Karnataka Debt Increased: ಕರ್ನಾಟಕದ ಸಾಲ ಹೆಚ್ಚಳ: ಪ್ರತಿ ಕನ್ನಡಿಗರ ಮೇಲೆ ಇಷ್ಟು ಲಕ್ಷ ಹೊರೆ!
Karnataka Debt Increased: ಕರ್ನಾಟಕವು ಮಿತಿ ಮೀರಿ ಸಾಲ ಮಾಡಿದೆ ಎನ್ನುವ ವಿಷಯ ಚರ್ಚೆಯ ಮುನ್ನೆಲೆಗೆ ಬಂದಿದೆ. ಇದೇ ವಿಷಯವನ್ನು ಇರಿಸಿಕೊಂಡು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ಮುಗಿಬಿದ್ದಿವೆ. ಕೇಂದ್ರ ಸರ್ಕಾರವು ಬಜೆಟ್ ಮಂಡನೆ ಮಾಡಿದ ಬೆನ್ನಲ್ಲೇ ರಾಜ್ಯದ ಸಾಲದ ಬಗ್ಗೆಯೂ ಚರ್ಚೆ ಜೋರಾಗಿದೆ. ರಾಜ್ಯ ಕಾಂಗ್ರೆಸ್ ಹಾಗೂ ಸರ್ಕಾರವು ಕೇಂದ್ರ ಬಿಜೆಪಿ ಸರ್ಕಾರವು ಈ ಬಾರಿ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಯಾವುದೇ ಕೊಡುಗೆ ಕೊಟ್ಟಿಲ್ಲ ಎಂದು ಆರೋಪಿಸಿದೆ. ಈ ರೀತಿ ಕೇಂದ್ರದ ಮೇಲೆ ರಾಜ್ಯ ಕಾಂಗ್ರೆಸ್ ಸರ್ಕಾರವು ಮುಗಿ ಬೀಳುತ್ತಿದ್ದಂತೆಯೇ ಕೇಂದ್ರ ಸರ್ಕಾರ ಹಾಗೂ ರಾಜ್ಯ ಬಿಜೆಪಿ ಸಂಸದರು ರಾಜ್ಯ ಸರ್ಕಾರವು ಮಿತಿ ಮೀರಿ ಸಾಲ ಮಾಡಿಕೊಂಡಿದೆ ಎಂದು ದೂರಿದ್ದಾರೆ.
ರಾಜ್ಯದಲ್ಲಿ 2023 -2024ನೇ ಸಾಲಿಗಿಂತ 2024 - 2025ನೇ ಸಾಲಿನಲ್ಲಿ ರಾಜ್ಯದ ಸಾಲ ಹೆಚ್ಚಳವಾಗಿದೆ. ಇದೇ ವಿಷಯವನ್ನು ಇರಿಸಿಕೊಂಡು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಕಾಂಗ್ರೆಸ್ ಮೇಲೆ ಮುಗಿಬಿದ್ದಿವೆ. ವಿರೋಧ ಪಕ್ಷಗಳು ವಿರೋಧ ಮಾಡುತ್ತಿದ್ದರೆ, ಕಾಂಗ್ರೆಸ್ ನಾಯಕರು ಸಮರ್ಥನೆಗೆ ಮುಂದಾಗಿದ್ದಾರೆ. ರಾಜ್ಯದ ಸಾಲದ ಬಗ್ಗೆ "Vk" ವರದಿ ಮಾಡಿದೆ.

ಸಾಲರಾಮಯ್ಯ ಎಂದು ಟೀಕೆ: ಇನ್ನು ರಾಜ್ಯ ಸರ್ಕಾರದ ಆರ್ಥಿಕ ನೀತಿಯನ್ನು ಜೆಡಿಎಸ್ ಟೀಕೆ ಮಾಡಿದೆ. ಸ್ವಯಂ ಘೋಷಿತ ಆರ್ಥಿಕ ತಜ್ಞ ಸಾಲರಾಮಯ್ಯ ಅವರೇ ಸಾಲ ಮಾಡುವುದೇ ಸಾಧನೆಯೇ ಎಂದು ಪ್ರಶ್ನೆ ಮಾಡಿದೆ. ಕರ್ನಾಟಕವನ್ನು ಆರ್ಥಿಕ ತುರ್ತು ಪರಿಸ್ಥಿತಿಗೆ ತಳ್ಳಿರುವ ಕಾಂಗ್ರೆಸ್ ಸರ್ಕಾರ, ಅದಕ್ಷ ಹಾಗೂ ಅಸಮರ್ಪಕ ಆಡಳಿತದಿಂದ ಕರ್ನಾಟಕವನ್ನು ದೊಡ್ಡ ಪ್ರಮಾಣದ ಸಾಲದ ಕೂಪಕ್ಕೆ ಸಿಲುಕಿಸಿದೆ ಎಂದು ದೂರಿದೆ.
ರಾಜ್ಯದ ಆದಾಯ ಹೆಚ್ಚಿಸುವಲ್ಲಿ ಸಂಪೂರ್ಣ ಎಡವಿರುವ ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆಗಳಿಂದ ಬೊಕ್ಕಸವನ್ನು ಬರಿದು ಮಾಡಿದ್ದಾರೆ.
ವರ್ಷದಿಂದ ವರ್ಷಕ್ಕೆ ಸಾಲದ ಪ್ರಮಾಣ ಏರಿಕೆಯಾಗುತ್ತಿದೆ. ಅಸಲು ಪಾವತಿಗಿಂತ ಬಡ್ಡಿ ಪಾವತಿಯೇ ಜಾಸ್ತಿಯಾಗಿರುವುದು ಆರ್ಥಿಕ ಹೊರೆಯನ್ನು ಮತ್ತಷ್ಟು ಹೆಚ್ಚಿಸಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ದುರಾಡಳಿತ ಹೀಗೆ ಮುಂದುವರಿದರೆ. ಅಧಿಕಾರದಿಂದ ಕೆಳಗಿಳಿಯುವಷ್ಟರಲ್ಲಿ ರಾಜ್ಯವನ್ನು ದಿವಾಳಿ ಮಾಡಿಯೇ ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಟೀಕಿಸಿದೆ.

ಸಾಲ ಮಾಡುವುದನ್ನೇ ಫುಲ್ ಟೈಂ ಕಾಯಕ: ಇನ್ನು ಈ ವಿಚಾರವಾಗಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಸಹ ಟೀಕೆ ಮಾಡಿದ್ದಾರೆ. ಕರ್ನಾಟಕವನ್ನು ಸಂಪೂರ್ಣ ದಿವಾಳಿ ಮಾಡಬೇಕೆಂಬುದೇ ರಾಜ್ಯ ಕಾಂಗ್ರೆಸ್ ಸರ್ಕಾರದ ಒನ್ ಲೈನ್ ಅಜೆಂಡಾ. ಸಾಲ ಮಾಡುವುದನ್ನೇ ಫುಲ್ ಟೈಂ ಕಾಯಕವನ್ನಾಗಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರು ಪ್ರಸ್ತುತ ಕರ್ನಾಟಕದ ಒಟ್ಟು ಸಾಲವನ್ನು 6 ಲಕ್ಷ 65 ಸಾವಿರ ಕೋಟಿಗೆ ಮುಟ್ಟಿಸಿದ್ದಾರೆ.
ಪ್ರತಿ ಕನ್ನಡಿಗನ ಮೇಲೆ ಬರೋಬ್ಬರಿ 1 ಲಕ್ಷ ರೂಪಾಯಿ ಸಾಲದ ಹೊರೆಯನ್ನು ಭ್ರಷ್ಟ ಕಾಂಗ್ರೆಸ್ ಸರ್ಕಾರ ಹೊರೆಸಿದೆ ಎಂದು ಹೇಳಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕ ನಾವೀನ್ಯತೆಯ ಸೂಚ್ಯಂಕದಲ್ಲಿ, ಬಂಡವಾಳ ಹೂಡಿಕೆಯಲ್ಲಿ ನಂಬರ್ 1 ಆಗಿತ್ತು. ಆದರೆ ಈಗಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಅತಿ ಹೆಚ್ಚು ಸಾಲ ಮಾಡುವ ರಾಜ್ಯಗಳಲ್ಲಿ ನಂಬರ್ 1 ಆಗುತ್ತಿರುವುದು ಅತ್ಯಂತ ನಾಚಿಕೆಗೇಡು ಎಂದು ಟೀಕೆ ಮಾಡಿದ್ದಾರೆ.












Click it and Unblock the Notifications