ಕಿತ್ತೂರು ಕರ್ನಾಟಕದ ಬಿಜೆಪಿ ಲಿಂಗಾಯತ ಲೀಡರ್‌ಗಳಿಗೆ ಕಾಂಗ್ರೆಸ್ ಗಾಳ: ಶೆಟ್ಟರ್ ಮೂಲಕ ತೆರೆಮರೆಯ ಆಟಕ್ಕಿಳಿದ 'ಕೈ' ಪಾಳಯ
ಬೆಂಗಳೂರು, ಆಗಸ್ಟ್ 24: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಕಾಂಗ್ರೆಸ್ ಪಕ್ಷವು ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿದೆ. ಈ ಹಿನ್ನೆಲೆಯಲ್ಲಿ ಆಪರೇಷನ್ ಹಸ್ತದ ಮೂಲಕ ಜೆಡಿಎಸ್ ಹಾಗೂ ಬಿಜೆಪಿ ನಾಯಕರನ್ನು ಸೆಳೆಯಲು ಸಿದ್ದವಾಗಿದೆ. 2019 ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಕೆಲ ಶಾಸಕರು ಮತ್ತೆ ಪಕ್ಷಕ್ಕೆ ಮರಳಲು ಮುಂದಾಗಿದ್ದಾರೆ. ಇದೇ ವೇಳೆ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮೂಲಕ ಕಿತ್ತೂರು ಕರ್ನಾಟಕದ ಬಿಜೆಪಿ ನಾಯಕರನ್ನು ಸೆಳೆಯಲು ಕಾಂಗ್ರೆಸ್ ಯತ್ನ ನಡೆಸಿದೆ ಎಂಬ ಮಾತುಗಳು ಕೇಳಿಬಂದಿವೆ.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿತು. ಆ ಹಿನ್ನೆಲೆಯಲ್ಲಿ ಅವರು ಬಿಜೆಪಿಯನ್ನು ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದರು. ಅವರು ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ವಿರುದ್ಧ ಪರಾಭಾವಗೊಂಡರು. ಆದರೂ, ಕಾಂಗ್ರೆಸ್ ಶೆಟ್ಟರ್ ಅವರನ್ನು ಎಂಎಲ್‌ಸಿ ಸ್ಥಾನಕ್ಕೆ ಆಯ್ಕೆ ಮಾಡಿತು.

ಪ್ರಬಲ ಲಿಂಗಾಯತ ಸಮುದಾಯದಿಂದ ಬಂದಿರುವ ಶೆಟ್ಟರ್ ಅವರ ಪ್ರಾಬಲ್ಯವನ್ನು ಬಳಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. ಕಿತ್ತೂರು ಕರ್ನಾಟಕದ ( ಆಗಿನ ಮುಂಬೈ ಕರ್ನಾಟಕ ) ಬಿಜೆಪಿಯ ಲಿಂಗಾಯತ ನಾಯಕರನ್ನು ಸೆಳೆಯುವ ಜವಾಬ್ದಾರಿಯನ್ನು ಶೆಟ್ಟರ್ ಅವರಿಗೆ ವಹಿಸಲಾಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.
ಶಂಕರ್ ಪಾಟೀಲ್ ಮನೇನಕೊಪ್ಪಗೆ ಗಾಳ
ನವಲಗುಂದ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಶಂಕರ್ ಪಾಟೀಲ್ ಮನೇನಕೊಪ್ಪ ಅವರು ಪರಾಭವಗೊಂಡಿದ್ದಾರೆ. ಮನೇನಕೊಪ್ಪ ಅವರು ಶೆಟ್ಟರ್ ಅವರ ಬೆಂಬಲಿಗರು. ಇದನ್ನೇ ಬಳಸಿಕೊಂಡು ಶಂಕರ್ ಪಾಟೀಲ್ ಮನೇನಕೊಪ್ಪ ಅವರಿಗೆ ಕಾಂಗ್ರೆಸ್ ಗಾಳ ಹಾಕುತ್ತಿದೆ. ಲಿಂಗಾಯತ ನಾಯಕರಾಗಿರುವ ಮನೇನಕೊಪ್ಪ ಅವರನ್ನು ಕಾಂಗ್ರೆಸ್‌ಗೆ ಕರೆತರುವ ಮೂಲಕ ಲೋಕಸಭೆಯಲ್ಲಿ ಬಿಜೆಪಿ ಗೆಲುವಿಗೆ ತಡೆಯೊಡ್ಡುವ ತಂತ್ರವನ್ನು ಕಾಂಗ್ರೆಸ್ ನಾಯಕರು ಮಾಡಿದ್ದಾರೆ ಎನ್ನಲಾಗುತ್ತಿದೆ.
ಪ್ರಹ್ಲಾದ್ ಜೋಶಿಗೆ ಖೆಡ್ಡಾ
ಧಾರವಾಡ ಲೋಕಸಭೆ ಕ್ಷೇತ್ರದ ಸಂಸದ ಪ್ರಹ್ಲಾದ್ ಜೋಶಿ ಅವರಿಗೆ ಖೆಡ್ಡಾ ತೋಡಲು ಕಾಂಗ್ರೆಸ್ ಸಂಚು ರೂಪಿಸಿದೆ. ಪ್ರಹ್ಲಾದ್ ಜೋಶಿ ಅವರು ರಾಜ್ಯ ಬಿಜೆಪಿಯ ಪ್ರಮುಖ ನಾಯಕರು. ವಿಧಾನಸಭೆ ಚುನಾವಣೆಯ ಟಿಕೆಟ್ ಹಂಚಿಕೆ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು. ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ತಪ್ಪಲು ಅವರೂ ಕಾರಣವೆಂಬ ಆರೋಪಗಳು ಕೇಳಿಬಂದಿವೆ. ಬಿಎಲ್ ಸಂತೋಷ್ ಹಾಗೂ ಪ್ರಹ್ಲಾದ್ ಜೋಶಿ ಅವರು ತಮಗೆ ಟಿಕೆಟ್ ತಪ್ಪಿಸಿದರು ಎಂಬ ಆರೋಪವನ್ನು ಸ್ವತಃ ಜಗದೀಶ್ ಶೆಟ್ಟರ್ ಮಾಡಿದ್ದಾರೆ.

ಈಗ ಲಿಂಗಾಯತ ಸಮುದಾಯಕ್ಕೆ ಸೇರಿದ ಶಂಕರ್ ಪಾಟೀಲ್ ಮನೇನಕೊಪ್ಪ ಅವರನ್ನು ಕಾಂಗ್ರೆಸ್‌ಗೆ ಕರೆತರುವ ಮೂಲಕ ಪ್ರಹ್ಲಾದ್ ಜೋಶಿ ಗೆಲುವಿಗೆ ಕುತ್ತು ತರುವುದು ಕೈ ನಾಯಕರ ತಂತ್ರವಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಹ್ಲಾದ್ ಜೋಶಿ ವಿರುದ್ಧ ಶಂಕರ್ ಪಾಟೀಲ್ ಮನೇನಕೊಪ್ಪ ಅವರನ್ನು ಕಣಕ್ಕಿಳಿಸುವ ಆಲೋಚನೆಯಲ್ಲಿ ಕಾಂಗ್ರೆಸ್ ಇದೆ ಎಂದು ಹೇಳಲಾಗುತ್ತಿದೆ.
ಒಂದು ವೇಳೆ, ಮನೇನಕಪ್ಪ ಅವರನ್ನು ಜೋಶಿ ವಿರುದ್ಧ ನಿಲ್ಲಿಸಿದರೆ, ಪ್ರತಿಷ್ಠಿತ ಸಂಘರ್ಷವೊಂದಕ್ಕೆ ಧಾರವಾಡ ಸಾಕ್ಷಿಯಾಗುವುದಂತೂ ನಿಶ್ಚಿತವಾಗಿದೆ. ಶೆಟ್ಟರ್ ಮೂಲಕ ಇನ್ನಷ್ಟು ಲಿಂಗಾಯತ ನಾಯಕರಿಗೆ ಗಾಳ ಹಾಕುವ ಯತ್ನದಲ್ಲಿ ಕಾಂಗ್ರೆಸ್ ಇದೆ ಎಂಬ ಮಾತುಗಳನ್ನೂ ಸಹ ಅಲ್ಲಗಳೆಯುವಂತಿಲ್ಲ.












Click it and Unblock the Notifications