ಬುಧವಾರದ ವಿಧಾನಸಭೆ ಕಲಾಪದ ಮುಖ್ಯಾಂಶಗಳು
ಬೆಂಗಳೂರು, ಮಾರ್ಚ್, 25 : ಕಂದಾಯ ಇಲಾಖೆಯ ಕಾರ್ಯವೈಖರಿಗೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಡತ ವಿಲೇವಾರಿಗೆ 4 ವರ್ಷಗಳು ಬೇಕೆ? ಕಡತಕ್ಕೆ ಪೂಜೆ ಮಾಡಿ ಎಂದು ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು.
ಬುಧವಾರದ ವಿಧಾನಸಭೆ ಕಲಾಪದಲ್ಲಿ ಶಾಸಕ ತಿಪ್ಪಾರೆಡ್ಡಿ ಅವರು, ಚಿತ್ರದುರ್ಗದ ಜಾಲಿಕಟ್ಟೆ ಗ್ರಾಮದಲ್ಲಿನ ಜಮೀನು ಹಸ್ತಾಂತರವಾಗಿಲ್ಲ ಎಂದು ಸದನದಲ್ಲಿ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಉತ್ತರ ನೀಡಿದ ವಸತಿ ಸಚಿವ ಅಂಬರೀಶ್ ಜಾಲಿಕಟ್ಟೆ ಗ್ರಾಮದಲ್ಲಿ 64 ಎಕರೆ ಜಮೀನು ಗುರುತಿಸಲಾಗಿದೆ. ಅದರೆ ಆ ಕಡತವಿನ್ನೂ ಕಂದಾಯ ಇಲಾಖೆಯಿಂದ ವಸತಿ ಇಲಾಖೆಗೆ ಹಸ್ತಾಂತರವಾಗಿಲ್ಲ ಎಂದರು. [ಮಂಗಳವಾದ ಕಲಾಪ : ಸದನದ ಸ್ವಾರಸ್ಯಗಳು]

ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು, ಕಡತ ವಿಲೇವಾರಿಗೆ 4 ವರ್ಷ ಬೇಕೆ? ಎಂದು ಕಂದಾಯ ಇಲಾಖೆ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಕಡತ ವಿಲೇವಾರಿ ಮಾಡದೆ ಪೂಜೆ ಸಲ್ಲಿಸಿ ಎಂದು ಚಾಟಿ ಬೀಸಿದರು.
ಮಾ.28ರಂದು ಶಾಸಕರ ಸಭೆ : ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಒದಗಿಸಲು ಅಗತ್ಯವಿರುವ ಕ್ರಿಯಾ ಯೋಜನೆ ರೂಪಿಸಲು ಮಾ.28ರಂದು ಆಯಾ ಕ್ಷೇತ್ರಗಳ ಶಾಸಕರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಸಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಬಾದಾಮಿ ಅಭಿವೃದ್ಧಿಗಾಗಿ 20 ಕೋಟಿ ಯೋಜನೆ : ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣವನ್ನು ಪಾರಂಪರಿಕ ನಗರವಾಗಿ ಅಭಿವೃದ್ಧಿಪಡಿಸಲು 20 ಕೋಟಿ ರೂ. ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ಜೆ.ಟಿ.ಪಾಟೀಲ್ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಐದು ವರ್ಷಗಳಲ್ಲಿ ಎತ್ತಿನಹೊಳೆ ಯೋಜನೆ ಪೂರ್ಣ : ಎತ್ತಿನಹೊಳೆ ನೀರಾವರಿ ಯೋಜನೆಯನ್ನು ಮುಂದಿನ ಐದು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ವಿಧಾನಪರಿಷತ್ತಿನಲ್ಲಿ ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಹೇಳಿದರು. ಬಂಗಾರಪೇಟೆ ಶಾಸಕ ವೈ.ಎ.ನಾರಾಯಣಸ್ವಾಮಿ ಪ್ರಶ್ನೆಗೆ ಉತ್ತರ ನೀಡಿದ ಸಚಿವರು. 2014-15ನೇ ಸಾಲಿನಲ್ಲಿ ಈ ಯೋಜನೆಗೆ 1,143 ಕೋಟಿ ರೂ. ಖರ್ಚು ಮಾಡಲಾಗಿದೆ. ನಿಗದಿ ಮಾಡಿರುವ 12,600 ಕೋಟಿ ರೂ.ಗಳನ್ನು ಸರ್ಕಾರ ಖರ್ಚು ಮಾಡಿ ಬಯಲುಸೀಮೆಗೆ ನೀರು ತರಲು ಬದ್ಧವಾಗಿದೆ ಎಂದರು.












Click it and Unblock the Notifications