• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

3 ಪಕ್ಷಗಳ ಹೊಲಸು ರಾಜಕೀಯದ ವಿರುದ್ದ ಜನರು ಮೊದಲು 'ದಂಗೆ' ಏಳಬೇಕಾಗಿದೆ

|

ಆಪರೇಶನ್ ಕಮಲದ ಭೀತಿ ಇನ್ನೂ ಮಾಸದ ಹಿನ್ನಲೆಯಲ್ಲಿ ನಾಡಿನ ದೊರೆಯ ಸ್ಥಾನದಲ್ಲಿ ಇರುವವರು ಹೇಳಬಾರದ್ದನ್ನು ಹೇಳಿಬಿಟ್ಟಿದ್ದಾರೆ. ಸಿಕ್ಕಿದ್ದೇ ಸೀರುಂಡೆ ಎಂದು ವಿರೋಧ ಪಕ್ಷದವರು ಮುಖ್ಯಮಂತ್ರಿಗಳು 'ರಾಜದ್ರೋಹ'ದ ಹೇಳಿಕೆಯನ್ನು ನೀಡಿದ್ದಾರೆಂದು ರಾಜ್ಯಪಾಲರಿಗೆ ದೂರು ನೀಡಲು ಹೋಗುತ್ತಿದ್ದಾರೆ. ಪೊಲೀಸ್ ವರಿಷ್ಠರಿಗೆ ಈಗಾಗಲೇ ದೂರು ನೀಡಿದ್ದಾಗಿದೆ.

ನಾಗಮಂಗಲದ ಶಾಸಕ ಸುರೇಶ್ ಗೌಡರಿಗೆ ಬಿಜೆಪಿಯವರು ಆಮಿಷವೊಡ್ದಿದ್ದಾರೆ, ನನ್ನ ತಾಳ್ಮೆಯನ್ನು ಪರೀಕ್ಷಿಸಬೇಡಿ, ಸಮ್ಮಿಶ್ರ ಸರಕಾರದ ತಂಟೆಗೆ ಬಂದರೆ, ದಂಗೆ ಏಳಲು ಕರೆನೀಡಬೇಕಾಗುತ್ತದೆ ಎಂದು ಕಾನೂನು, ಸುವ್ಯವಸ್ಥೆ ಕಾಪಾಡುವ ಗುರುತರ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳು ಹೇಳಿರುವುದು, ರಾಜ್ಯದಲ್ಲೀಗ ಚರ್ಚೆಯ ವಿಷಯವಾಗಿದೆ.

ಬಿಜೆಪಿ ವಿರುದ್ಧ ದಂಗೆ ಏಳುವಂತೆ ಕರೆ ನೀಡುತ್ತೇನೆ: ಎಚ್‌ಡಿಕೆ

ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದು ಹೆಚ್ಚುಕಮ್ಮಿ 120 ದಿನಗಳಾಗುತ್ತಿವೆ. ಅಧಿಕಾರಕ್ಕೆ ಬಂದಾಗಿನಿಂದ ಹಿಡಿದು ಇಂದಿನವರೆಗೂ, ಸರಕಾರವನ್ನು ಉಳಿಸಿಕೊಳ್ಳುವುದು ಹೇಗೆ ಎನ್ನುವುದು ಜೆಡಿಎಸ್-ಕಾಂಗ್ರೆಸ್ಸಿಗೆ, ಸರಕಾರವನ್ನು ಉರುಳಿಸುವುದು ಹೇಗೆ ಎನ್ನುವುದು ಬಿಜೆಪಿಯ ಕೆಲಸವಾಗಿಬಿಟ್ಟಿದೆ. ಹಾಗಾದರೆ, ಮೂರು ಪಕ್ಷಗಳಲ್ಲಿ ಸಂಭಾವಿತರು ಯಾರು?

ಕುಮಾರಸ್ವಾಮಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಮೇಲೆ, ರೈತರ ಸಾಲಮನ್ನಾ ಮತ್ತು ತೈಲೋತ್ಪನ್ನಗಳ ಮೇಲಿನ ಸೆಸ್ ಕಮ್ಮಿಮಾಡಿದ್ದನ್ನು ಬಿಟ್ಟರೆ, ಸರಕಾರ ನಿರೀಕ್ಷಿತ ಮಟ್ಟದಲ್ಲಿ ಇನ್ನೂ ಟೇಕ್ ಆಫ್ ಆಗಿಲ್ಲ. ಬಿಜೆಪಿಯವರು ಟೇಕ್ ಆಫ್ ಮಾಡುವುದಕ್ಕೆ ಬಿಡುತ್ತಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಾಣುವ ಸತ್ಯವಾಗಿದ್ದರೂ, ಕಾಂಗ್ರೆಸ್ ಪಕ್ಷದ ಆಂತರಿಕ ಬೇಗುದಿಯೂ ಇದಕ್ಕೆ ಕಾರಣ ಎನ್ನುವುದನ್ನು ಆತ್ಮಸಾಕ್ಷಿಯಾಗಿ ಕಾಂಗ್ರೆಸ್ಸಿನವರು ಒಪ್ಪಿಕೊಳ್ಳಲು ಸಿದ್ದರಿದ್ದಾರೆಯೇ?

ರಾಜ್ಯದ ಅಭಿವೃದ್ದಿಗೆ ಯಾವರೀತಿ ಕಾರ್ಯಕ್ರಮ ರೂಪಿಸಬೇಕು, ಯಾವ ಯಾವ ಯೋಜನೆಗಳಿಗೆ ಎಷ್ಟು ಹಣ ಮಂಜೂರು ಮಾಡಬೇಕು ಎನ್ನುವುದಕ್ಕಾಗಿಯೇ ಇರುವ ಸಚಿವ ಸಂಪುಟ ಸಭೆಯಲ್ಲೂ ಸರಕಾರ ಉಳಿಸಿಕೊಳ್ಳುವುದು ಹೇಗೆ ಎನ್ನುವುದೇ ಚರ್ಚೆಯಾಗುತ್ತಿದೆಯೆಂದರೆ, ರಾಜ್ಯದ ಆಡಳಿತ ಯಂತ್ರ ಎತ್ತ ಸಾಗುತ್ತಿದೆ ಎನ್ನುವುದಕ್ಕೆ ಕೊಡಬಹುದಾದ ಉದಾಹರಣೆ.

'ದಂಗೆ' ಹೇಳಿಕೆ ಮೂಲಕ ಸರ್ಕಾರ ಕೆಡವಲು ಬಿಜೆಪಿ ಬಳಿ ಇದೆ 4 ಬ್ರಹ್ಮಾಸ್ತ್ರ!

ಜಾರಕಿಹೊಳಿ ಸಹೋದರರು ಸುಮ್ಮನಾಗಿದ್ದರೂ, ಜೆಡಿಎಸ್ ಮತ್ತು ಕಾಂಗ್ರೆಸ್ಸಿನ ಹದಿನೈದು ಶಾಸಕರು ಮುಂಬೈಗೆ ತೆರಳುತ್ತಿದ್ದಾರೆ ಎನ್ನುವ ಸುದ್ದಿ ಸಮ್ಮಿಶ್ರ ಸರಕಾರಕ್ಕೆ ಹೊಸ ತಲೆನೋವಾಗಿ ಪರಿಣಮಿಸಿದೆ. ಇದೇ ಸಿಟ್ಟಿನಲ್ಲಿ ಮುಖ್ಯಮಂತ್ರಿಗಳು ದಂಗೆಗೆ ಕರೆನೀಡುವ ಹೇಳಿಕೆಯನ್ನು ನೀಡಿದ್ದು. ಇದರ ಬೆನ್ನಲ್ಲೇ, ಕಾಂಗ್ರೆಸ್ಸಿನ ಕಾರ್ಯಕರ್ತರು ಧವಳಗಿರಿಯ ಮುಂದೆ ಪ್ರತಿಭಟನೆ ನಡೆಸಿದ್ದು. ಕಾಂಗ್ರೆಸ್ ಕಾರ್ಯಕರ್ತರು ಬಿಎಸ್ವೈ ಮನೆಗೆ ನುಗ್ಗಿದಾಗ, ನಾವು ಮೂರ್ನಾಲ್ಕು ಜನ ಶಾಸಕರಿಲ್ಲದಿದ್ದರೆ ಕೊಲೆಯಾಗುತ್ತಿತ್ತು ಎನ್ನುವ ಹೇಳಿಕೆಯನ್ನು ರೇಣುಕಾಚಾರ್ಯ ಅವರು ನೀಡಿದ್ದು.

ಅವರು ಇನ್ನೊಬ್ಬರನ್ನು ದೂರುವುದು, ಇವರು ಮತ್ತೊಬ್ಬರನ್ನು ದೂರುವುದು. ಬಿಜೆಪಿಯ ಎಲ್ಲಾ ಅಕ್ರಮಗಳ ದಾಖಲೆ ನಮ್ಮಲ್ಲಿದೆ, ಸಮಯ ಬಂದಾಗ ಎಲ್ಲಾ ಬಿಡುಗಡೆ ಮಾಡುತ್ತೇನೆ ಎನ್ನುವ ಕುಮಾರಸ್ವಾಮಿಯವರು ಒಂದೆಡೆ. ನನ್ನ ವಿರುದ್ದ ಬಿಜೆಪಿಯವರು ಷಡ್ಯಂತ್ರ ಯಾಕೆ ನಡೆಸುತ್ತಿದ್ದಾರೆ ಎನ್ನುವುದನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸುವುದಾಗಿ ಹೇಳುವ ಡಿಕೆ ಶಿವಕುಮಾರ್ ಇನ್ಜೊಂದೆಡೆ. ಇವರಿಗೆಲ್ಲಾ ದಾಖಲೆ ಬಿಡುಗಡೆ ಮಾಡಲು 'ಆ ಸಮಯ' ಬರುವುದು ಯಾವಾಗ? ಇದು ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್ ಅಲ್ಲದೇ ಮತ್ತಿನ್ನೇನು?

ಬಿಜೆಪಿಯ ಶಾಸಕರೂ ನಮ್ಮ ಸಂಪರ್ಕದಲ್ಲಿದ್ದಾರೆ, ಅವರು ಮೈಸೂರು ಭಾಗದವರಲ್ಲ ಎಂದು ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಸರಕಾರ ಉರುಳಿಸಲು ಬಿಜೆಪಿ ಆಪರೇಶನ್ ಕಮಲ ನಡೆಸುವುದು ತಪ್ಪಾದರೆ, ಸರಕಾರ ಉಳಿಸಿಕೊಳ್ಳಲು ಸಮ್ಮಿಶ್ರ ಸರಕಾರ, ಬಿಜೆಪಿ ಶಾಸಕರಿಗೆ ಆಮಿಷವೊಡ್ಡುವುದು ಸರೀನಾ? ಮೂರೂ ಪಕ್ಷಗಳ ತಮ್ಮ ಮೂಗಿನ ನೇರ ರಾಜಕಾರಣದಿಂದ ಜನ ರೋಸಿ ಹೋಗಿರುವಂತಹ ಈ ಸಂದರ್ಭದಲ್ಲಿ, ಲೋಕಸಭಾ ಚುನಾವಣೆಯ ವೇಳೆಗೆ, ರಾಜ್ಯ ರಾಜಕಾರಣ ಇನ್ನೆಷ್ಟು ಗಬ್ಬೆದ್ದು ಹೋಗಲಿದೆಯೋ?

ಯಡಿಯೂರಪ್ಪ ಮೇಲೆ ಎಚ್ಡಿಕೆ ಆರೋಪ ಭಾವನಾತ್ಮಕ ಎಂದ ದಿನೇಶ್

ಮುಖ್ಯಮಂತ್ರಿ ಸ್ಥಾನದಲ್ಲಿರುವವರ ದಂಗೆಯ ಹೇಳಿಕೆ, ಬಿಜೆಪಿಯವರಿಗೆ ಇನ್ನೊಂದಷ್ಟು ದಿನ ರಾಜಕೀಯ ಮಾಡಲು ಸರಕು ಸಿಕ್ಕಂತಾಗಿದೆ. ಬಿಎಸ್ವೈಯವರನ್ನು ಹಣೆಯಲು ಶಿವರಾಮ ಕಾರಂತ ಬಡಾವಣೆಯ ಡಿನೋಟಿಫೈ ಪ್ರಕರಣಕ್ಕೆ ಮತ್ತೆ ಮರುಜೀವ ಸಿಗುವ ಸಾಧ್ಯತೆಯಿದೆ. ಅಲ್ಲಿಗೆ, ಮುಂದಿನ ದಿನಗಳಲ್ಲಿ ರಾಜಕೀಯ ಮೇಲಾಟ ಮೊದಲು, ಅಭಿವೃದ್ದಿ ಆಮೇಲೆ ಎನ್ನುವ ಸ್ಥಿತಿ ನಿರ್ಮಾಣವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯ ರಾಜಕೀಯದ ಬೆಳವಣಿಗೆಗಳು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಬರೀ ಸರಕಾರ ಬೀಳುವ, ಆಪರೇಶನ್ ಕಮಲ, ಮೂರೂ ಪಕ್ಷಗಳ ಮುಖಂಡರ ಬೇಜವಾಬ್ದಾರಿ ಹೇಳಿಕೆಗಳು, ಹೊಲಸು ರಾಜಕೀಯದಿಂದ, ಅಭಿವೃದ್ದಿ ನೆನೆಗುದಿಗೆ ಬಿದ್ದಿದೆ. ಬಿಜೆಪಿ ವಿರುದ್ದ ಜನ ದಂಗೆ ಏಳುವುದಲ್ಲ, ರಾಜ್ಯದ ಮೂರೂ ಪ್ರಮುಖ ಪಕ್ಷಗಳ ವಿರುದ್ದ ಜನಸಾಮಾನ್ಯರೇ ದಂಗೆ ಏಳಬೇಕಾಗಿದೆ.

ಇನ್ನಷ್ಟು bjp ಸುದ್ದಿಗಳುView All

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Chief Minister HD Kumaraswamy revolt statement, people should revolt on all the three major parties. Due to uncertain in the government, deveopment work completely neglected.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more