Excise revenue: ₹43,000 ಕೋಟಿ ಅಬಕಾರಿ ತೆರಿಗೆ ಟಾರ್ಗೆಟ್: ಈವರೆಗೆ ಸಂಗ್ರಹವಾಗಿದ್ದೆಷ್ಟು?
ವಿಧಾನಸೌಧದಲ್ಲಿ ತೆರಿಗೆ ಸಂಗ್ರಹ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಬಕಾರಿ ತೆರಿಗೆ ಸಂಗ್ರಹದ ವಿಚಾರವಾಗಿ ಮುಂದಿನ ವರ್ಷಕ್ಕೆ ಟಾರ್ಗೆಟ್ ನೀಡಿದ್ದಾರೆ. 2025-26ನೇ ಹಣಕಾಸು ಸಾಲಿನಲ್ಲಿ 43,000 ಕೋಟಿ ರೂಪಾಯಿ ಅಬಕಾರಿ ತೆರಿಗೆ ಗುರಿಯನ್ನು ನಿಗದಿಪಡಿಸಲಾಗಿದೆ. ನವೆಂಬರ್ ಅಂತ್ಯದವರೆಗೆ 26,215 ಕೋಟಿ ಸಂಗ್ರಹಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅಬಕಾರಿ ತೆರಿಗೆ ಸಂಗ್ರಹದಲ್ಲಿ ಶೇ 10.46ರಷ್ಟು ಬೆಳವಣಿಗೆ ದರ ಸಾಧಿಸಲಾಗಿದೆ ಎಂದಿದ್ದಾರೆ.
ನಿಗದಿತ ಗುರಿಯನ್ನು ಸಾಧಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕಿದೆ. ಇನ್ನು ವಾಣಿಜ್ಯ ತೆರಿಗೆ ಇಲಾಖೆಗೆ 2025-26ನೇ ಹಣಕಾಸು ಸಾಲಿನಲ್ಲಿ ರೂ. 1,20,000 ಕೋಟಿ ಗುರಿಯನ್ನು ನಿಗದಿಪಡಿಸಲಾಗಿದೆ. ನವೆಂಬರ್ ಅಂತ್ಯದವರೆಗೆ 80 ಸಾವಿರ ಕೋಟಿ ರೂಪಾಯಿ ಗುರಿ ನಿಗದಿಪಡಿಸಲಾಗಿದೆ. ಇದರಲ್ಲಿ ನಿವ್ವಳ ಸಂಗ್ರಹ ರೂ.72,131 ಕೋಟಿ ಮಾಡಲಾಗಿದ್ದು, ಶೇಕಡಾವಾರು ಶೇ.90 ಸಾಧನೆ ಮಾಡಲಾಗಿದೆ. ಇದರಲ್ಲಿ ಜಿಎಸ್‌ಟಿ 53,522 ಕೋಟಿ ರೂಪಾಯಿ, ಕೆಎಸ್‌ಟಿ 17,595 ಕೋಟಿ ರೂಪಾಯಿ ಮತ್ತು ವೃತಿ ತೆರಿಗೆ 1,014 ಕೋಟಿ ಸಂಗ್ರಹಿಸಲಾಗಿದೆ ಎಂದಿದ್ದಾರೆ.

ಇದರಲ್ಲಿ ಆರಂಭದ ಐದು ತಿಂಗಳಲ್ಲಿ ಏಪ್ರಿಲ್‌ನಿಂದ ಆಗಸ್ಟ್‌ವರೆಗೆ ಶೇ.12ರಷ್ಟು ಬೆಳವಣಿಗೆ ದರ ಸಾಧಿಸಲಾಗಿದೆ. ಆದರೆ ಜಿಎಸ್‌ಟಿ ದರಗಳಲ್ಲಿ ಬದಲಾವಣೆ ಹಿನ್ನೆಲೆ ತೆರಿಗೆ ಸಂಗ್ರಹದಲ್ಲಿ ಕಳೆದ ಮೂರು ತಿಂಗಳಲ್ಲಿ ಕೇವಲ ಶೇ 3ರಷ್ಟು ಬೆಳವಣಿಗೆ ದರ ಸಾಧ್ಯವಾಗಿದೆ. ವಾಣಿಜ್ಯ ತೆರಿಗೆ ಸಂಗ್ರಹದಲ್ಲಿ ಶೇ.100ರಷ್ಟು ನಿಗದಿತ ಗುರಿಯನ್ನು ಸಾಧಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬೋಗಸ್ ಕಂಡುಬಂದರೆ ಕೇಸ್ ದಾಖಲಿಸಿ
ನವೆಂಬರ್ ಅಂತ್ಯದವರೆಗೆ ಸುಮಾರು 13 ಸಾವಿರ ತಪಾಸಣೆಗಳನ್ನು ಮಾಡಿದ್ದು, ತಪಾಸಣೆಯಿಂದ 3,183 ಕೋಟಿ ರೂಪಾಯಿ ತೆರಿಗೆ ಸಂಗ್ರಹಿಸಲಾಗಿದೆ. ವಾಣಿಜ್ಯ ತೆರಿಗೆ ವಿಚಕ್ಷಣಾ ದಳ ತೆರಿಗೆ ಕಳ್ಳತನವನ್ನು ತಪ್ಪಿಸಲು ನಿರಂತರ ತಪಾಸಣೆಗಳನ್ನು ಕೈಗೊಳ್ಳಬೇಕು. ತೆರಿಗೆ ತಪ್ಪಿಸಲು ಯಾವುದೇ ಅವಕಾಶ ಇಲ್ಲದಂತೆ ಕಟ್ಟೆಚ್ಚರದಿಂದ ಕಾರ್ಯ ನಿರ್ವಹಿಸಬೇಕು. ಹಿಂದಿನ ವರ್ಷಗಳ ಅಂಕಿ ಅಂಶಗಳನ್ನು ಬಳಸಿಕೊಂಡು, ತಂತ್ರಜ್ಞಾನದ ಸಮರ್ಪಕ ಬಳಕೆ ಮಾಡಿ, ಅನಾಲಿಸಿಸ್ ವಿಭಾಗವನ್ನು ಬಲಪಡಿಸಬೇಕು ಎಂದು ಸಲಹೆ ನೀಡಿದ್ದಾರೆ. ಬೋಗಸ್ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಪ್ರಕರಣಗಳ ಮೇಲೆ ನಿಗಾ ಇರಿಸಿ, ಅಂತಹ ಪ್ರಕರಣಗಳಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಿ ಕಾನೂನು ಕ್ರಮ ಜರುಗಿಸುವ ಅಗತ್ಯವಿದೆ ಎಂದು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.












Click it and Unblock the Notifications