"ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ಜಾಹೀರಾತುಗಳ ಹೆಸರಿನಲ್ಲಿ ₹532.00 ಕೋಟಿ ಖರ್ಚು!"
ಕರ್ನಾಟಕ ಸರ್ಕಾರವು ಪ್ರಚಾರದ ಹೆಸರಿನಲ್ಲಿ ಭಾರೀ ಮೊತ್ತ ಖರ್ಚು ಮಾಡಿದೆ ಎನ್ನುವ ಗಂಭೀರವಾದ ಆರೋಪ ಕೇಳಿ ಬಂದಿದೆ. ಕರ್ನಾಟಕ ಸರ್ಕಾರವು ಗ್ಯಾರಂಟಿ ಯೋಜನೆಗೆ ಭಾರೀ ಮೊತ್ತವನ್ನು ಖರ್ಚು ಮಾಡುತ್ತಿದೆ. ಅಲ್ಲದೇ ಇದಕ್ಕಾಗಿಯೇ ಹೆಚ್ಚು ತೆರಿಗೆ ವಿಧಿಸಲಾಗುತ್ತಿದೆ ಎಂದು ವಿಪಕ್ಷಗಳು ದೂರುತ್ತಿರುವುದು ಸಹ ಇದೆ. ಈ ರೀತಿ ಇರುವಾಗಲೇ ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ಜಾಹೀರಾತುಗಳ ಹೆಸರಿನಲ್ಲಿ ₹532.00 ಕೋಟಿ ಖರ್ಚಾಗಿದೆ ಎನ್ನುವ ಗಂಭೀರವಾದ ಆರೋಪವೊಂದು ಕೇಳಿ ಬಂದಿದೆ.
ಜಾಹೀರಾತುಗಳ ಹೆಸರಿನಲ್ಲಿ ₹532.00 ಕೋಟಿ ಖರ್ಚು ಮಾಡಿದ ಕರ್ನಾಟಕ ಕಾಂಗ್ರೆಸ್ ಸರ್ಕಾರ - ಆದರೆ ಪಾವತಿಗಳ ದಾಖಲೆ ಶೂನ್ಯ! ಎಂದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಗಂಭೀರ ಆರೋಪವನ್ನು ಮಾಡಿದ್ದಾರೆ.

ಇದು ಅವ್ಯವಹಾರವೋ, ಹಗಲು ದರೋಡೆಯೋ ಅಥವಾ ಪ್ರಜಾಪ್ರಭುತ್ವದ ಒಂದು ಪ್ರಮುಖ ಅಂಗವಾಗಿ ಕಾರ್ಯನಿರ್ವಹಿಸುತ್ತಿರುವ ಮಾಧ್ಯಮಗಳ ಹೆಸರಿನಲ್ಲಿ ನಡೆದ ಸರ್ಕಾರದ ಭ್ರಷ್ಟಾಚಾರವೋ ಎಂದು ಕೇಳಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜನರ ಸಮಸ್ಯೆಗಳನ್ನು ಪರಿಹರಿಸುವ ಬದಲು ಜಾಹೀರಾತುಗಳ ಪ್ರಚಾರದ ನಡಿಗೆ ಹಿಡಿದಿದೆ ಎಂಬುದು ಸರ್ಕಾರವೇ ನಿಯೋಜಿಸಿರುವ ಅಂಕಿ-ಅಂಶಗಳಿಂದಲೇ ಸ್ಪಷ್ಟವಾಗಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ತನ್ನನ್ನು ತಾನು ಹೊಗಳಿಕೊಳ್ಳಲು ಸರ್ಕಾರ ಖರ್ಚು ಮಾಡಿದ ಮೊತ್ತ:
🔹2023-24 : ₹ 270.02 ಕೋಟಿ.
🔹2024-25 : ₹ 179.45 ಕೋಟಿ.
🔹2025-26 (ಜುಲೈ 2025ರವರೆಗೆ) : ₹ 83.49 ಕೋಟಿ.
👉ಒಟ್ಟು - ₹ 532 ಕೋಟಿಗಳಿಗಿಂತ ಹೆಚ್ಚು!
ಇಷ್ಟೊಂದು ಭಾರೀ ಮೊತ್ತವನ್ನು ಎಲ್ಲಿಗೆ, ಯಾರಿಗೆ, ಯಾವ ಯಾವ ಖಾತೆಗಳಿಗೆ, ಯಾವ ಯಾವ ಕಂಪನಿಗಳಿಗೆ, ಯಾವ ಮಾಧ್ಯಮಗಳಿಗೆ ಪಾವತಿಸಲಾಗಿದೆ ಎಂಬ ಪೂರ್ಣ ವಿವರ ಸರ್ಕಾರದ ಹತ್ತಿರವೇ ಇಲ್ಲ ಎಂಬುದು ಸರ್ಕಾರವು ನೀಡಿರುವ ಅಧಿಕೃತ ಉತ್ತರದಿಂದಲೇ ಬಹಿರಂಗವಾಗಿದೆ. ಹೀಗಿದ್ದರೆ - ಈ ₹ 532 ಕೋಟಿ ಯಾರ ಖಾತೆಗೆ ಹೋಯಿತು.
ನಿಜವಾಗಿಯೂ ಜಾಹೀರಾತಿಗಾಗಿ ಖರ್ಚಾಗಿದೆಯೇ, ಚುನಾವಣೆ-ಪಕ್ಷದ ಪ್ರಚಾರ ಎಂಬ ಹೆಸರಿನಲ್ಲಿ ಬೇರೆಡೆ ಹಣವನ್ನು ವರ್ಗಾಯಿಸಲಾಗಿದೆಯೇ ಹಾಗೂ ಜಾಹೀರಾತಿನ ಹೆಸರಿನಲ್ಲಿ ಲೂಟಿ ಮಾಡಲಾಗಿದೆಯೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
2023-24 ನೇ ಸಾಲಿನಲ್ಲಿ ಪತ್ರಿಕೆಗಳಲ್ಲಿ ಪ್ರಕಟಗೊಂಡ 104 ಜಾಹೀರಾತುಗಳಿಗೆ ₹ 59.00 ಕೋಟಿ ಹಣ ಮತ್ತು 21 ಟಿವಿ ವಾಹಿನಿಗಳಲ್ಲಿ ಪ್ರಕಟಗೊಂಡ 33 ಜಾಹೀರಾತುಗಳಿಗೆ 20.25 ಕೋಟಿ ಹಣ ವೆಚ್ಚ ಮಾಡಲಾಗಿದೆ. (ಪತ್ರಿಕೆಗಳ, ಟಿವಿ ವಾಹಿನಿಗಳ ಮಾಹಿತಿ ಸರ್ಕಾರದ ಬಳಿ ಇರುವುದಿಲ್ಲ).
2024-25 ನೇ ಸಾಲಿನಲ್ಲಿ ಪತ್ರಿಕೆಗಳಲ್ಲಿ ಪ್ರಕಟಗೊಂಡ 83 ಜಾಹೀರಾತುಗಳಿಗೆ ₹ 27.09 ಕೋಟಿ ಹಣ ಮತ್ತು 14 ಟಿವಿ ವಾಹಿನಿಗಳಲ್ಲಿ ಪ್ರಕಟಗೊಂಡ 24 ಜಾಹೀರಾತುಗಳಿಗೆ ₹ 16.41 ಕೋಟಿ ಹಣ ವೆಚ್ಚ ಮಾಡಲಾಗಿದೆ. (ಪತ್ರಿಕೆಗಳ, ಟಿವಿ ವಾಹಿನಿಗಳ ಮಾಹಿತಿ ಸರ್ಕಾರದ ಬಳಿ ಇರುವುದಿಲ್ಲ).
ದಾಖಲೆಯೇ ಇಲ್ಲದಿದ್ದರೆ ಹಣ ಪಾವತಿಗಳು ಹೇಗೆ ನಡೆದವು❓ಜಾಹೀರಾತು ಪ್ರಕಟಿಸದವರಿಗೂ, ಲೂಟಿ ಮಾಡಲು ಸೃಷ್ಟಿಸಿಕೊಂಡ ನಕಲಿ ಕಂಪೆನಿಗಳಿಗೂ ಹಣ ಪಾವತಿಯಾಗಿದೆಯೇ? ಎಂಬ ಅನುಮಾನ ಮೂಡುತ್ತಿದೆ ಎಂದಿದ್ದಾರೆ.
ಸಾಮಾನ್ಯವಾಗಿ 20 ಪತ್ರಿಕೆಗಳು ಅಥವಾ 20 ಟಿವಿ ವಾಹಿನಿಗಳು ವರ್ಷಪೂರ್ತಿ ಪ್ರತಿದಿನ, ಪ್ರತಿಪುಟಕ್ಕೂ ಜಾಹೀರಾತು ನೀಡಿದರೂ ಇಷ್ಟು ಮಟ್ಟದ ದೊಡ್ಡ ಮೊತ್ತ ತಲುಪುವುದು ಕಷ್ಟ. ಆದರೆ ಕಾಂಗ್ರೆಸ್ ಸರ್ಕಾರಕ್ಕೆ ಮಾತ್ರ ಸತ್ಯಕ್ಕಿಂತ ಜಾಹೀರಾತು ಮುಖ್ಯ, ಜನಕ್ಕಿಂತ ಸ್ವಪ್ರಚಾರ ಮುಖ್ಯ ಎನ್ನುವುದು ಸ್ಪಷ್ಟವಾಗುತ್ತಿದೆ ಎಂದು ಹೇಳಿದ್ದಾರೆ.
ಇನ್ನೊಂದೆಡೆ ಜನರ ಮೂಲಭೂತ ಅವಶ್ಯಕತೆಗಳಿಗೆ ಸರ್ಕಾರ ನೀಡುವ ಒಂದೇ ಉತ್ತರ - "ಹಣವಿಲ್ಲ". ಗುತ್ತಿಗೆ ನೌಕರರಿಗೆ ಸಂಬಳಕ್ಕೆ ಹಣವಿಲ್ಲ, ಸರ್ಕಾರಿ ಆಸ್ಪತ್ರೆಗೆ ಔಷಧ ಖರೀದಿಸಲು ಹಣವಿಲ್ಲ, ಪ್ರವಾಹ-ಬರ-ಹಾನಿಗೊಳಗಾದ ರೈತರಿಗೆ ಪರಿಹಾರಕ್ಕೆ ಹಣವಿಲ್ಲ, ಗ್ರಾಮ-ನಗರ ಅಭಿವೃದ್ಧಿಗೆ ಹಣವಿಲ್ಲ, ರಸ್ತೆಗಳ ಗುಂಡಿ ಮುಚ್ಚಲು ಹಣವಿಲ್ಲ ಹಾಗೂ ಜನಕಲ್ಯಾಣದ ಯಾವ ಕಾರ್ಯಕ್ಕೂ ಹಣವಿಲ್ಲ. ಆದರೆ, ಸರ್ಕಾರದ ಸ್ವಪ್ರಚಾರಕ್ಕೆ ಮಾತ್ರ - ನೂರಾರು ಕೋಟಿ ಹಣ! ಇದು ದುರುಪಯೋಗವಲ್ಲ; ನೇರವಾಗಿ ಸರ್ವನಾಶಕಾರಿ ಆಡಳಿತದ ಉದಾಹರಣೆ ಎಂದು ಹೇಳಲಾಗಿದೆ.
₹ 532 ಕೋಟಿ ಖರ್ಚಿಗೆ ಯಾವುದೇ ದಾಖಲೆ ಇಲ್ಲದಿರುವುದು ಸಾಮಾನ್ಯ ಲೋಪವಲ್ಲ - ಇದು ದೊಡ್ಡ ಮಟ್ಟದ ಅವ್ಯವಹಾರಕ್ಕೆ ಸ್ಪಷ್ಟ ಸುಳಿವು. ಆದ್ದರಿಂದ ನಾನು ಸರ್ಕಾರಕ್ಕೆ ಸ್ಪಷ್ಟವಾಗಿ ಆಗ್ರಹಿಸುತ್ತೇನೆ:
🔹ಜಾಹೀರಾತಿಗಾಗಿ ಖರ್ಚಾದ ಸಮಗ್ರ ಮಾಹಿತಿಯನ್ನು ತಕ್ಷಣ ಸಾರ್ವಜನಿಕಗೊಳಿಸಬೇಕು.
🔹ಪಾವತಿಗಳ ಪೂರ್ಣ ಪಟ್ಟಿ - ಮಾಧ್ಯಮ ಸಂಸ್ಥೆಗಳ ಹೆಸರು, ದಿನಾಂಕ, ಮೊತ್ತ - ಎಲ್ಲವನ್ನೂ ಪ್ರಕಟಿಸಬೇಕು.
🔹₹ 532 ಕೋಟಿಗಳ ವ್ಯವಹಾರದಲ್ಲಿ ಇರುವ ಅನುಮಾನಗಳ ಕುರಿತು ಸ್ವತಂತ್ರ ತನಿಖೆ ನಡೆಸಬೇಕು.
ಜನರ ತೆರಿಗೆ ಹಣವನ್ನು ಜಾಹೀರಾತು ಎಂಬ ಹೆಸರಿನಲ್ಲಿ ದುರುಪಯೋಗ ಮಾಡಿದ ಸರ್ಕಾರದ ಕ್ರಮವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಮತ್ತು ಈ ಅಕ್ರಮ ಬಯಲಿಗೆಳೆಯಲು ಹೋರಾಟ ಮುಂದುವರಿಸುತ್ತೇನೆ ಎಂದೂ ಅವರು ಹೇಳಿದ್ದಾರೆ.












Click it and Unblock the Notifications