ಡಿಜಿ & ಐಜಿಪಿ ಅಲೋಕ್ ಕುಮಾರ್ ಅವಧಿ ವಿಸ್ತರಣೆ, ಪೊಲೀಸ್ ಇಲಾಖೆ ನೂತನ ಸಾರಥಿ ಯಾರು?
ಬೆಂಗಳೂರು, ಏಪ್ರಿಲ್ 30: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಆಲೋಕ್ ಮೋಹನ್ ಅವರ ಸೇವಾವಧಿಯನ್ನು ವಿಸ್ತರಣೆ ಮಾಡಿದೆ. ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಡಿಜಿ & ಐಜಿಪಿ ಹುದ್ದೆಯ ಅಧಿಕಾರಿಯ ಸೇವಾವಧಿ ವಿಸ್ತರಣೆ ಮಾಡಲಾಗಿದೆ. ಕರ್ನಾಟಕದ ಪೊಲೀಸ್ ಇಲಾಖೆಯ ನೂತನ ಸಾರಥಿ ಯಾರು? ಎಂದು ಈಗಾಗಲೇ ಇಲಾಖೆಯ ವಲಯದಲ್ಲಿ ಚರ್ಚೆಗಳು ಆರಂಭವಾಗಿದೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಆಲೋಕ್ ಮೋಹನ್ ಏಪ್ರಿಲ್ 30ರಂದು ಸೇವೆಯಿಂದ ನಿವೃತ್ತರಾಗಬೇಕಿತ್ತು. ಆದರೆ ಕರ್ನಾಟಕ ಸರ್ಕಾರ ಡಿಜಿ & ಐಜಿಪಿ ಸೇವಾವಧಿಯನ್ನು ಮೇ 21, 2025ರ ತನಕ ವಿಸ್ತರಣೆ ಮಾಡಿದೆ. ಕರ್ನಾಟಕ ಪೊಲೀಸ್ ಇಲಾಖೆಯ ಹೊಸ ಸಾರಥಿಯನ್ನು ಬಳಿಕ ನೇಮಕ ಮಾಡಲಾಗುತ್ತದೆ.

ಡಾ. ಆಲೋಕ್ ಮೋಹನ್ 2023ರ ಮೇ 22ರಂದು ಹಂಗಾಮಿ ಡಿಜಿ & ಐಜಿಪಿಯಾಗಿ ನೇಮಕಗೊಂಡಿದ್ದರು. 2 ತಿಂಗಳ ಬಳಿಕ ಅವರ ಸೇವೆಯನ್ನು ಖಾಯಂಗೊಳಿಸಲಾಗಿತ್ತು. ಏಪ್ರಿಲ್ 30ಕ್ಕೆ ಅವರು ನಿವೃತ್ತಿ ಹೊಂದಬೇಕಿತ್ತು. ಆದರೆ ಡಾ. ಆಲೋಕ್ ಮೋಹನ್ ಸುಪ್ರೀಂಕೋರ್ಟ್ ಆದೇಶದ ಅನ್ವಯ ಹಂಗಾಮಿ ಅವಧಿಯನ್ನು ಬಿಟ್ಟು 2 ವರ್ಷ ಪೂರ್ಣಗೊಳ್ಳುವ ತನಕ ಸೇವಾವಧಿ ವಿಸ್ತರಣೆ ಮಾಡಬೇಕು ಎಂದು ಮನವಿ ಸಲ್ಲಿಕೆ ಮಾಡಿದ್ದರು.
ಮುಂದಿನ ಡಿಜಿ & ಐಜಿಪಿ ಯಾರು?; ಡಿಜಿ & ಐಜಿಪಿ ಕರ್ನಾಟಕ ಪೊಲೀಸ್ ಇಲಾಖೆಯ ಅತ್ಯುನ್ನತ ಹುದ್ದೆಯಾಗಿದೆ. ಕರ್ನಾಟಕ ಸರ್ಕಾರ ಈಗಾಗಲೇ ಪೊಲೀಸ್ ಇಲಾಖೆಯ ನೂತನ ಸಾರಥಿ ಆಯ್ಕೆಗೆ ಚಾಲನೆ ನೀಡಿದೆ. ಮುಂದಿನ ಡಿಜಿ & ಐಜಿಪಿ ಮೂವರು ಪೊಲೀಸ್ ಅಧಿಕಾರಿಗಳ ಹೆಸರನ್ನು ಪರಿಗಣನೆ ಮಾಡಿ ಕೇಂದ್ರ ಗೃಹ ಇಲಾಖೆ, ಕೇಂದ್ರ ಲೋಕಸೇವಾ ಆಯೋಗಕ್ಕೆ ಕಳುಹಿಸಿಕೊಟ್ಟಿದೆ.
ಸೇವಾ ಹಿರಿತನದ ಆಧಾರದ ಮೇಲೆ ಅಗ್ನಿ ಶಾಮಕ & ತುರ್ತು ಸೇವೆಗಳ ಇಲಾಖೆ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್, ಸಿಐಡಿ ಡಿಜಿಪಿ ಡಾ. ಎಂ. ಎ. ಸಲೀಂ, ವಸತಿ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಎಂಡಿ ರಾಮಚಂದ್ರ ರಾವ್ ಹೆಸರು ಕಳಿಸಲಾಗಿದೆ.
ಆದರೆ ರಾಮಚಂದ್ರ ರಾವ್ ಮಲಮಗಳು ರನ್ಯಾರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಈ ಕುರಿತ ತನಿಖೆಯನ್ನು ರಾಮಚಂದ್ರ ರಾವ್ ಎದುರಿಸುತ್ತಿದ್ದಾರೆ. ಆದ್ದರಿಂದ ಅವರ ನೇಮಕದ ಕುರಿತು ತನಿಖಾ ವರದಿಯಲ್ಲಿ ಕ್ಲೀನ್ ಚಿಟ್ ಸಿಕ್ಕ ಬಳಿಕ ತೀರ್ಮಾನವಾಗಲಿದೆ.
ಆದ್ದರಿಂದ ಪ್ರಶಾಂತ್ ಕುಮಾರ್ ಠಾಕೂರ್, ಎಂ. ಎ. ಸಲೀಂ ಇಬ್ಬರಲ್ಲಿ ಒಬ್ಬರು ನೇಮಕವಾಗುವುದು ಖಚಿತವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಎಂ. ಎಂ. ಸಲೀಂ ನೇಮಕದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ ಎಂಬ ವರದಿಗಳಿವೆ. ಆದ್ದರಿಂದ ಅವರು ನೇಮಕಗೊಳ್ಳಬಹುದು ಎಂದು ಇಲಾಖಾ ವಲಯದಲ್ಲಿ ಸುದ್ದಿಗಳು ಕೇಳಿ ಬರುತ್ತಿವೆ.
ಈ ಮೊದಲು ಡಿಜಿ & ಐಜಿಪಿ ನಿವೃತ್ತಿ ಹೊಂದಿದರೆ ಅವರ ಸೇವೆಯನ್ನು ವಿಸ್ತರಣೆ ಮಾಡುತ್ತಿರಲಿಲ್ಲ. ಈಗ ಸಿಬಿಐ ನಿರ್ದೇಶಕರ ಮಾದರಿಯಲ್ಲಿ ಡಿಜಿ & ಐಜಿಪಿ ಸೇವಾವಧಿಯನ್ನು 2 ವರ್ಷಗಳಿಗೆ ನಿಗದಿಗೊಳಿಸಲಾಗಿದೆ. ಆದ್ದರಿಂದ ಡಾ. ಆಲೋಕ್ ಮೋಹನ್ ಅವಧಿ ಮೇ 21, 2025ರ ತನಕ ವಿಸ್ತರಣೆಯಾಗಿದೆ.
ಕರ್ನಾಟಕದ ಪೊಲೀಸ್ ಇಲಾಖೆಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಹುದ್ದೆ ಅತ್ಯುನ್ನತವಾದದ್ದು. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು ಮುಖ್ಯಸ್ಥರಾಗಿದ್ದಾರೆ. ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರ ಅಧೀನದಲ್ಲಿ ಪೊಲೀಸ್ ಮಹಾನಿರ್ದೇಶಕರು, ಅಪರ ಪೊಲೀಸ್ ಮಹಾನಿರ್ದೇಶಕರು, ಪೊಲೀಸ್ ಮಹಾನಿರೀಕ್ಷಕರು ಕರ್ತವ್ಯ ನಿರ್ವಹಿಸುತ್ತಾರೆ.
ಕರ್ನಾಟಕದಲ್ಲಿ 6 ಪೊಲೀಸ್ ಆಯುಕ್ತಾಲಯಗಳಿವೆ. ಬೆಂಗಳೂರು ನಗರದ ಆಯುಕ್ತರು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ದರ್ಜೆಯವರಾಗಿರುತ್ತಾರೆ. ಹುಬ್ಬಳ್ಳಿ-ಧಾರವಾಡ, ಮೈಸೂರು, ಮಂಗಳೂರು, ಬೆಳಗಾವಿ ಮತ್ತು ಕಲಬುರಗಿ ನಗರಗಳ ಆಯುಕ್ತರು ಉಪ ಪೊಲೀಸ್ ಮಹಾನಿರೀಕ್ಷಕರ ದರ್ಜೆಯವರಾಗಿರುತ್ತಾರೆ.












Click it and Unblock the Notifications