ಬಿಜೆಪಿಗರನ್ನು ಬೆಚ್ಚಿ ಬೀಳಿಸಿದ 'ಪೇಸಿಎಂ' ಅಭಿಯಾನದ ಮಾಸ್ಟರ್ ಮೈಂಡ್ ಯಾರು ಗೊತ್ತಾ?
ಬೆಂಗಳೂರು, ಸೆ.22: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ಮೇಲಿನ 40% ಕಮಿಷನ್ ಹಗರಣ ಇದುವರೆಗೆ ಕೇವಲ ಬಾಯಿಮಾತಿನಲ್ಲೇ ನಡೆಯುತ್ತಿತ್ತು. ವಿರೋಧ ಪಕ್ಷಗಳು ಆರೋಪ ಮಾಡಿದರೆ, ಸರ್ಕಾರದವರು ದಾಖಲೆ ಕೊಡಿ ಎಂದು ಕೇಳುತ್ತಿದ್ದರು. ಆದರೆ, 'ಪೇಸಿಎಂ' (PAYCM) ಎಂಬ ಡಿಜಿಟಲ್ ಟಚ್ ಕೊಟ್ಟ ಅಭಿಯಾನಕ್ಕೆ ಈಗ ದಾಖಲೆಗೂ ಮೀರಿದ ಮಹತ್ವ ಬಂದಿದೆ. ಸಿಎಂ ಬಸವರಾಜ ಬೊಮ್ಮಾಯಿ ಆದಿಯಾಗಿ ಬಿಜೆಪಿಯ ಎಲ್ಲರೂ ಉರಿದು ಬೀಳುತ್ತಿದ್ದಾರೆ. ಮತ್ತೊಂದೆಡೆ ಬಿಜೆಪಿಯ ಐಟಿ ತಂಡ ಇದಕ್ಕೆ ಪರ್ಯಾಯವಾಗಿ ಇದ್ದಬದ್ದ ಎಲ್ಲಾ ಅಸ್ತ್ರಗಳನ್ನೂ ಪ್ರಯೋಗಿಸುತ್ತಿದೆ.
ಕರ್ನಾಟಕಕ್ಕೆ ಸೀಮಿತವಾಗಿದ್ದ 40 ಪರ್ಸೆಂಟ್ ಹಗರಣದ ಆರೋಪ ಇತ್ತೀಚೆಗೆ ಪಕ್ಕದ ರಾಜ್ಯಗಳಿಗೂ ವಿಸ್ತಾರವಾಗಿತ್ತು. ಆದರೀಗ ಪೇಸಿಎಂ ಮೂಲಕ ಇಡೀ ದೇಶಕ್ಕೆ ತಲುಪಿದೆ. ಬರೀ ಒಂದು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಸಾಕು, ಕರ್ನಾಟಕದಲ್ಲಿ ಏನು ನಡೆಯುತ್ತಿದೆ ಎಂದು ದೇಶದ ಜನ ನೋಡುವಂತೆ ಮಾಡಲಾಗಿದೆ. ಇದರ ಹಿಂದೆ ತಂತ್ರಜ್ಞಾನದ ಬಳಕೆಯ ಸೂಕ್ಷ್ಮತೆ ಕಾಣುತ್ತಿದೆ. ಇದರ ತೀವ್ರತೆ ಅರಿತ ಬಸವರಾಜ ಬೊಮ್ಮಾಯಿ ಆ ಕ್ಷಣವೇ ಪ್ರಕರಣವನ್ನು ಸಿಐಡಿ ತನಿಖೆಗೆ ಒಳಪಡಿಸಿದ್ದಾರೆ.
'ಪೇಸಿಎಂ' ಎಂಬ ಪೋಸ್ಟರ್‌ಗಳನ್ನು ಹಚ್ಚಿದ್ದು ಕಾಂಗ್ರೆಸ್ ಎಂದು ಮುಖ್ಯಮಂತ್ರಿಯೇ ಆರೋಪ ಮಾಡಿದ್ದರು. ಈ ಮಧ್ಯೆ ಬುಧವಾರ ರಾತ್ರಿ ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮಾಜಿ ಅಧ್ಯಕ್ಷರಾದ ಬಿ. ಆರ್. ನಾಯ್ಡು ಹಾಗೂ ಗಗನ್ ಯಾದವ್ ಎಂಬುವರನ್ನು ಹೈಗ್ರೌಂಡ್ಸ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈ ಮಧ್ಯೆ "ಪೇಸಿಎಂ ಎಂಬ ಅಭಿಯಾನ ಇಬ್ಬರು ಕಾರ್ಯಕರ್ತರು ಮಾಡಿದ್ದಲ್ಲ. ಕಾಂಗ್ರೆಸ್‌ನವರೆಲ್ಲಾ ಸೇರಿ ಮಾಡಿದ್ದು," ಎಂದು ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, "ಎಲ್ಲಾ ಶಾಸಕರು ಸೇರಿ ಪೇಸಿಎಂ ಪೋಸ್ಟರ್‌ಗಳನ್ನು ಸರ್ಕಾರಿ ಕಚೇರಿಗಳಗೆ ಅಂಟಿಸುತ್ತೇವೆ," ಎನ್ನುವ ಮೂಲಕ ಇದು ಕಾಂಗ್ರೆಸ್ ನಡೆಸಿದ ಅಭಿಯಾನ ಎಂದು ಪರ್ಯಾವಾಗಿ ಸಮರ್ಥಿಸಿಕೊಂಡಿದ್ದಾರೆ.
ಹಾಗಾದರೆ, ಈ ಪೇಸಿಎಂ ಎಂಬ ಅಭಿಯಾನ ನಡೆಸಿದ್ದು ಯಾರು, ಇದರ ಹಿಂದಿನ ಮಾಸ್ಟರ್ ಮೈಂಡ್ ಯಾರು ಎಂದು ಹುಡುಕುತ್ತಾ ಹೋದಾಗ ಬಂದ ಉತ್ತರ "ಇದು ರಾಹುಲ್‌ಗಾಂಧಿ ಟೀಂ' ಮಾಡಿದ ಅಭಿಯಾನ ಎಂಬುದು. ರಾಹುಲ್‌ಗಾಂಧಿ ಅಣತಿಯಲ್ಲಿಯೇ ಇರುವ ಸೋಷಿಯಲ್ ಮೀಡಿಯಾ ಟೀಂನಲ್ಲಿ ಮುಖ್ಯ ಸ್ಟ್ರಾಟಜಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿರುವ, ಕರ್ನಾಟಕ ಮೂಲದ ಸುನೀಲ್ ಕನಗೋಲು ಪೇಸಿಎಂ ಪೋಸ್ಟರ್‌ನ ಐಡಿಯಾ ರೂವಾರಿ ಎಂದು ತಿಳಿದುಬಂದಿದೆ.

ಹಿಂದೆ ಬಿಜೆಪಿಗೂ ಕೆಲಸ ಮಾಡಿದ್ದ ಸುನೀಲ್ ಕನಗೋಲು
ಸಾಮಾಜಿಕ ಜಾಲತಾಣದಲ್ಲಿ ಸ್ವಂತ ವಿವರಗಳ ಹಂಚಿಕೆ ಮತ್ತು ಮಾಧ್ಯಮಗಳು ಎಂದರೆ ದೂರವೇ ಉಳಿಯುವಂತಹ ಸುನೀಲ್ ಕಣಗೋಲು 2014ರಲ್ಲಿ ಪ್ರಶಾಂತ್ ಕಿಶೋರ್ ಜೊತೆ ಕಾರ್ಯನಿರ್ವಹಿಸಿದ್ದರು. ಬಳಿಕ ಪ್ರಶಾಂತ್ ಕಿಶೋರ್ ತಂಡದಿಂದ ಹೊರಬಂದು ತಮ್ಮದೇ ಹೊಸ ತಂಡವನ್ನು ಕಟ್ಟಿದ್ದರು. ಅಲ್ಲಿಂದ ತಮಿಳುನಾಡು, ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶಗಳಲ್ಲಿ ಬೇರೆ ಬೇರೆ ಪಕ್ಷಗಳಿಗಾಗಿ ರಾಜಕೀಯ ತಂತ್ರಗಳನ್ನು ರೂಪಿಸಿದ್ದಾರೆ. ಈಗ ಮೈಂಡ್ ಶೇರ್ ಅನಾಲಿಟಿಕ್ಸ್ ಎಂಬ ಸಂಸ್ಥೆ ಸ್ಥಾಪಿಸಿಕೊಳ್ಳುವ ಮೂಲಕ ಕಾಂಗ್ರೆಸ್‌ಗೆ 2024ರ ಲೋಕಸಭಾ ಚುನಾವಣೆಗೆ ತಂತ್ರಗಳನ್ನು ಎಣೆಯಲು ಪ್ರಾರಂಭಿಸಿದ್ದಾರೆ. ಸದ್ಯ ಕರ್ನಾಟಕದಲ್ಲಿ ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆಗೂ ಕೆಲಸ ಮಾಡಲಿದ್ದು, ಅದರ ಒಂದು ತುಣುಕು ಈಗ 'ಪೇಸಿಎಂ' ಎಂಬ ಪೋಸ್ಟರ್ ಮೂಲಕ ಬಿಟ್ಟಿದ್ದಾರೆ ಎಂದು ಕಾಂಗ್ರೆಸ್ ಒಳಗಿನ ಮೂಲಗಳು ತಿಳಿಸಿವೆ.

ಸ್ಟ್ಯಾಲಿನ್ ಜೊತೆಗೂ ಆಪ್ತತೆ ಹೊಂದಿರುವ ಸುನೀಲ್ ಕಣಗೋಲು
ಸುನೀಲ್ ಕಣಗೋಲು ಬಿಜೆಪಿಗಾಗಿ ಕೆಲಸ ಮಾಡುವುದಕ್ಕೂ ಮುನ್ನ ತಮಿಳುನಾಡಿನಲ್ಲಿ ಈಗಿನ ಮುಖ್ಯಮಂತ್ರಿ ಎಂ.ಕೆ. ಸ್ಟ್ಯಾಲಿನ್ ಜೊತೆ 2015ರಲ್ಲಿ ಕಾರ್ಯನಿರ್ವಹಿಸಿದ್ದರು. ಸ್ಟ್ಯಾಲಿನ್ ಅವರಿಗೆ ವೈಯಕ್ತಿಕ ಇಮೇಜ್ ಬೆಳಸಲು ಕೆಲವು ತಂತ್ರಗಳನ್ನು ರೂಪಿಸಿದ್ದರು. ಆ ಸಂದರ್ಭದಲ್ಲಿ ಎಐಡಿಎಂಕೆ ಚುನಾವಣೆಯಲ್ಲಿ ಗೆಲವು ಸಾಧಿಸಿತಾದರೂ ಸಹ ಸ್ಟ್ಯಾಲಿನ್ ಒಬ್ಬ ನಾಯಕರಾಗಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದರು. ಇದು 2021ರಲ್ಲಿ ಸ್ಟ್ಯಾಲಿನ್ ಪೂರ್ಣಬಹುಮತದೊಂದಿಗೆ ತಮಿಳುನಾಡಿನಲ್ಲಿ ಅಧಿಕಾರ ಹಿಡಿಯಲು ಇದು ಸಹಕಾರಿ ಆಗಿತ್ತು.

ಸುನೀಲ್ ಕಣಗೋಲು ಜೊತೆಗಿದೆ ದೊಡ್ಡ ತಂಡ
ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರುತ್ತಾರೆ ಎಂಬುದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಸಂಬಂಧ ಪಿಕೆ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಜೊತೆ ಹಲವು ಸಭೆ ನಡೆಸಿದರಾದರೂ ಸಹ ಕೆಲವು ವಿಷಯಗಳನ್ನು ಒಮ್ಮತ ಮೂಡಲಿಲ್ಲ. ಇದರಿಂದ ಪ್ರಶಾಂತ್ ಕಿಶೋರ್ ಕಾಂಗ್ರೆಸ್‌ನಿಂದ ಹೊರಗುಳಿಯುವ ನಿರ್ಧಾರ ಮಾಡಿದರು.
ಇತ್ತೀಚೆಗೆ ರಾಜಸ್ಥಾನದ ಉದಯಪುರದಲ್ಲಿ ನಡೆದಿದ್ದ ಕಾಂಗ್ರೆಸ್ ಚಿಂತನಾ ಶಿಬಿರದಲ್ಲಿ 2024ರ ಲೋಕಸಭಾ ಚುನಾವಣೆಗಾಗಿ 8 ಜನರ ತಂಡದ ಟಾಸ್ಕ್‌ಫೋರ್ಸ್ ಒಂದನ್ನು ರಚಿಸಲಾಗಿದೆ. ಇದರಲ್ಲಿ ಸುನೀಲ್ ಕನಗೋಲು ಸಹಿತ ಪಿ.ಚಿದಂಬರಂ, ಮುಕುಲ್ ವಾಸ್ನಿಕ್, ಜೈರಾಮ್ ರಮೇಶ್, ಕೆ.ಸಿ. ವೇಣುಗೋಪಾಲ್, ಅಜಯ್ ಮಾಕೆನ್, ಪ್ರಿಯಾಂಕಾ ಗಾಂಧಿ ವಾಧ್ರಾ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ತಂಡದಲ್ಲಿದ್ದಾರೆ.

ಬಿಜೆಪಿಯೂ ಹಲವು ತಂತ್ರ ಎಣೆದಿತ್ತು
ಅಧಿಕಾರದಲ್ಲಿ ಇರುವವರ ವಿರುದ್ಧ ಈ ರೀತಿ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಯಾನ ನಡೆಸುವುದು ಹೊಸದಲ್ಲ. ಹಾಗೆ ನೋಡಿದರೆ ಇದರಲ್ಲಿ ಬಿಜೆಪಿಯೇ ಒಂದು ಕೈ ಮೇಲಿತ್ತು. ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರ ವಿರುದ್ಧವೂ ಇದೇ ರೀತಿ ಅಭಿಯಾನವೊಂದನ್ನು ಮಾಡಲಾಗಿತ್ತು. ಆಗ ನಕಲಿ ವೆಬ್‌ಸೈಟ್ ನಡೆಸುತ್ತಿದ್ದ ವ್ಯಕ್ತಿಯೊಬ್ಬನನ್ನು ಕರೆತಂದು ಒಂದು ದಿನ ಠಾಣೆಯಲ್ಲಿ ಕೂಡಿಸಿ ಕಳುಹಿಸಲಾಗಿತ್ತು. ಈಗ ಬಿಜೆಪಿಯೂ ಸಹ ಕಾಂಗ್ರೆಸ್‌ನ ಮೂವರನ್ನು ಕರೆತಂದು ಒಂದು ದಿನ ಠಾಣೆಯಲ್ಲಿ ಕೂಡಿಸಿ ಹೊರಕಳುಹಿಸುತ್ತಿದೆ. ಅಧಿವೇಶನದಲ್ಲಿಯೂ ಸಹ ಈ ವಿಚಾರ ಬಿಸಿಬಿಸಿ ಚರ್ಚೆಯಾಗಿದೆ. ಮುಂದಿನ ದಿನಗಳಲ್ಲಿ ಯಾವ ತಿರುವ ಪಡೆಯುತ್ತದೆ ಎಂಬುದನ್ನು ನೋಡಬೇಕು.












Click it and Unblock the Notifications