ಗುರಿ ತಲುಪುವ ಹೊತ್ತಲ್ಲೇ ಎಡವಿದ್ರಾ ‘ಕಾಂಗ್ರೆಸ್’ ನಾಯಕರು?
ಬೆಂಗಳೂರು, ಮೇ 04: ಕಳೆದ 2018ರ ಚುನಾವಣೆಯಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ ಹಿಂದೂ ವಿರೋಧಿ ಅಲೆಯನ್ನು ಸೃಷ್ಟಿ ಮಾಡಿ ಅಧಿಕಾರ ಕಳೆದುಕೊಳ್ಳುವಂತೆ ಮಾಡುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು. ಇದೀಗ ಮತ್ತೆ ಕಾಂಗ್ರೆಸ್ ನಾಯಕರು ಎಚ್ಚರ ತಪ್ಪಿದ ಪರಿಣಾಮ ಚುನಾವಣೆ ಹೊಸ್ತಿಲಲ್ಲಿ ಮತ್ತೆ ಅಂತಹದ್ದೇ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ.
ಸುಮಾರು ಐದು ವರ್ಷಗಳ ಕಾಲ ಅಂದರೆ 2013 ರಿಂದ 2018ರವರೆಗೆ ಸಿದ್ದರಾಮಯ್ಯ ನೇತೃತ್ವದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಬಳಿಕ 2018ರ ಚುನಾವಣೆಗೆ ಹೋದಾಗ ಸೋಲು ಕಾಣುವಂತಾಗಿತ್ತು. ಐದು ವರ್ಷಗಳ ಕಾಲ ಒಳ್ಳೆಯ ಆಡಳಿತ ನೀಡಿದರೂ ಜನ ಏಕೆ ಬಹುಮತ ನೀಡಿಲ್ಲ ಎಂಬುದನ್ನು ಇವತ್ತಿಗೂ ಕಾಂಗ್ರೆಸ್ ನಾಯಕರು ಕೇಳಿಕೊಳ್ಳುತ್ತಿದ್ದಾರೆ. ಆದರೆ ಅವತ್ತು ಬಿಜೆಪಿ ಸಿದ್ದರಾಮಯ್ಯ ವಿರುದ್ಧ ಹಿಂದೂ ವಿರೋಧಿ ಹಣೆಪಟ್ಟಿ ಕಟ್ಟಿದ್ದೇ ಕಾರಣ ಎನ್ನುವುದನ್ನು ತಳ್ಳಿಹಾಕುವಂತಿಲ್ಲ.

ಈ ವಿಚಾರದಲ್ಲಿ ಕಾಂಗ್ರೆಸ್ ಸ್ವಲ್ಪ ಎಚ್ಚರ ವಹಿಸಬೇಕಾಗಿತ್ತು. ಸರ್ವಜನಾಂಗದ ಶಾಂತಿಯ ತೋಟ ಮಾಡುತ್ತೇವೆ ಎಂದು ಹೊರಟ ಕಾಂಗ್ರೆಸ್ ಗುರಿ ತಲುಪುವ ಕೊನೆಗಳಿಗೆಯಲ್ಲಿ ಎಡವಿದೆ. ಅಷ್ಟೇ ಅಲ್ಲದೆ ಮುಗ್ಗರಿಸಿ ಬೀಳುವ ಹಂತಕ್ಕೂ ಹೋಗುವಂತಾಗಿದೆ.
ಅವತ್ತಿನ ಕಾಂಗ್ರೆಸ್ ತಂತ್ರ ಫಲಿಸಲಿಲ್ಲ
2018ರ ವಿ ಧಾನಸಭಾ ಚುನಾವಣೆಯಲ್ಲಿ ಅಧಿಕಾರ ನಡೆಸಲು ಬಹುಮತವಿಲ್ಲದಿದ್ದೂ ಮತ್ತು ಹೆಚ್ಚು ಸ್ಥಾನ ಪಡೆದು ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದ ಬಿಜೆಪಿಗೆ ಅಧಿಕಾರ ನಡೆಸಲು ಅವಕಾಶ ನೀಡಬಾರದು ಎಂಬ ಹಠಕ್ಕೆ ಬಿದ್ದಿದ್ದ ಕಾಂಗ್ರೆಸ್ ಜೆಡಿಎಸ್ ನಾಯಕರ ಮನೆ ಬಾಗಿಲು ತಟ್ಟಿ, ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ದರು. ಅದಾದ ನಂತರ ಏನೆಲ್ಲ ಬೆಳವಣಿಗೆಗಳು ನಡೆದವು.

ಸಮ್ಮಿಶ್ರ ಸರ್ಕಾರದಲ್ಲಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಬಿಜೆಪಿ ಕಡೆಗೆ ಒಲವು ತೋರಿದ ಪರಿಣಾಮ ಸಮ್ಮಿಶ್ರ ಸರ್ಕಾರ ಕುಸಿದು ಬಿದ್ದಿತು. ಇದಾದ ನಂತರ ಸರ್ಕಾರ ರಚನೆ ಮಾಡಿದ್ದ ಜೆಡಿಎಸ್ ಮತ್ತು ಕಾಂಗ್ರೆಸ್ ಸೇರಿ ಬಿಜೆಪಿ ವಿರುದ್ಧ ರಾಜಕೀಯವಾಗಿ ಹೋರಾಟಕ್ಕಿಳಿಯ ಬಹುದಿತ್ತು. ಆದರೆ ಅಧಿಕಾರದಲ್ಲಿರುವ ತನಕ ಜೋಡೆತ್ತುಗಳಂತೆ ಇದ್ದವರು ಅಧಿಕಾರ ಕಳೆದುಕೊಳ್ಳುತ್ತಿದ್ದಂತೆಯೇ ವಿರೋಧಿಗಳಾಗಿ ಒಬ್ಬರ ಮೇಲೆ ಒಬ್ಬರು ಆರೋಪ ಮಾಡಲು ಆರಂಭಿಸಿದರಲ್ಲದೆ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಬಿರುಕು ಜಾಸ್ತಿಯಾಗುತ್ತಲೇ ಹೋಗಿತ್ತು.
ರಾಜ್ಯದಲ್ಲಿ ಹವಾ ಸೃಷ್ಟಿಸಿದ್ದ ಕಾಂಗ್ರೆಸ್
ಜೆಡಿಎಸ್‌ನ ಸಖ್ಯ ಕಳೆದುಕೊಂಡ ಬಳಿಕ ಕಾಂಗ್ರೆಸ್ ಕಳೆದ ಮೂರು ವರ್ಷಗಳಿಂದ ಅಧಿಕಾರಕ್ಕೆ ಬರಲೇಬೇಕೆಂಬ ಹಠಕ್ಕೆ ಬಿದ್ದಿದೆ. ಜೆಡಿಎಸ್ ಮತ್ತು ಬಿಜೆಪಿಯನ್ನು ಸಮಾನಾಂತರವಾಗಿ ಟೀಕಿಸುತ್ತಾ ಬಂದ ಕಾಂಗ್ರೆಸ್ ನಾಯಕರು ರಾಜ್ಯದಲ್ಲಿ ಕಾಂಗ್ರೆಸ್ ಹವಾ ಸೃಷ್ಟಿಸಲು ಸರ್ವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತಲೇ ಬಂದಿದ್ದರು. ಸಮ್ಮಿಶ್ರ ಸರ್ಕಾರ ಪತನಗೊಂಡ ನಂತರ ನಡೆದ ರಾಜ್ಯಸಭೆ ಮತ್ತು ವಿಧಾನಪರಿಷತ್ ಚುನಾವಣೆಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಪ್ರತಿಷ್ಠೆಯನ್ನಾಗಿ ಪರಿಗಣಿಸಿ ಚುನಾವಣೆ ನಡೆಸಿದ್ದವು. ಆದರೆ ಈ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆ ಬಿಜೆಪಿ ಟಕ್ಕರ್ ನೀಡಿತ್ತು.
ಹಿಂದೂಪರ ಸಂಘಟನೆಗಳ ಕೆಂಗಣ್ಣಿಗೆ ಗುರಿ
ಇದಾದ ಬಳಿಕ ಕಾಂಗ್ರೆಸ್‌ಗೆ ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ವಿರುದ್ಧ ಹೋರಾಡಲು ವೇದಿಕೆಯನ್ನು ಸೃಷ್ಟಿ ಮಾಡಿತ್ತು. ಬಿಜೆಪಿ ವಿರುದ್ಧ ಹೋರಾಡಲು ರಾಜಕೀಯವಾಗಿ ಕಾಂಗ್ರೆಸ್ ಹಲವು ವಿಚಾರಗಳನ್ನು ಮುನ್ನಲೆಗೆ ತಂದಿತ್ತು. ಆದರೆ ಅದರ ನಡುವೆ ಆಗಾಗ್ಗೆ ಕಾಂಗ್ರೆಸ್ ನಾಯಕರು ಆರ್ ಎಸ್ ಎಸ್ ಸೇರಿದಂತೆ ಹಿಂದೂಪರ ಸಂಘಟನೆಗಳನ್ನು ಟಾರ್ಗೆಟ್ ಮಾಡಿ ಹೇಳಿಕೆ ನೀಡುತ್ತಾ ಬಂದಿದ್ದನ್ನು ಗಮನಿಸಬಹುದಾಗಿದೆ.

ಬಿಜೆಪಿ ವಿರುದ್ಧ ಹೋರಾಟಕ್ಕೆ ಹತ್ತು ಹಲವು ವಿಚಾರಗಳಿದ್ದರೂ ಕಾಂಗ್ರೆಸ್ ಹೋರಾಟಕ್ಕೆ ತೆಗೆದುಕೊಳ್ಳುವ ವಿಷಯಗಳು ಬಹಳಷ್ಟು ಸಲ ಉಲ್ಟಾ ಹೊಡೆದಿದೆ. ಎಲ್ಲೋ ಒಂದು ಕಡೆ ಕಾಂಗ್ರೆಸ್ ಒಂದು ವರ್ಗವನ್ನಷ್ಟೆ ಓಲೈಕೆ ಮಾಡುತ್ತಿದೆಯೇನೋ ಎಂಬ ಅನುಮಾನ ಹುಟ್ಟಿಕೊಳ್ಳುವಂತೆಯೂ ನಾಯಕರು ನಡೆದುಕೊಂಡಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಅವರು ಚಡ್ಡಿಗೆ ಬೆಂಕಿ ಹಚ್ಚುವಂತೆ ಹೇಳಿಕೆ ನೀಡಿದ್ದು, ಅದಾದ ನಂತರ ಆರ್‌ಎಸ್‌ಎಸ್ ಮತ್ತು ಸಾರ್ವಕರ್ ವಿಚಾರದ ಹೇಳಿಕೆಗಳು ಸಂಚಲನ ಸೃಷ್ಟಿ ಮಾಡಿದ್ದವು.
ಹಿಂದೂ ವಿರೋಧಿ ವಿಚಾರ ಮುನ್ನಲೆಗೆ
ಇದೆಲ್ಲದರ ನಡುವೆಯೂ ರಾಜ್ಯದಲ್ಲಿ ಆಡಳಿತರೂಢ ಬಿಜೆಪಿ ಸರ್ಕಾರದ ವಿರುದ್ಧ ಹಲವು ವೈಫಲ್ಯ ಮತ್ತು ಆರೋಪಗಳನ್ನು ಮಾಡುವ ಮೂಲಕ ಆಡಳಿತ ವಿರೋಧಿ ಅಲೆಯನ್ನು ಸೃಷ್ಟಿ ಮಾಡಿದ್ದಲ್ಲದೆ, ಕಾಂಗ್ರೆಸ್ ಪರ ಅಲೆಯನ್ನು ಹುಟ್ಟುಹಾಕುವಲ್ಲಿ ಯಶಸ್ವಿಯಾಗಿತ್ತು. ಆದರೆ ಅದನ್ನು ಚುನಾವಣೆ ಹೊಸ್ತಿಲ ತನಕ ತಂದಿದ್ದ ಕಾಂಗ್ರೆಸ್ ಕೊನೆಗಳಿಗೆಯಲ್ಲಿ ಎಡವಿದ್ದರಿಂದ ಪರಿಸ್ಥಿತಿಯೇ ಬದಲಾದಂತೆ ಗೋಚರಿಸುತ್ತಿದೆ.
ಈ ಹಿಂದೆ ಅಂದರೆ 2018ರ ವಿಧಾನಸಭಾ ಚುನಾವಣೆ ಸಂದರ್ಭ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೀದಿಗಿಳಿದ ಕಾಂಗ್ರೆಸ್ ಅವತ್ತು ಸರ್ಕಾರದ ಆಡಳಿತ ವೈಫಲ್ಯಕ್ಕಿಂತ ಹೆಚ್ಚಾಗಿ ಹಿಂದೂ ವಿರೋಧಿ ಎಂಬ ವಿಚಾರವನ್ನೇ ಮುನ್ನಲೆಗೆ ತರುವಲ್ಲಿ ಯಶಸ್ವಿಯಾಗಿತ್ತು. ಮತ್ತು ಅದು ಚುನಾವಣೆ ಸಮಯದಲ್ಲಿ ಬಿಜೆಪಿಗೆ ವರದಾನವಾಗಿತ್ತು.
ಕಾಂಗ್ರೆಸ್ ಇದನ್ನು ಹೇಗೆ ನಿಭಾಯಿಸಲಿದೆ?
ಕಾಂಗ್ರೆಸ್ ನಾಯಕರು ಇದನ್ನು ಅರಿತುಕೊಂಡು ತುಂಬಾ ಎಚ್ಚರಿಕೆ ವಹಿಸಬೇಕಾಗಿತ್ತು. ಆದರೆ ಚುನಾವಣೆಗೆ ಕೆಲವೇ ಕೆಲವು ದಿನಗಳು ಹತ್ತಿರವಿರುವಾಗಲೇ ಲಿಂಗಾಯಿತ ಸಿಎಂ ಭ್ರಷ್ಟರು, ಮೋದಿ ವಿಷದ ಹಾವು, ನಾಲಾಯಕ್ ಮಗ, ಮತ್ತು ಭಜಂಗದಳ ನಿಷೇಧ ಗಳನ್ನು ವಿಚಾರಗಳನ್ನು ಕಾಂಗ್ರೆಸ್ ಬಿಜೆಪಿ ಅಸ್ತ್ರವಾಗಿ ನೀಡಿದೆ.
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಮತದಾರರ ಸೆಳೆಯುವ ಸಲುವಾಗಿ ಹತ್ತು ಹಲವು ವಿಚಾರಗಳನ್ನು ಪ್ರಕಟಿಸಿತ್ತಾದರೂ ಅದೆಲ್ಲವೂ ಭಜರಂಗದಳ ನಿಷೇಧ ವಿಚಾರದ ಮುಂದೆ ನಗಣ್ಯವಾಗಿದೆ. ಭಜರಂಗದಳ ಈಗ ರಾಜ್ಯದಾದ್ಯಂತ ಕಾಂಗ್ರೆಸ್ ವಿರುದ್ಧ ಹೋರಾಟಕ್ಕಿಳಿದಿದ್ದು, ಬಿಜೆಪಿ ಕೂಡ ಇದನ್ನು ರಾಜಕೀಯವಾಗಿ ಬಳಸಿಕೊಳ್ಳಲು ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು ಪ್ರತಿ ಕ್ಷೇತ್ರದ ಅಭ್ಯರ್ಥಿಗಳವರೆಗೆ ಬಳಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಇದನ್ನು ಹೇಗೆ ನಿಭಾಯಿಸುತ್ತದೆ ಎಂಬುದೇ ಕುತೂಹಲಕಾರಿಯಾಗಿದೆ.












Click it and Unblock the Notifications