ರಾಮನಗರ ಜಿಲ್ಲೆಯ ಈ ಕ್ಷೇತ್ರದಿಂದ ನಟಿ ರಮ್ಯಾ ಅಖಾಡಕ್ಕೆ? ಪ್ರಭಾವಿ ನಾಯಕರನ್ನು ಮಣಿಸಲು ಡಿಕೆಶಿ ತಂತ್ರ? ಮಾಹಿತಿ, ವಿವರ
ರಾಮನಗರ ಜಿಲ್ಲೆಯ ಈ ಕ್ಷೇತ್ರದಿಂದ ನಟಿ ರಮ್ಯಾ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ರಮ್ಯಾ ಸ್ಪರ್ಧೆಯ ಮೂಲಕ ಇಬ್ಬರು ಪ್ರಭಾವಿ ನಾಯಕರನ್ನು ಹಣಿಯಲು ಡಿಕೆಶಿ ತಂತ್ರ ರೂಪಿಸಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರು, ಫೆಬ್ರವರಿ 13: ಕರ್ನಾಟಕ ಚುನಾವಣೆಗೆ ಇನ್ನೆರಡು ತಿಂಗಳುಗಳು ಬಾಕಿ ಉಳಿದಿವೆ. ಈ ಬಾರಿಯ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಹಾಗೂ ವಿರೋಧ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ನಡುವೆ ಪೈಪೋಟಿ ಏರ್ಪಟ್ಟಿದೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ತನ್ನ ಅದೃಷ್ಟವನ್ನು ಮೊದಲ ಬಾರಿ ಪರೀಕ್ಷಿಸಲಿದೆ. ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಪಂಚರತ್ನ ಯಾತ್ರೆ ಕೈಗೊಂಡಿದೆ. ಕಾಂಗ್ರೆಸ್ ಎರಡು ಗುಂಪುಗಳಲ್ಲಿ ಪ್ರಜಾಧ್ವನಿ ಯಾತ್ರೆಯಲ್ಲಿ ನಿರತವಾಗಿದೆ. ದಕ್ಷಿಣ ಕರ್ನಾಟಕ ಭಾಗದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಯಾತ್ರೆಯ ನೇತೃತ್ವ ವಹಿಸಿದರೆ, ಉತ್ತರ ಕರ್ನಾಟಕ ಭಾಗದಲ್ಲಿ ವಿರೋಧ ಪಕ್ಷದ ನಾಯಕರು ಸಿದ್ದರಾಮಯ್ಯ ಯಾತ್ರೆಯನ್ನು ಮುನ್ನಡೆಸುತ್ತಿದ್ದಾರೆ. ಬಿಜೆಪಿಯು ವಿಜಯ ಸಂಕಲ್ಪ ಯಾತ್ರೆಯನ್ನು ನಡೆಸುತ್ತಿದೆ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಬಿಜೆಪಿ ಪರ ಪ್ರಚಾರ ಕೈಗೊಂಡಿದ್ದಾರೆ. ಜೆಡಿಎಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಬೇಕಿದೆ.

ಕಾಂಗ್ರೆಸ್‌ನಿಂದ ಹಲವರು ಆಕಾಂಕ್ಷಿಗಳು
ಕಾಂಗ್ರೆಸ್ ಪಕ್ಷದ ಟಿಕೆಟ್‌ಗಾಗಿ ಬಹುತೇಕ ಕ್ಷೇತ್ರಗಳಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ. ರಾಜ್ಯದ ಒಟ್ಟು 224 ಕ್ಷೇತ್ರಗಳಿಂದ ಬರೋಬ್ಬರಿ 1311 ಮಂದಿ ಆಕಾಂಕ್ಷಿಗಳು ಟಿಕೆಟ್‌ಗಾಗಿ ಅರ್ಜಿ ಪಡೆದುಕೊಂಡಿದ್ದರು. ಈ ಪೈಕಿ ಒಟ್ಟು 1,230 ಮಂದಿ ಆಕಾಂಕ್ಷಿಗಳು ತಮ್ಮ ಅರ್ಜಿಗಳನ್ನು ಕೆಪಿಸಿಸಿಗೆ ಸಲ್ಲಿಸಿದ್ದಾರೆ. ಸಲ್ಲಿಯಾಗಿರುವ ಒಟ್ಟು ಅರ್ಜಿಗಳ ಪೈಕಿ ST/SC ವರ್ಗದಿಂದ 341 ಅರ್ಜಿಗಳು ಸಲ್ಲಿಕೆಯಾಗಿವೆ. ಸಾಮಾನ್ಯ ವರ್ಗದಿಂದ 889 ಅರ್ಜಿಗಳು ಸಲ್ಲಿಕೆಯಾಗಿವೆ. ಕೆಲ ಕ್ಷೇತ್ರಗಳಲ್ಲಿ ಹತ್ತಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿತ್ತು. ಇದು ಕಾಂಗ್ರೆಸ್ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ.

ಈಗಿರುವ ಬಹುತೇಕ ಶಾಸಕರಿಗೆ ಟಿಕೆಟ್
ಈಗಿರುವ ಬಹುತೇಕ ಕಾಂಗ್ರೆಸ್ ಶಾಸಕರಿಗೆ ಟಿಕೆಟ್ ನೀಡುವುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಈ ಮೂಲಕ ಸುಮಾರು 70 ಅಭ್ಯರ್ಥಿಗಳ ಪಟ್ಟಿ ಬಹುತೇಕ ಖಚಿತಗೊಂಡಾಂತಾಗಿದೆ. ಈ ವಿಚಾರದ ಕುರಿತು ಕಳೆದ ವಾರ ಮಾತನಾಡಿರುವ ಡಿಕೆ ಶಿವಕುಮಾರ್, 'ಈಗಿರುವ ಬಹುತೇಕ ಶಾಸಕರಿಗೆ ಟಿಕೆಟ್ ನೀಡಲಾಗುವುದು. ನಮ್ಮ ಸರ್ಕಾರವಿಲ್ಲದಿದ್ದರೂ, ಅವರು ಕೆಲಸ ಮಾಡಿದ್ದಾರೆ. ಆಡಳಿತದಲ್ಲಿರುವ ಬಿಜೆಪಿ ಸರ್ಕಾರ ಅವರಿಗೆ ಬೆಂಬಲ ನೀಡಿಲ್ಲ. ಇಂತಹ ಪರಿಸ್ಥಿತಿಯಲ್ಲಿಯೂ ತಮ್ಮ ಕ್ಷೇತ್ರಗಳಲ್ಲಿ ಅವರೆಲ್ಲರೂ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿದ್ದಾರೆ. ಜನರಿಗೂ ಅವರೆಲ್ಲರ ಬಗ್ಗೆ ಗೌರವವಿದೆ. ಹೀಗಾಗಿ ಅವರಿಗೆ ಟಿಕೆಟ್ ನೀಡಲಿದ್ದೇವೆ' ಎಂದು ಡಿಕೆಶಿ ತಿಳಿಸಿದ್ದಾರೆ.

ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್- ಕಾಂಗ್ರೆಸ್ ಪೈಪೋಟಿ
ಕಳೆದ ಬಾರಿಯಂತೆ ಈ ಭಾರಿಯೂ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಪೈಪೋಟಿ ನಡೆಸಲಿವೆ. ಒಕ್ಕಲಿಗರ ಪ್ರಾಬಲ್ಯವಿರುವ ಜಿಲ್ಲೆಗಳಲ್ಲಿ ಬಿಜೆಪಿ ಅಷ್ಟೇನೂ ಬಲಿಷ್ಠವಾಗಿಲ್ಲ. ಹೀಗಾಗಿ, ಹಳೇ ಮೈಸೂರು ಭಾಗದಲ್ಲಿ ಈ ಬಾರಿಯ ಚುನಾವಣೆ ಕುಮಾರಸ್ವಾಮಿ ಹಾಗೂ ಡಿಕೆಶಿ ವಿರುದ್ಧದ ಕದನವಾಗಿ ಮಾರ್ಪಟ್ಟಿದೆ. ಈ ಇಬ್ಬರು ಒಕ್ಕಲಿಗ ಸಮುದಾಯಕ್ಕೆ ಸೇರಿದ ನಾಯಕರಾಗಿದ್ದಾರೆ.

ರಾಮನಗರ, ಮಂಡ್ಯದಲ್ಲಿ ಗೆಲ್ಲಲು ಡಿಕೆಶಿ ಯೋಜನೆ
ಒಕ್ಕಲಿಗ ಪ್ರಾಬಲ್ಯವಿರುವ ಈ ಎರಡೂ ಜಿಲ್ಲೆಗಳಲ್ಲಿ ಗೆಲುವು ಸಾಧಿಸಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಯೋಜನೆ ರೂಪಿಸಿದ್ದಾರೆ. ಒಕ್ಕಲಿಗ ಅಸ್ಮಿತೆಯನ್ನು ಮತ್ತೆ ಕೆಣಕಿದ್ದಾರೆ. ಒಕ್ಕಲಿಗ ಮುಖ್ಯಮಂತ್ರಿಯಾಗುವ ಬಗ್ಗೆಯೂ ಇಂಗಿತ ವ್ಯಕ್ತಪಡಿಸಿದ್ದಾರೆ. ರಾಮನಗರ ಹಾಗೂ ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್‌ನ ದಟ್ಟ ಪ್ರಭಾವವಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಮಂಡ್ಯದ ಎಲ್ಲ ಕ್ಷೇತ್ರಗಳಲ್ಲೂ ಜೆಡಿಎಸ್ ಗೆಲುವು ಸಾಧಿಸಿತ್ತು. ಇಂತಹ ಭದ್ರಕೋಟೆಯಲ್ಲಿ ಗೆಲುವು ಸಾಧಿಸುವುದು ಕಾಂಗ್ರೆಸ್‌ಗೆ ಸವಾಲಿನ ವಿಚಾರವಾಗಿದೆ.

ನಟಿ ರಮ್ಯಾ ಮೂಲಕ ಆಪರೇಶನ್ ಚನ್ನಪಟ್ಟಣ?
ನಟಿ ರಮ್ಯಾ ಮೂಲಕ ಆಪರೇಶನ್ ಚನ್ನಪಟ್ಟಣ ಮಾಡಲು ಡಿಕೆ ಶಿವಕುಮಾರ್ ಚಿಂತನೆ ಮಾಡುತ್ತಿದ್ದಾರೆಂಬ ಮಾತುಗಳು ಕೇಳಿಬಂದಿವೆ. ಚನ್ನಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸ್ಪರ್ಧಿಸಲಿರುವುದು ಬಹುತೇಕ ಖಚಿತವಾಗಿದೆ. ಅವರ ವಿರುದ್ಧ ಬಿಜೆಪಿಯಿಂದ ಎಂಎಲ್‌ಸಿ ಸಿಪಿ ಯೋಗೇಶ್ವರ್ ಸೆಣಸಲಿದ್ದಾರೆ. ಈ ಪ್ರತಿಷ್ಠಿತ ಕ್ಷೇತ್ರದಲ್ಲಿ ಪ್ರಭಾವಿ ನಾಯಕರನ್ನು ಕಣಕ್ಕಿಳಿಸಲು ರಮ್ಯಾ ಅವರನ್ನು ಅಖಾಡಕ್ಕೆ ಇಳಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಕ್ಷೇತ್ರದಲ್ಲಿ ಉದ್ಯಮಿ ಪ್ರಸನ್ನ ಅವರಿಗೇ ಕಾಂಗ್ರೆಸ್ ಟಿಕೆಟ್ ಸಿಗಬಹುದು ಎಂದು ಹೇಳಲಾಗುತ್ತಿದೆ. ಒಂದು ವೇಳೆ, ಈ ಕ್ಷೇತ್ರದಲ್ಲಿ ಸೋತರೂ ಸಹ ರಮ್ಯಾ ಅವರನ್ನು ವಿಧಾನಪರಿಷತ್‌ಗೆ ಕರೆತರುವ ಯೋಜನೆಯೂ ಸಿದ್ಧವಾಗಿದೆ ಎಂದು ಮೂಲಗಳು ಹೇಳಿವೆ.












Click it and Unblock the Notifications