ಪ್ರಮುಖ 5 ಖಾತೆಗಳಿಗೆ ಡಿಕೆಶಿ ಪಟ್ಟು; 'ನೀ ಕೊಡೆ, ನಾ ಬಿಡೆ'ಯಂತಾದ ಸಚಿವ ಸಂಪುಟ ವಿಸ್ತರಣೆ ಸರ್ಕಸ್
2023ರ ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಮೇ 13ರಂದು ಪ್ರಕಟವಾದಾಗ ಕಾಂಗ್ರೆಸ್ 135 ಸ್ಥಾನಗಳೊಂದಿಗೆ ಸರಳ ಬಹುಮತ ಪಡೆಯಿತು. ಅನಂತರ ಸಿಎಂ ಸ್ಥಾನಕ್ಕಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಮಧ್ಯೆ ಪೈಪೋಟಿ ಏರ್ಪಟ್ಟಿತು.
ಒಂದು ವಾರದ ಬಳಿಕ ಕಾಂಗ್ರೆಸ್ ಹೈಕಮಾಂಡ್ 30:30 ಸೂತ್ರ ಹೆಣೆದು ಮೊದಲು ಸಿದ್ದರಾಮಯ್ಯಗೆ ಮುಖ್ಯಮಂತ್ರಿಯಾಗಲು ಅವಕಾಶ ನೀಡಿದರು. ಎರಡೂವರೆ ವರ್ಷದ ಬಳಿಕ ಡಿ.ಕೆ. ಶಿವಕುಮಾರ್ ಸಿಎಂ ಆಗಲು ವಾಗ್ದಾನ ನೀಡಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ.

ಮೇ 20ರಂದು ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿ.ಕೆ. ಶಿವಕುಮಾರ್ ಜೊತೆ 8 ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸರ್ಕಾರ ರಚಿಸಿ ಒಂದು ವಾರ ಕಳೆದರೂ ಇನ್ನೂ ಯಾರೋಬ್ಬರಿಗೂ ಖಾತೆ ಹಂಚಿಕೆ ಮಾಡಿಲ್ಲ.
ಇದೇ ವೇಳೆ ಸಚಿವ ಸಂಪುಟ ವಿಸ್ತರಣೆ ಜಟಾಪಟಿ ಮಾತ್ರ ಇನ್ನೂ ಮುಂದುವರೆದಿದ್ದು, ಇದಕ್ಕಾಗಿ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಶುರುವಾದಂತೆ ಕಾಣುತ್ತಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ತಮ್ಮದೇ ಆದ ಪ್ರತ್ಯೇಕ ಪಟ್ಟಿಗಳನ್ನು ತಯಾರಿಸಿಕೊಂಡು ದೆಹಲಿಗೆ ಹೋಗಿದ್ದಾರೆ.

ಇದೇ ವೇಳೆ ಪ್ರಮುಖ 5 ಖಾತೆಗಳಿಗಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಹೈಕಮಾಂಡ್ ಎದುರು ಪಟ್ಟು ಹಿಡಿದಿದ್ದಾರೆ ಎನ್ನುವ ವಿಚಾರ ತಿಳಿದುಬಂದಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಜೊತೆಗಿನ ಸಭೆಯಲ್ಲಿ ಪ್ರಮುಖ ಐದು ಖಾತೆಗಳು ತನಗೆ ಹಾಗೂ ತಮ್ಮ ಆಪ್ತರಿಗೆ ನೀಡಬೇಕು ಎಂದು ಡಿ.ಕೆ. ಶಿವಕುಮಾರ್ ಬೇಡಿಕೆ ಇಟ್ಟಿದ್ದಾರೆ.
ಬೆಂಗಳೂರು ಅಭಿವೃದ್ಧಿ, ಜಲಸಂಪನ್ಮೂಲ, ಇಂಧನ, ಗೃಹ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಬೇಕೆಂದು ಡಿ.ಕೆ. ಶಿವಕುಮಾರ್ ಪಟ್ಟು ಹಿಡಿದಿದ್ದಾರೆ.

ತನಗೆ ಬೆಂಗಳೂರು ಅಭಿವೃದ್ಧಿ ಮತ್ತು ಜಲಸಂಪನ್ಮೂಲ ಖಾತೆ ನೀಡಬೇಕೆಂದು ಕೇಳಿದ್ದರೆ, ತಮ್ಮ ಆಪ್ತ ಶಾಸಕರಿಗಾಗಿ ಇಂಧನ, ಗೃಹ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ನೀಡಬೇಕೆಂದು ಡಿಸಿಎಂ ಡಿ.ಕೆ. ಶಿವಕುಮಾರ್ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಸಿಎಂ ಸ್ಥಾನಕ್ಕೆ ಪಟ್ಟು ಹಿಡಿದಿದ್ದ ಡಿ.ಕೆ. ಶಿವಕುಮಾರ್‌ಗೆ ಡಿಸಿಎಂ ಹುದ್ದೆ ನೀಡಿ ಸಮಾಧಾನ ಮಾಡಲಾಗಿತ್ತು. ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡಿದ್ದ ಡಿಕೆಶಿ, ಒಂದೇ ಡಿಸಿಎಂ ಹುದ್ದೆ ಸೃಷ್ಟಿಸಬೇಕು, ಎರಡು ಅಥವಾ ಮೂರನೇ ಡಿಸಿಎಂ ಹುದ್ದೆ ಬೇಡವೆಂದು ಎಂದು ಹಠ ಹಿಡಿದಿದ್ದರು.
ಇದೀಗ ಸಚಿವ ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆ ಜಟಾಪಟಿ ನಡೆಯುತ್ತಿದ್ದು, ಯಾವ ಶಾಸಕರಿಗೆ ಅದೃಷ್ಟ ಒಲಿಯಲಿದೆ ಎಂದು ಕಾದು ನೋಡಬೇಕಿದೆ. ಇದಾದ ನಂತರ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಹಂಚಿಕೆಯ ಬಗ್ಗೆಯೂ ಮತ್ತೊಂದು ಸುತ್ತಿನ ಜಟಾಪಟಿಗೆ ರಾಜ್ಯದ ಜನರು ಸಾಕ್ಷಿಯಾಗಲಿದ್ದಾರೆ.












Click it and Unblock the Notifications