CM Ibrahim Resign: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿಎಂ ಇಬ್ರಾಹಿಂ
ಬೆಂಗಳೂರು, ಮೇ 24: 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅತ್ಯಂತ ಹೀನಾಯ ಪ್ರದರ್ಶನ ನೀಡಿದ ನಂತರ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿಎಂ ಇಬ್ರಾಹಿಂ ರಾಜೀನಾಮೆ ನೀಡಿದ್ದಾರೆ.
ತಮ್ಮ ರಾಜೀನಾಮೆ ಪತ್ರವನ್ನು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಆವರಿಗೆ ಸಲ್ಲಿಸಿದ್ದಾರೆ. ರಾಜೀನಾಮೆ ಪತ್ರವನ್ನು ದೇವೇಗೌಡರು ಇನ್ನೂ ಅಂಗೀಕರಿಸಿಲ್ಲ.

ರಾಜೀನಾಮೆ ನೀಡಿದ ಬಳಿಕ ದೇವೇಗೌಡರ ನಿವಾಸದೆದುರು ಮಾತನಾಡಿದ ಸಿಎಂ ಇಬ್ರಾಹಿಂ, "ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಸೋಲಿನ ಹೊಣೆಯನ್ನು ನಾನೆ ಹೊರುತ್ತೇನೆ. ಹೀಗಾಗಿ ನೈತಿಕ ಹೊಣೆ ಹೊತ್ತು ದೇವೇಗೌಡರಿಗೆ ರಾಜೀನಾಮೆ ನೀಡಿದ್ದೇನೆ,'' ಎಂದು ಹೇಳಿದರು.
"ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ, ಅವರಿಗೆ ಶುಭವಾಗಲಿ. ರಾಜ್ಯದಲ್ಲಿ ಬಿಜೆಪಿ ಆಡಳಿತ ವಿರೋಧಿ ಅಲೆ ಇತ್ತು. ಇದನ್ನು ಕಾಂಗ್ರೆಸ್‌ನವರು ಹಣಬಲ ಸೇರಿದಂತೆ ಬೇರೆ ಬೇರೆ ವಿಚಾರದಲ್ಲಿ ಗೆದ್ದಿದ್ದಾರೆ. ನಮ್ಮದು ಪ್ರಾದೇಶಿಕ ಪಕ್ಷ, ಹಣ ಇಲ್ಲ. ನಮಗೆ ಯಾರ ಬೆಂಬಲವೂ ಇರಲಿಲ್ಲ. ಆದರೂ ನಾವು 60 ಲಕ್ಷ ಮತ ಪಡೆದಿದ್ದೇವೆ," ಎಂದರು.
"ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಲೋಕಸಭೆ ಚುನಾವಣೆಗೆ ಸಜ್ಜಾಗಿ ಕೆಲಸ ಪ್ರಾರಂಭಿಸುತ್ತೇವೆ. ನೂತನ ಮುಖ್ಯಮಂತ್ರಿಗೆ ಒಳ್ಳೆಯದಾಗಲಿ. ಕೊಟ್ಟ ಭರವಸೆ ಈಡೇರಿಸಲಿ. 3 ತಿಂಗಳು ಸವರಿಗೆ ಸಮಯ ಕೊಡ್ತೀವಿ. 3 ತಿಂಗಳು ಹನಿಮೂನ್ ಸಮಯ. ಅಧಿಕಾರ ಯಂತ್ರ ಬೇಗನೆ ಆರಂಭವಾಗಲಿ," ಎಂದು ಸಿಎಂ ಇಬ್ರಾಹಿಂ ಹೇಳಿದರು.
"ನಮ್ಮ ಚುನಾವಣಾ ಸಮಾವೇಶಗಳಿಗೆ ಜನ ಸೇರುತ್ತಿದ್ದರು. ಆದರೆ, ಮತವಾಗಿ ಅದನ್ನು ವರ್ಗಾಯಿಸಲು ನಮ್ಮ ಸ್ಥಳೀಯ ಮುಖಂಡರುಗಳಿಗೆ ಸಾಧ್ಯವಾಗಲಿಲ್ಲ. ನಮ್ಮ ಅಭ್ಯರ್ಥಿಗಳು ಮತ ಪಡೆಯಲು ವಿಫಲರಾದರು. 15-20 ಕ್ಷೇತ್ರಗಳಲ್ಲಿ 2 ಸಾವಿರ ಮತಗಳ ಅಂತರದಿಂದ ಸೋತಿದ್ದೇವೆ," ಎಂದು ತಿಳಿಸಿದರು.
"ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅವರು ಜೆಡಿಎಸ್ ಪಕ್ಷವನ್ನು ಮುಗಿಸುವುದಕ್ಕೆ ಒಳ ಒಪ್ಪಂದ ಮಾಡಿಕೊಂಡಿದ್ದರು. ಹಾಸನ, ರಾಮನಗರ ಹಾಗೂ ಮಂಡ್ಯ ಜಿಲ್ಲೆಗಳ ಪಲಿತಾಂಶವೇ ಇದಕ್ಕೆ ಸಾಕ್ಷಿ. ಹಾಸನದಲ್ಲಿ ಕಾಂಗ್ರೆಸ್‌ನ ಮತಗಳು ಯಾರಿಗೆ ಹೋಗಿವೆ. ಬಿಜೆಪಿ-ಕಾಂಗ್ರೆಸ್ ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡಿದ್ದವು," ಎಂದು ಸಿಎಂ ಇಬ್ರಾಹಿಂ ಕಿಡಿಕಾರಿದರು.
ಇನ್ಮುಂದೆ ಜೆಡಿಎಸ್‌ನಲ್ಲಿ ತಮ್ಮ ಪಾತ್ರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಇಬ್ರಾಹಿಂ, ನಾನು ಸದಾ ಜನರೊಂದಿಗೆ ಇರುತ್ತೇನೆ. ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನ ಸಿಗುತ್ತಿತ್ತು ಎಂಬುದಕ್ಕೆ ಪ್ರತಿಕ್ರಿಯಿಸಿ, ಗೌರವ ಇಲ್ಲದ ಕಡೆ ನಾನು ಇರಲ್ಲ. ಸ್ಥಾನಕ್ಕಾಗಿ ಬಂದಿಲ್ಲ, ಮಾನಕ್ಕಾಗಿ ಬಿಟ್ಟು ಬಂದೆ, ನನಗೆ ಅಧಿಕಾರದ ಆಸೆ ಇಲ್ಲ ಎಂದು ಮಾರ್ಮಿಕವಾಗಿ ಉತ್ತರಿಸಿದರು.












Click it and Unblock the Notifications