ಅತ್ತ ಸಿದ್ದರಾಮಯ್ಯ ಬೆಂಬಲಿಗರ ಸಂಭ್ರಮಾಚರಣೆ, ಇತ್ತ ಡಿಕೆ ಶಿವಕುಮಾರ್ ಬೆಂಬಲಿಗರಿಂದ ಪ್ರತಿಭಟನೆ
ಬೆಂಗಳೂರು, ಮೇ 17: ಕಳೆದವಾರ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವನೆಯಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ಕಾಂಗ್ರೆಸ್‌ಗೆ ಕರ್ನಾಟಕದ ಮುಂದಿನ ಮುಖ್ಯಮಂತ್ರಿಯನ್ನು ಹೆಸರಿಸುವುದೇ ದೊಡ್ಡ ತಲೆನೋವಾಗಿದೆ. ಪಕ್ಷದ ಪ್ರಮುಖ ನಾಯಕರಾದ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಿಎಂ ಹುದ್ದೆಗಾಗಿ ಪಟ್ಟು ಹಿಡಿದಿದ್ದಾರೆ.
ಬುಧವಾರ ರಾಹುಲ್ ಗಾಂಧಿ ಭೇಟಿಯ ನಂತರ ಸಿದ್ದರಾಮಯ್ಯ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಆದರೆ, ಡಿಕೆ ಶಿವಕುಮಾರ್ ಬೆಂಬಲಿಗರು ಸಿಎಂ ಸ್ಥಾನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವಿನ ನಂತರ ಮುಖ್ಯಮಂತ್ರಿ ಸ್ಥಾನದ ಸಸ್ಪೆನ್ಸ್ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.

ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ಅವರು " ಸಿಎಂ ಆಯ್ಕೆ ಕುರಿತು ಇನ್ನೂ ಚರ್ಚೆಗಳು ನಡೆಯುತ್ತಿವೆ. ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಊಹಾಪೋಹಗಳಿಗೆ ಅಥವಾ ಸುಳ್ಳು ಸುದ್ದಿಗಳಿಗೆ ಆಸ್ಪದ ನೀಡಬೇಡಿ. ಇಂದು ಅಥವಾ ನಾಳೆ ನಿರ್ಧಾರ ಪ್ರಕಟಿಸಲಾಗುವುದು. ಇದರ ಜೊತೆಗೆ 72 ಗಂಟೆಗಳಲ್ಲಿ ಸಂಪುಟ ಅಸ್ತಿತ್ವಕ್ಕೆ ಬರಲಿದೆ" ಎಂದು ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಈ ಸ್ಥಾನಕ್ಕೆ 75 ವರ್ಷದ ಸಿದ್ದರಾಮಯ್ಯ ಅವರನ್ನು ಹೆಸರಿಸಲು ಕಾಂಗ್ರೆಸ್ ಒಲವು ತೋರಿಸಿದೆ. ಏಕೆಂದರೆ ಅವರಿಗೆ ಹೆಚ್ಚಿನ ಶಾಸಕರ ಬೆಂಬಲವಿದೆ. ಆದರೆ, 61 ವರ್ಷದ ಡಿಕೆ ಶಿವಕುಮಾರ್ ಅವರನ್ನು ಸಮಾಧಾನ ಮಾಡುವುದು ಈಗ ಮುಖ್ಯ ಕೆಲಸವಾಗಿದೆ. ಆದರೆ, ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿರುವ ಡಿಕೆ ಶಿವಕುಮಾರ್ , ಸಿದ್ದರಾಮಯ್ಯನವರೊಂದಿಗಿನ ಬಿಕ್ಕಟ್ಟಿನಿಂದ ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸೋಮವಾರದಿಂದ ದೆಹಲಿಯಲ್ಲಿರುವ ಸಿದ್ದರಾಮಯ್ಯ ಅವರು ಹಿರಿಯ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿದ್ದಾರೆ. ಸ್ಥಾನ ಸಿಗದಿದ್ದರೂ ಬಂಡಾಯ ಎಬ್ಬಿಸುವುದಿಲ್ಲ ಎಂದು ಶಿವಕುಮಾರ್ ಒತ್ತಿ ಹೇಳಿದ್ದಾರೆ. ಪಕ್ಷ ಬೇಕಾದರೆ ನನಗೆ ಜವಾಬ್ದಾರಿ ನೀಡಬಹುದು. ನಮ್ಮದು ಒಕ್ಕಲಿಗ ಮನೆ, ಇಲ್ಲಿ ಯಾರನ್ನೂ ಒಡೆಯಲು ನಾನು ಬಯಸುವುದಿಲ್ಲ, ಅವರು ಇಷ್ಟಪಡಲಿ ಅಥವಾ ಇಲ್ಲದಿರಲಿ, ನಾನು ಜವಾಬ್ದಾರಿಯುತ ವ್ಯಕ್ತಿ, ನಾನು ಬ್ಲಾಕ್‌ಮೇಲ್ ಮಾಡುವುದಿಲ್ಲ" ಎಂದಿದ್ದಾರೆ.
ಸಿದ್ದರಾಮಯ್ಯನವರು 2018 ರಲ್ಲಿ ಪೂರ್ಣಾವಧಿಯನ್ನು ಪೂರ್ಣಗೊಳಿಸಿದ ಜನಮೆಚ್ಚಿದ ನಾಯಕರಾಗಿ ಕಂಡುಬಂದರೆ, ಡಿಕೆ ಶಿವಕುಮಾರ್ ಅವರು ತಮ್ಮ ಬಲವಾದ ಸಂಘಟನಾ ಸಾಮರ್ಥ್ಯಗಳಿಗೆ ಹೆಸರುವಾಸಿಯಾಗಿದ್ದಾರೆ. ಪಕ್ಷದ ಕಠಿಣ ಸಮಯದಲ್ಲಿ ಸಂಪನ್ಮೂಲ ಮತ್ತು ಕಾಂಗ್ರೆಸ್‌ನ ಟ್ರಬಲ್‌ಶೂಟರ್ ಎಂದು ಪರಿಗಣಿಸಲ್ಪಟ್ಟಿದ್ದಾರೆ. ಇಬ್ಬರು ಸ್ಪರ್ಧಿಗಳಲ್ಲಿ ಯಾರಿಗಾದರೂ ಸ್ಥಾನ ನೀಡಲೇ ಬೇಕಿದೆ. ಆದರೆ, ಯಾರಿಗೆ ಎಂಬುದೆ ದೊಡ್ಡ ಪ್ರಶ್ನೆ.
ಈ ನಡುವೆ ರಾಜಕೀಯವಾಗಿ ಬಹುಮುಖ್ಯವಾಗಿರುವ ಲಿಂಗಾಯತ ಸಮುದಾಯ ಮುಖ್ಯಮಂತ್ರಿ ಸ್ಥಾನದ ಹಕ್ಕು ಚಲಾಯಿಸಿದೆ. ಲಿಂಗಾಯತ ಸಂಘಟನೆ ಅಖಿಲ ಭಾರತ ವೀರಶೈವ ಮಹಾಸಭಾ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬರೆದ ಪತ್ರದಲ್ಲಿ ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದ 46 ಲಿಂಗಾಯತ ನಾಯಕರ ಪೈಕಿ 34 ಮಂದಿ ಗೆದ್ದಿದ್ದಾರೆ ಎಂದು ಹೇಳಿದ್ದಾರೆ.












Click it and Unblock the Notifications