Karnataka Bypolls: ಇಂದು ದಾವಣಗೆರೆ ದಕ್ಷಿಣ-ಬಾಗಲಕೋಟೆ ಉಪಚುನಾವಣೆ ಮತದಾನ: ಪ್ರತಿಷ್ಠೆಯ ಕಣದಲ್ಲಿ ಗೆಲುವು ಯಾರಿಗೆ?
ರಾಜ್ಯ ರಾಜಕಾರಣದ ದೃಷ್ಟಿಯಿಂದ ಅತ್ಯಂತ ಕುತೂಹಲ ಕೆರಳಿಸಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಇಂದು (ಏಪ್ರಿಲ್ 9) ಮತದಾನ ನಡೆಯುತ್ತಿದೆ. ರಾಜ್ಯದ ಆಡಳಿತಾರೂಢ ಮತ್ತು ವಿರೋಧ ಪಕ್ಷಗಳಿಗೆ ಈ ಚುನಾವಣೆ ಕೇವಲ ಒಂದು ಸ್ಥಾನದ ಗೆಲುವಲ್ಲ, ಬದಲಾಗಿ ತಮ್ಮ ಅಸ್ತಿತ್ವ ಮತ್ತು ವರ್ಚಸ್ಸನ್ನು ಸಾಬೀತುಪಡಿಸುವ 'ಪ್ರತಿಷ್ಠೆಯ ಕಣ'ವಾಗಿ ಮಾರ್ಪಟ್ಟಿದೆ.
ಶಾಮನೂರು ಕುಡಿ vs ಸಾಮಾನ್ಯ ಕಾರ್ಯಕರ್ತ
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಿಭಿನ್ನ ಸ್ವರೂಪದ ಪೈಪೋಟಿ ಏರ್ಪಟ್ಟಿದೆ. ಕರ್ನಾಟಕ ರಾಜಕಾರಣದ ಭೀಷ್ಮ ಎಂದೇ ಕರೆಯಲ್ಪಡುವ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ. ಶಾಮನೂರು ಕುಟುಂಬದ ಭದ್ರಕೋಟೆಯಾಗಿರುವ ಇಲ್ಲಿ ಯುವ ನಾಯಕತ್ವವನ್ನು ತರುವ ಉದ್ದೇಶದಿಂದ ಕಾಂಗ್ರೆಸ್ ಇವರನ್ನು ಕಣಕ್ಕಿಳಿಸಿದೆ. ಕುಟುಂಬದ ಸುದೀರ್ಘ ರಾಜಕೀಯ ಅನುಭವ ಮತ್ತು ಕ್ಷೇತ್ರದಲ್ಲಿರುವ ಅಭಿಮಾನಿ ಬಳಗ ಇವರಿಗೆ ಪ್ಲಸ್ ಪಾಯಿಂಟ್.

ಬಿಜೆಪಿ ಈ ಬಾರಿ ಯಾವುದೇ ಪ್ರಭಾವಿ ಕುಟುಂಬದ ಹಿನ್ನೆಲೆಯಿಲ್ಲದ, ಸಾಮಾನ್ಯ ಕುಟುಂಬದಿಂದ ಬಂದಿರುವ ಶ್ರೀನಿವಾಸ ಟಿ.ದಾಸಕರಿಯಪ್ಪ ಅವರಿಗೆ ಟಿಕೆಟ್ ನೀಡುವ ಮೂಲಕ ಅಚ್ಚರಿ ಮೂಡಿಸಿದೆ. ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಮನ್ನಣೆ ನೀಡುವ ಮೂಲಕ ಬಿಜೆಪಿ ಇಲ್ಲಿ 'ಸಾಮಾನ್ಯ ವರ್ಸಸ್ ಪ್ರತಿಷ್ಠೆ' ಎಂಬ ಹೋರಾಟವನ್ನು ಸೃಷ್ಟಿಸಿದೆ. ಇದು ಸಾಮಾನ್ಯ ಮತದಾರರ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಎಂಬುದು ಕುತೂಹಲ ಮೂಡಿಸಿದೆ.
ತಂದೆಯ ಪರಂಪರೆ vs ಅನುಭವಿ ನಾಯಕನ ಸವಾಲು
ಉತ್ತರ ಕರ್ನಾಟಕದ ಪ್ರಮುಖ ಕೇಂದ್ರವಾದ ಬಾಗಲಕೋಟೆಯಲ್ಲಿ ಹಳೆ ಮತ್ತು ಹೊಸ ತಲೆಮಾರಿನ ನಾಯಕರ ನಡುವೆ ನೇರ ಹಣಾಹಣಿ ಇದೆ. ಮಾಜಿ ಸಚಿವ ಎಚ್.ವೈ. ಮೇಟಿ ಅವರ ಪುತ್ರ ಉಮೇಶ್ ಮೇಟಿ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಿದ್ದಾರೆ. ತಂದೆಯವರ ರಾಜಕೀಯ ಪ್ರಭಾವ, ಸಮುದಾಯದ ಬೆಂಬಲ ಮತ್ತು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಇವರು ಮತ ಯಾಚಿಸುತ್ತಿದ್ದಾರೆ. ತಂದೆಯ ಉತ್ತರಾಧಿಕಾರಿಯಾಗಿ ಇವರು ರಾಜಕೀಯ ಪ್ರವೇಶಕ್ಕೆ ಈ ಚುನಾವಣೆ ಮುಖ್ಯ ವೇದಿಕೆಯಾಗಿದೆ.
ಬಿಜೆಪಿಯಿಂದ ಕಣಕ್ಕಿಳಿದಿರುವ ವೀರಣ್ಣ ಚರಂತಿಮಠ ಕ್ಷೇತ್ರದ ಮಾಜಿ ಶಾಸಕರು ಮತ್ತು ಹಿರಿಯ ನಾಯಕರು. ಬಾಗಲಕೋಟೆಯಲ್ಲಿ ತಮ್ಮದೇ ಆದ ಶಿಕ್ಷಣ ಸಂಸ್ಥೆಗಳು ಮತ್ತು ಸಾಮಾಜಿಕ ಕಾರ್ಯಗಳ ಮೂಲಕ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಇವರ ಅನುಭವ ಮತ್ತು ಕ್ಷೇತ್ರದ ಮೇಲಿರುವ ಹಿಡಿತವು ಉಮೇಶ್ ಮೇಟಿ ಅವರಿಗೆ ದೊಡ್ಡ ಸವಾಲಾಗಿದೆ.

ಅನುಕಂಪದ ಅಲೆಯಲ್ಲಿ ಕೈ ಅಭ್ಯರ್ಥಿಗಳು
ಶಾಮನೂರು ಶಿವಶಂಕರಪ್ಪ ಹಾಗೂ ಎಚ್.ವೈ.ಮೇಟಿ ಅವರ ನಿಧನದಿಂದ ಎರಡೂ ಸ್ಥಾನಗಳು ತೆರವಾಗಿ ಉಪಚುನಾವಣೆ ನಡೆಯುತ್ತಿದೆ. ಅಲ್ಲದೆ ಇವರ ಕುಟುಂಬದ ಕುಡಿಗಳೇ ಕಾಂಗ್ರೆಸ್‌ನಿಂದ ಕಣಕ್ಕಿಳಿದಿರುವುದು ಕುತೂಹಲ ಮೂಡಿಸಿದೆ. ಈ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಮುಖ್ಯಮಂತ್ರಿಗಳು ಸೇರಿದಂತೆ ರಾಜ್ಯ ಮಟ್ಟದ ಪ್ರಮುಖ ನಾಯಕರು ಭರ್ಜರಿ ಪ್ರಚಾರ ನಡೆಸಿದ್ದಾರೆ. ಆಡಳಿತ ಪಕ್ಷಕ್ಕೆ ತನ್ನ ಜನಪ್ರಿಯತೆಯನ್ನು ಉಳಿಸಿಕೊಳ್ಳುವ ಸವಾಲಿದ್ದರೆ, ವಿರೋಧ ಪಕ್ಷಕ್ಕೆ ಸರ್ಕಾರದ ವಿರುದ್ಧದ ಅಸಮಾಧಾನವನ್ನು ಮತಗಳನ್ನಾಗಿ ಪರಿವರ್ತಿಸುವ ತವಕವಿದೆ. ಜಾತಿ ಸಮೀಕರಣ ಮತ್ತು ಸ್ಥಳೀಯ ಪ್ರಭಾವಿ ನಾಯಕರ ಬೆಂಬಲ ಯಾರ ಕಡೆಗಿದೆ ಎಂಬುದು ಅಂತಿಮ ಫಲಿತಾಂಶದಲ್ಲಿ ನಿರ್ಣಾಯಕವಾಗಲಿದೆ.
ಚುನಾವಣಾ ಆಯೋಗವು ಮತದಾನ ಶಾಂತಿಯುತವಾಗಿ ನಡೆಯಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿ ಮತದಾನ ನಡೆಯುತ್ತಿದ್ದು, ಮತದಾರರನ್ನು ಸೆಳೆಯುವ ಯಾವುದೇ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಫ್ಲೈಯಿಂಗ್ ಸ್ಕ್ವಾಡ್‌ಗಳು ನಿರಂತರ ನಿಗಾ ಇರಿಸಿವೆ. ಇಂದು ಬೆಳಿಗ್ಗೆಯಿಂದಲೇ ಮತದಾನ ಶುರುವಾಗಲಿದೆ. ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದ್ದು, ಸ್ಪಷ್ಟ ಚಿತ್ರಣ ಸಿಗಲಿದೆ. ಮೇ 4ರಂದು ಹೊರಬೀಳಲಿರುವ ಫಲಿತಾಂಶವು ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸುವುದಂತೂ ಖಚಿತ.












Click it and Unblock the Notifications