ಈಶ್ವರಪ್ಪ ವಿರೋಧಿ ಆಯನೂರು ಮಂಜುನಾಥ ಕಾಂಗ್ರೆಸ್ ಸೇರ್ಪಡೆ? ಶಿವಮೊಗ್ಗ ರಾಜಕಾರಣದಲ್ಲಿ ಬಿಗ್ ಟ್ವಿಸ್ಟ್? ಇನ್‌ಸೈಡ್ ಸ್ಟೋರಿ
ಬೆಂಗಳೂರು, ಮಾರ್ಚ್ 30: ಕರ್ನಾಟಕ ವಿಧಾನಸಭೆ ಚುನಾವಣೆಯ ( Karnataka Assembly Elections 2023 ) ದಿನಾಂಕ ಬುಧವಾರ ಪ್ರಕಟಗೊಂಡಿದೆ. ಮೇ 10 ರಂದು ಮತದಾನ ನಡೆಸಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ. ಇದರ ಫಲಿತಾಂಶ ಮೇ 13 ರಂದು ಹೊರ ಬೀಳಲಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ತಮ್ಮ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿವೆ. ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಕೆಲ ದಿನಗಳಲ್ಲಿ ಪ್ರಕಟಿಸಲಿದೆ.
ಆಡಳಿತಾರೂಢ ಬಿಜೆಪಿ ಹಲವು ಕ್ಷೇತ್ರಗಳಲ್ಲಿ ತಮ್ಮದೇ ಪಕ್ಷದವರಿಂದ ಸಂಕಷ್ಟ ಎದುರಿಸುತ್ತಿರುವುದು ಕಂಡುಬಂದಿದೆ. ಅದರಲ್ಲೂ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಪ್ರತಿನಿಧಿಸುವ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಅಸಮಾಧಾನದ ಕಿಡಿ ಹೊತ್ತಿಕೊಂಡಿದೆ. ವಯಸ್ಸಿನ ಕಾರಣಕ್ಕೆ ಕೆಎಸ್ ಈಶ್ವರಪ್ಪ ಅವರಿಗೆ ಟಿಕೆಟ್ ದೊರೆಯುವುದು ಸ್ಪಷ್ಟವಾಗಿಲ್ಲ. ಈ ಹಿನ್ನೆಲೆಯಲ್ಲಿ ಈಶ್ವರಪ್ಪ ಅವರು ತಮ್ಮ ಮಗನಿಗೆ ಟಿಕೆಟ್ ಕೇಳಿದ್ದಾರೆಂಬ ಮಾತುಗಳು ರಾಜಕೀಯ ವಲಯದಲ್ಲಿ ಓಡಾಡುತ್ತಿವೆ.

ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ಎಂಎಲ್‌ಸಿ ಆಯನೂರು ಮಂಜುನಾಥ ಅವರು ಈಶ್ವರಪ್ಪ ವಿರುದ್ಧ ಸಿಡಿದೆದ್ದಿದ್ದಾರೆ. ಇಷ್ಟು ವರ್ಷ ಬಿಜೆಪಿ ಟಿಕೆಟ್ ಪಡೆದು ಶಾಸಕರಾಗಿ ಅಧಿಕಾರ ಅನುಭವಿಸಿರುವ ಈಶ್ವರಪ್ಪ ತಮ್ಮ ಪುತ್ರನಿಗೆ ಟಿಕೆಟ್ ಕೇಳುತ್ತಿರುವುದು ಎಷ್ಟು ಸರಿ ಎಂದು ಆಯನೂರು ಮಂಜುನಾಥ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರನ್ನೂ ಭೇಟಿ ಮಾಡಿ ಮಾತುಕತೆ ನಡೆಸಿರುವ ಅವರು ಬಿಜೆಪಿ ಟಿಕೆಟ್‌ಗಾಗಿ ಒತ್ತಾಯಿಸಿದ್ದಾರೆ. ಆದರೆ, ಆಯನೂರು ಮಂಜುನಾಥ ಅವರಿಗೆ ಯಡಿಯೂರಪ್ಪ ಯಾವುದೇ ಭರವಸೆಯನ್ನು ನೀಡಿಲ್ಲವೆಂದು ತಿಳಿದುಬಂದಿದೆ. ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಅವರೂ ಆಯನೂರು ಬೆಂಬಲಕ್ಕೆ ಬಂದಿಲ್ಲವೆಂದು ಮೂಲಗಳು ಸ್ಪಷ್ಟಪಡಿಸಿವೆ.
ಈಶ್ವರಪ್ಪ ವಿರುದ್ಧ ಬಹಿರಂಗವಾಗಿಯೇ ಬ್ಯಾನರ್ ವಾರ್
ಯುಗಾದಿ ಹಬ್ಬಕ್ಕೆ ಶುಭಾಶಯ ಕೋರುವ ನೆಪದಲ್ಲಿ ಶಿವಮೊಗ್ಗ ನಗರದಲ್ಲಿ ಆಯನೂರು ಮಂಜುನಾಥ ಅವರ ಬ್ಯಾನರ್ ರಾರಾಜಿಸಿದ್ದವು. ಈ ಬ್ಯಾನರ್‌ಗಳಲ್ಲಿ ಈಶ್ವರಪ್ಪ ಅವರನ್ನು ಗುರಿಯಾಗಿಸಿ ದಾಳಿ ನಡೆಸಲಾಗಿತ್ತು.

'ಹರುಕು ಬಾಯಿಗಳಿಗೆ ಹೊಲಿಗೆ ಬೀಳಲಿ, ಮುರಿದ ಮನಸ್ಸುಗಳ ಬೆಸುಗೆಯಾಗಲಿ, ಶಿವಮೊಗ್ಗದಲ್ಲಿ ಶಾಂತಿ- ಸೌಹಾರ್ಧತೆ ನೆಲೆಸಲಿ. ಎಲ್ಲರಿಗೂ ಶುಭಾಶಯಗಳು. ಈ ಬಾರಿ ಸ್ನೇಹ ಪ್ರಿಯ ಆಯನೂರು ಮಂಜುನಾಥ' ಎಂದು ಬ್ಯಾನರ್‌ಗಳಲ್ಲಿ ಬರೆಯಲಾಗಿತ್ತು. ಇದು ಶಿವಮೊಗ್ಗ ಬಿಜೆಪಿಯಲ್ಲಿ ತಲ್ಲಣವನ್ನು ಸೃಷ್ಟಿಸಿದೆ ಎಂದು ಹೇಳಲಾಗುತ್ತಿದೆ.
'ಲಿಂಗಾಯತ' ಆಯನೂರು ಬಂಡಾಯದಿಂದ ಬಿಜೆಪಿಯಲ್ಲಿ ತಳಮಳ
ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಲಿಂಗಾಯತ ಮತಗಳು ನಿರ್ಣಾಯಕವಾಗಿವೆ. ಯಡಿಯೂರಪ್ಪ ಶಿಷ್ಯರೆಂದೇ ಗುರುತಿಸಿಕೊಂಡಿರುವ ಆಯನೂರು ಮಂಜುನಾಥ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಈಗ ಆಯನೂರು ಅವರ ಅಸಮಾಧಾನವು ಬಿಜೆಪಿಯಲ್ಲಿ ತಳಮಳ ಸೃಷ್ಟಿಸಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ.
2013 ರ ಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿ ರುದ್ರೇಗೌಡ ಅವರು 39,077 ಮತಗಳನ್ನು ಗಳಿಸಿದ್ದರಿಂದ ಬಿಜೆಪಿಯ ಈಶ್ವರಪ್ಪ ಸೋಲು ಅನುಭವಿಸಿದ್ದರು. ಕಾಂಗ್ರೆಸ್‌ನ ಪ್ರಸನ್ನ ಕುಮಾರ್ ಅವರು ಗೆಲುವು ಸಾಧಿಸಿದ್ದರು. ಒಂದು ವೇಳೆ ಆಯನೂರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ, 2013 ರ ಫಲಿತಾಂಶವೇ ಮತ್ತೆ ಮರುಕಳಿಸಬಹುದು ಎಂಬ ಆತಂಕ ಬಿಜೆಪಿ ನಾಯಕರಲ್ಲಿ ಶುರುವಾಗಿದೆ.

ಆಯನೂರು ಕಾಂಗ್ರೆಸ್ ಸೇರ್ಪಡೆ?
ಆಯನೂರು ಮಂಜುನಾಥ ಅವರು ಕಾಂಗ್ರೆಸ್ ಸೇರಲಿದ್ದಾರೆಂಬ ಎಂಬ ಮಾತುಗಳೂ ರಾಜಕೀಯ ವಲಯದಲ್ಲಿ ಓಡಾಡುತ್ತಿವೆ. ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿ ಅಸಮಾಧಾನಗೊಂಡಿರುವ ನಾಯಕರನ್ನು ಪಕ್ಷಕ್ಕೆ ಕರೆತರಲು ಕಾಂಗ್ರೆಸ್ ಯತ್ನಿಸುತ್ತಿರುವುದಂತೂ ಸತ್ಯ.
ಈ ಹಿನ್ನೆಲೆಯಲ್ಲಿ ಆಯನೂರು ಮಂಜುನಾಥ ಅವರಿಗೂ ಕಾಂಗ್ರೆಸ್ ನಾಯಕರು ಗಾಳ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಆಯನೂರು ಮಂಜುನಾಥ ಅವರಿಗೆ ಟಿಕೆಟ್ ನೀಡುವ ಭರವಸೆಯನ್ನೂ ನೀಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಓಡಾಡುತ್ತಿವೆ. ಮುಂದೆ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications