ಸರಣಿ ಟ್ವೀಟ್‌ಗಳ ಮೂಲಕ ಮೋದಿ ಕೆಣಕಿದ ಕರ್ನಾಟಕ ಕಾಂಗ್ರೆಸ್
ಬೆಂಗಳೂರು, ಜನವರಿ 2: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ಆದರೆ, ಕರ್ನಾಟಕ ಕಾಂಗ್ರೆಸ್ ಘಟಕ ಮೋದಿ ಭೇಟಿಯನ್ನು ವಿರೋಧಿಸಿ ಸರಣಿ ಟ್ವೀಟ್ ಮಾಡಿದೆ. ಕರ್ನಾಟಕಕ್ಕೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳು ಕೇಳಿ 'ಉತ್ತರ ಕೊಡಿ ಮೋದಿ ಅವರೇ' ಎಂದು ಪ್ರಶ್ನಿಸಿದೆ.
ನರೇಂದ್ರ ಮೋದಿ ತುಮಕೂರು ಭೇಟಿ ವಿರೋಧಿಸಿದ ರೈತರು
'ತ್ರಿವಿಧ ದಾಸೋಹಿ ಸಿದ್ದಗಂಗಾ ಮಠದ 'ಶಿವಕುಮಾರ ಸ್ವಾಮೀಜಿ' ಅವರು ಲಿಂಗೈಕ್ಯರಾದಾಗ ತುಮಕೂರಿಗೆ ಏಕೆ ಬರಲಿಲ್ಲ? ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಇದುವರೆಗೂ ನೀಡಿಲ್ಲ ಏಕೆ? ಭೀಕರ ನೆರೆ ಸಂದರ್ಭದಲ್ಲಿ ರಾಜ್ಯಕ್ಕೆ ಭೇಟಿ ನೀಡಲಿಲ್ಲ ಏಕೆ? ₹ 1 ಲಕ್ಷ ಕೋಟಿಗೂ ಹೆಚ್ಚು ನಷ್ಟವಾದರೂ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲಿಲ್ಲ ಏಕೆ? ಮಧ್ಯಂತರ ಪರಿಹಾರ ನೀಡಲಿಲ್ಲ ಏಕೆ? ರಾಜ್ಯ ಸರ್ಕಾರವೇ ₹35,300 ಕೋಟಿ ನಷ್ಟ ಆಗಿದೆ ಎಂದು ವರದಿ ನೀಡಿದರೂ ಕೇವಲ ₹1200 ಕೋಟಿ ನೀಡಿ ಸುಮ್ಮನಾಗಿದ್ದು ಏಕೆ? ಎಂದು ಸರಣಿ ಟ್ವೀಟ್‌ಗಳನ್ನು ಮಾಡಿ ಈ ವಿಷಯಗಳಲ್ಲಿ ನೀವೇನು ಮಾಡಿದಿರಾ ಎಂಬುದಕ್ಕೆ ಕರ್ನಾಟಕದ ಜನತೆಗೆ ಉತ್ತರ ಕೊಡಿ ಎಂದು ಕೇಳಿದೆ.
'ಇದು ಭಾರತ ಗಣರಾಜ್ಯ, ಭಾರತದ ಸಾಂವಿಧಾನದಲ್ಲಿ ಯಾವ ಭಾಷೆಯೂ ರಾಷ್ಟ್ರ ಭಾಷೆಯಲ್ಲ. ಹಾಗಿದ್ದರೂ, ಸಂವಿಧಾನದ 8ನೇ ಪರಿಚ್ಚೇಧದಲ್ಲಿನ ಎಲ್ಲಾ ಭಾಷೆಗಳಿಗೂ ಅಧಿಕೃತ, ಸಮಾನ ಸ್ಥಾನಮಾನ ನೀಡುತ್ತಿಲ್ಲ ಏಕೆ? ಜನ ಜೀವನದ ಮಾತೃ ಭಾಷೆಗಳನ್ನು, ಪ್ರಾದೇಶಿಕ ಭಾಷೆಗಳನ್ನ ಕಡೆಗಣಿಸಿ 'ಹಿಂದಿ' ಭಾಷೆಯನ್ನು ಹೇರುತ್ತಿರುವುದೇಕೆ? ಎಂದು ಮತ್ತೊಂದು ಟ್ವೀಟ್ ಮಾಡಿದೆ.
'ಗಡಿ ವಿವಾದದಲ್ಲಿ ಮಹಾರಾಷ್ಟ್ರ - ಕರ್ನಾಟಕ ಬಿಜೆಪಿ ನಾಯಕರು ತದ್ವಿರುದ್ಧ ಹೇಳಿಕೆ ನೀಡಿ ಗೊಂದಲ ಸೃಷ್ಟಿಸುತ್ತಿರುವುದೇಕೆ? ಉಭಯ ರಾಜ್ಯಗಳ ನಡುವೆ ಶಾಂತಿ ಸ್ಥಾಪಿಸಬೇಕಾದ ನೇತೃತ್ವದ ಕೇಂದ್ರ, ರಾಜ್ಯ ಸರ್ಕಾರಗಳು ರಾಜ್ಯದ ಹಿತಾಸಕ್ತಿಗೆ ವಿರುದ್ಧವಾದ ತಮ್ಮದೇ ಪಕ್ಷದ ಶಾಸಕರ ಹೇಳಿಕೆಯನ್ನು ಖಂಡಿಸುತ್ತಿಲ್ಲ ಏಕೆ? ಎಂಟು ಟ್ವೀಟ್ ಮಾಡಿದೆ.
'ರಾಜ್ಯಕ್ಕೆ ಕೇಂದ್ರದಿಂದ ನೀಡಬೇಕಾದ ತೆರಿಗೆಯ (ಜಿ.ಎಸ್.ಟಿ) ಪಾಲು ಸಮರ್ಪಕವಾಗಿ ನೀಡುತ್ತಿಲ್ಲ ಏಕೆ? ರಾಜ್ಯಕ್ಕೆ ಬರಬೇಕಾದ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯ ಬಾಕಿಯನ್ನು ಇದುವರೆಗೂ ಏಕೆ ನೀಡಿಲ್ಲ?ಅನುದಾನ ಹಂಚಿಕೆಯಲ್ಲಿ ಕರ್ನಾಟಕವನ್ನು ಕಡೆಗಣಿಸಿರುವುದು ಏಕೆ? ಎಂದು ಪ್ರಶ್ನಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಮಧ್ಯಾಹ್ನ ತುಮಕೂರಿಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಲಿಂಗೈಕ್ಯ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದು, ತುಮಕೂರು ವಿವಿ ಆವರಣದಲ್ಲಿ ಆಯೋಜಿಸಿರುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ಯೋಜನಾದ ಫಲಾನುಭವಿಗಳ ಬೃಹತ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಸಂಜೆ ಡಿಆರ್‌ಡಿಓ ಸಂಸ್ಥೆಗೆ ಭೇಟಿ ನೀಡಿ ರಾಜಭವನದಲ್ಲಿ ತಂಗಲಿದ್ದಾರೆ. ನಾಳೆ ಭಾರತೀಯ ವಿಜ್ಞಾನ ಕಾಂಗ್ರೆಸ್ ಜಿಕೆವಿಕೆ ಆವರಣದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.