ಹಿಂದಿ ಹೇರಿಕೆ, ನಂದಿನಿ ವಿವಾದ ಬಿಜೆಪಿಗೆ ಕೊಟ್ಟಿತು ಹೊಡೆತ!
ಬೆಂಗಳೂರು, ಮೇ 14; ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಫಲಿತಾಂಶ ಘೋಷಣೆಯಾಗಿದೆ. ಕಾಂಗ್ರೆಸ್ ಪಕ್ಷ 135 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ರಾಜ್ಯದ ಆಡಳಿತ ಪಕ್ಷದ ಬಿಜೆಪಿಯ 59 ಶಾಸಕರು ಸೋಲು ಕಂಡಿದ್ದು, ಪಕ್ಷ ಕೇವಲ 66 ಸ್ಥಾನ ಪಡೆಯುವ ಮೂಲಕ ಮುಖಭಂಗ ಅನುಭವಿಸಿದೆ.
ಬಿಜೆಪಿಯ ಹೀನಾಯ ಸೋಲಿಗೆ ಕಾರಣಗಳೇನು? ಎಂದು ಚರ್ಚೆ ಆಗುತ್ತಿದೆ. ಸೋಲಿನಲ್ಲಿ ರಾಜ್ಯದ ನಾಯಕರ ಪಾತ್ರ ಎಷ್ಟಿದೆಯೋ?, ಕೇಂದ್ರದ ನಾಯಕರ ಪಾತ್ರವೂ ಅಷ್ಟೇ ಇದೆ. ಅದರಲ್ಲೂ ಹಿಂದಿ ಹೇರಿಕೆ, ನಂದಿನಿ ವಿವಾದಗಳು ಪಕ್ಷಕ್ಕೆ ಬಹುದೊಡ್ಡ ಹೊಡೆತ ನೀಡಿವೆ. ನೆಲ, ಜಲದ ವಿಚಾರದಲ್ಲಿ ಕಾಂಗ್ರೆಸ್ ಬಿಜೆಪಿ ವಿರುದ್ಧ ಭರ್ಜರಿ ಪ್ರಚಾರ ಮಾಡಿ ಜನರ ಮತಗಳನ್ನು ಸೆಳೆದಿದೆ.

2022ರ ಡಿಸೆಂಬರ್‌ನಲ್ಲಿ ಕೇಂದ್ರದ ಸಹಕಾರ ಸಚಿವ ಅಮಿತ್ ಶಾ ರಾಜ್ಯಕ್ಕೆ ಆಗಮಿಸಿದ್ದರು. ಮಂಡ್ಯ ಜಿಲ್ಲೆಯಲ್ಲಿ 260 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಮೆಗಾ ಡೈರಿಯನ್ನು ಉದ್ಘಾಟಿಸಿದ್ದರು. ಈ ಕಾರ್ಯಕ್ರಮದಲ್ಲಿ ಅವರು ಮಾಡಿದ ಭಾಷಣ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು.
ಅಮಿತ್ ಶಾ ಹೇಳಿದ್ದೇನು?: ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅಮಿತ್ ಶಾ, "ಅಮುಲ್ ಮತ್ತು ನಂದಿನಿ ಜಂಟಿಯಾಗಿ ಕೆಲಸ ಮಾಡಿದರೆ, ಮೂರು ವರ್ಷಗಳಲ್ಲಿ ಪ್ರತಿ ಗ್ರಾಮ ಮಟ್ಟದಲ್ಲಿ ಪ್ರಾಥಮಿಕ ಡೈರಿಗಳು ಇರುತ್ತವೆ. ಕೆಎಂಎಫ್ ಅಮುಲ್‌ನಿಂದ ಎಲ್ಲಾ ತಾಂತ್ರಿಕ ಬೆಂಬಲ ಮತ್ತು ಸಹಕಾರವನ್ನು ಪಡೆಯುತ್ತದೆ, ಈ ದಿಸೆಯಲ್ಲಿ ಕರ್ನಾಟಕ ಮತ್ತು ಗುಜರಾತ್ ಒಗ್ಗೂಡಿದರೆ ದೇಶಾದ್ಯಂತ ರೈತರಿಗೆ ಅನುಕೂಲವಾಗುತ್ತದೆ" ಎಂದು ಹೇಳಿದ್ದರು.

ಕೆಎಂಎಫ್ ಬಗ್ಗೆ ರಾಜ್ಯದ ಜನರಿಗೆ ಭಾವನಾತ್ಮಕ ಬಾಂಧವ್ಯವಿದೆ. ರಾಜ್ಯದ ಲಕ್ಷಾಂತರ ರೈತ ಕುಟುಂಬಗಳು ಕೆಎಂಎಫ್, ನಂದಿನಿ ಮೂಲಕ ಜೀವನಾಧಾರ ಕಂಡುಕೊಂಡಿವೆ. ಅಮಿತ್ ಶಾ ಹೇಳಿಕೆಯನ್ನು ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಸರಿಯಾಗಿ ಉಪಯೋಗ ಮಾಡಿಕೊಂಡವು. ಸಾಮಾಜಿಕ ಜಾಲತಾಣದಲ್ಲಿ ನಂದಿನಿ ಅಮುಲ್ ಜೊತೆ ವಿಲೀನವಾಗಲಿದೆ ಎಂಬ ಸುದ್ದಿ ಹಬ್ಬಿತು. ಎರಡು ದಿನದಲ್ಲಿ ಈ ವಿಚಾರ ಭಾರೀ ಚರ್ಚೆಗೆ ಕಾರಣವಾಯಿತು.
ಬಿಜೆಪಿ ವಿರುದ್ಧ ಆಕ್ರೋಶ; ನಂದಿನಿ ವಿಚಾರದಲ್ಲಿ ಜನರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರದ ನಾಯಕರಿಗೆ ನೀವು ಶರಣಾಗಿದ್ದೀರಿ. ಮಾರ್ವಾಡಿಗಳಿಗೆ ನಂದಿನಿ ಅಡವಿಡಲು ಹೊರಟಿದ್ದೀರಿ ಎಂದು ಜನರು ಬಿಜೆಪಿ ನಾಯಕರ ವಿರುದ್ಧ ಅಸಮಾಧಾನಗೊಂಡರು. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ನಂದಿನಿ ಮಳಿಗೆಗೆ ಭೇಟಿ ಕೊಟ್ಟಿ ಉತ್ಪನ್ನಗಳನ್ನು ಖರೀದಿ ಮಾಡಿ, ಚರ್ಚೆಯ ಕಾವು ಹೆಚ್ಚಿಸಿದರು.
ಕರ್ನಾಟಕ ವಿಧಾನಸಭೆ ಚುನಾವಣಾ ಪ್ರಚಾರಕ್ಕೆ ರಾಜ್ಯಕ್ಕೆ ಆಗಮಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಂಗಳೂರಿನ ಮಳಿಗೆಯೊಂದರಲ್ಲಿ ನಂದಿನಿ ಐಸ್‌ಕ್ರೀಮ್ ಖರೀದಿಸಿದರು. ನಂದಿನಿ ಕರ್ನಾಟಕದ ಹೆಮ್ಮೆ ಎಂದು ಕರೆದರು. ಜೆಡಿಎಸ್ ಸರಣಿ ಟ್ವೀಟ್ ಮೂಲಕ ನಂದಿನಿ ವಿಚಾರದ ಚರ್ಚೆ ಸದಾ ನಡೆಯುವಂತೆ ನೋಡಿಕೊಂಡಿತು. ಬಿಜೆಪಿಗೆ ಇದು ಭಾರೀ ಹಿನ್ನಡೆ ಉಂಟು ಮಾಡಿತು.
ಬಸವರಾಜ ಬೊಮ್ಮಾಯಿ ಸ್ಪಷ್ಟನೆ; ಅಂತಿಮವಾಗಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ, "ಕೆಎಂಎಫ್ ಅನ್ನು ಗುಜರಾತ್‌ನ ಅಮೂಲ್ ಜೊತೆಗೆ ವಿಲೀನ ಮಾಡುವುದಿಲ್ಲ. ನಂದಿನಿ ವಿಲೀನವಾಗಲಿದೆ ಎಂದು ಯಾರೂ ಊಹೆ ಮಾಡಿ ಟೀಕೆ ಮಾಡಬಾರದು. ನಂದಿನಿ ತನ್ನ ಸ್ವಂತ ಅಸ್ಥಿತ್ವ ಉಳಿಸಿಕೊಳ್ಳಲಿದೆ. ಅಮುಲ್ ನೊಂದಿಗೆ ವಿಲೀನ ಮಾಡುತ್ತಾರೆ ಎನ್ನುವುದು ತಪ್ಪು ಕಲ್ಪನೆ" ಎಂದು ಸ್ಪಷ್ಟನೆ ನೀಡಬೇಕಾಗಿ ಬಂದಿತು.
ಹಿಂದಿ ಹೇರಿಕೆ; ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಹಿಂದಿ ಹೇರಿಕೆ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ಕರ್ನಾಟಕದಲ್ಲಿ ನಡೆಯುವ ಕೇಂದ್ರ ಸರ್ಕಾರದ ಕಾರ್ಯಕ್ರಮಗಳಲ್ಲಿ ಕನ್ನಡ ಬಳಕೆ ಮಾಡುವುದಿಲ್ಲ. ಕನ್ನಡದಲ್ಲಿ ಬ್ಯಾಂಕ್ ಪರೀಕ್ಷೆಗಳನ್ನು ಬರೆಯಲು ಅವಕಾಶವಿಲ್ಲ ಎಂಬ ಅಂಶಗಳು ಮೊದಲಿನಿಂದಲೂ ಚರ್ಚೆಯ ಅಂಶಗಳು.
ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ಈ ವಿಚಾರಗಳನ್ನು ಕಾಂಗ್ರೆಸ್ ಸರಿಯಾಗಿ ಉಪಯೋಗ ಮಾಡಿಕೊಂಡಿತು. ಬಿಜೆಪಿ ಅಧಿಕಾರಕ್ಕೆ ಬಂದರೆ ನೆಲ, ಜಲ, ಭಾಷೆಯ ಹಿತ ಕಾಪಾಡುವುದಿಲ್ಲ ಎಂದು ಜನರ ಮುಂದೆ ಹೋಯತು. ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಉಂಟಾಗಲು ಇದು ಸಹ ಪ್ರಮುಖ ಕಾರಣವಾಯಿತು.












Click it and Unblock the Notifications