
Karnataka Cold Weather : ಕರ್ನಾಟಕದ ಈ ಭಾಗದಲ್ಲಿ ಮುಂದಿನ 4-5 ದಿನ ಉಷ್ಣಾಂಶ ಇಳಿಕೆ, ಅಧಿಕ ಚಳಿ ಸೃಷ್ಟಿ
ಬೆಂಗಳೂರು, ಜನವರಿ 18: ಕರ್ನಾಟಕದ ಹಲವು ಜಿಲ್ಲೆಗಳ ವ್ಯಾಪ್ತಿಯಲ್ಲಿ ಶೀತ ಅಲೆಯು ಇನ್ನೂ ಕೆಲವು ದಿನ ಮುಂದುವರಿಯಲಿದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಕೆಲವು ಜಿಲ್ಲೆಗಳಲ್ಲಿ ಅತ್ಯಂತ ಕನಿಷ್ಠ ತಾಪಮಾನ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಕಡಿಮೆಯಾಗಿದ್ದ ಶೀತದ ವಾತಾವರಣ, ಮಂಜು ಉತ್ತರ ಒಳನಾಡಿನ ಭಾಗದಲ್ಲಿ ಮತ್ತೆ ಹೆಚ್ಚಾಗಿದೆ. ಕಳೆದ ಎರಡು ದಿನದಿಂದ
ತಾಪಮಾನದಲ್ಲಿ ತೀರಾ ವ್ಯತ್ಯಾಸ ಕಂಡು ಬಂದಿದೆ. ಬೆಳಗ್ಗೆ ಮತ್ತು ರಾತ್ರಿ ಚಳೆ ಜೊತೆಗೆ ತಂಪು ಗಾಳಿ ಬೀಸಲಾರಂಭಿಸಿದೆ. ಬೆಳಗ್ಗೆ ಸುಮಾರು ನಾಲ್ಕು ಗಂಟೆಗಳ ಕಾಲ ಮಂಜು ಕಾಣಿಸುತ್ತಿದೆ. ಮಧ್ಯಾಹ್ನ 12ರವರೆಗೂ ತಂಪು ವಾತಾರಣ ಕಂಡು ಬಂದಿದೆ.
ಬಾಗಲಕೋಟೆ, ವಿಜಯಪುರ, ಬೆಳಗಾವಿ, ಹಾವೇರಿ, ದಾವಣೆಗೆರೆ, ಚಿತ್ರದುರ್ಗ, ಬೀದರ್ ಇತ್ತ ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು, ಬೆಂಗಳೂರು ನಗರ ಸೇರಿದಂತೆ ಮುಂದಾದ ಜಿಲ್ಲೆ ಹಾಗೂ ನಗರ ವ್ಯಾಪ್ತಿಯಲ್ಲಿ ಮಂಗಳವಾರ ಮತ್ತು ಬುಧವಾರ ಕನಿಷ್ಠ ತಾಪಮಾನದ ಸಾಮಾನ್ಯ ಮಟ್ಟಕ್ಕಿಂತ 5 ರಿಂದ 6 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ದಾಖಲಾಗಿದೆ. ಈ ಪ್ರದೇಶಗಳಲ್ಲಿ ಜನರಿಗೆ ಶೀತ ವಾತಾವರಣ ಅನಾರೋಗ್ಯ ಸಂಕಷ್ಟ ತಂದೊಡ್ಡುತ್ತಿದೆ. ಮಧ್ಯಾಹ್ನ ಒಣಹವೆ, ಅಧಿಕ ಉಷ್ಣಾಂಶ ಕಂಡು ಬರುತ್ತದೆ. ರಾತ್ರಿ ಬೆಳಗ್ಗೆವರೆಗೂ ಚಳಿ ಸೃಷ್ಟಿಯಾಗುತ್ತಿದೆ. ಇದರಿಂದ ಜನರು ಶೀತ ಸಂಬಂಧಿ ಕಾಯಿಲೆಗೆ ತುತ್ತಾಗುತ್ತಿದ್ದಾರೆ.
ಈ ವಾತವರಣ ಮುಂದಿನ 4-5 ದಿನ ಹೀಗೆ ಮುಂದುವರಿಯುವ ನಿರೀಕ್ಷೆ ಇದೆ. ಉತ್ತರ ಒಳನಾಡಿನ ಭಾಗದಲ್ಲಿ ಶೀತ ಅಲೆಗಳು ಸಕ್ರಿಯವಾಗಿರಲಿವೆ. ಒಂದು ದಿನ ಸಾಮಾನ್ಯ ವಾತಾವರಣ ಕಂಡು ಬಂದರೆ, ಮರು ದಿನ ತೀವ್ರ ಚಳಿ ಅನುಭವವಾಗುತ್ತಿದೆ.
ಇದರ ಹೊರತು ಹವಾಮಾನದಲ್ಲಿ ಯಾವುದೇ ಗಂಭೀರ ರೂಪದ ವೈಪರಿತ್ಯಗಳು ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬಾಲಕೋಟೆಯಲ್ಲಿ 8.6 ಡಿಸೆ ಉಷ್ಣಾಂಶ
ಇನ್ನೂ ಕಳೆದ 24 ಗಂಟೆಯಲ್ಲಿ ಅತೀ ಕನಿಷ್ಠ ತಾಪಮಾನ ನೋಡುವುದಾದರೆ ಬಾಗಲಕೋಟೆಯಲ್ಲಿ 8.6 ಡಿಗ್ರಿ ಸೆಲ್ಸಿಯಸ್,
ಬೆಳಗಾವಿ ವಿಮಾನ ನಿಲ್ದಾಣ 12.2 ಡಿಗ್ರಿ ಸೆಲ್ಸಿಯಸ್, ವಿಜಯಪುರ 10.2 ಡಿಗ್ರಿ ಸೆಲ್ಸಿಯಸ್, ಹಾವೇರಿ 11.7, ಬಳ್ಳಾರಿ 10.1 ಡಿಗ್ರಿ ಸೆಲ್ಸಿಯಸ್, ದಾವಣಗೆರೆ 11.3ಡಿಗ್ರಿ ಸೆಲ್ಸಿಯಸ್, ಮೈಸೂರು 9.1ಡಿಗ್ರಿ ಸೆಲ್ಸಿಯಸ್, ಚಿಂತಾಮಣಿ 9.8 ಡಿಗ್ರಿ ಸೆಲ್ಸಿಯಸ್, ಶಿವಮೊಗ್ಗ 12.6 ಡಿಗ್ರಿ ಸೆಲ್ಸಿಯಸ್, ರಾಯಚೂರು 13.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ನಿಗದಿತ ಜಿಲ್ಲೆ ಮತ್ತು ನಗರಗಳನ್ನು ಹೊರತುಪಡಿಸಿದರೆ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಪ್ರದೇಶಗಳಲ್ಲಿ ಒಣಹವೆ ಮುಂದುವರಿಯಲಿದೆ. ಗದಗ ಜಿಲ್ಲೆಯಲ್ಲಿ ಇತ್ತೀಚೆಗೆ ಸರಾಸರಿ ಗರಿಷ್ಠ ತಾಪಮಾನ 33.7 ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದೆ.