‘ಗ್ಯಾರಂಟಿ’ ಮೂಲಕ ಬಿಜೆಪಿ ನಾಯಕರಿಗೆ ಸಿಎಂ ಸಿದ್ದರಾಮಯ್ಯ ಗುದ್ದು!
ಮೈಸೂರು: ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ಇಂದು ಮತ್ತೆ ಗುಡುಗಿದ್ದಾರೆ. ನಾವು ಬಡವರ ಪರ, ಮಧ್ಯಮ ವರ್ಗದವರ ಪರ ಯೋಜನೆ ರೂಪಿಸಿದಾಗ, ಘೋಷಿಸಿದಾಗ ಬಿಜೆಪಿ ನಾಯಕರು ಇನ್ನಿಲ್ಲದ ಆರೋಪ ಮಾಡಿದ್ದರು ಎಂದು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಸಿಎಂ, ವಿರೋಧ ಪಕ್ಷದ ಎಲ್ಲಾ ಆರೋಪಗಳನ್ನೂ ನಮ್ಮ ಗ್ಯಾರಂಟಿ ಯೋಜನೆಗಳು ಸುಳ್ಳು ಎಂದು ಸಾಬೀತು ಮಾಡಿವೆ ಎಂದಿದ್ದಾರೆ.
ಹೌದು ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಸಿಎಂ ಮಾತನಾಡಿದರು. ಬಿಜೆಪಿಯ ಆರೋಪಕ್ಕೆ ಉತ್ತರ ನೀಡಿದ ಸಿಎಂ ಸಿದ್ದರಾಮಯ್ಯ, ಬಡವರ ಪರ & ಮಧ್ಯಮ ವರ್ಗದವರ ಪರವಾದ ಯೋಜನೆ ರೂಪಿಸಿದಾಗ ಹಾಗೂ ಘೋಷಿಸಿದಾಗ ಬಿಜೆಪಿಯ ನಾಯಕರು ಇನ್ನಿಲ್ಲದ ಆರೋಪ ಮಾಡಿದರು. ಸುಳ್ಳುಗಳ ಸುರಿಮಳೆ ಸುರಿಸಿದರು.

ಬಿಜೆಪಿ ನಾಯಕರಿಗೆ ಸಿಎಂ ಉತ್ತರ
ಆಗ, ಸ್ವತಃ ಪ್ರಧಾನಿ ಮೋದಿಯವರೇ ರಾಜ್ಯ ದಿವಾಳಿಯಾಗುತ್ತೆ ಎಂದು ಭಾಷಣ ಮಾಡಿದರು. ಆದರೆ ಈಗ ಗ್ಯಾರಂಟಿ ಯೋಜನೆಗಳು ಜಾರಿಯಾಗಿವೆ. ಪ್ರತಿದಿನ ಕೋಟಿಗೂ ಅಧಿಕ ಮಂದಿ ಪ್ರತಿ ದಿನ, ಪ್ರತಿ ತಿಂಗಳು ನಮ್ಮ ಗ್ಯಾರಂಟಿ ಯೋಜನೆಗಳ ಅನುಕೂಲ ಪಡೀತಿದ್ದಾರೆ. ಹೀಗೆ ಪ್ರಧಾನಿ ಮೋದಿ ಅವರ ಮಾತು ಸುಳ್ಳಾಗಿವೆ ಎಂದು ವಿವರಿಸಿದರು. ಈ ಮೂಲಕ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಪರ ಸಿಎಂ ಬ್ಯಾಟ್ ಬೀಸಿದ್ದಾರೆ. ಅಲ್ಲದೆ ಬಿಜೆಪಿ ನಾಯಕರ ಎಲ್ಲ ಆರೋಪಕ್ಕೂ ಉತ್ತರ ನೀಡಿದ್ದಾರೆ.
100 ದಿನ ಪೂರೈಸಿದ್ದಕ್ಕೆ ಪುಸ್ತಕ
ಹಾಗೇ ನೂರು ದಿನಗಳ ಸಾಧನೆ ಪುಸ್ತಕ ಹೊರಗೆ ತಂದಿದ್ದೇವೆ. ಈ ಪುಸ್ತಕವನ್ನು ಮತ್ತು ನಾವು ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟಿದ್ದ ಭರವಸೆಗಳನ್ನು ಪಟ್ಟಿ ಮಾಡಿ ನೋಡಿ. ನಿಮಗೂ ನುಡಿದಂತೆ ನಡೆದ ನಮ್ಮ ಸರ್ಕಾರ ಬಗ್ಗೆ ಹೆಮ್ಮೆ ಬರುತ್ತೆ. ಭಾರತ ರಾಜಕೀಯ ಇತಿಹಾಸದಲ್ಲಿ ಒಂದೇ ಯೋಜನೆಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಜನೋಪಯೋಗಿ ಕಾರ್ಯಕ್ರಮವು ಜಾರಿ ಆಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಹಾಗೇ ಶಕ್ತಿ ಯೋಜನೆಯಿಂದಾಗಿ ಕೋಟಿ ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. ಇಷ್ಟು ಕಡಿಮೆ ಅವಧಿಯಲ್ಲಿ, ಅವರಿಗೆ ಸಾವಿರಾರು ರೂಪಾಯಿ ಬಸ್ ಚಾರ್ಜ್ ಉಳಿತಾಯವಾಗಿದೆ ಎಂದರು.

ಕೇಂದ್ರ ಅಕ್ಕಿ ಕೊಡಲಿಲ್ಲ ಎಂದ ಸಿಎಂ
ಅನ್ನಭಾಗ್ಯಕ್ಕೆ ಅಕ್ಕಿ ಕೊಡದ ಕೇಂದ್ರ ಸರ್ಕಾರ ಎಂದು ಮತ್ತೆ ಸಿಎಂ ಸಿದ್ದರಾಮಯ್ಯ ಇಂದು ಗುಡುಗಿದ್ದಾರೆ. ಕನ್ನಡ ನಾಡಿನ ಬಡವರು ಹಾಗೂ ಮಧ್ಯಮ ವರ್ಗದವರು ಊಟ ಮಾಡಲು ಅಕ್ಕಿ ಕೊಡದೆ ಕೇಂದ್ರ ಸರ್ಕಾರ ನಮಗೆ ವಂಚಿಸಿತು. ನಾವು ಅಕ್ಕಿಯ ಬದಲಿಗೆ ಹಣ ಕೊಟ್ಟೆವು. ಪ್ರತೀ ದಿನ, ಪ್ರತೀ ತಿಂಗಳು ಕೋಟಿಗೂ ಅಧಿಕ ಕುಟುಂಬಗಳು ನಮ್ಮ ಗ್ಯಾರಂಟಿ ಯೋಜನೆಗಳ ಅನುಕೂಲ ಪಡೆದುಕೊಳ್ಳುತ್ತಿವೆ. ಪ್ರಧಾನ ಮಂತ್ರಿ ಮೋದಿಯವರೇ, ನಮ್ಮ ಎಲ್ಲಾ ಗ್ಯಾರಂಟಿ ಕಾರ್ಯಕ್ರಮ ಜಾರಿಯಿಂದ, ಬಡವ-ಮಧ್ಯಮ ವರ್ಗದವರ ಪರ ಕಾರ್ಯಕ್ರಮ ನೀಡಿದ್ದರಿಂದ ರಾಜ್ಯ ದಿವಾಳಿ ಆಗಲಿಲ್ಲ. ದಿವಾಳಿ ಆಗುತ್ತೆ ಎನ್ನುವ ನಿಮ್ಮ ಮಾತು ಪರಮ ಸುಳ್ಳು ಅಂತಾ ಸಾಬೀತಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಒಟ್ನಲ್ಲಿ ಬಿಜೆಪಿ ನಾಯಕರು ಇಷ್ಟುದಿನ ಗ್ಯಾರಂಟಿ ಯೋಜನೆ ಕುರಿತು ಮಾಡುತ್ತಿದ್ದ ಎಲ್ಲಾ ಆರೋಪಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಉತ್ತರ ನೀಡಿದ್ದಾರೆ. ಆದರೆ ಇದಕ್ಕೆ ಬಿಜೆಪಿಯ ನಾಯಕರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ? ಅನ್ನೋದನ್ನ ಕಾದು ನೋಡಬೇಕಾಗಿದೆ. ಇಷ್ಟುದಿನ ಸೋಷಿಯಲ್ ಮೀಡಿಯಾದಲ್ಲಿ, ಟ್ವೀಟ್ ವಾರ್‌ಗೆ ಸೀಮಿತವಾಗಿದ್ದ ಕಾಂಗ್ರೆಸ್ & ಬಿಜೆಪಿ ಗ್ಯಾರಂಟಿ ಫೈಟ್ ಈಗ ವೇದಿಕೆ ಏರಿದೆ. ಮುಂದೆ ಈ ಮಾತಿನ ಯುದ್ಧವು ಮತ್ತಷ್ಟು ಜೋರಾಗುವ ಸಾಧ್ಯತೆ ಇದೆ.












Click it and Unblock the Notifications