರುದ್ಧ ಲಿಂಗಾಯತ ಸಮುದಾಯ ಆಕ್ರೋಶಗೊಂಡಿದೆ. ನಾಗಪುರದ ಲಿಂಗಾಯತ ವಿರೋಧಿ ನೀತಿ ಅಳವಡಿಸಿಕೊಂಡಿರುವ ಸಿಟಿ ರವಿ ತಮ್ಮ ಕ್ಷೇತ್ರದ ಲಿಂಗಾಯತ ಸಮುದಾಯವಿರುವ ಪ್ರದೇಶಗಳನ್ನು ಕಡೆಗಣಿಸಿದ್ದಾರೆ ಎಂದು ಅಲ್ಲಿನ ಲಿಂಗಾಯತರೆ ಆಕ್ರೋಶ ಹೊರಹಾಕಿದ್ದಾರೆ. ಬಿಜೆಪಿ 'ಟಾರ್ಗೆಟ್ ಲಿಂಗಾಯತ' ಅಭಿಯಾನ ನಡೆಸಿದೆಯೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.












Click it and Unblock the Notifications