Karnataka Budget 2023: ರಾಮನಗರದಲ್ಲಿ ರಾಮಮಂದಿರ ನಿರ್ಮಾಣ; ವಿಪಕ್ಷಗಳಿಗೆ ಟಕ್ಕರ್ ಕೊಟ್ಟ ಸಿಎಂ
ಹಳೆ ಮೈಸೂರು ಭಾಗದ ಮೇಲೆ ಕಣ್ಣಿಟಿರುವ ಬಿಜೆಪಿ ಸರ್ಕಾರ ರಾಮನಗರದ ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣ ಮಾಡಲು ತೀರ್ಮಾನಿಸಿದೆ.
ಬೆಂಗಳೂರು,ಫೆಬ್ರವರಿ17: 2023 ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ನಾವೇ ಅಧಿಕಾರವನ್ನ ಹಿಡಿಯಬೇಕು ಎಂದು ಪಣತೊಟ್ಟಿರುವ ಬಿಜೆಪಿ ಸರ್ಕಾರ ಈ ಬಾರಿ ಚುನಾವಣೆಯಲ್ಲಿ ಮತದಾರರ ಮತಗಳನ್ನ ಸೆಳೆಯುವ ನಿಟ್ಟಿನಲ್ಲಿ ಬಜೆಟ್ ನಲ್ಲಿ ಕೆಲವು ಮಹತ್ವದ ಘೋಷಣೆಗಳನ್ನ ಮಾಡಿದೆ.
ಹೌದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಾವು ಮಂಡಿಸುತ್ತಿರುವ ಎರಡನೇ ಬಜೆಟ್‌ನಲ್ಲಿ ಎಲ್ಲಾ ಸಮುದಾಯದ ಮತದಾರರನ್ನು ಸೆಳೆಯುವತ್ತ ಗಮನ ಹರಿಸಿದ್ದು, ಬಜೆಟ್‌ನಲ್ಲಿ ರಾಮನಗರಕ್ಕೆ ವಿಶೇಷ ಕೊಡುಗೆ ನೀಡಲಾಗಿದೆ.
ಹಳೆ ಮೈಸೂರು ಭಾಗದ ಮೇಲೆ ಕಣ್ಣಿಟಿರುವ ಬಿಜೆಪಿ ಸರ್ಕಾರ ರಾಮನಗರದ ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣ ಮಾಡಲು ತೀರ್ಮಾನಿಸಿದೆ. ಇನ್ನೂ ಮಂಚನಬೆಲೆ ಡ್ಯಾಂ ಹಿನ್ನೀರಿನಲ್ಲಿ 10 ಕೋಟಿ ರೂಪಾಯಿ ವೆಚ್ಚದಲ್ಲಿ ಜಂಗಲ್ ಲಾಡ್ಜ್ ರೆಸಾರ್ಟ್ ಸ್ಥಾಪನೆಗೂ ರಾಜ್ಯ ಸರ್ಕಾರ ನಿರ್ಧರಿಸಿದೆ.

ಈಗಾಗಲೇ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಅಶ್ವತ್ಥ್ ನಾರಾಯಣ್ ಅವರು ರಾಮಮಂದಿನ ಕಟ್ಟುವ ನಿಟ್ಟಿನಲ್ಲಿ ಹೇಳಿಕೆ ನೀಡಿದ್ದ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಸರ್ಕಾರದ ವಿರುದ್ದ ವಿಪಕ್ಷ ನಾಯಕರು ಕಿಡಿಕಾರಿದ್ರು. ಆದರೆ, ಇದೀಗ ಬಜೆಟ್ ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ರಾಮಮಂದಿರ ನಿರ್ಮಾಣ ಮಾಡಲು ಘೋಷಣೆ ಮಾಡಿದೆ.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದ ಮಾದರಿಯಲ್ಲೇ ಕರ್ನಾಟಕದಲ್ಲೂ ಮಂದಿರ ನಿರ್ಮಿಸುವ ನಿರ್ಧಾರವನ್ನು ಮುಂದಿನ ವರ್ಷ ಬಜೆಟ್ ಮಂಡಿಸುವ ಸಂದರ್ಭದಲ್ಲಿ ಘೋಷಿಸಲಾಗುವುದು ಎಂದು ಈ ಹಿಂದೆಯೇ ರಾಮನಗರದ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ್ ನಾರಾಯಣ್ ತಿಳಿಸಿದ್ದರು.
ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮ ಮಂದಿರ ಹಾಗೆ ಕರ್ನಾಟಕದಲ್ಲೂ ನಿರ್ಮಿಸ ಬೇಕು. ರಾಮ ಮಂದಿರ ನಿರ್ಮಿಸಲು, ಒಂದು ಅಭಿವೃದ್ಧಿ ಸಮಿತಿಯನ್ನು ರಚಿಸುವಂತೆ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದ ಅಶ್ವತ್ಥ್ ನಾರಾಯಣ್ ಮುಜರಾಯಿ ಖಾತೆ ಸಚಿವ ಶಶಿಕಲಾ ಜೊಲ್ಲೆ ಅವರಿಗೆ ಪತ್ರ ಸಹ ಬರೆದಿದ್ದರು. ರಾಮನಗರದ ಜಿಲ್ಲೆಯಲ್ಲಿರುವ ರಾಮದೇವರ ಬೆಟ್ಟವನ್ನು ದಕ್ಷಿಣ ಭಾರತದ ಅಯೋಧ್ಯೆಯಾಗಿ ಅಭಿವೃದ್ಧಿಪಡಿಸಿ ಅದನ್ನು ಪಾರಂಪರಿಕ ಪ್ರವಾಸಿ ಕ್ಷೇತ್ರವಾಗಿ ಮಾಡಬೇಕು. ರಾಮದೇವರ ಬೆಟ್ಟದಲ್ಲಿ ಮುಜರಾಯಿ ಇಲಾಖೆಗೆ ಸೇರಿರುವ 19 ಎಕರೆ ಪ್ರದೇಶದಲ್ಲಿ ರಾಮ ಮಂದಿರ ನಿರ್ಮಿಸಬೇಕೆಂದು ಎಂದು ಒತ್ತಾಯಿಸಿದ್ದರು.












Click it and Unblock the Notifications