ಕಾಂಗ್ರೆಸ್‌ಗೆ ಈ 3 ಕಾರಣಕ್ಕೆ ಉಪ ಚುನಾವಣೆ ಸಖತ್ ಮುಖ್ಯ, ಏನದು
ಕಾಂಗ್ರೆಸ್‌ಗೆ ಕರ್ನಾಟಕದಲ್ಲಿ ನಡೆಯಲಿರುವ ಮೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗಳು ಮರ್ಯಾದೆ ಪ್ರಶ್ನೆ. ರಾಜ್ಯದಲ್ಲಿ ಅಧಿಕಾರದಲ್ಲಿ ಇರುವ ಪಕ್ಷ ಸೋತರೆ ಅದು ವಿರೋಧ ಪಕ್ಷಗಳಿಗೆ ಬಹುದೊಡ್ಡ ಅಸ್ತ್ರವೇ ಆಗಲಿದೆ. ಸಾಮಾನ್ಯವಾಗಿ ಉಪ ಚುನಾವಣೆಗಳಲ್ಲಿ ಆಡಳಿತರೂಢ ಪಕ್ಷದ ಅಭ್ಯರ್ಥಿಯೇ ಗೆಲ್ಲುತ್ತಾರೆ. ಆದರೆ, ಕರ್ನಾಟಕದಲ್ಲಿ ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಎರಡು ವರ್ಷದ ಒಳಗೇ ಸಣ್ಣ ಪ್ರಮಾಣದ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಿದೆ ಎನ್ನುವ ಆರೋಪವನ್ನು ವಿರೋಧ ಪಕ್ಷಗಳು ಮಾಡಿವೆ. ಹೀಗಾಗಿ, ಈ ಬಾರಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲ್ಲೇ ಬೇಕಿದೆ. ಆದರೆ, ಕಾಂಗ್ರೆಸ್ ಸರ್ಕಾರವೇ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದರೂ, ಉಪ ಚುನಾವಣೆ ಗೆಲ್ಲುವುದು ಅಷ್ಟೊಂದು ಸುಲಭವಲ್ಲ.

ವಿರೋಧ ಪಕ್ಷಗಳ ಡ್ಯಾಮೇಜ್: ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಲು ಸಾಲು ಹಗರಣ ಹಾಗೂ ಭ್ರಷ್ಟಾಚಾರ ಆರೋಪಗಳು ಕೇಳಿ ಬರುತ್ತಿವೆ. ಮುಡಾ (ಮೈಸೂರು ಅಭಿವೃದ್ಧಿ ಪ್ರಾಧಿಕಾರ)ದಿಂದ ಬದಲಿ ನಿವೇಶನ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ಹಗರಣ ಹಾಗೂ ಖರ್ಗೆ ಟ್ರಸ್ಟ್ ನಿವೇಶನ ಸೇರಿದಂತೆ ಹಲವು ವಿಷಯಗಳು ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಇಮೇಜ್‌ಗೆ ಡ್ಯಾಮೇಜ್ ಮಾಡಿವೆ. ಈ ಹಗರಣ ಹಾಗೂ ಭ್ರಷ್ಟಾಚಾರ ಆರೋಪಗಳನ್ನು ವಿರೋಧ ಪಕ್ಷಗಳು ಚೆನ್ನಾಗಿಯೇ ಬಳಿಸಿಕೊಂಡಿವೆ.
ಈ ವಿಷಯದಲ್ಲಿ ನಿರಂತರ ಹೋರಾಟ ಹಾಗೂ ಪಾದಯಾತ್ರೆಯನ್ನು ಮಾಡುವ ಮೂಲಕ ಸಿದ್ದರಾಮಯ್ಯ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಇದರಿಂದ ಸರ್ಕಾರಕ್ಕೆ ದೊಡ್ಡ ಮಟ್ಟದಲ್ಲೇ ಡ್ಯಾಮೇಜ್ ಆಗಿದೆ. ಇದೇ ವಿಷಯವನ್ನು ಇಟ್ಟುಕೊಂಡೇ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಹಾಕಲು ಬಿಜೆಪಿ ಮುಂದಾಗಿದೆ. ಅಲ್ಲದೇ ಇದೀಗ ಬೆಂಗಳೂರು ಹಾಗೂ ರಾಜ್ಯದಲ್ಲಿ ಭಾರೀ ಮಳೆಯಿಂದ ಹಲವು ಅವಾಂತರ, ಜೀವ ಹಾನಿಯೂ ಆಗಿದೆ. ಇದೇ ವಿಷಯಗಳನ್ನು ಬಿಜೆಪಿ ಉಪ ಚುನಾವಣೆಯಲ್ಲಿ ಪ್ರಸ್ತಾಪಿಸುವ ಸಾಧ್ಯತೆ ಇದೆ. ಹೀಗಾಗಿ ಕಾಂಗ್ರೆಸ್ ಎಚ್ಚರಿಕೆಯಿಂದ ನಿರ್ಣಯ ತೆಗೆದುಕೊಳ್ಳುತ್ತಿದೆ.
ಸಂಡೂರು, ಶಿಗ್ಗಾವಿ ಹಾಗೂ ಚನ್ನಪಟ್ಟಣದಲ್ಲಿ ನಡೆಯಲಿರುವ ಉಪ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಈ ಮೂರು ಕಾರಣಗಳಿಂದ ಭಾರೀ ಇಪಾರ್ಟೆಂಟ್ ಆಗಲಿದೆ. ಅದೇನು ಎನ್ನುವ ವಿವರ ಮುಂದಿದೆ.
ಉತ್ತಮ ಆಡಳಿತದ ಪ್ರಶ್ನೆ: ಕಾಂಗ್ರೆಸ್‌ಗೆ ಈ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಅತ್ಯಂತ ಮುಖ್ಯವಾಗಿರುವುದು ಉತ್ತಮ ಆಡಳಿತದ ಪ್ರಶ್ನೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಉತ್ತಮ ಆಡಳಿತ, ಕಾನೂನು ಮತ್ತು ಸುವ್ಯವಸ್ಥೆ ಸರಿ ಇಲ್ಲ ಹಾಗೂ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎನ್ನುವುದು ಸೇರಿದಂತೆ ಹಲವು ಆರೋಪಗಳನ್ನು ವಿರೋಧ ಪಕ್ಷಗಳು ಮಾಡಿವೆ.
ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಗಳು ಸೋತರೆ ಅಥವಾ ಹಿನ್ನಡೆಯಾದರೆ, ಬಿಜೆಪಿ - ಜೆಡಿಎಸ್ ಆರೋಪಗಳು ಸತ್ಯ ಎನ್ನುವ ಅಭಿಪ್ರಾಯ ಮೂಡಲಿದೆ. ಅಲ್ಲದೇ ರಾಜ್ಯ ಕಾಂಗ್ರೆಸ್ ವಿರುದ್ಧ ಆಡಳಿತ ವಿರೋಧಿ ಅಲೆ ಇದೆ. ಕಾಂಗ್ರೆಸ್ ಆಡಳಿತದ ವಿರುದ್ಧ ಜನಾಕ್ರೋಶವಿದೆ ಎಂದು ಬಿಜೆಪಿ ಬಿಂಬಿಸಲಿದೆ. ಇದು ಕಾಂಗ್ರೆಸ್‌ಗೆ ಕರ್ನಾಟಕದಲ್ಲಿ ಮಾತ್ರವಲ್ಲ. ದೇಶದಾದ್ಯಂತ ಸಮಸ್ಯೆಯನ್ನು ತಂದೊಡ್ಡಲಿದೆ.
ಅಲ್ಲದೇ ರಾಜ್ಯದಲ್ಲಿ ಆಡಳಿತ ಪಕ್ಷದ ನಾಯಕರಲ್ಲಿನ ಕಚ್ಚಾಟ, ಸಿ.ಎಂ ಬದಲಾವಣೆಯ ಚರ್ಚೆಗಳು ಸಹ ಪರಿಣಾಮ ಬೀರಿದೆಯೇ ಎನ್ನುವುದು ಈ ಫಲಿತಾಂಶದಿಂದ ತಿಳಿಯಲಿದೆ.
ಗ್ಯಾರಂಟಿ ಯೋಜನೆ: ರಾಜ್ಯದಲ್ಲಿ ಸಕ್ಸಸ್ ಆಗಿರುವ ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ದೇಶದಾದ್ಯಂತ ಪರಿಚಯಿಸುತ್ತಿದೆ. ಈಚೆಗೆ ಹರಿಯಾಣ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ಪ್ರಣಾಳಿಕೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಪರಿಚಯಿಸಿತ್ತು. ಒಂದೊಮ್ಮೆ ಉಪ ಚುನಾವಣೆಯಲ್ಲಿ ಸೋತರೆ, ಜನ ಗ್ಯಾರಂಟಿ ಯೋಜನೆ ಕೈ ಹಿಡಿಯಲಿಲ್ಲ. ಜನರನ್ನು ಇದು ತಲುಪಲಿಲ್ಲ ಎನ್ನುವ ಅಭಿಪ್ರಾಯ ಮೂಡಲಿದೆ. ಲೋಕಸಭೆಯಲ್ಲೂ ಕಾಂಗ್ರೆಸ್‌ಗೆ ನಿರೀಕ್ಷಿತ ಸ್ಥಾನ ಸಿಕ್ಕಿಲ್ಲ. ಆದರೆ, ಆ ಚುನಾವಣೆಯಲ್ಲಿ ರಾಜ್ಯ ಸರ್ಕಾರದ ಆಡಳಿತ ವಿಮರ್ಶೆಗೆ ಒಳಪಟ್ಟಿರಲಿಲ್ಲ.
ದೇಶದಲ್ಲಿ ಕಾಂಗ್ರೆಸ್ ಇಮೇಜ್ ಉಳಿಸಿಕೊಳ್ಳಲು: ಎಲ್ಲಕ್ಕಿಂತ ಮುಖ್ಯವಾಗಿ ಕಾಂಗ್ರೆಸ್ ರಾಜ್ಯದಲ್ಲಿ ಹಾಗೂ ದೇಶದಲ್ಲಿ ತನ್ನ ಇಮೇಜ್ ಉಳಿಸಿಕೊಳ್ಳಬೇಕಿದೆ. ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದೆ. ಇದೀಗ ಮಹಾರಾಷ್ಟ್ರ ಹಾಗೂ ಜಾರ್ಖಂಡ್‌ನಲ್ಲೂ ವಿಧಾನಸಭೆ ಚುನಾವಣೆ ನಡೆಯಲಿದೆ. ಉಪ ಚುನಾವಣೆಯೂ ಇದೇ ಸಂದರ್ಭದಲ್ಲಿ ನಡೆಯಲಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಇರುವ ರಾಜ್ಯದ ಉಪ ಚುನಾವಣೆಯಲ್ಲೇ ಸೋತಿದೆ ಎನ್ನುವ ಅಭಿಪ್ರಾಯ ಮೂಡಲಿದೆ. ಇದರಿಂದ ಮುಂದೆ ನಡೆಯುವ ದೆಹಲಿ ಸೇರಿದಂತೆ ವಿವಿಧ ವಿಧಾನಸಭೆ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ. ಈ ಎಲ್ಲ ಕಾರಣಗಳಿಂದ ಉಪ ಚುನಾವಣೆ ಮುಖ್ಯವಾಗಿದೆ.












Click it and Unblock the Notifications