ಸಿಎಂ ಸಚಿವಾಲಯದ 30 ಮಂದಿ ಕೆಲಸದಿಂದ ದಿಢೀರ್ ವಜಾ, ಕಾರಣವೇನು?
ಕರ್ನಾಟಕ ಸರ್ಕಾರದ ಸಿಎಂ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದ 30 ಮಂದಿಯನ್ನು ದಿಢೀರನೆ ಕೆಲಸದಿಂದ ತೆಗೆದುಹಾಕಲಾಗಿದೆ. ಏಪ್ರಿಲ್ 1 ಮಂಗಳವಾರದಿಂದಲೇ ಈ ಸಿಬ್ಬಂದಿಯನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ. ಇವರೆಲ್ಲರೂ ಗುತ್ತಿಗೆ ಆಧಾರದ ಮೇರೆಗೆ ಕೆಲಸ ಮಾಡುತ್ತಿದ್ದರು. ರಾಜ್ಯ ಸರ್ಕಾರದ ಸಹಾಯಕರು, ಕಿರಿಯ ಸಹಾಯಕರು, ದಲಾಯತ್ ಸೇರಿ ವಿವಿಧ ಹುದ್ದೆಯಲ್ಲಿದ್ದವರು ಸೇವೆಯಿಂದ ವಜಾಗೊಂಡಿದ್ದಾರೆ. ಈ ಬಗ್ಗೆ ಸಿಎಂ ಸಚಿವಾಲಯದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.
ಈ ಸಿಎಂ ಸಚಿವಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ಬೆಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ರಾಮನಗರ, ತುಮಕೂರು, ಬೆಳಗಾವಿ, ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳ ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಈ ಪೈಕಿ 30 ಮಂದಿಯನ್ನು ವಜಾ ಮಾಡಲಾಗಿದೆ. ಸಿಬ್ಬಂದಿಯನ್ನು ದಿಢೀರನೆ ಕೆಲಸದಿಂದ ವಜಾ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಒಂದೆಡೆ ಬೆಲೆ ಏರಿಕೆ ಮಾಡುತ್ತಿರುವ ಸರ್ಕಾರವು ಇದೀಗ ಸಿಬ್ಬಂದಿಯ ಉದ್ಯೋಗ ಕಡಿತಕ್ಕೂ ಕೈಹಾಕಿದೆ ಎಂದು ಹೇಳಲಾಗುತ್ತಿದೆ.

ಹಲವು ತಿಂಗಳ ಹಿಂದೆಯೇ ಸಿಎಂ ಕಚೇರಿ ಸೇರಿದಂತೆ ಸಚಿವರ ಕಚೇರಿಗಳಲ್ಲಿ ಅನಗತ್ಯವಾಗಿರುವ ಸಿಬ್ಬಂದಿಗೂ ಶೀಘ್ರದಲ್ಲೇ ಗೇಟ್‌ಪಾಸ್ ಕೊಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ವರದಿಯಾಗಿತ್ತು. ಆಡಳಿತದ ಮೇಲೆ ಹದ್ದಿನಕಣ್ಣಿಡಲು ಈ ಸುಧಾರಣೆ ತರಲು ಮುಂದಾಗಿದೆ ಎಂದು ಹೇಳಲಾಗಿತ್ತು.
ಕೆಲವರು ಕೆಲಸ ಇಲ್ಲದಿದ್ದರೂ ಅನಗತ್ಯವಾಗಿ ಕಚೇರಿಗಳಲ್ಲಿ ಇರುವುದು ಸರ್ಕಾರದ ಗಮನಕ್ಕೆ ಬಂದಿತ್ತು. ಇವರನ್ನೆಲ್ಲ ಮನೆಗೆ ಕಳಿಸಲು ಮೊದಲೇ ನಿರ್ಧರಿಸಲಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಕಟ್ಟುನಿಟ್ಟಿನ ರೂಲ್ಸ್ ಜಾರಿ ಮಾಡಿ, ಅನಗತ್ಯ ಸಿಬ್ಬಂದಿಯನ್ನ ಮನೆಗೆ ಕಳಿಸಲು ಮುಂದಾಗಿದೆ ಎಂದು ತಿಳಿದುಬಂದಿತ್ತು. ಸರ್ಕಾರಕ್ಕೆ ಸಂಬಂಧಿಸಿದ ಸಿಎಂ ಕಚೇರಿ, ಸಚಿವರ ಕಚೇರಿಯಲ್ಲಿ ಬೇಕಾಬಿಟ್ಟಿ ಇರುವ ಸಿಬ್ಬಂದಿಯನ್ನೂ ಮನೆಗೆ ಕಳುಹಿಸಲು ಸಿದ್ಧತೆ ನಡೆದಿದೆ. ಈ ಸಂಬಂಧ ಈಗಾಗಲೇ ಕಚೇರಿಗಳಲ್ಲಿರುವ ಅನಗತ್ಯ ಸಿಬ್ಬಂದಿ ಬಗ್ಗೆ ವರದಿ ನೀಡುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ಕೂಡ ನೀಡಿತ್ತು.

ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳು, ಕಡತಗಳು ಸಹ ಲೀಕ್ ಆಗುತ್ತಿದೆ ಎನ್ನುವ ಆರೋಪ ಕೇಳಿಬಂದಿದ್ದರಿಂದ ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ಈ ಬಿಗಿ ನಿಯಮ ತರಲು ನಿರ್ಧರಿಸಿದೆ ಎಂದು ಹೇಳಲಾಗಿತ್ತು. ಹಾಗಾಗಿ ಕಚೇರಿಗಳಲ್ಲಿ ಅನಗತ್ಯವಾಗಿ ಓಡಾಡಿಕೊಂಡಿರುವ ಸಿಬ್ಬಂದಿಯಿಂದಲೂ ಈ ರೀತಿ ನಡೆದಿರುವ ಅನುಮಾನವಿದ್ದು, ಆಡಳಿತ ಯಂತ್ರವನ್ನು ಭದ್ರಪಡಿಸಲು ಕಾಂಗ್ರೆಸ್ ಸರ್ಕಾರ ಗೇಟ್‌ಪಾಸ್ ನೀಡಲು ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.
ಮುಡಾ ಕೇಸ್ ಬಂದ ನಂತರ ಕಳೆದ ಸೆಪ್ಟೆಂಬರ್‌ನಲ್ಲೇ ಅನಗತ್ಯ ಸಿಬ್ಬಂದಿಗೆ ಗೇಟ್ ಪಾಸ್ ಕೊಡುವ ತೀರ್ಮಾನವನ್ನು ಸರ್ಕಾರ ಕೈಗೊಂಡಿತ್ತು. ಸಿಎಂ ಹಾಗೂ ಸಚಿವರ ಕಚೇರಿಯಲ್ಲಿರುವ ಅಧಿಕಾರಿ, ಸಿಬ್ಬಂದಿ ವರ್ಗದ ಮಾಹಿತಿ ನೀಡುವಂತೆ ಈಗಾಗಲೇ ಹಿರಿಯ ಅಧಿಕಾರಿಗಳಿಗೆ ಸೂಚನೆ ಕೂಡ ನೀಡಲಾಗಿತ್ತು. ಜೊತೆಗೆ ಸರ್ಕಾರಕ್ಕೆ ಸಂಬಂಧಿಸಿದ ಮಾಹಿತಿ ಸೋರಿಕೆ ಮಾಡುವವರ ವಿರುದ್ಧವೂ ಕಠಿಣ ಕ್ರಮ ತೆಗೆದುಕೊಳ್ಳಲು ಪ್ರತ್ಯೇಕ ವರದಿ ನೀಡುವಂತೆ ಸರ್ಕಾರ ಸೂಚಿಸಿತ್ತು. ಈ ಹಿನ್ನೆಲೆ ಇದರ ಭಾಗವಾಗಿಯೇ ಸಚಿವಾಲಯದ ಸಿಬ್ಬಂದಿಯನ್ನು ವಜಾ ಮಾಡಿರುವ ಸಾಧ್ಯತೆ ಇದೆ.












Click it and Unblock the Notifications