ಕರ್ನಾಟಕದ ಸಿಎಂ ಯಾರು?; ದೆಹಲಿಯಲ್ಲಿ ಆಗಲ್ಲ ಘೋಷಣೆ!
ಬೆಂಗಳೂರು, ಮೇ 16; ಕರ್ನಾಟಕ ವಿಧಾನಸಭೆ ಚುನಾವಣೆ 2023ರಲ್ಲಿ ಕಾಂಗ್ರೆಸ್ ಪಕ್ಷ 135 ಸ್ಥಾನಗಳಲ್ಲಿ ಜಯಗಳಿಸಿ ಸ್ಪಷ್ಟ ಬಹುಮತಕ್ಕಿಂತ ಹೆಚ್ಚು ಸ್ಥಾನ ಪಡೆದಿದೆ. ಕಾಂಗ್ರೆಸ್ ಸರ್ಕಾರ ರಚನೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಆದರೆ ಮುಖ್ಯಮಂತ್ರಿ ಯಾರು?. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕಾಂಕ್ಷಿಗಳು.
ಬೆಂಗಳೂರು ಮತ್ತು ನವದೆಹಲಿಯಲ್ಲಿ ನಡೆಯುತ್ತಿರುವ ಸರಣಿ ಸಭೆಗಳು ಮುಖ್ಯಮಂತ್ರಿ ಯಾರು? ಎಂಬ ಪ್ರಶ್ನೆಗೆ ಉತ್ತರ ನೀಡಿಲ್ಲ. ಮಂಗಳವಾರ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ದೆಹಲಿಗೆ ತೆರಳಿದ್ದು, ಯಾರಿಗೆ ಸಿಎಂ ಪಟ್ಟ ಎಂಬ ಚರ್ಚೆಯ ಬಿಸಿ ಹೆಚ್ಚಿಸಿದೆ. ಸೋಮವಾರದಿಂದ ಸಿದ್ದರಾಮಯ್ಯ ದೆಹಲಿಯಲ್ಲಿಯೇ ಇದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಡಿ. ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಜೊತೆ ಪ್ರತ್ಯೇಕ ಸಭೆ ನಡೆಸಲಿದ್ದಾರೆ. ಇದಕ್ಕಾಗಿ ಉಭಯ ನಾಯಕರಿಗೂ ಸಮಯ ನೀಡಿದ್ದಾರೆ. ಬಳಿಕ ಸೋನಿಯಾ ಗಾಂಧಿ ಜೊತೆ ಖರ್ಗೆ ಸಭೆ ನಡೆಸಿ ಚರ್ಚೆ ನಡೆಸಲಿದ್ದಾರೆ. ಆದರೆ ಮುಖ್ಯಮಂತ್ರಿ ಘೋಷಣೆ ದೆಹಲಿಯಲ್ಲಿ ಆಗುವುದಿಲ್ಲ.
ಬೆಂಗಳೂರಿನಲ್ಲಿ ಸಿಎಲ್‌ಪಿ ಸಭೆ?; ಭಾನುವಾರ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಕಾಂಗ್ರೆಸ್ ಶಾಸಕರ ಸಭೆ ನಡೆದಿತ್ತು. ಎಐಸಿಸಿಯಿಂದ ನೇಮಕಗೊಂಡ ವೀಕ್ಷಕರಾದ ಸುಶೀಲ್ ಕುಮಾರ್ ಶಿಂಧೆ, ಜಿತೇಂದರ್ ಸಿಂಗ್, ದೀಪಕ್ ಬಾಬರಿಯಾ ನೇತೃತ್ವದಲ್ಲಿ ಸಭೆ ನಡೆದಿತ್ತು.

ಮಂಗಳವಾರ ದೆಹಲಿಯಲ್ಲಿ ಸರಣಿ ಸಭೆ ನಡೆದರೂ ಬುಧವಾರ ಬೆಂಗಳೂರಿನಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮುಚ್ಚಿದ ಲಕೋಟೆಯಲ್ಲಿನ ಪತ್ರದಲ್ಲಿರುವ ಮುಖ್ಯಮಂತ್ರಿ ಅಭ್ಯರ್ಥಿ ಹೆಸರನ್ನು ಘೋಷಣೆ ಮಾಡಲಾಗುತ್ತದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯೇ ಈ ಹೆಸರು ಘೋಷಣೆ ಮಾಡುವ ನಿರೀಕ್ಷೆ ಇದೆ.
ಭಾನುವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯನ್ನು ಹೈಕಮಾಂಡ್ ನಾಯಕರು ಮಾಡಬೇಕು ಎಂದು ಒಂದು ಸಾಲಿನ ನಿರ್ಣಯ ಕೈಗೊಳ್ಳಲಾಗಿತ್ತು. ಆದ್ದರಿಂದ ಹೈಕಮಾಂಡ್ ತನ್ನ ನಿರ್ಣಯವನ್ನು ಶಾಸಕರ ಮುಂದೆಯೇ ಘೋಷಿಸಲಿದೆ ಎನ್ನುವುದು ಸದ್ಯದ ಮಾಹಿತಿ.
ಸಂಜೆ 5 ಗಂಟೆಗೆ ಡಿ. ಕೆ. ಶಿವಕುಮಾರ್ ಮತ್ತು ಸಂಜೆ 6 ಗಂಟೆಗೆ ಸಿದ್ದರಾಮಯ್ಯ ಜೊತೆ ಪ್ರತ್ಯೇಕವಾಗಿ ಮಲ್ಲಿಕಾರ್ಜುನ ಖರ್ಗೆ ಸಭೆ ನಡೆಸಲಿದ್ದಾರೆ. ಇದಕ್ಕೂ ಮೊದಲು 1 ಗಂಟೆಗಳ ಕಾಲ ಖರ್ಗೆ ರಾಹುಲ್ ಗಾಂಧಿ ಜೊತೆ ಸಭೆ ನಡೆಸಿದರು. ಬಳಿಕ ಕೆ. ಸಿ. ವೇಣುಗೋಪಾಲ್ ಮತ್ತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಜೊತೆ ಸಭೆ ನಡೆಸಿದರು.
ಡಿಕೆಶಿ ಬಿಗಿಪಟ್ಟು; ಡಿ. ಕೆ. ಶಿವಕುಮಾರ್ ಕೆಪಿಸಿಸಿಯ ಅಧ್ಯಕ್ಷರು. ಕಾಂಗ್ರೆಸ್ ಪಕ್ಷ ಅವರ ಸಾರಥ್ಯದಲ್ಲಿಯೇ ಚುನಾವಣೆ ಎದುರಿಸಿ 135 ಸೀಟುಗಳಲ್ಲಿ ಗೆಲುವು ಸಾಧಿಸಿದೆ. ಆದ್ದರಿಂದ ಹಿಂದಿನ ಸಂಪ್ರದಾಯದಂತೆ ಕೆಪಿಸಿಸಿ ಅಧ್ಯಕ್ಷರನ್ನೇ ಸಿಎಂ ಮಾಡಬೇಕು ಎಂದು ಡಿ. ಕೆ. ಶಿವಕುಮಾರ್ ಪಟ್ಟು ಹಿಡಿದಿದ್ದಾರೆ.
ಎರಡೂವರೆ ವರ್ಷದ ಅಧಿಕಾರ ಹಂಚಿಕೆ ಸೂತ್ರಕ್ಕೆ ಸಹ ಡಿ. ಕೆ. ಶಿವಕುಮಾರ್ ಒಪ್ಪಿಗೆ ನೀಡಿಲ್ಲ ಎಂಬ ಮಾಹಿತಿ ಇದೆ. ಅಧಿಕಾರ ಹಂಚಿಕೆ ಮಾಡುವುದಾದರೆ ಮೊದಲು ತಮ್ಮನ್ನು ಸಿಎಂ ಮಾಡಬೇಕು ಎಂಬುದುದ ಅವರ ಬೇಡಿಕೆಯಾಗಿದೆ. ಸಿದ್ದರಾಮಯ್ಯ ಶಾಸಕರ ಬೆಂಬಲ ತಮಗೆ ಇದೆ ಎಂಬ ಪಟ್ಟನ್ನು ಬಿಗಿಗೊಳಿಸಿದ್ದಾರೆ.
ಡಿ. ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಬಿಗಿ ಪಟ್ಟಿನ ಕಾರಣ ಹೈಕಮಾಂಡ್ ಸಹ ಇಕ್ಕಟ್ಟಿಗೆ ಸಿಲುಕಿದೆ. ಸಿಎಂ ಸ್ಥಾನ ಸಿಗದಿದ್ದರೆ ನಾಯಕರ ಮುಂದಿನ ನಡೆ ಏನು?, ಅದರಿಂದ ಪಕ್ಷದ ಮೇಲೆ ಆಗುವ ಪರಿಣಾಮವೇನು? ಎಂಬ ಬಗ್ಗೆ ಹೈಕಮಾಂಡ್ ಲೆಕ್ಕಾಚಾರ ಹಾಕುತ್ತಿದೆ.












Click it and Unblock the Notifications