'ಕಪ್ಪ'ದ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಮೋದಿಗೆ ಕಾಂಗ್ರೆಸ್ ಪತ್ರ
ಬೆಂಗಳೂರು, ಫೆಬ್ರವರಿ 17 : ಪರಪ್ಪನ ಅಗ್ರಹಾರ ಜೈಲು ಸೇರಿರುವ ಶಶಿಕಲಾ ನಟರಾಜ್ ಅವರ ಅಬ್ಬರ ಕಡಿಮೆಯಾಗುತ್ತಿದ್ದಂತೆ ಸಣ್ಣ ತೂಕಡಿಕೆಯಿಂದ ಎದ್ದಿರುವ ಕಾಂಗ್ರೆಸ್, ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ನಡುವೆ ನಡೆದ 'ಕಪ್ಪ'ದ ಮಾತಿನ ಸಿಡಿ ಹಗರಣಕ್ಕೆ ಮತ್ತೆ ಜೀವ ನೀಡಲು ಆರಂಭಿಸಿದೆ.
ಕಾಂಗ್ರೆಸ್ ಮುಖ್ಯ ಸಚೇತಕ ಐವಾನ್ ಡಿಸೋಜಾ ಅವರು ಲೋಕಾಯುಕ್ತಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮತ್ತು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ ದೂರು ನೀಡಿದ್ದಾರೆ.[ಯಡಿಯೂರಪ್ಪ- ಅನಂತ್ ಮಾತನಾಡಿಕೊಂಡಿದ್ದು ಯಾರ ಬಗ್ಗೆ?]
ಇದರ ಜೊತೆಗೆ, ವಕೀಲ ವೃತ್ತಿ ನಡೆಸುತ್ತಿರುವ, ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸುತ್ತಿರುವ ಸಿಎಂ ಧನಂಜಯ ಅವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ, ಬಿಜೆಪಿಯ ಇಬ್ಬರು ಪ್ರಧಾನ ನಾಯಕರ ವಿರುದ್ಧ ಶುಕ್ರವಾರ ದೂರು ನೀಡಿದ್ದಾರೆ.

ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಹಾಲಿ ವಿಧಾನಪರಿಷತ್ ಸದಸ್ಯ ರಿಜ್ವಾನ್ ಇರ್ಷಾದ್ ಅವರು ಈ ವಿಷಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ತಮ್ಮ ಮನ್ ಕಿ ಬಾತ್ ಬಾನುಲಿ ಕಾರ್ಯಕ್ರಮದಲ್ಲಿ, ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ಸ್ಪಷ್ಟೀಕರಣ ನೀಡಬೇಕೆಂದು ಕೋರಿದ್ದಾರೆ.[ಮಲ್ಲೇಶ್ವರಂ ಠಾಣೆ ಮೆಟ್ಟಿಲೇರಿದ ಯಡಿಯೂರಪ್ಪ -ಅನಂತ್ ಸಂಭಾಷಣೆ]
ಫೆಬ್ರವರಿ 12ರಂದು ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಕಾರ್ಯಕಾರಣಿ ಸಭೆ ನಡೆಯುತ್ತಿದ್ದಾಗ, ಸಿದ್ದರಾಮಯ್ಯನವರು ಹೈಕಮಾಂಡಿಗೆ ಸಾವಿರ ಕೋಟಿ ಕಪ್ಪ ನೀಡಿದ್ದಾರೆ ಎಂಬ ವಿಷಯ ಮಾತನಾಡುತ್ತ, ನಾವು ಕೂಡ ಬಿಜೆಪಿ ಹೈಕಮಾಂಡಿಗೆ ಕಪ್ಪ ನೀಡಿದ್ದೇವೆ ಎಂದು ಮಾತನಾಡಿದ್ದಾರೆ ಎನ್ನುವ ಸಿಡಿಯನ್ನು ಕಾಂಗ್ರೆಸ್ ಬಹಿರಂಗಪಡಿಸಿದೆ.
ಸಿದ್ದರಾಮಯ್ಯ ಅವರು ತಮ್ಮ ಪಟ್ಟ ಉಳಿಸಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ಗೆ ಸಾವಿರ ಕೋಟಿ ರು. ಲಂಚ ನೀಡಿದ್ದಾರೆ ಎಂದು ಯಡಿಯೂರಪ್ಪ ಆರೋಪಿಸಿದ್ದರು. ಈ ಕುರಿತು ಎಂಎಲ್‌ಸಿ ಗೋವಿಂದರಾಜು ಅವರಿಗೆ ಗೊತ್ತಿದ್ದು, ಐಟಿ ದಾಳಿಯಲ್ಲಿ ಸಿಕ್ಕಿರುವ ಡೈರಿಯಲ್ಲಿ ಈ ವಿಷಯ ಅಡಕವಾಗಿದೆ ಎಂದು ಆರೋಪಿಸಿದ್ದರು.
ನೀವು ಸೇರಾದರೆ ನಾವು ಸವ್ವಾಸೇರು ಎಂಬಂತೆ, ಕಾಂಗ್ರೆಸ್ ಪಕ್ಷದ ಮುಖಂಡ ಉಗ್ರಪ್ಪನವರು, ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ಅವರು, ತಾವೂ ಕಪ್ಪ ನೀಡಿದ್ದನ್ನು ಒಪ್ಪಿಕೊಂಡಂತಹ ಮಾತುಕತೆ ಇರುವ ಸಿಡಿಯನ್ನು ಬಿಡುಗಡೆ ಮಾಡಿ ಬಿಜೆಪಿ ನಾಯಕರಿಗೆ ಭಾರೀ ಬಿಸಿ ಮುಟ್ಟಿಸಿದ್ದಾರೆ.
ಉಗ್ರಪ್ಪ ಬಿಡುಗಡೆ ಮಾಡಿರುವ ಸಿಡಿ ಬಗ್ಗೆ ಪ್ರತಿಕ್ರಿಯಿಸಿರುವ ಅನಂತ್ ಕುಮಾರ್ ಅವರು, 55 ಸೆಕೆಂಡುಗಳ ಸಂಭಾಷಣೆ ಇರುವ ಸಿಡಿಯನ್ನು ಕಾಂಗ್ರೆಸ್ ನಾಯಕರೇ ಸೃಷ್ಟಿಸಿದ್ದಾರೆ. ಇಡೀ 1 ತಾಸು ಇರುವ ಸಿಡಿಯನ್ನು ತೋರಿಸಬೇಕೆಂದು ಅವರು ಕಾಂಗ್ರೆಸ್ಸಿಗೆ ಸವಾಲು ಎಸೆದಿದ್ದಾರೆ.












Click it and Unblock the Notifications