karnataka budget 2025: ಬಜೆಟ್ ಬಳಿಕ ಸಿಎಂ ಬದಲಾವಣೆ ಸುಳಿವು ಕೊಟ್ಟ ಅಶೋಕ್
ಇಂದಿನಿಂದ ಬಜೆಟ್ ಅಧಿವೇಶನ ಶುರುವಾಗಿದೆ. ರಾಜ್ಯಪಾಲ ಥಾವರ್‌ಚಂದ್ ಗೆಹಲೋಟ್ ಅವರು ಅಧಿವೇಶನದ ಪೂರ್ವಭಾವಿಯಾಗಿ ಭಾಷಣ ಮಾಡಿದ್ದಾರೆ. ಈ ಭಾಷಣದಲ್ಲಿ ರಾಜ್ಯಪಾಲರು ಉಲ್ಲೇಖಿಸಿದ ಅಂಶಗಳ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಅವರು ಅನುಮಾನ ವ್ಯಕ್ತಪಡಿಸಿ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರ ಏನೂ ಕೆಲಸ ಮಾಡಿಲ್ಲ ಅನ್ನೋದು ರಾಜ್ಯಪಾಲರ ಭಾಷಣದಲ್ಲೇ ಸ್ಪಷ್ಟವಾಗಿದೆ ಎಂದಿದ್ದಾರೆ.
ಸಾಮಾನ್ಯವಾಗಿ ರಾಜ್ಯಪಾಲರ ಭಾಷಣ ಸರ್ಕಾರದ ಒಂದು ವರ್ಷದ ಸಾಧನೆ ಮತ್ತು ಮುಂದಿನ ವರ್ಷಕ್ಕೆ ಇರಬೇಕಾದ ಮುನ್ನೋಟದ ಗುರಿಗಳನ್ನು ಒಳಗೊಂಡಿರುತ್ತದೆ. ಆದರೆ ಈ ಕಾಂಗ್ರೆಸ್ ಸರ್ಕಾರ ಕಳೆದ ಒಂದು ವರ್ಷದಿಂದ ಏನನ್ನೂ ಮಾಡಿಲ್ಲ. ಮುಂದೆ ಏನನ್ನಾದರೂ ಮಾಡಲು ಯಾವ ದೂರದೃಷ್ಟಿಯೂ ಹೊಂದಿಲ್ಲ ಎಂಬುದಕ್ಕೆ ರಾಜ್ಯಪಾಲರ ಭಾಷಣವೇ ಸಾಕ್ಷಿ ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ರಾಜ್ಯಪಾಲರ ಭಾಷಣದ ಮೂಲಕ ಸುಳ್ಳು ಹೇಳಿಸಿ, ಅವರ ದಾರಿ ತಪ್ಪಿಸಿದೆ. ಅಲ್ಲದೆ, ನಾಡಿನ ಜನರ ದಿಕ್ಕನ್ನೂ ತಪ್ಪಿಸಿದೆ. ರಾಜ್ಯಪಾಲರ ಭಾಷಣ ಕೇಳಿದರೆ ಈ ಸರ್ಕಾರಕ್ಕೆ ಯಾವ ಗೊತ್ತು ಗುರಿಯಿಲ್ಲ ಎಂಬುದಂತೂ ಸ್ಪಷ್ಟವಾಗಿದೆ. ಕನ್ನಡಿಗರನ್ನು ಸಾಲದ ಪ್ರಪಾತಕ್ಕೆ ತಳ್ಳಿದ್ದರ ಬಗ್ಗೆ ಇಂದಿನ ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತಾಪವೇ ಇಲ್ಲ ಎಂದು ಆರ್.ಅಶೋಕ್ ದೂರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಕೆಲವು ಯೋಜನೆಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಯೋಜನೆಗಳು ಎಂದು ಬಿಂಬಿಸಿಕೊಂಡಿರುವುದೇ ದೊಡ್ಡ ಸಾಧನೆಯಾಗಿದೆ. ಯಾವುದೇ ಸರ್ಕಾರಕ್ಕೆ ಪ್ರಮುಖವಾಗಿ ಎರಡು ಆದ್ಯತೆಗಳಿರುತ್ತೆ. ಒಂದು ಜನಕಲ್ಯಾಣ, ಮತ್ತೊಂದು ಅಭಿವೃದ್ಧಿ. ಆದರೆ, ಕಾಂಗ್ರೆಸ್ ಸರ್ಕಾರ ಈ ಎರಡರ ನಡುವೆ ಸಮತೋಲನ ಸಾಧಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ದೂರಿದ್ದಾರೆ.

ಒಟ್ಟಿನಲ್ಲಿ ನಾನು ನನ್ನ ರಾಜಕೀಯ ಜೀವನದಲ್ಲೇ ಇಷ್ಟೊಂದು ನಿಸ್ಸಾರವಾದ ರಾಜ್ಯಪಾಲರ ಭಾಷಣವನ್ನು ಎಂದೂ ಕೇಳಿರಲಿಲ್ಲ. ಏನನ್ನೂ ಮಾಡದ, ಮಾಡಲಾಗದ ಸರ್ಕಾರವನ್ನು ಆರಿಸಿ ಕಳುಹಿಸಿದ್ದು, ಈ ನಾಡಿನ ದೌರ್ಭಾಗ್ಯ ಎಂಬುದು ರಾಜ್ಯಪಾಲರ ಭಾಷಣದಿಂದ ರಾಜ್ಯದ ಜನರಿಗೆ ಇಂದು ಮನವರಿಕೆಯಾಗಿದೆ ಎಂದು ಅಶೋಕ್ ಹೇಳಿದ್ದಾರೆ.
ಹದಿನಾರು ಬಜೆಟ್ ಮಂಡಿಸಿದರೇನು?: ಸತ್ಯವಿಲ್ಲದ ಭಕ್ತಿಯ ಸಾವಿರ ವರುಷ ಮಾಡಿದರೇನು? ನಿಷ್ಠೆಯಿಲ್ಲದ ಪೂಜೆಯನೇಸುಕಾಲ ಮಾಡಿದರೇನು? ಎಂಬ ವಚನಾಮೃತದಂತೆ, ಹುರುಳಿಲ್ಲದ ಬಜೆಟ್ ಹದಿನಾರು ಮಂಡಿಸಿದರೇನು? ಗ್ಯಾರೆಂಟಿ ಇಲ್ಲದ ಕುರ್ಚಿಯಿಂದ ಪೊಳ್ಳು ಆಯವ್ಯಯ ಭಾಷಣ ಓದಿದರೇನು? ಎಂದು ಸಿಎಂ ಸಿದ್ದರಾಮಯ್ಯ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯ ಅವರು ಮಂಡಿಸಲಿರುವ 16ನೇ ಬಜೆಟ್‌ನಿಂದ ಕನ್ನಡಿಗರಿಗೆ ಏನೂ ನಿರೀಕ್ಷೆಗಳಿಲ್ಲ. ಅಸಲಿಗೆ ಸಿದ್ದರಾಮಯ್ಯನವರು ಮಂಡಿಸಲಿರುವ ಈ ಸಾಲಿನ ಬಜೆಟ್ ಅನ್ನು ಅನುಷ್ಠಾನ ಮಾಡಲು ಅವರು ಸಿಎಂ ಆಗಿ ಮುಂದುವರೆಯುತ್ತಾರೋ ಇಲ್ಲವೋ ಎನ್ನುವುದನ್ನ ಮೊದಲು ಕರ್ನಾಟಕದ ಜನತೆಗೆ ಸ್ಪಷ್ಟಪಡಿಸಬೇಕು ಎಂದು ಅಶೋಕ್ ಸಿಎಂ ಕಾಲೆಳೆದಿದ್ದಾರೆ.
ಜೆಡಿಎಸ್-ಬಿಜೆಪಿಯಿಂದ ಪಾದಯಾತ್ರೆ
ಅಲ್ಲದೆ, ಗೌರವಾನ್ವಿತ ರಾಜ್ಯಪಾಲರ ಅಧಿಕಾರಕ್ಕೆ ಮತ್ತು ಕುಲಾಧಿಪತಿ ಸ್ಥಾನಕ್ಕೆ ಕತ್ತರಿ ಹಾಕಿದೆ ಎಂದು ಆರೋಪಿಸಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ನಮ್ಮ ಶಾಸಕರುಗಳು ಶಾಸಕರ ಭವನದಿಂದ ವಿಧಾನಸೌಧದವರೆಗೆ ಪಾದಯಾತ್ರೆಯ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಜೆಡಿಎಸ್ ಪಕ್ಷದ ಶಾಸಕಾಂಗ ನಾಯಕ ಸುರೇಶ್ ಬಾಬು ಹಾಗೂ ಬಿಜೆಪಿ, ಜೆಡಿಎಸ್ ಪಕ್ಷಗಳ ಮಾಜಿ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.












Click it and Unblock the Notifications