ಕರ್ನಾಟಕ ಬರ ಪರಿಹಾರದ ಬಗ್ಗೆ ಸಿಎಂ ಸಿದ್ದರಾಮಯ್ಯ ಮಹತ್ವದ ಮಾಹಿತಿ
ಮೈಸೂರು: ಕರ್ನಾಟಕ ಈ ಬಾರಿ ಐತಿಹಾಸಿಕ ಬರದ ಸುಳಿಗೆ ಸಿಲುಕಿ, ನಲುಗಿ ಹೋಗಿದೆ. ಇದೇ ಸ್ಥಿತಿಯಲ್ಲಿ ಬಿತ್ತನೆ ಮಾಡಿದ್ದ ಬೆಳೆ ಕೂಡ ಕೈಗೆ ಸಿಕ್ಕಿಲ್ಲ. ಹಾಗೇ ಕುಡಿಯುವ ನೀರಿಗು ಹಾಹಾಕಾರ ಎದುರಾಗಿದ್ದು ಕರ್ನಾಟಕ ರಾಜ್ಯದ ಬರ ಪರಿಸ್ಥಿತಿ ಬಗ್ಗೆ ಸಿಎಂ ಸಿದ್ದರಾಮಯ್ಯ ಮಹತ್ವದ ಹೇಳಿಕೆ ನೀಡಿದ್ದಾರೆ. ಅಲ್ಲದೆ ಕರ್ನಾಟಕದ ಬರ ಪರಿಹಾರದ ಬಗ್ಗೆ ಕೂಡ ಸಿಎಂ ಸಿದ್ದರಾಮಯ್ಯ ಮಹತ್ವದ ಮಾಹಿತಿ ನೀಡಿದ್ದಾರೆ.
ಎಲ್ಲಾ ಜಿಲ್ಲೆಗಳ ಉಸ್ತುವಾರಿ ಸಚಿವರು ನವೆಂಬರ್ 15 ರೊಳಗೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ಭೇಟಿ ನೀಡಿ ಬರಪರಿಸ್ಥಿತಿ ಅಧ್ಯಯನ ಹಾಗೂ ಜನರನ್ನು ಭೇಟಿ ಮಾಡಿ ವರದಿ ನೀಡುವಂತೆ ಪತ್ರ ಬರೆಯಲಾಗಿದೆ ಅಂತಾ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬರಪರಿಹಾರ ಕಾರ್ಯಗಳಿಗಾಗಿ 900 ಕೋಟಿ ರೂಪಾಯಿ ರಿಲೀಸ್ ಮಾಡಲಾಗಿದ್ದು ಪರಿಹಾರ ಕಾರ್ಯಗಳು ಪ್ರಾರಂಭವಾಗಿವೆ. ಕೇಂದ್ರ ಸರ್ಕಾರದಿಂದ ಹಣ ರಿಲೀಸ್ ಆಗಿಲ್ಲ ಎಂದು ಯಾವುದೇ ಕೆಲಸ ನಿಲ್ಲಿಸಿಲ್ಲ. ಕುಡಿಯುವ ನೀರು, ಉದ್ಯೋಗ ನೀಡುವುದು ಯಾವುದೂ ನಿಂತಿಲ್ಲ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ.

ನಾವು ಪತ್ರ ಬರೆದ ಮೇಲೆ 600 ಕೋಟಿ ರೂ. ಮಹತ್ಮಾ ಗಾಂಧಿ ನರೇಗಾ ಯೋಜನೆಯಡಿ ನಿನ್ನೆ ಹಣ ಬಿಡುಗಡೆ ಮಾಡಿದ್ದಾರೆ. 33 ಕೋಟಿ ರೂ.ಗಳಷ್ಟು ಹಾನಿಯಾ ಆಗಿದ್ದು, ಮಾರ್ಗಸೂಚಿ ಪ್ರಕಾರ 17,900 ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ಕೋರಿದ್ದೇವೆ. ಇವತ್ತಿನವರೆಗು ನಮ್ಮ ರಾಜ್ಯದ ಮಂತ್ರಿಗಳಿಗೆ ಕೇಂದ್ರ ಸಚಿವರು ಭೇಟಿಗೆ ಅವಕಾಶವನ್ನೇ ನೀಡಿಲ್ಲ. ಕಂದಾಯ, ಗ್ರಾಮೀಣಾಭಿವೃದ್ಧಿ & ಕೃಷಿ ಸಚಿವರನ್ನು ದೆಹಲಿಗೆ ಕಳುಹಿಸಲಾಗಿತ್ತು. ಮೂವರಿಗೂ ಭೇಟಿಗೆ ಅವಕಾಶ ನೀಡಿಲ್ಲ. ಪ್ರಧಾನಮಂತ್ರಿಗಳು ಸಮಯಾವಕಾಶ ನೀಡಿಲ್ಲದ ಕಾರಣ ಕೇಂದ್ರದ ಕೃಷಿ, ಕಂದಾಯ ಹಾಗೂ ಗೃಹ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಬಂದಿದ್ದಾರೆ ಅಂತಾ ಸಿಎಂ ಈ ವೇಳೆ ಬೇಸರ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದಿಂದ ಮಲತಾಯಿ ಧೋರಣೆ?
ಭೇಟಿಗೆ ಅವಕಾಶ ನೀಡದಿರುವುದು ಕೇಂದ್ರಕ್ಕೆ ಕರ್ನಾಟಕ ಬಗ್ಗೆ ಇರುವ ನಿರ್ಲಕ್ಷ್ಯ & ಮಲತಾಯಿ ಧೋರಣೆಗೆ ಸಾಕ್ಷಿ. ನಾವು ಅಧಿಕಾರಕ್ಕೆ ಬಂದಿರುವುದು ಸಹಿಸಲು ಆಗುತ್ತಿಲ್ಲ. ಕರ್ನಾಟಕದಲ್ಲಿ ನಮ್ಮ ಪಕ್ಷ 135 ಸ್ಥಾನ ಗಳಿಸುತ್ತೆ ಎಂದು ಅವರು ನಿರೀಕ್ಷಿಸಿರಲಿಲ್ಲ. ರಾಜ್ಯ ಬಿಜೆಪಿ ನಾಯಕರು ಕೇಂದ್ರಕ್ಕೆ ತಪ್ಪು ಚಿತ್ರಣ ನೀಡಿದ್ದರು. ಅದಕ್ಕಾಗಿ, ನರೇಂದ್ರ ಮೋದಿ ಅವರು ಕರ್ನಾಟಕದಲ್ಲಿ ಬದಲಾವಣೆ ಮಾಡಿಬಿಡುತ್ತೇವೆ ಎಂದು ಸಾಕಷ್ಟು ಬಾರಿ ಭೇಟಿ ನೀಡಿದ್ದರು ಅಂತಾ ಸಿಎಂ ಈ ವೇಳೆ ಕೇಂದ್ರ ಸರ್ಕಾರ ಹಾಗೂ ರಾಜ್ಯದ ಬಿಜೆಪಿ ನಾಯಕರ ವಿರುದ್ಧ ಗರಂ ಆದರು.
ಬಿಜೆಪಿ ನಾಯಕರಿಗೆ ಸಿಎಂ ಸಲಹೆ!
ಪರಿಹಾರಕ್ಕಾಗಿ ಒತ್ತಾಯ ಮಾಡಲು ಪ್ರಧಾನಮಂತ್ರಿಗಳಿಗೆ & ಗೃಹ ಸಚಿವರಿಗೂ ಮತ್ತೊಮ್ಮೆ ಪತ್ರ ಬರೆಯಲಾಗಿದೆ. ಬಿಜೆಪಿ ನಾಯಕರು ರಾಜ್ಯದಲ್ಲಿ ಪ್ರವಾಸ ಮಾಡಿ ಏನು ಮಾಡ್ತಾರೆ.? ಅವರಿಗೆ ಕರ್ನಾಟಕ ರೈತರ ಬಗ್ಗೆ ನಿಜವಾಗೂ ಕಾಳಜಿ ಇದ್ರೆ ದೆಹಲಿಗೆ ತೆರಳಿ ಹಣ ಬಿಡುಗಡೆ ಮಾಡಿಸಲಿ, ಅಂತಾ ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ಪರೋಕ್ಷವಾಗಿ ಕಮಲ ಪಾಳಯಕ್ಕೆ ಈಗ ಸವಾಲು ಹಾಕಿದ್ದಾರೆ. ಹಾಗೆ ಈ ವೇಳೆ ಗಣಿಗಾರಿಕೆ ಇಲಾಖೆ ಅಧಿಕಾರಿ ಪ್ರತಿಮಾ ಅವರ ಹತ್ಯೆ ಬಗ್ಗೆಯೂ ಸಿಎಂ ಮಾತನಾಡಿದರು. ಈ ಬಗ್ಗೆ ತನಿಖೆಯಾಗಿ ಸತ್ಯ ತಿಳಿಯಲಿದೆ ಎಂದಿದ್ದಾರೆ.

ಬಿಜೆಪಿ 'ಗ್ಯಾರಂಟಿ' ಬಗ್ಗೆ ಹೇಳಿದ್ದೇನು?
ಇಲ್ಲಿಯ ತನಕ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕಿಸುತ್ತಿದ್ದ ಪ್ರಧಾನಿ ಮೋದಿ ಅವರು, ಇದೀಗ ಪಂಚ ರಾಜ್ಯ ಚುನಾವಣೆಯಲ್ಲಿ ಆಶ್ವಾಸನೆ ಕೊಡುತ್ತಿದ್ದಾರೆ. ನಮಗೆ ರಾಜ್ಯ ದಿವಾಳಿಯಾಗುತ್ತೆ, ಕೊಡಲಾಗುವುದಿಲ್ಲ ಎಂದು ರಾಜಕೀಯವಾಗಿ ಹೇಳಿದ್ದರು. ಬಡವರಿಗೆ ಗ್ಯಾರಂಟಿ ಯೋಜನೆಯ ಸವಲತ್ತು ನೀಡುವುದು ಟೀಕಿಸುವ ವಿಚಾರ ಅಲ್ಲ. ಅವರು ಗ್ಯಾರಂಟಿ ಕೊಟ್ಟರೆ ಅದು ಬಡವರ ಕಾರ್ಯಕ್ರಮವಾಗುತ್ತೆ, ಅದೆ ನಾವು ಕೊಟ್ಟರೆ ರಾಜ್ಯ ದಿವಾಳಿಯಾಗುತ್ತೆ ಅಂತಾರೆ. ಅವರೇನೇ ಹೇಳಿದರೂ ನಾವು ಬಡವರ, ಸಾಮಾನ್ಯರ, ಹಳ್ಳಿಗಾಡಿನ, ಎಲ್ಲ ಜಾತಿಯ ಬಡವರ ಪರವಾಗಿ ಇದ್ದೇವೆ ಎಂದರು ಸಿಎಂ.
ಕಾಂಗ್ರೆಸ್ ಸಿಎಂ ಚರ್ಚೆ ಬಗ್ಗೆ ಪ್ರತಿಕ್ರಿಯೆ
ಸಿಎಂ ಕುರ್ಚಿ ಬಗ್ಗೆ ಬಿಜೆಪಿ ಚರ್ಚೆ ಮಾಡುತ್ತಿದೆ ನಮ್ಮ ಶಾಸಕರು ಹಾಗೂ ಸಚಿವರು ಈ ಕುರಿತು ಮಾತನಾಡಬೇಡಿ ಎಂದು ಸೂಚಿಸಲಾಗಿದೆ. ಲೋಕಸಭೆ ಚುನಾವಣೆ ಬಗ್ಗೆ ಚರ್ಚೆ ಮಾಡಿದ್ದೇವೆ ಇನ್ನು ಮುಂದೆ ಸಚಿವ ಸ್ಥಾನದ ಬಗ್ಗೆ ಮಾತನಾಡಬಾರದು. ಏನಿದ್ದರೂ, ನಿಮ್ಮ ಕ್ಷೇತ್ರ ಸಾಧನೆ ಬಗ್ಗೆ ಮಾತನಾಡಿ ಎಂದು ಸೂಚಿಸಲಾಗಿದೆ ಅಂತಾ ಸಿಎಂ ತಿಳಿಸಿದರು. ಅಲ್ಲದೆ, ಕಾಂತರಾಜು ವರದಿ ಸುಟ್ಟು ಹಾಕಬೇಕೆಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದ್ದಾರೆ. ಹಿಂದೆ ಕಾಂತರಾಜು ವರದಿ ಜಾರಿಗೆ ತನ್ನಿ ಅಂತ ಇದೆ ಈಶ್ವರಪ್ಪ ಅವರು ಭಾಷಣ ಮಾಡಿದ್ರು. ಅವರ ಮಾತಿಗೆ ಬೆಲೆ ಇದೆಯೇ? ವರದಿ ನೀಡಿದರೆ ಅದನ್ನು ಸ್ವೀಕರಿಸುತ್ತೇವೆ. ವರದಿಯಲ್ಲಿ ಏನು ಇದೆ ಅಂತಾ ನಮಗೆ ತಿಳಿದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.












Click it and Unblock the Notifications