TV9 C-Voter Pre Poll Survey: ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಬಂಪರ್
ದಾವಣಗೆರೆ: ಕರ್ನಾಟಕ ವಿಧಾನಸಭೆ ಮತದಾನಕ್ಕೆ ಕೌಂಟ್‌ಡೌನ್ ಶುರುವಾಗಿರುವಾಗಲೇ ಕಾಂಗ್ರೆಸ್ ನಾಯಕರಿಗೆ ಸಿಹಿಸುದ್ದಿ ಸಿಗುತ್ತಿದೆ. ಅದರಲ್ಲೂ ಮಧ್ಯ ಕರ್ನಾಟಕ ಭಾಗದಲ್ಲಿ ಈ ಬಾರಿ ಕಾಂಗ್ರೆಸ್ (Congress) ಮುನ್ನಡೆ ಸಾಧಿಸುವುದು ಪಕ್ಕಾ ಎಂಬ ಮುನ್ಸೂಚನೆ ನೀಡುತ್ತಿವೆ ಚುನಾವಣಾ ಸಮೀಕ್ಷೆಗಳು. ಇದೀಗ ಟಿವಿ9 ಮತ್ತು ಸಿ-ವೋಟರ್ ಸಮೀಕ್ಷೆಯಲ್ಲೂ ಕಾಂಗ್ರೆಸ್‌ಗೆ ಗುಡ್ ನ್ಯೂಸ್ ಸಿಕ್ಕಿದೆ.
ಮಧ್ಯ ಕರ್ನಾಟಕ ಭಾಗದಲ್ಲಿ ಒಟ್ಟು 35 ಸ್ಥಾನಗಳಿದ್ದು, ಈ ಪೈಕಿ ಕಾಂಗ್ರೆಸ್ 18ರಿಂದ 22 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದ್ದರೆ, ಬಿಜೆಪಿ 13ರಿಂದ 17 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು ಎಂದು ಟಿವಿ9 ಮತ್ತು ಸಿ-ವೋಟರ್ ಸಮೀಕ್ಷೆ ತಿಳಿಸಿದೆ. ಮತ್ತೊಂದು ಕಡೆ ಜೆಡಿಎಸ್ 1 ಸ್ಥಾನಕ್ಕೆ ತೃಪ್ತಿಪಟ್ಟರೆ, ಮತ್ತೊಂದು ಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸುವ ಸಾಧ್ಯತೆ ಇದೆ ಎಂದು ಎಲೆಕ್ಷನ್ ಸರ್ವೆ ತಿಳಿಸಿದೆ. ಈ ಮೂಲಕ ಕಾಂಗ್ರೆಸ್‌ಗೆ ಮಧ್ಯ ಕರ್ನಾಟಕ ಪ್ಲಸ್ ಪಾಯಿಂಟ್ ಆಗುವ ಮುನ್ಸೂಚನೆ ಸಿಕ್ಕಂತಾಗಿದೆ.

ಕಳೆದ ಬಾರಿಯ ಕ್ಷೇತ್ರಗಳು ಮಿಸ್?
ಒಂದು ಕಡೆ ಕಾಂಗ್ರೆಸ್ ಮಧ್ಯ ಕರ್ನಾಟಕದಲ್ಲಿ ಈ ಬಾರಿ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನಗಳನ್ನು ಗಳಿಸಲಿದೆ ಎಂದು ಸಮೀಕ್ಷೆ ತಿಳಿಸಿದ್ದರೆ, ಇನ್ನೊಂದು ಕಡೆ ಬಿಜೆಪಿ ಈ ಬಾರಿ ಕಳೆದ ಬಾರಿ ಗೆದ್ದಿದ್ದ ಕೆಲವು ಕ್ಷೇತ್ರಗಳನ್ನ ಕಳೆದುಕೊಳ್ಳುವ ಮುನ್ಸೂಚನೆ ಸಿಕ್ಕಿದೆ. ಈ ಮೂಲಕ ಕಾಂಗ್ರೆಸ್‌ಗೆ 2023ರ ಚುನಾವಣೆಯಲ್ಲಿ ಮಧ್ಯ ಕರ್ನಾಟಕ ಭಾಗದಲ್ಲಿ ಬಂಪರ್ ಸಿಗುವ ನಿರೀಕ್ಷೆಯನ್ನ ಟಿವಿ9 ಮತ್ತು ಸಿ-ವೋಟರ್ ಸಮೀಕ್ಷೆ ವ್ಯಕ್ತಪಡಿಸಿದೆ.
ಯಾವೆಲ್ಲಾ ಜಿಲ್ಲೆಗಳು ಪಟ್ಟಿಯಲ್ಲಿವೆ?
ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯು ರಾಜ್ಯದ ಮಧ್ಯ (ಸೆಂಟ್ರಲ್) ಕರ್ನಾಟಕ ಭಾಗವೆಂದು ಗುರುತಿಸಲ್ಪಟ್ಟಿದೆ. ಈ ಭಾಗದಲ್ಲಿ ತಮ್ಮ ತಮ್ಮ ಪಕ್ಷಗಳ ಗೆಲುವಿಗಾಗಿ ಈಗಾಗಲೇ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಭಾರಿ ಪೈಪೋಟಿ ಆರಂಭಿಸಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಕೂಡ ಮಧ್ಯ ಕರ್ನಾಟಕ ಭಾಗವನ್ನೇ ಟಾರ್ಗೆಟ್ ಮಾಡಿ, ಕೆಲವು ತಿಂಗಳ ಹಿಂದೆ ಬೃಹತ್ ಸಮಾವೇಶ ಆಯೋಜನೆ ಮಾಡಿದ್ದರು. ಇಷ್ಟೆಲ್ಲದರ ನಡುವೆ ಮಧ್ಯ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಉತ್ತಮ ಫಲಿತಾಂಶ ಪಡೆಯುವ ನಿರೀಕ್ಷೆ ಸಮೀಕ್ಷೆಯ ಮೂಲಕ ಸಿಕ್ಕಿದೆ.
ಬಿಜೆಪಿಗೆ ಮುಳುವಾಗುತ್ತಾ ಬಂಡಾಯ?
ಕಮಲ ಪಾಳಯಕ್ಕೆ 2023ರ ಕರ್ನಾಟಕ ವಿಧಾನಸಭೆ ಚುನಾವಣೆ ಬಂಡಾಯದ ಕಾರಣಕ್ಕೆ ಸಾಕಷ್ಟು ಅಡ್ಡಿ ಉಂಟುಮಾಡಿದೆ. ಅದರಲ್ಲೂ ಮಧ್ಯ ಕರ್ನಾಟಕದ ಕ್ಷೇತ್ರದಲ್ಲೂ ಕೆಲ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಟಿಕೆಟ್ ಸಿಗದೆ ಆಕ್ರೋಶ ಹೊರಹಾಕಿದ್ದಾರೆ. ಇದು ಕೂಡ ಚುನಾವಣೆಯಲ್ಲಿ ಎಫೆಕ್ಟ್ ಕೊಡುತ್ತಾ ಎಂಬ ಅನುಮಾನ ಚುನಾವಣಾ ಸಮೀಕ್ಷೆಗಳಿಂದ ಮೂಡುತ್ತಿದೆ. ಹಾಗೇ ಈ ಪರಿಸ್ಥಿತಿಯ ಲಾಭ ಪಡೆಯಲು ಕಾಂಗ್ರೆಸ್ ಕೂಡ ತಂತ್ರ ಹೆಣೆಯುತ್ತಿದೆ. ಅದರ ಜೊತೆಗೆ ಮಧ್ಯ ಕರ್ನಾಟಕ ಭಾಗದಲ್ಲಿ ಲಿಂಗಾಯತ ಅಸ್ತ್ರ ಪ್ರಬಲವಾಗಿ ಪ್ರಯೋಗಿಸಲು ಕಾಂಗ್ರೆಸ್ ಮುಂದಾಗಿದೆ.
ಹೀಗೆ ವಿವಿಧ ಸಮೀಕ್ಷೆಗಳು ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್ ತುಸು ಹೆಚ್ಚಿನ ಸ್ಥಾನ ಗೆಲ್ಲುವ ಮಾಹಿತಿ ಹೊರಹಾಕಿವೆ. ಲಿಂಗಾಯತ ಮತದಾರರು ಮಧ್ಯ ಕರ್ನಾಟಕ ಭಾಗದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ ಎಂಬುದು ಇಲ್ಲಿ ಗಮನಾರ್ಹ ಸಂಗತಿ. ಹೀಗಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಗೆಲುವಿಗಾಗಿ ಪ್ರಚಾರದ ರಣಬೇಟೆ ಆರಂಭಿಸಿದ್ದಾರೆ. ಆದರೆ ಇದೆಲ್ಲಾ ಚುನಾವಣೆ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನ ಕಾದು ನೋಡಬೇಕು. ಮೇ 10ರಂದು ವಿಧಾನಸಭಾ ಚುನಾವಣೆ ಮತದಾನ ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications