ಪ್ರತಿಪಕ್ಷಗಳ ಒಗ್ಗಟ್ಟಿನ ಮಂತ್ರದಿಂದ ಬಿಜೆಪಿಗೆ ನಡುಕ: ಸಿದ್ದರಾಮಯ್ಯ!
ಬೆಂಗಳೂರು: ಮುಂಬೈನಲ್ಲಿ ನಡೆದ ಇಂಡಿಯಾ ಮೈತ್ರಿಕೂಟದ ಮಹತ್ವದ ಮೂರನೆಯ ಸಭೆ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಾರೆ. 'ಈ ಸಭೆಯು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ದುರಾಡಳಿತ ಅಂತ್ಯ ಕಾಣಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇರಿಸಿದೆ.' ಎಂದು ಕೇಂದ್ರ ಸರ್ಕಾರ ಹಾಗೂ ಕೇಂದ್ರದ ಬಿಜೆಪಿ ನಾಯಕರ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದ್ದಾರೆ. ಹಾಗಾದರೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು? ಮುಂದೆ ಓದಿ.
ಅಷ್ಟಕ್ಕೂ, 'ಮುಂಬೈನಲ್ಲಿ ನಡೆದ ಇಂಡಿಯಾ ಮೈತ್ರಿಕೂಟದ ಮಹತ್ವದ ಮೂರನೆಯ ಸಭೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ದುರಾಡಳಿತ ಅಂತ್ಯ ಕಾಣಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇರಿಸಿದೆ. ಮೈತ್ರಿಕೂಟವನ್ನ ಸಮರ್ಥವಾಗಿ ಮುನ್ನಡೆಸಲು ಸಮನ್ವಯ ಸಮಿತಿ ರೂಪಿಸಿರುವುದು ಹಾಗೂ ಲೋಕಸಭಾ ಚುನಾವಣೆಗೆ ಸಂಬಂಧಿಸಿ ಸೀಟು ಹಂಚಿಕೆ ವಿಚಾರದಲ್ಲಿ ಯೋಜಿತವಾಗಿ ಮುಂದುವರೆಯಲು ಕ್ರಮ ವಹಿಸಿರುವುದು ಸ್ವಾಗತಾರ್ಹ. ಪ್ರತಿಪಕ್ಷಗಳ ಒಗ್ಗಟ್ಟಿನ ಮಂತ್ರಕ್ಕೆ ಬಿಜೆಪಿಯಲ್ಲಿ ನಡುಕು ಶುರುವಾಗಿದೆ.' ಎಂದಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ. ಈ ಮೂಲಕ ನೇರವಾಗಿ ಕೇಂದ್ರದ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಹುಲ್ ಗಾಂಧಿ ವಿಚಾರ ಪ್ರಸ್ತಾಪ
ಹಾಗೇ ಸಿಎಂ ಸಿದ್ದರಾಮಯ್ಯ BJP ನಾಯಕರ ವಿರುದ್ಧ ತಮ್ಮ ವಾಗ್ದಾಳಿ ಮುಂದುವರಿಸಿ, 'ನಮ್ಮ ನಾಯಕರಾದ ರಾಹುಲ್ ಗಾಂಧಿಯವರ ಕ್ರಿಯಾತ್ಮಕ ಸಲಹೆಗಳೂ ವಿರೋಧ ಪಕ್ಷಗಳ ಸಂಘಟನೆ ಪ್ರಯತ್ನಕ್ಕೆ ಬಲ ತುಂಬಿದೆ. ಇಂಡಿಯಾ ಮೈತ್ರಿಕೂಟದ ಒಗ್ಗಟ್ಟಿನಿಂದಾಗಿ ಕೇಂದ್ರದ ಭ್ರಷ್ಟ ಬಿಜೆಪಿ ಸರ್ಕಾರ ಭೀತಿಗೊಳಗಾಗಿದ್ದು ಅದರ ಇತ್ತೀಚಿನ ನಡವಳಿಕೆಯಿಂದ ಸ್ಪಷ್ಟ ಆಗುತ್ತಿದೆ.' ಎಂದಿದ್ದಾರೆ ಸಿಎಂ. ಈ ಮೂಲಕ ಈಗಾಗಲೇ ರಾಜ್ಯದಲ್ಲಿ ಬಿಜೆಪಿ & ಕಾಂಗ್ರೆಸ್ ಸರ್ಕಾರದ ನಡುವೆ ಹೊತ್ತಿರುವ ಕಿಚ್ಚಿಗೆ ತುಪ್ಪ ಸುರಿದಂತಾಗಿದೆ.
ಪ್ರಧಾನಿ ವಿರುದ್ಧ ಸಿಎಂ ಆರೋಪ
'ಕೇಂದ್ರ ಸರ್ಕಾರದ ಜನ ವಿರೋಧಿ ನಿಲುವು & ನಿರ್ಧಾರ, ವಂಚಕ ಉದ್ಯಮಪತಿಗಳೊಂದಿಗೆ ಸೇರಿ ನಡೆಸುತ್ತಿರುವ ಲೂಟಿ, ಮೈತ್ರಿಕೂಟ ಎತ್ತುತ್ತಿರುವ ಪ್ರಶ್ನೆಗಳ ಬಗ್ಗೆ ಬಿಜೆಪಿಯ ನಾಯಕರ ಬಳಿ ಉತ್ತರವಿಲ್ಲ. ತಮ್ಮ ಉದ್ಯಮಪತಿ ಗೆಳೆಯ ಅದಾನಿ ಮತ್ತವರ ಸಂಸ್ಥೆ ವಿರುದ್ಧದ ಅಕ್ರಮ ಬಗ್ಗೆ ಜಾಗತಿಕವಾಗಿ ಆಪಾದನೆ ಕೇಳಿಬರುತ್ತಿದ್ದರೂ ಮೋದಿಯವರು ತಾವೇ ಮುಂದಾಗಿ ಅದಾನಿ ರಕ್ಷಣೆಗೆ ನಿಂತಿದ್ದಾರೆ.' ಎಂದು ಸಿಎಂ ಸಿದ್ದರಾಮಯ್ಯ ಪ್ರಧಾನಿ ವಿರುದ್ಧ ಆರೋಪಿಸಿದ್ದಾರೆ.

ಉದ್ಯಮಿಗಳ ವಿಚಾರವೂ ಪ್ರಸ್ತಾಪ
'ಅದಾನಿ ಸಂಸ್ಥೆಯ ಅಕ್ರಮಗಳ ತನಿಖೆಗೆ ಜಂಟಿ ಸದನ ಸಮಿತಿ ಮಾಡಬೇಕು ಎನ್ನುವ ವಿಪಕ್ಷಗಳ ಆಗ್ರಹಕ್ಕೆ ಜಾಣ ಕಿವುಡಾಗಿದ್ದಾರೆ. ಉದ್ಯಮಪತಿಗಳೊಂದಿಗಿನ ಅಪವಿತ್ರ ಮೈತ್ರಿ ಪುರಾವೆ ಸಹಿತ ಹೊರಬೀಳುವ ಭಯ ಮೋದಿಯವರನ್ನು ಕಾಡುತ್ತಿದೆ. ದೇಶದ ಜನರನ್ನು ಕಾಡುತ್ತಿರುವ ಬೆಲೆ ಏರಿಕೆ, ನಿರುದ್ಯೋಗ, ಸಾಲದ ಮೇಲಿನ ಬಡ್ಡಿದರದ ಹೆಚ್ಚಳ, ಹೆಚ್ಚುತ್ತಿರುವ ಜನಾಂಗೀಯ ದ್ವೇಷ, ಹಿಂಸಾಚಾರ, ಪ್ರಕೃತಿ ವಿಕೋಪ ಮುಂತಾದ ಜ್ವಲಂತ ಸಮಸ್ಯೆಗಳ ಬಗ್ಗೆ ಪರಿಹಾರ ಹುಡುಕಲಾಗದ 'ಮೋದಿ & ಕಂಪೆನಿ' ತಮ್ಮ ಹುಳುಕು ಮುಚ್ಚಿಕೊಳ್ಳಲು ಜನರ ಗಮನವನ್ನು ಬೇರೆಡೆಗೆ ಸೆಳೆಯುವ ವಿಫಲಯತ್ನಗಳಿಗೆ ಕೈಹಾಕಿದೆ.' ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ.
ವಿಜ್ಞಾನಿಗಳಿಗೆ ಯಶಸ್ಸು ಸಲ್ಲಬೇಕು!
ಇನ್ನೋಂದ್ಕಡೆ, 'ಅವಸರದಲ್ಲಿ ಕರೆಯಲಾದ ಸಂಸತ್ ನ ವಿಶೇಷ ಅಧಿವೇಶನ, ಒಂದೇ ದೇಶ, ಒಂದೇ ಚುನಾವಣೆಯ ಬಗ್ಗೆ ಅನವಶ್ಯಕ ಚರ್ಚೆಯ ಮೂಲಕ ಜ್ವಲಂತ ಸಮಸ್ಯೆಗಳನ್ನು ಜನರ ಕಣ್ಣುಗಳಿಂದ ಮರೆಮಾಚುವ ಹತಾಶ ಕೆಲಸಕ್ಕೆ ನರೇಂದ್ರ ಮೋದಿ ಮುಂದಾಗಿದ್ದಾರೆ. ನಮ್ಮ ಹೆಮ್ಮೆಯ ಇಸ್ರೋದ ಶ್ರೇಷ್ಠ ವಿಜ್ಞಾನಿಗಳ ಸಾಧನೆಯನ್ನು ತನ್ನ ಪಕ್ಷದ ಸಾಧನೆ ಎಂದು ಬಿಂಬಿಸಿಕೊಳ್ಳುವಷ್ಟು ಸಣ್ಣತನಕ್ಕೆ ದೇಶದ ಪ್ರಧಾನಿ ಇಳಿದಿರುವುದು ವಿಷಾದನೀಯ ಮಾತ್ರವಲ್ಲ ಖಂಡನೀಯ ಕೂಡಾ ಆಗಿದೆ. ಸೌರಯಾನದ ಯಶಸ್ಸುಗಳಿಗೆ ನಮ್ಮ ವಿಜ್ಞಾನಿಗಳಷ್ಟೇ ಅರ್ಹರು.' ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ.

'ಜಿ20 ಸಭೆ ಆಯೋಜನೆಯನ್ನೇ ತನ್ನ ಗೆಲುವು ಎಂದು ತೋರಿಸಿಕೊಳ್ಳುವ ಸಾಧನಾ ದಾರಿದ್ರ್ಯ 'ಮೋದಿ & ಕಂಪೆನಿ'ಗೆ ಬಂದಿದೆ. ಚುನಾವಣೆ ಹೊಸ್ತಿಲಲ್ಲಿರುವಾಗ 'ಏಕರೂಪ ನಾಗರಿಕ ಸಂಹಿತೆ', 'ಜನಸಂಖ್ಯಾ ನಿಯಂತ್ರಣ ಮಸೂದೆ' ಮುಂತಾದವುಗಳ ಕುರಿತು ತನ್ನ ಸಂಘ ಪರಿವಾರದ ಮೂಲಕ ಹಿಂಬಾಗಿಲಿನ ಚರ್ಚೆಗಳಿಗೆ ಚಾಲನೆ ನೀಡಿದೆ.' ಎಂದು ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಈ ಮೂಲಕ ಇಂಡಿಯಾ ಒಕ್ಕೂಟದ ಪರ ಸಿಎಂ ಸಿದ್ದರಾಮಯ್ಯ ಇದೀಗ ಮಾತನಾಡಿದ್ದು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿಗೆ ಸಿಎಂ ಸಿದ್ದರಾಮಯ್ಯ ಸವಾಲು
ಇಷ್ಟೆಲ್ಲದರ ನಡುವೆ 'ಇಸ್ರೋ ಸಾಧನೆಯ ಬಗ್ಗೆ ದೇಶ ಸದಾ ಹೆಮ್ಮೆ ಪಡುತ್ತದೆ. ಆದರೆ, ಈಗ ನಿಮ್ಮ ಸಾಧನೆ ಏನೆಂದು ಹೇಳಿ? ಇನ್ನು 'ಮನ್ ಕೀ ಬಾತ್' ಸಾಕು ಮಾಡಿ, 'ಕಾಮ್ ಕೀ ಬಾತ್' ಹೇಳಿ. 9 ವರ್ಷ ದೇಶವನ್ನಾಳಿರುವ ನೀವು ದೇಶಕ್ಕೆ ನೀಡಿದ ಕೊಡುಗೆಯಾದರೂ ಏನು, ಮಾಡಿರುವ ಸಾಧನೆಯಾದರೂ ಏನೆಂದು ಹೇಳಿ. ನೋಟು ರದ್ದತಿ, ನಿರುದ್ಯೋಗದ ಹೆಚ್ಚಳ, ಉದ್ಯಮಿಗಳ ವಂಚನೆಗೆ ನೆರವು, ಕೋಮುದ್ವೇಷ ಮತ್ತು ಜನಾಂಗೀಯ ಹಿಂಸಾಚಾರಗಳಿಗೆ ಕುಮ್ಮಕ್ಕು, ಶತ್ರು ದೇಶ ನಮ್ಮ ನೆಲವನ್ನು ಆಕ್ರಮಿಸುತ್ತಿದ್ದರೂ ಬಾಯಿ ಬಿಡಲಾರದ ಹೇಡಿತನ- ಯಾವುದು ನಿಮ್ಮ ಸಾಧನೆ ಹೇಳಿ.' ಎಂದು ಸಿಎಂ ಸಿದ್ದರಾಮಯ್ಯ ಸವಾಲು ಎಸೆದಿದ್ದಾರೆ.
'ಪುಕ್ಕಟೆ ಪ್ರಚಾರ ಪಡೆಯುವುದು, ಜ್ವಲಂತ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ತಿರುಗಿಸುವುದು, ಮತ್ತೊಬ್ಬರ ಸಾಧನೆ ತಮ್ಮದೆಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುವುದು, ಕೋಮು ವಿಷವನ್ನು ಸಮಾಜದಲ್ಲಿ ಸದಾಕಾಲ ಬಿತ್ತುವುದು, ದಿಟ್ಟ ಪ್ರಶ್ನೆಗಳನ್ನು ಕೇಳಿದಾಗ ಜಾಗ ಖಾಲಿ ಮಾಡುವುದು ಇವೆಲ್ಲಾ ಯಾರ ಗುಣಗಳು ಎನ್ನುವುದನ್ನು ದೇಶದ ಜನತೆ ಈ ಒಂಬತ್ತು ವರ್ಷಗಳಲ್ಲಿ ಚೆನ್ನಾಗಿ ಅರಿತಿದ್ದಾರೆ. ಇನ್ನು ನಿಮ್ಮ ಈ ಆಟಗಳು ನಡೆಯವುದಿಲ್ಲ.' ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಒಟ್ಟಾರೆ ಇಷ್ಟುದಿನ ರಾಷ್ಟ್ರೀಯ ಮಟ್ಟದಲ್ಲಿ ನಡೆದಿದ್ದ ಇಂಡಿಯಾ ಹಾಗೂ ಎನ್‌ಡಿಎ ಫೈಟ್, ಇದೀಗ ರಾಜ್ಯಕ್ಕೂ ತಲುಪಿದೆ. ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆದರೆ ಈ ಕುರಿತು ರಾಜ್ಯ ಬಿಜೆಪಿ ನಾಯಕರು ಹಾಗೂ ಕೇಂದ್ರದ ಬಿಜೆಪಿ ನಾಯಕರು ಹೇಗೆ ಪ್ರತಿಕ್ರಿಯೆ ನೀಡುತ್ತಾರೆ? ಅಂತಾ ಕಾದು ನೋಡಬೇಕಿದೆ. ಇಷ್ಟೆಲ್ಲದರ ನಡುವೆ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದು, ಇದೇ ರೀತಿ ವಾಗ್ದಾಳಿ ಮತ್ತು ಆರೋಪ & ಪ್ರತ್ಯಾರೋಪ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಮಾಮೂಲಾಗಲಿದೆ ಅಂತಿದ್ದಾರೆ ಜನ.












Click it and Unblock the Notifications