ಸಂಪುಟದಲ್ಲಿ ಹಿರಿಯರೋ? ಕಿರಿಯರೋ?: ಸಿದ್ದು ಕ್ಯಾಬಿನೆಟ್‌ನಲ್ಲಿ ನೂತನ ಶಾಸಕರಿಗೆ ಸಿಗಲಿದೆಯೇ ಸ್ಥಾನ?
ಬೆಂಗಳೂರು, ಮೇ. 26: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿ ಸರ್ಕಾರ ರಚನೆ ಮಾಡಿರುವ ಕಾಂಗ್ರೆಸ್‌ಗೆ ಈಗ ಸಚಿವ ಸ್ಥಾನ ಹಂಚಿಕೆಯೇ ದೊಡ್ಡ ತಲೆನೋವಾಗಿದೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಂಪುಟ ವಿಸ್ತರಣೆಗೆ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಸಂಪುಟಕ್ಕೆ ಸೇರುವ ಶಾಸಕರ ಪಟ್ಟಿ ಈಗಾಗಲೇ ಬಹುತೇಕ ಅಂತಿಮಗೊಂಡಿದೆ. ಶುಕ್ರವಾರ ರಾತ್ರಿ ವೇಳಗೆ ಸಚಿವರ ಪಟ್ಟಿ ಪೂರ್ಣಗೊಂಡು ರಾಜಭವನಕ್ಕೆ ರವಾನೆಯಾಗಲಿದ್ದು, ಶನಿವಾರ ಸಂಜೆ ವೇಳೆಗೆ ಖಾತೆಗಳನ್ನೂ ಹಂಚಿಕೆ ಮಾಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಆದರೆ, ಮೂರ್ನಾಲ್ಕು ಬಾರಿ ಗೆದ್ದಿರುವ ಶಾಸಕರು ಹಾಗೂ ಹೊಸ ಮುಖಗಳನ್ನು ಸಙಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಜೈನ, ಉಪ್ಪಾರ, ಇತರೆ ಹಿಂದುಳಿದ ಸಮುದಾಯಗಳು ಸಚಿವ ಸಂಪುಟದ ಮೇಲೆ ಕಣ್ಣಿಟ್ಟಿರುವ ಹಿನ್ನೆಲೆಯಲ್ಲಿ ಹಿರಿಯ ನಾಯಕರು ಸಂಪುಟಕ್ಕೆ ಸೇರ್ಪಡೆಯಾಗದೇ ಇದ್ದರೆ ಪಕ್ಷ ಅವರಿಗೆ ಅವಕಾಶ ಕಲ್ಪಿಸಲಿದೆ ಎಂಬ ವಿಶ್ವಾಸದಲ್ಲಿ ಎರಡನೇ ಹಂತದ ನಾಯಕರು ಇದ್ದಾರೆ. ಡಿಕೆ ಶಿವಕುಮಾರ್ ಅವರ ವಿರುದ್ಧ ದನಿಯೆತ್ತಿದ್ದ ಕೆ.ವೆಂಕಟೇಶ್, ಎಚ್.ಸಿ.ಮಹದೇವಪ್ಪ, ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್ ಅವರಂತಹ ಹಿರಿಯರ ಪ್ರವೇಶವಾಗದೆ ಇದ್ದರೇ ಅಡ್ಡಿಪಡಿಸಿದರೆ ಅದು ಎರಡನೇ ಹಂತದ ನಾಯಕರಿಗೆ ದಾರಿಮಾಡಿಕೊಟ್ಟಂತಾಗುತ್ತದೆ.
ಆದರೆ, ಸಿದ್ದರಾಮಯ್ಯ ಅವರು ತಮ್ಮ ಆಪ್ತರಾದ ಮಹದೇವಪ್ಪ, ವೆಂಕಟೇಶ್, ಬೈರೇಗೌಡ, ಕೆ.ಎನ್.ರಾಜಣ್ಣ, ಬಸವರಾಜ್ ರಾಯರೆಡ್ಡಿ, ಗುಂಡೂರಾವ್ ಅವರನ್ನು ತಮ್ಮ ಕ್ಯಾಬಿನೇಟ್‌ನಲ್ಲಿ ಸೇರ್ಪಡೆ ಮಾಡಿಕೊಳ್ಳಲು ಮುಂದಾಗಬಹುದು ಎಂದು ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಅವರು ತಾವು ಕೇವಲ ಸಾಂಕೇತಿಕ ಮುಖ್ಯಮಂತ್ರಿಯಾಗಲು ಬಯಸುವುದಿಲ್ಲ ಎಂದು ಹೇಳಿದ್ದು, ಜೆಡಿಎಸ್‌ನಿಂದಲೂ ತಮ್ಮನ್ನು ಅನುಸರಿಸಿ ಕಾಂಗ್ರೆಸ್‌ಗೆ ಬಂದಿರುವ ಎಚ್‌ಸಿ ಮಹದೇವಪ್ಪ ಮತ್ತು ಕೆ. ವೆಂಕಟೇಶ್ ಅವರಂತಹ ಅನುಭವಿಗಳು ತಮ್ಮ ಸಂಪುಟದಲ್ಲಿ ಇರಬೇಕೆಂದು ಒತ್ತಾಯಿಸಿದ್ದಾರೆ. ಇದರ ಜೊತೆಗೆ ಲೋಕಸಭೆ ಚುನಾವಣೆಗೂ ಮುನ್ನ ಶಾಸಕರನ್ನು ತೃಪ್ತಿಪಡಿಸಲು ಎಲ್ಲ ವರ್ಗಗಳಿಗೂ ಸಮಾನ ಪ್ರಾತಿನಿಧ್ಯ ನೀಡುವ ದೃಢ ನಿಲುವು ಹೊಂದಿದ್ದಾರೆ.
ಪರಿಶಿಷ್ಟ ಜಾರಿ ಮತ್ತು ಪರಿಶಿಷ್ಟ ಪಂಗಡದ ನಾಯಕರಿಗೆ ಎಂಟು ಸಚಿವ ಸ್ಥಾನಗಳನ್ನು ನೀಡಬೇಕು ಎಂದು ದಲಿತ ಮುಖಂಡರು ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಸೂಕ್ತ ಸಮುದಾಯಕ್ಕೆ ಪ್ರಾತಿನಿಧ್ಯ ಇಲ್ಲ ಎಂಬುದು ಕಾಂಗ್ರೆಸ್ ಹೈಕಮಾಂಡ್‌ಗೆ ಗೊತ್ತಿದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದ್ದಾರೆ.
ಎಸ್‌ಎಂ ಕೃಷ್ಣ ಮತ್ತು ಹಿಂದಿನ ಕಾಂಗ್ರೆಸ್ ಸರ್ಕಾರಗಳಲ್ಲಿ ಸಮುದಾಯದ ನಾಲ್ವರು ಸಚಿವರಿದ್ದರು ಎಂದು ಉಲ್ಲೇಖಿಸಿರುವ ಅವರು, ವಿಧಾನಪರಿಷತ್ ಚುನಾವಣೆಯಲ್ಲಿ ಗೆದ್ದು, ಜೆಡಿಎಸ್ ಕೋಟೆ ಒಡೆಯಲು ಎನ್ ಚಲುವರಾಯಸ್ವಾಮಿ ಜತೆಗೂಡಿ ಶ್ರಮಿಸಿದ್ದರಿಂದ ಮಂಡ್ಯದಿಂದ ಕಣಕ್ಕಿಳಿಯಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಇದರ ಜೊತೆಗೆ ಎಸ್‌ಟಿ ಸಮುದಾಯದವರು ಮೂರು ಮತ್ತು ಮುಸ್ಲಿಮರು ಇನ್ನೂ ಮೂರು ಸಚಿವ ಸ್ಥಾನಗಳು ಬೇಕು ಎಂದು ಮನವಿಯಿಟ್ಟಿದ್ದಾರೆ.












Click it and Unblock the Notifications