ಸಿದ್ದು ವಿರೋಧಿ ಹೇಳಿಕೆ ಬೆನ್ನಲ್ಲೇ ಡಿಕೆಶಿ ಭೇಟಿಯಾದ ಬಿಕೆ ಹರಿಪ್ರಸಾದ್: ಗುಪ್ತ ಚರ್ಚೆಯಲ್ಲಿ ಮುನಿಯಪ್ಪ, ಬಿಎಲ್ ಶಂಕರ್ ಭಾಗಿ
ಬೆಂಗಳೂರು, ಜುಲೈ 26: ಕರ್ನಾಟಕ ವಿಧಾನಸಭೆ ಚುನಾವಣೆ ಬಳಿಕ ಅಧಿಕಾರದ ಗದ್ದುಗೆ ಏರಿರುವ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನದ ಹೊಗೆಯಾಡುತ್ತಿದೆ. ಚುನಾವಣೆಗೂ ಮುನ್ನವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವೆ ಮುಸುಗಿನ ಗುದ್ದಾಟ ಮುನ್ನೆಲೆಗೆ ಬಂದಿತ್ತು. ಈಗ ಮತ್ತೊಬ್ಬ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪರೋಕ್ಷ ಸಮರ ಸಾರಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಕೆಶಿಯನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ಸಿದ್ದು ವಿರುದ್ಧ ಬಿಕೆ ಹರಿಪ್ರಸಾದ್ ಪ್ರರೋಕ್ಷ ವಾಗ್ದಾಳಿ
ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಬಿಕೆ ಹರಿಪ್ರಸಾದ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದರು.

ಬೆಂಗಳೂರು ನಗರದಲ್ಲಿ ನಡೆದ ಈಡಿಗ ಸಮುದಾಯದ ಸಮಾವೇಶದಲ್ಲಿ ಮಾತನಾಡಿರುವ ಹರಿಪ್ರಸಾದ್, 'ನನಗೆ ನಾಯಕರನ್ನು ಸಿಎಂ ಮಾಡುವುದು ಗೊತ್ತು, ಸಿಎಂ ಸ್ಥಾನದಿಂದ ಅವರನ್ನು ಕೆಳಗಿಳಿಸುವುದು ಗೊತ್ತು' ಎಂದು ಹೇಳಿದ್ದರು.
'ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ನಿರ್ಧರಿಸುವಲ್ಲಿ ನಾನು ದೊಡ್ಡ ಪಾತ್ರವನ್ನು ವಹಿಸಿದ್ದೇನೆ. ನಾಯಕತ್ವದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಾನು ಚೆನ್ನಾಗಿ ಪರಿಣತಿ ಹೊಂದಿದ್ದೇನೆ' ಎಂದು ಅವರು ಇದೇ ವೇಳೆ ಹೇಳಿದ್ದರು.

ಕಾಂಗ್ರೆಸ್‌ನಲ್ಲಿ ಚಾಲ್ತಿಯಲ್ಲಿದೆ ಗುಂಪುಗಾರಿಕೆ
ರಾಜ್ಯದಲ್ಲಿ ಸಂಪೂರ್ಣ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬಂದರೂ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಚಾಲ್ತಿಯಲ್ಲಿದೆ ಎಂಬುದು ಹರಿಪ್ರಸಾದ್ ಮಾತಿನಿಂದ ಗೊತ್ತಾಗುತ್ತದೆ. ಹರಿಪ್ರಸಾದ್ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಆಪ್ತರು ಎಂಬುದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಈಗ ಅವರ ಹೇಳಿಕೆಯು ಭಾರೀ ಚರ್ಚೆಗೆ ಗ್ರಾಸವಾಗಿದೆ. ಲೋಕಸಭೆ ಚುನಾವಣೆ ಬಳಿಕ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಸಲಾಗುತ್ತದೆ ಎಂಬ ಮಾತುಗಳಿಗೆ ಮತ್ತೆ ರೆಕ್ಕೆ ಪುಕ್ಕ ಬಂದಂತಾಗಿದೆ.
ಡಿಕೆಶಿ ಜೊತೆ ಗುಪ್ತ ಮಾತುಕತೆ
ಸಿದ್ದು ವಿರುದ್ಧ ಪರೋಕ್ಷ ಹೇಳಿಕೆ ನೀಡಿರುವ ಬೆನ್ನಲ್ಲೇ ಬಿಕೆ ಹರಿಪ್ರಸಾದ್ ಅವರು ಡಿಕೆಶಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಗುಪ್ತ ಮಾತುಕತೆ ವೇಳೆ, ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆಎಚ್ ಮುನಿಯಪ್ಪ ಹಾಗೂ ಹಿರಿಯ ನಾಯಕ ಬಿಎಲ್ ಶಂಕರ್ ಹಾಜರಿರುವುದು ತೀವ್ರ ಕುತೂಹಕ್ಕೆ ಕಾರಣವಾಗಿದೆ. ಈ ಹಿರಿಯ ನಾಯಕರು ಪಕ್ಷದೊಳಗಿನ ಆಂತರಿಕ ವಿಚಾರಗಳ ಕುರಿತು ಮಾತುಕತೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಜುಲೈ 27 ರಂದು ಶಾಸಕಾಂಗ ಸಭೆ
ಪಕ್ಷದೊಳಗೆ ಭಿನ್ನಮತ ಸ್ಫೋಟಗೊಂಡ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕಾಂಗ ಸಭೆ ಜುಲೈ 27 ರಂದು ಶಾಸಕಾಂಗ ಸಭೆಯನ್ನು ಕರೆದಿದ್ದಾರೆ. ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಶಾಸಕಾಂಗ ಪಕ್ಷದ ಸಭೆಯನ್ನು ಕರೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪಕ್ಷದಲ್ಲಿ ಇತ್ತೀಚೆಗೆ ಭಿನ್ನಮತ ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಈ ಸಭೆ ಮಹತ್ವ ಪಡೆದುಕೊಂಡಿದೆ. ಬಿ ಕೆ ಹರಿಪ್ರಸಾದ್ ಅವರು ಸಿದ್ದರಾಮಯ್ಯ ನಾಯಕತ್ವಕ್ಕೆ ಸವಾಲು ಹಾಕಿದ್ದಾರೆ. ಪಕ್ಷದೊಳಗೆ ಬಂಡಾಯದ ಬಾವುಟ ಹಾರಿಸಿದ್ದಾರೆ ಎಂಬ ವರದಿಗಳು ಪ್ರಕಟಗೊಂಡ ಬೆನ್ನಲ್ಲೇ ಸಿಎಂ ಸಭೆ ಕರೆದಿದ್ದಾರೆ ಎಂದು ಹೇಳಲಾಗುತ್ತಿದೆ.

ಬೆಂಕಿಗೆ ತುಪ್ಪ ಸುರಿದ ಬಿಜೆಪಿ
ಬಿಕೆ ಹರಿಪ್ರಸಾದ್ ಅವರು ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಬಿಜೆಪಿ ಪ್ರತಿಕ್ರಿಯಿಸಿದೆ. ಈ ಬೆಳವಣಿಗೆಯು ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಪತನದ ಆರಂಭಿಕ ಹಂತ ಎಂದು ಹೇಳಿದೆ.
ಈ ಕುರಿತು ಮಾತನಾಡಿರುವ ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಡಿಕೆ ಶಿವಕುಮಾರ್ ಅವರು ಹರಿಪ್ರಸಾದ್ ಹೆಗಲ ಮೇಲೆ ಬಂದೂಕನ್ನು ಇಟ್ಟು ಗುಂಡು ಹಾರಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಹರಿಪ್ರಸಾದ್ ಅವರು ದೇಶದಲ್ಲಿ ಐವರು ಮುಖ್ಯಮಂತ್ರಿಗಳನ್ನು ಮಾಡಲು ಕಾರಣರಾಗಿದ್ದಾರೆ. ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವ ತಾಕತ್ತನ್ನು ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.












Click it and Unblock the Notifications