'ಕಾಂಗ್ರೆಸ್ ಆಡಳಿತದಿಂದ ರಾಜ್ಯದ ಜನ ತಲೆ ತಗ್ಗಿಸುವಂತಾಗಿದೆ'

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 29 : ಅನ್ವರ್ ಮಾಣಿಪ್ಪಾಡಿ ಅವರು ಸಲ್ಲಿಸಿರುವ ವರದಿ ಮಂಡನೆ ಕುರಿತ ಗದ್ದಲ ಮಂಗಳವಾರದ ಪರಿಷತ್‌ ಕಲಾಪವನ್ನು ಬಲಿ ಪಡೆದಿದೆ. ಸರ್ಕಾರ ಮತ್ತು ಪ್ರತಿಪಕ್ಷಗಳ ಗದ್ದಲದಿಂದಾಗಿ ಕಲಾಪವನ್ನು ಸಂಜೆ 4 ಗಂಟೆಗೆ ಮುಂದೂಡಲಾಗಿದೆ.

ಮಂಗಳವಾರದ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ಬಿಜೆಪಿ, ವಕ್ಫ್ ಮಂಡಳಿ ಆಸ್ತಿ ಕಬಳಿಕೆ ಕುರಿತು ಅನ್ವರ್ ಮಾಣಿಪ್ಪಾಡಿ ಅವರು ಸಲ್ಲಿಸಿರುವ ವರದಿ ಮಂಡನೆ ಮಾಡಬೇಕು ಎಂದು ವಿಷಯ ಪ್ರಸ್ತಾಪಿಸಿತು. ಕಾಂಗ್ರೆಸ್ ಸದಸ್ಯರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. [ಕಲಾಪದಲ್ಲಿ ವಕ್ಫ್ ಆಸ್ತಿ ವಿವಾದ, ವರದಿ ಕೇಳಿದ ರಾಜ್ಯಪಾಲರು]

assembly session

ಇದರಿಂದಾಗಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ವಾಕ್ಸಮರ ನಡೆಯಿತು. ಸದಸ್ಯರ ಗದ್ದಲ ಹೆಚ್ಚಾದ ಕಾರಣ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು, ಕಲಾಪವನ್ನು ಸಂಜೆ 4 ಗಂಟೆಗೆ ಮುಂದೂಡಿದರು. ಸೋಮವಾರವೂ ಕಲಾಪ ವಕ್ಫ್ ಮಂಡಳಿ ಆಸ್ತಿ ವಿವಾದಕ್ಕೆ ಬಲಿಯಾಗಿತ್ತು. [ರಾಜಭವನ ತಲುಪಿದ ವಕ್ಫ್ ಮಂಡಳಿ ಆಸ್ತಿ ವಿವಾದ]

ಜನರು ತಲೆ ತಗ್ಗಿಸುವಂತಾಗಿದೆ : ಕಲಾಪ ಆರಂಭವಾದಾಗ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರು, 'ವರದಿ ಮಂಡನೆ ಮಾಡುವಂತೆ ಹೈಕೋರ್ಟ್, ಸಭಾಪತಿಗಳು ಆದೇಶ ನೀಡಿದರು ಸರ್ಕಾರ ಅದನ್ನು ಪಾಲಿಸುತ್ತಿಲ್ಲ' ಎಂದು ದೂರಿದರು. [ಶಾಸಕರಿಗೆ ಸ್ಪೀಕರ್ ಕಾಗೋಡು ಕೊಟ್ಟ ಸಲಹೆ ಏನು?]

'ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಿಂದಾಗಿ ಕಾನೂನು ನಗೆ ಪಾಟಲಾಗಿದೆ. ಇದರಿಂದಾಗಿ ರಾಜ್ಯದ ಜನರು ಅವಮಾನದಿಂದ ತಲೆ ತಗ್ಗಿಸುವಂತಾಗಿದೆ' ಎಂದು ಈಶ್ವರಪ್ಪ ಆರೋಪಿಸಿದರು.

ಸರ್ಕಾರ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ : 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕ್ರಾಂತಿಯೋಗಿ ಬಸವಣ್ಣನವರಂತೆ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ' ಎಂದು ಬಿಜೆಪಿ ಶಾಸಕ ಗೋವಿಂದ ಕಾರಜೋಳ ವಿಧಾನಸಭೆಯಲ್ಲಿ ಹೇಳಿದರು.

ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಕಾರಜೋಳ ಅವರು, 'ಬಸವಣ್ಣನ ಐಕ್ಯ ಸ್ಥಳ ಕೂಡಲ ಸಂಗಮವನ್ನು ಅಭಿವೃದ್ಧಿಗೊಳಿಸಲು 100 ಕೋಟಿ ರೂ ಕ್ರಿಯಾ ಯೋಜನೆ ರೂಪಿಸಿದರೂ ಹಣ ಬಿಡುಗಡೆಯಾಗಿಲ್ಲ. ಸರ್ಕಾರ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ' ಎಂದರು.

'ಸಿದ್ದರಾಮಯ್ಯ ಅವರು ಕೂಡಲ ಸಂಗಮನಾಥನ ಮೇಲೆ ಪ್ರಮಾಣ ಮಾಡಿ ಗೆದ್ದು ಬಂದಿದ್ದಾರೆ. ಅದಕ್ಕೆ ಅಂದು ಬಸವಣ್ಣನವರು ಅನುಭವ ಮಂಟಪ ರಚಿಸಿದ ರೀತಿಯಲ್ಲೇ ಕಾಂಗ್ರೆಸ್ ಹೈ ಕಮಾಂಡ್ ಎಲ್ಲರನ್ನೂ ಒಟ್ಟಿಗೆ ಸೇರಿಸಿಕೊಂಡು ಹೋಗುವ ಪ್ರಯತ್ನ ನಡೆಸುತ್ತಿದೆ' ಎಂದರು.

ಮಧ್ಯಪ್ರವೇಶಿಸಿದ ಸ್ಪೀಕರ್ ಕಾಗೋಡು ತಿಮ್ಮಪ್ಪ, 'ಸಜ್ಜನರನ್ನೆಲ್ಲಾ ಒಟ್ಟು ಗೂಡಿಸಿಕೊಂಡ ಬಸವಣ್ಣನವರು ಆ ಮೇಲೆ ಕೂಡಲ ಸಂಗಮಕ್ಕೆ ಬಂದು ಏನು ಮಾಡಿಕೊಂಡರು ಎಂದು ಕೆಣಕಿದರು'. ಸ್ಪೀಕರ್ ಅರ್ದಕ್ಕೆ ನಿಲ್ಲಿಸಿದ್ದ ವಾಕ್ಯವನ್ನು ಗೋವಿಂದ ಕಾರಜೋಳ ಪೂರ್ತಿಗೊಳಿಸಿದರು. 'ಬಸವಣ್ಣ ಆತ್ಮಹತ್ಯೆ ಮಾಡಿಕೊಂಡರು. ಆದರೆ ಬಸವಣ್ಣನವರಿಗೆ ಆದ ಗತಿ ಸಿಎಂ ಸಿದ್ದರಾಮಯ್ಯನವರಿಗೆ ಬರಲಾಗದು' ಎಂದರು.

'ಸಿದ್ದರಾಮಯ್ಯ ಅವರ ಎಸಿಬಿಯೂ ಅನುಭವ ಮಂಟಪದ ಮೂಸೆಯಿಂದ ಬಂದಿರುವುದಾ?' ಅಂತಾ ಬಿಜೆಪಿಯ ಸುರೇಶ್ ಕುಮಾರ್ ಅನುಮಾನ ವ್ಯಕ್ತಪಡಿಸಿದಾಗ, 'ಅದು ನಿಮಗೇ ಗೊತ್ತು' ಎಂದು ಹೇಳಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಮತ್ತೆ ಹಳಿ ತಪ್ಪುತ್ತಿದ್ದ ಚರ್ಚೆಯನ್ನು ಸರಿದಾರಿಗೆ ತಂದರು.

ಇದೇ ಸಂದರ್ಭದಲ್ಲಿ ಮಾಜಿ ಸಚಿವ ಗೋವಿಂದ ಕಾರಜೋಳ ಅವರು ತಮ್ಮೊಂದಿಗೆ ತಂದಿದ್ದ ಸೀರೆ ಪ್ರದರ್ಶಿಸಿ, ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರಿಗೆ ವರ್ಷಕ್ಕೆ ಒಂದು ಜತೆ ಸೀರೆಯನ್ನು ವಿತರಿಸುತ್ತಿದೆ. ಆದರೆ ಆ ಸೀರೆ ಅತ್ಯಂತ ಕಳಪೆ ಗುಣಮಟ್ಟದ್ದು ಎಂದರು. ಆಗ ಸೀರೆ ಪ್ರದರ್ಶಿಸದಂತೆ ಕಾಗೋಡು ತಿಮ್ಮಪ್ಪ ಕಾರಜೋಳ ಅವರಿಗೆ ಸೂಚನೆ ನೀಡಿದರು.

'ಶಾಲಾ ಮಕ್ಕಳಿಗೆ ಶೂಸ್ ಭಾಗ್ಯ ಕೊಡುವ ಯೋಜನೆ ಸರಿಯಾಗಿ ಅನುಷ್ಠಾನಗೊಂಡಿಲ್ಲ. ಇದು ಭಾರೀ ಅಕ್ರಮಗಳಿಗೆ ಕಾರಣವಾಗಿದೆ. ಶಾಲೆಗಳ ಮುಖ್ಯೋಪಾಧ್ಯಾಯರು ಕಮೀಷನ್ ಪಡೆದು ಕಳಪೆ ದರ್ಜೆಯ ಶೂಸ್‍ಗಳನ್ನು ವಿತರಿಸುತ್ತಿದ್ದಾರೆ' ಎಂದು ಕಾರಜೋಳ ಆರೋಪಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka Budget session 2016 : Tuesday March 29 highlights. What happened in the Assembly today?.
Please Wait while comments are loading...