Karnataka Budget 2023: ಮಾನವ- ಪ್ರಾಣಿ ಸಂಘರ್ಷ ನಿಯಂತ್ರಣಕ್ಕೆ ಸರ್ಕಾರದ ಕ್ರಮಗಳು
ಮಾನವ - ಆನೆ ಸಂಘರ್ಷವನ್ನು ತಡೆಯುವ ಸಲುವಾಗಿ 72 ಕಿ.ಮೀ. ರೈಲ್ವೆ ಬ್ಯಾರಿಕೇಡ್, 36 ಕಿ.ಮೀ. ಆನೆ ನಿರೋಧಕ ಕಂದಕ, 186 ಕಿ.ಮೀ. ಸೌರಶಕ್ತಿ ಬೇಲಿ ನಿರ್ಮಾಣ ಕಾಮಗಾರಿಗಳು
ಬೆಂಗಳೂರು, ಫೆಬ್ರವರಿ. 17: ರಾಜ್ಯದಲ್ಲಿ ಹುಲಿ, ಚಿರತೆ, ಕಾಡಾನೆ ದಾಳಿ ಪ್ರಕರಣಗಳು ವರದಿಯಾಗುತ್ತಿದ್ದು, ಸರ್ಕಾರ ಮತ್ತು ಅರಣ್ಯ ಇಲಾಖೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ, ಈ ಮಾನವ - ಪ್ರಾಣಿಗಳ ಸಂಘರ್ಷವನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಿಎಂ ಬಸವರಾಜ ಬೊಮ್ಮಾಯಿ ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ.
ಮಾನವ - ಪ್ರಾಣಿ ಸಂಘರ್ಷವನ್ನು ನಿಯಂತ್ರಿಸಲು, ಸಂಘರ್ಷ ಕ್ಷೇತ್ರದಿಂದ ಸೆರೆಹಿಡಿಯಲ್ಪಟ್ಟ ವನ್ಯಪ್ರಾಣಿಗಳನ್ನು, ಅವುಗಳ ನೈಸರ್ಗಿಕ ಆವಾಸ ಸ್ಥಾನ ಪ್ರದೇಶಗಳನ್ನು ಗುರುತಿಸಿ ಬಿಡುಗಡೆ ಮಾಡಲು ಭದ್ರಾ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನ ವನಗಳಲ್ಲಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಕಾಡಾನೆ ಹಾವಳಿ ತಡೆಗಟ್ಟಲು ಚಿಕ್ಕಮಗಳೂರು, ಹಾಸನ, ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಕಾಡಾನೆ ಕಾರ್ಯಪಡೆಯನ್ನು ರಚಿಸಲಾಗಿದೆ. ಇದೇ ಮಾದರಿಯಲ್ಲಿ ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಚಿರತೆ ದಾಳಿ ತಡೆಯಲು ಸಹ ಕಾರ್ಯಪಡೆಯನ್ನು ರಚಿಸಲಾಗಿದೆ. ಈ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹೆಚ್ಚುವರಿಯಾಗಿ 199 ಸಿಬ್ಬಂದಿಗಳನ್ನು ನೇಮಿಸಲು ಅನುಮೋದನೆ ನೀಡಲಾಗಿದೆ.

ಮಾನವ - ಆನೆ ಸಂಘರ್ಷವನ್ನು ಪರಿಣಾಮಕಾರಿಯಾಗಿ ತಡೆಯುವ ಸಲುವಾಗಿ 72 ಕಿ.ಮೀ. ರೈಲ್ವೆ ಬ್ಯಾರಿಕೇಡ್, 36 ಕಿ.ಮೀ. ಆನೆ ನಿರೋಧಕ ಕಂದಕ, 186 ಕಿ.ಮೀ. ಸೌರಶಕ್ತಿ ಬೇಲಿ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿವೆ. 2022-23ನೇ ಸಾಲಿನಲ್ಲಿ ಈ ಕಾಮಗಾರಿಗಳಿಗೆ 150 ಕೋಟಿ ರೂ. ಗಳ ಅನುದಾನ ಒದಗಿಸಲಾಗಿದೆ.
ಪ್ರಪ್ರಥಮ ಬಾರಿಗೆ 100 ಕೋಟಿ ರೂ. ಅನುದಾನದಲ್ಲಿ ಹಸಿರು ಆಯವ್ಯಯವನ್ನು ಘೋಷಿಸಿದ್ದೇನೆ. ಅದರಂತೆ ಪರಿಸರದ ಮೇಲೆ ಮಾನವ ನಿರ್ಮಿತ ಒತ್ತಡಗಳಿಂದ ಉಂಟಾದ ದುಷ್ಪರಿಣಾಮವನ್ನು ಸರಿದೂಗಿಸಲು ವಿವಿಧ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ.
ಈ ಯೋಜನೆಯಡಿ ಬೋಳುಗುಡ್ಡ ಪ್ರದೇಶಗಳ ಪುನಶ್ಚೇತನ, ಕ್ಷೀಣಿಸಿದ ಅರಣ್ಯ ಪ್ರದೇಶದ ಮರುಸ್ಥಾಪನೆ, ಕರಾವಳಿ ಪ್ರದೇಶದಲ್ಲಿ ಕಾಂಡ್ಲಾ ಅರಣ್ಯೀಕರಣ ಮತ್ತು ಶೆಲ್ಟರ್ ಬೆಲ್ಟ್ ನಿರ್ವಹಣೆ ಅಡಿಯಲ್ಲಿ 3,211 ಹೆಕ್ಟೇರ್ ಪ್ರದೇಶದಲ್ಲಿ ಹಾಗೂ ಕೃಷ್ಣಾ ನದಿಯ ಜಲಾನಯನ ಪ್ರದೇಶದಲ್ಲಿ 168 ಕಿ.ಮೀ. ಉದ್ದದ ಅರಣ್ಯೀಕರಣ ಹಾಗೂ 25 ಲಕ್ಷ ಸಸಿಗಳನ್ನು ನೆಡುವ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಈ ಎಲ್ಲಾ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನಕ್ಕೆ ನೆರವಾಗಲು ಹಾಗೂ ಸಮಗ್ರ ಪರಿಸರ ಅಭಿವೃದ್ಧಿಗೆ ಸಂಬಂಧಿಸಿದ ರೂಪುರೇಷೆಗಳನ್ನು ಸಿದ್ಧಪಡಿಸಲು ರಾಜ್ಯದ ಪ್ರಥಮ ಪರಿಸರ ವಿಜ್ಞಾನ ವಿಶ್ವವಿದ್ಯಾಲಯವನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.












Click it and Unblock the Notifications