ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳು ಸುದ್ದಿ ಹರಡುವವರು, ಶಾಂತಿ ಕದಡುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ!

ಮೈಸೂರು: ಇದು ತಂತ್ರಜ್ಞಾನದ ಯುಗ, ಹೀಗಾಗಿ ಎಲ್ಲವೂ ತಂತ್ರಜ್ಞಾನದ ಮೂಲಕವೇ ನಡೆಯುತ್ತೆ. ಅದ್ರಲ್ಲೂ ಸೋಷಿಯಲ್ ಮೀಡಿಯಾ ಇಲ್ಲದೆ ಆಧುನಿಕ ಕಾಲದಲ್ಲಿ ಯಾರೂ ಬದುಕಲು ಆಗೋದೆ ಇಲ್ಲ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿದ್ದಾಗ ಸಾಮಾಜಿಕ ಜಾಲತಾಣದಲ್ಲಿ ಸುಳ್ಳಿಗೆ ಭಾರಿ ಬೆಲೆ ಇದೆ. ಆದರೆ ಈ ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಲು ಸಿದ್ದರಾಮಯ್ಯ ಸರ್ಕಾರ ಪಣತೊಟ್ಟಿದೆ.

ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸತತ 7 ಗಂಟೆ ಕಾಲ ಇಂದು ನಡೆದ ಮೈಸೂರು ಕೆಡಿಪಿ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈ ನಿರ್ಧಾರ ಪಟ್ಟಿಯಲ್ಲಿ ಸುಳ್ಳುಸುದ್ದಿ ಹರಡುವವರ ವಿರುದ್ಧ ಖಡಕ್ ಕ್ರಮದ ಎಚ್ಚರಿಕೆ ನೀಡಲಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳು ಸುದ್ದಿ ಹರಡುವವರು, ಶಾಂತಿ ಕದಡುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು. ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದೆಂಬ ಸೂಚನೆ ನೀಡಿದ್ದಾರೆ ಸಿಎಂ ಸಿದ್ದರಾಮಯ್ಯ. ಹಾಗೇ ಸುಳ್ಳು ಸುದ್ದಿ ಹರಡುವವರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿ ಜೈಲಿಗೆ ತಳ್ಳಿ, ಡ್ರಗ್ಸ್ ವಿಚಾರದಲ್ಲಿ ಮೈಸೂರು ವಲಯದಲ್ಲಿ ಝೀರೋ ಟಾಲರೆನ್ಸ್ ಇರಬೇಕು ಎಂದು ಸೂಚಿಸಲಾಗಿದೆ.

karnataka-cm-siddaramaiah

ಗೃಹಲಕ್ಷ್ಮಿ ಯೋಜನೆಗೆ ಮಹತ್ವದ ಸಿದ್ಧತೆ

ಮತ್ತೊಂದ್ಕಡೆ ಸಿದ್ದರಾಮಯ್ಯ ಅವರ ಸರ್ಕಾರದ ಮಹತ್ವದ ಯೋಜನೆ ಜಾರಿಗೆ ಕ್ಷಣಗಣನೆ ಶುರುವಾಗಿದೆ. ಹೀಗಾಗಿ ಆಗಸ್ಟ್ 31ರಂದು ಗೃಹಲಕ್ಷ್ಮಿ ಯೋಜನೆಗೆ ಮೈಸೂರಿನಲ್ಲೇ ಚಾಲನೆ ಸಿಗಲಿದೆ. ಇದೇ ಕಾರಣಕ್ಕೆ ಗೃಹ ಲಕ್ಷ್ಮಿ ಯೋಜನೆ ಉದ್ಘಾಟನೆ ಕಾರ್ಯಕ್ರಮದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಟ್ರಾಫಿಕ್ ಕಿರಿಕಿರಿಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎನ್ನುವ ಸೂಚನೆ ನೀಡಿದ್ದಾರೆ ಸಿಎಂ ಸಿದ್ದರಾಮಯ್ಯ.

ಹೀಗೆ ಆದಿವಾಸಿಗಳಿಗೆ ಕಳೆದ 4 ತಿಂಗಳಿಂದ ಆಹಾರ ನೀಡಿಲ್ಲ ಎಂಬ ವರದಿಗೆ ಸಂಬಂಧಿಸಿದಂತೆ ಗರಂ ಆದ ಸಿಎಂ, ನಿಮಗೆ 6 ತಿಂಗಳು ಸಂಬಳ ನಿಲ್ಲಿಸಿದರೆ ಏನಾಗುತ್ತೆ ಎನ್ನುವ ಪ್ರಜ್ಞೆ ಇದೆಯಾ? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಹಾಗೇ ತೆಂಗು ಮತ್ತು ರೇಷ್ಮೆ ಮತ್ತಿತರ ಬೆಳೆಗಳು ನಾಶ ಆಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಈ ಕುರಿತಾಗಿ ಸಂಬಂಧಪಟ್ಟ ವಿಜ್ಷಾನಿಗಳ ಜತೆ ಚರ್ಚಿಸಿ ಪರಿಹಾರ ಕಂಡುಕೊಂಡು ಕಾಯಿಲೆ ವ್ಯಾಪಕವಾಗಿ ಆವರಿಸುವುದಕ್ಕೆ ಮೊದಲೇ ರಕ್ಷಣಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

karnataka-cm-siddaramaiah

ಆರೋಗ್ಯ ಇಲಾಖೆಗೆ ಸಿಎಂ ಕ್ಲಾಸ್!

ಜಿಲ್ಲಾ ಆಸ್ಪತ್ರೆಗಳಲ್ಲಿ ಅಲ್ಟ್ರಾಸೌಂಡ್, ಸಿಟಿ ಸ್ಕ್ಯಾನ್, ಎಂಆರ್‌ಐ, ಎಕ್ಸ್ ರೇ ಸೇರಿದಂತೆ ಎಲ್ಲ ತಪಾಸಣಾ ವ್ಯವಸ್ಥೆ ಇರಬೇಕು. ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯ ಹಣವೆ ಖರ್ಚು ಆಗುತ್ತಿಲ್ಲ, ಹಣ ಹಾಗೇ ಉಳಿದಿದೆ. ಮತ್ತೊಂದು ಕಡೆ ಆಸ್ಪತ್ರೆಗಳಲ್ಲಿ ಅಗತ್ಯ ಸಲಕರಣೆಗಳೇ ಇಲ್ಲ ಏಕೆ? ಎಂದು ಜಿಲ್ಲಾ ಆರೋಗ್ಯ ಅಧಿಕಾರಿಗಳನ್ನು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು. ಅಲ್ಲದೆ ಜಿಲ್ಲಾ ಆರೋಗ್ಯಾಧಿಕಾರಿಗಳು ತಾಲೂಕು ಆಸ್ಪತ್ರೆಗಳಿಗೆ ಖುದ್ದು ಭೇಟಿ ನೀಡಿ. ಆ ಬಗ್ಗೆ ಡೈರಿ ಬರೆಯಬೇಕು ಎಂದು ಸೂಚಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ವೈದ್ಯರಿಗಾಗಿ ಕಟ್ಟಿಸಿರುವ ಕ್ವಾಟ್ರಸ್ ಇವೆ. ಅಲ್ಲಿ ಏಕೆ ವೈದ್ಯರು ಉಳಿದುಕೊಳ್ತಿಲ್ಲ? ನೀವು ಏನು ಮಾಡುತ್ತಿದ್ದೀರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಮತ್ತೊಂದ್ಕಡೆ ಜಿಲ್ಲಾ ಸರ್ಜನ್ ಸೇರಿ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಮೆಡಿಕಲ್ ಕಾಲೇಜಿನ ಡೀನ್‌ಗಳಿಗೆ ಪ್ರತ್ಯೇಕ ಜವಾಬ್ದಾರಿಗಳಿರುತ್ತವೆ. ನೀವು ಜವಾಬ್ದಾರಿಯನ್ನ ಹೊಂದಾಣಿಕೆಯಿಂದ ನಿವಹಿಸದೇ ಹೋದರೆ ಆರೋಗ್ಯ ವ್ಯವಸ್ಥೆ ಏರುಪೇರಾಗುತ್ತೆ. ಹಾಗೇನಾದ್ರೂ ಆದರೆ ನೀವುಗಳೇ ನೇರ ಹೊಣೆ. ಕ್ರಮ ಎದುರಿಸಲು ಸಿದ್ದರಿರಿ ಎಂದು ಸಿಎಂ ಮೂವರಿಗೂ ಎಚ್ಚರಿಕೆ ನೀಡಿದರು. ಕೆ.ಆರ್.ಆಸ್ಪತ್ರೆಗೆ 100 ವರ್ಷವು ತುಂಬಿರುವ ಹಿನ್ನೆಲೆ ಈ ಆಸ್ಪತ್ರೆಯನ್ನು ಉನ್ನತೀಕರಿಸುವುದು ಸೇರಿದಂತೆ ಇನ್ನಿತರೆ ಅಗತ್ಯತೆ ಪೂರೈಸಲು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲು ಸೂಚಿಸಲಾಯಿತು.

karnataka-cm-siddaramaiah

ಅಧಿಕಾರಿಗಳು ನಗರ ಪ್ರದಕ್ಷಿಣೆ ಹಾಕಲಿ

ಹಾಗೇ ಸಿಎ ಸೈಟ್‌ಗಳಿಗೆ ಕಡ್ಡಾಯವಾಗಿ ಭೇಟಿ ನೀಡಿ ಪರಿಶೀಲಿಸಬೇಕು ಯಾವ ಉದ್ದೇಶಕ್ಕೆ ಸಿಎ ಸೈಟ್ ನೀಡಲಾಗಿದೆಯೋ ಅದೇ ಉದ್ದೇಶಕ್ಕೆ ಅದು ಬಳಕೆ ಆಗುತ್ತಿರಬೇಕು. ಇಲ್ಲದಿದ್ದರೆ ತಕ್ಷಣ ಅಂತಹ ಸೈಟ್ ವಾಪಾಸ್ ವಶಕ್ಕೆ ಪಡೆಯಬೇಕು ಎಂದು ಮೂಡಾ ಆಯುಕ್ತರಿಗೆ ಸಿಎಂ ಸೂಚನೆ ನೀಡಿದರು. ಮೈಸೂರು ಕ್ಲೀನ್ ಸಿಟಿಯಾಗಿ ಇನ್ನಷ್ಟು ಉನ್ನತೀಕರಿಸುವ ನಿಟ್ಟಿನಲ್ಲಿ ಪಾಲಿಕೆ, ಮೂಡ, ಅರಣ್ಯ, ಕುಡಿಯುವ ನೀರು ಸರಬರಾಜು ಇಲಾಖೆ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಇಲಾಖೆ ಅಧಿಕಾರಿಗಳು ಒಟ್ಟಾಗಿ ಬಸ್‌ನಲ್ಲಿ ನಗರ ಪ್ರದಕ್ಷಿಣೆ ಮಾಡಿ ಪರಸ್ಪರ ಹೊಂದಾಣಿಕೆಯ ಮೂಲಕ ಕ್ರಮ ಕೈಗೊಳ್ಳಬೇಕು. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಇದು ನಡೆಯಲಿ ಎಂದು ಸಿಎಂ ಸೂಚಿಸಿದರು.

ಇದರ ಜೊತೆಗೆ ಹೊಸ ಬಡಾವಣೆಗಳಿಗೆ ಕಣ್ಣುಮುಚ್ಚಿಕೊಂಡು ಅನುಮತಿಯನ್ನು ನೀಡಬೇಡಿ. ಮೈಸೂರಲ್ಲೂ ಬೆಂಗಳೂರಿನಂತೆ ಅಕ್ರಮ ಬಡಾವಣೆಗಳು ಮತ್ತು ಅವೈಜ್ಞಾನಿಕ ಬಡಾವಣೆಗಳು ಸೇರಿದಂತೆ, ಅಗತ್ಯ ಸೌಲತ್ತುಗಳು ಇಲ್ಲದ ಬಡಾವಣೆಗಳು ನಿರ್ಮಾಣವಾಗದಂತೆ ಕಟ್ಟುನಿಟ್ಟಾಗಿ ತಡೆಯಬೇಕು ಎಂದು ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹೀಗೆ ರಿಯಲ್ ಎಸ್ಟೇಟ್ ಕುಳಗಳಿಗೆ ಸಿಎಂ ಸಿದ್ದರಾಮಯ್ಯ ಪರೋಕ್ಷ ಸಂದೇಶ ರವಾನಿಸಿದ್ದಾರೆ.

ಅಧಿಕಾರಿಗಳಿಗೆ ಚಳಿ ಬಿಡಿಸಿದ ಸಿಎಂ

ಶಿಕ್ಷಣ ಸೂಚ್ಯಂಕದಲ್ಲಿ ಮೈಸೂರು ಜಿಲ್ಲೆ ಹಿಂದುಳಿದಿರುವುದಕ್ಕೆ ಜಿಲ್ಲಾ ಶಿಕ್ಷಣಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಿಎಂ, ಬಿಇಒ ಕಚೇರಿ & ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಣ ಗುಣಮಟ್ಟ ಹೆಚ್ಚಿಸಲು ಕ್ರಮ ತೆಗೆದುಕೊಳ್ಳಬೇಕು. ರಾಜ್ಯದ ಮೊದಲ ವಿಶ್ವ ವಿದ್ಯಾಲಯ ಆರಂಭವಾಗಿದ್ದು ಮೈಸೂರಿನಲ್ಲಿ. ಇಂಥಾ ಜಿಲ್ಲೆ ಶಿಕ್ಷಣ ಸೂಚ್ಯಂಕದಲ್ಲಿ ಹಿಂದುಳಿಯಬಾರದು ಎಂದು ಸೂಚನೆ ನೀಡಿದರು. ಶೂನ್ಯ ದಾಖಲಾತಿ ಶಾಲೆಗಳ ವ್ಯಾಪ್ತಿ ಪೋಷಕರ ಸಭೆ ನಡೆಸಬೇಕು. ಪೋಷಕರ ಅಭಿಪ್ರಾಯ ಸಮಗ್ರವಾಗಿ ಸಂಗ್ರಹಿಸಿ ಕ್ರಮ ತೆಗೆದುಕೊಳ್ಳಬೇಕು. ಕೇವಲ ಇಂಗ್ಲಿಷ್ ವ್ಯಾಮೋಹ ಕಾರಣಕ್ಕೆ ಸರ್ಕಾರಿ ಶಾಲೆಗೆ ಸೇರುತ್ತಿಲ್ಲ ಎನ್ನುವ ವಾದ ವೈಜಾನಿಕವಲ್ಲ. ಶಿಕ್ಷಣ ಗುಣಮಟ್ಟವೂ ಕಾರಣ ಆಗಿರುತ್ತದೆ ಎಂದಿದ್ದಾರೆ ಸಿಎಂ.

ಹಾಗೇ ಈ ಕಾರಣದಿಂದ ಗುಣಮಟ್ಟದ ಶೀಕ್ಷಣ ಹೆಚ್ಚಿಸಲು ಶಿಕ್ಷಕರಿಗೆ ತರಬೇತಿ ನೀಡುವುದೂ ಸೇರಿ, ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮುಂದಿನ ವರ್ಷ ಶಿಕ್ಷಣ ಸೂಚ್ಯಂಕದಲ್ಲಿ ಮೊದಲ 5 ಸ್ಥಾನಗಳ ಒಳಗೆ ಬರಬೇಕು. ಇಲ್ಲದಿದ್ದರೆ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಇದೇ ವೇಳೆ ಎಚ್ಚರಿಸಿದರು.

ವಿದ್ಯುತ್ ಇಲಾಖೆಗೆ ಸೂಚನೆ ಏನು?

ಹಾಳಾದ ಟ್ರಾನ್ಸ್‌ಫರ್ಮರ್ ನಿಗಧಿತ ಅವಧಿಯಲ್ಲಿ ಬದಲಾಯಿಸದೆ ರೈತರಿಗೆ ಸತಾಯಿಸುತ್ತಿರುವ ಬಗ್ಗೆ ವ್ಯಾಪಕ ದೂರು ಬಂದಿದ್ದ ಹಿನ್ನೆಲೆ ಮೆಸ್ಕಾಂ ಎಂಡಿ ಹಾಗೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಸಿಎಂ. ನೀವು ರೈತರ ಹಾಗೂ ಜನಪ್ರತಿನಿಧಿಗಳ ದೂರವಾಣಿ ಕರೆಗಳನ್ನೇ ಸ್ವೀಕರಿಸುತ್ತಿಲ್ಲ. ರೈತರು ಬಹಳ ಸಂಕಷ್ಟದಲ್ಲಿ ಇದ್ದಾರೆ. ಅವರಿಗೆ ಸತಾಯಿಸಬೇಡಿ ಎಂದು ಎಚ್ಚರಿಕೆ ನೀಡಿದರು. ಟ್ರಾನ್ಸ್‌ಫರ್ಮರ್ ಸುಟ್ಟು ಹೋದರೆ ನಿಗಧಿತ ಅವಧಿ 72 ಗಂಟೆಯೊಳಗೆ ರಿಪೇರಿ ಮಾಡಬೇಕು ಎಂದು ಖಡಕ್ ಸೂಚನೆ ನೀಡಿದರು.

ಇನ್ನೊಂದ್ಕಡೆ ಕುಡಿವ ನೀರಿಗೆ ಕೊರತೆ ಆಗದಂತೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಬೇಕು. ಎಷ್ಟೇ ಹಣ ಖರ್ಚಾದರೂ ಕೊಡಲು ಸಿದ್ದರಿದ್ದೇವೆ. ಕುಡಿವ ನೀರಿನ ವಿಚಾರದಲ್ಲಿ ಪರ್ಯಾಯ ನೀರಿನ ಮೂಲಗಳನ್ನು ಬಳಸಲು ಯಾವುದೇ ಅಡ್ಡಿ ಆಗಬಾರದು ಎಂದು ಸ್ಪಷ್ಟ ಸೂಚನೆ ನೀಡಿದರು. ಹಾಗೂ ಕೊರೊನಾ ಅವಧಿಯಲ್ಲಿ ಬಂದ್ ಆದ ಬಸ್ ಮಾರ್ಗಗಳು ಪುನರ್ ಚಾಲನೆ ಆಗುವುದೂ ಸೇರಿದಂತೆ ಐದು ಜಿಲ್ಲೆಗಳ ಶಾಸಕರ ಸಭೆ ಕರೆದು ಹೊಸ ಬಸ್ ಮಾರ್ಗಗಳ ಅಗತ್ಯ ಎಲ್ಲೆಲ್ಲಿ ಇವೆ ಎನ್ನುವುದರ ಬಗ್ಗೆ ಸಮಗ್ರವಾಗಿ ಮಾಹಿತಿ ಸಂಗ್ರಹಿಸಿ ಅಗತ್ಯ ಕ್ರಮ ಕೈಗೊಳ್ಳಿ ಎಂದು ಸಿಎಂ ಇದೇ ವೇಳೆ ಸೂಚಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+