ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

Karnataka Budget 2022 Live Updates: ಸಿಎಂ ಬೊಮ್ಮಾಯಿ ಚೊಚ್ಚಲ ಬಜೆಟ್ ಭಾಷಣ ಮುಕ್ತಾಯ

|
Google Oneindia Kannada News

ಬೆಂಗಳೂರು, ಮಾರ್ಚ್ 4: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರ್ನಾಟಕ ಸರ್ಕಾರದ 2022-23ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾರ್ಚ್ 4ರ ಮಧ್ಯಾಹ್ನ 12.30ಕ್ಕೆ ಚೊಚ್ಚಲ ಬಜೆಟ್ ಮಂಡನೆ ಮಾಡಲಿದ್ದಾರೆ. ಮುಂದಿನ ವರ್ಷ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಇರುವುದರಿಂದ ಬಜೆಟ್‌ ಮೇಲೆ ಸಾಕಷ್ಟು ನಿರೀಕ್ಷೆ ಇದೆ.

ಬಸವರಾಜ ಬೊಮ್ಮಾಯಿ ತಮ್ಮ ಬಜೆಟ್‌ನಲ್ಲಿ 5 ಕ್ಷೇತ್ರಗಳಿಗೆ ಆದ್ಯತೆ ನೀಡುವ ನಿರೀಕ್ಷೆ ಇದೆ. ಕೃಷಿ, ರೈತರ ಕಲ್ಯಾಣ ಮತ್ತು ನಡೆಯುತ್ತಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಮುಖ್ಯಮಂತ್ರಿಗಳು ಹೆಚ್ಚಿನ ಗಮನಹರಿಸುವ ಸಾಧ್ಯತೆ ಇದೆ.

ಬೊಮ್ಮಾಯಿ ಬಜೆಟ್; ರೈತರ ಮೇಲೆ ಹೆಚ್ಚಿನ ಗಮನ?ಬೊಮ್ಮಾಯಿ ಬಜೆಟ್; ರೈತರ ಮೇಲೆ ಹೆಚ್ಚಿನ ಗಮನ?

ಜನರ ಮೇಲೆ ತೆರಿಗೆ ಭಾರವನ್ನು ಹಾಕದೇ, ಬಸ್ ಸೇರಿದಂತೆ ಯಾವುದೇ ಸಾರಿಗೆಗಳ ದರ ಏರಿಕೆ ಮಾಡದೇ, ವಿದ್ಯುತ್ ಸೇರಿದಂತೆ ಇತರ ದರಗಳನ್ನು ಏರಿಕೆ ಮಾಡದೇ ಸಂಪನ್ಮೂಲ ಕ್ರೋಢಿಕರಣಕ್ಕೆ ಬಜೆಟ್‌ನಲ್ಲಿ ಹಣಕಾಸು ಸಚಿವರು ಆದ್ಯತೆ ನೀಡಬೇಕಿದೆ.

Karnataka Budget 2022 ( ಬಜೆಟ್) Live Updates:  CM Basavaraj Bommai Maiden Budget Speech and Highlights

ಬಸವರಾಜ ಬೊಮ್ಮಾಯಿ ಚೊಚ್ಚಲ ಬಜೆಟ್‌ನಲ್ಲಿ ನೀರಾವರಿ, ಕೃಷಿ, ಲೋಕೋಪಯೋಗಿ, ಸಮಾಜ ಕಲ್ಯಾಣ, ಗ್ರಾಮೀಣಾಭೀವೃದ್ಧಿ ಕ್ಷೇತ್ರಗಳಿಗೆ ಆದ್ಯತೆ ನೀಡುವ ನಿರೀಕ್ಷೆ ಇದೆ. ಅದರಲ್ಲೂ ರಾಜ್ಯದ ನೀರಾವರಿ ಯೋಜನೆಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಹೋರಾಟ ಮಾಡುತ್ತಿವೆ. ಆದ್ದರಿಂದ ಈ ವಲಯಕ್ಕೆ ಆದ್ಯತೆ ನೀಡುವ ಅನಿವಾರ್ಯತೆ ಎದುರಾಗಿದೆ.

ಬಸವರಾಜ ಬೊಮ್ಮಾಯಿ ಉತ್ತರ ಕರ್ನಾಟಕ ಭಾಗಕ್ಕೆ ಸೇರಿದ ನಾಯಕರು. ಆದ್ದರಿಂದ ಬಜೆಟ್‌ನಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಹಲವು ಕೊಡುಗೆಗಳನ್ನು ನಿರೀಕ್ಷೆ ಮಾಡಲಾಗಿದೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಗಮನಹರಿಸುವ ಸಾಧ್ಯತೆ ಇದೆ.

Recommended Video

      ಬಿಜೆಪಿ ಬಗ್ಗೆ ಏನೂ ಹೇಳ್ಬೇಡಿ , ಅಟೆನ್ಷನ್ ಸೀಕಿಂಗ್ ಅಷ್ಟೇ ಅವರ ಕೆಲ್ಸ | Oneindia Kannada

      Newest FirstOldest First
      3:42 PM, 4 Mar

      12.30ಕ್ಕೆ ಬಜೆಟ್ ಭಾಷಣ ಆರಂಭಿಸಿದ ಬಸವರಾಜ ಬೊಮ್ಮಾಯಿ 2.30ಕ್ಕೆ ಮುಗಿಸಿದರು. ಬಳಿಕ ಸ್ಪೀಕರ್ ವಿಧಾನಸಭೆ ಕಲಾಪವನ್ನು ಸೋಮವಾರ ಬೆಳಗ್ಗೆ 11 ಗಂಟೆಗೆ ಮುಂದೂಡಿದರು.
      2:25 PM, 4 Mar

      ಈಗಾಗಲೇ ಸರ್ಕಾರ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಹಾಗೂ ಒಕ್ಕಲಿಗ ಅಭಿವೃದ್ಧಿ ನಿಗಮ ರಚನೆ ಮಾಡಿದೆ. ಈ ನಿಗಮಗಳಿಗೆ ತಲಾ 100 ಕೋಟಿ ರೂ. ಅನುದಾನ. ಮರಾಠಾ ಅಭಿವೃದ್ಧಿ ನಿಗಮದ ಕಾರ್ಯಕ್ರಮಗಳಿಗೆ 50 ಕೋಟಿ ರೂ. ಅನುದಾನ. ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿ 50 ಕೋಟಿ ರೂ. ಯೋಜನೆ ಹಾಗೂ ಜೈನ, ಸಿಖ್ ಮತ್ತು ಬೌದ್ಧ ಸಮುದಾಯಗಳ ಅಭಿವೃದ್ಧಿಗೆ 50 ಕೋಟಿ ರೂ. ಯೋಜನೆ ತಯಾರು ಮಾಡಲಾಗುತ್ತದೆ.
      2:23 PM, 4 Mar

      ಉದ್ಯೋಗ ಮತ್ತು ರಫ್ತು ಹೆಚ್ಚಳ ಗುರಿಯೊಂದಿಗೆ ಚಿಕ್ಕಬಳ್ಳಾಪುರದಲ್ಲಿ ಚರ್ಮದ ಬೊಂಬೆ, ಧಾರವಾಡದಲ್ಲಿ ಕಸೂತಿ, ಕೊಪ್ಪಳದಲ್ಲಿ ಕೌದಿ ಮತ್ತು ಕಿನ್ಹಾಳ ಬೊಂಬೆ, ಮೈಸೂರಿನಲ್ಲಿ ಅಗರಬತ್ತಿ, ನವಲಗುಂದದಲ್ಲಿ ಜಮಖಾನಾ, ಚನ್ನಪಟ್ಟಣದಲ್ಲಿ ಆಟಿಕೆ ಹಾಗೂ ಇಳಕಲ್, ಗುಳೇದಗುಡ್ಡ, ಬೆಳಗಾವಿ - ಶಹಾಪುರ, ಶಿಡ್ಲಘಟ್ಟ ಮತ್ತು ಮೊಳಕಾಲ್ಮುರುವಿನಲ್ಲಿ ಸೀರೆ ಮೈಕ್ರೋಕ್ಲಸ್ಟರ್ ಅಭಿವೃದ್ಧಿ ಮಾಡಲಾಗುತ್ತದೆ.
      2:22 PM, 4 Mar

      ತಾಲೂಕು ಮಟ್ಟದಲ್ಲಿ ಸುಸಜ್ಜಿತ ಅಗತ್ಯ ವೈದ್ಯ ಸೇವೆಗಳನ್ನು ಒದಗಿಸಲು ರಾಜ್ಯದ 7 ತಾಲೂಕು ಆಸ್ಪತ್ರೆಗಳನ್ನು 100 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಲಾಗುತ್ತದೆ. ಪ್ರಸ್ತುತ ನೀಡುತ್ತಿರುವ ಉಚಿತ ಡಲಾಲಿಸಿಸ್ ಸೇವೆಯನ್ನು ಮತ್ತಷ್ಟು ಬಲಪಡಿಸಿ ಪ್ರತಿ ಮಾಹೆಗೆ 30 ಸಾವಿರ ಡಯಾಲಿಸಿಸ್ ಸೈಕಲ್‌ಗಳನ್ನು 60 ಸಾವಿರ ಸೈಕಲ್‌ಗಳಿಗೆ ಹೆಚ್ಚಿಸಲಾಗುತ್ತದೆ. ಇದಕ್ಕಾಗಿ 20 ಕೋಟಿ ರೂ. ಗಳ ಹೆಚ್ಚುವರಿ ಅನುದಾನ ನೀಡಲಾಗುತ್ತದೆ.
      2:19 PM, 4 Mar

      ರಾಜ್ಯದ ಪ್ರಮುಖ ನಗರಗಳಲ್ಲಿ 438 ನಮ್ಮ ಕ್ಲಿನಿಕ್ ಸ್ಥಾಪನೆ ಮಾಡಲಾಗುತ್ತದೆ. ಈ ಕ್ಲಿನಿಕ್‌ಗಳಲ್ಲಿ ಅಸಂಕ್ರಾಮಿಕ ರೋಗ ಪತ್ತೆ ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ತಜ್ಞರ ಬಳಿ ಕಳಿಸುವ ಸೇವೆ ನೀಡಲಾಗುತ್ತದೆ. ಬೆಂಗಳೂರು ನಗರದ ಎಲ್ಲಾ ವಾರ್ಡ್‌ಗಳಲ್ಲಿ ಈ ಕ್ಲಿನಿಕ್ ಸ್ಥಾಪನೆ ಮಾಡಲಾಗುತ್ತದೆ.
      2:17 PM, 4 Mar

      ಕೋವಿಡ್ ನಿರ್ವಹಣೆಗೆ ನಮ್ಮ ಸರ್ಕಾರ ಆದ್ಯತೆ ನೀಡಿದೆ. 3ನೇ ಅಲೆ ಸಮರ್ಪಕ ನಿರ್ವಹಣೆಗಾಗಿ 2,240 ಕೋಟಿ ರೂ.ಗಳ ಪೂರಕ ಅನುದಾನ ನೀಡಲಾಗಿದೆ. ರಾಜ್ಯದಲ್ಲಿ 10 ಕೋಟಿಗಿಂತ ಹೆಚ್ಚು ಡೋಸ್ ಲಸಿಕೆ ನೀಡಲಾಗಿದೆ.
      2:15 PM, 4 Mar

      ಮುಖ್ಯಮಂತ್ರಿ ವಿದ್ಯಾರ್ಥಿ ಮಾರ್ಗದರ್ಶಿನಿ ಎಂಬ ಹೊಸ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಕೆಪಿಎಸ್‌ಸಿ, ಯುಪಿಎಸ್‌ಸಿ, ಎಸ್ಎಸ್‌ಸಿ, ಬ್ಯಾಕಿಂಗ್, ರೈಲ್ವೆ, ನೀಟ್, ಜೆಇಇ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಉಚಿತ ಕೋಚಿಂಗ್ ನೀಡಲಾಗುತ್ತದೆ.
      Advertisement
      2:12 PM, 4 Mar

      ಮರಕ್ಕೆ ಬಾಯಿ ಬೇರೆಂದು ತಳಕ್ಕೆ ನೀರೆರೆದರೆ ಮೇಲೆ ಪಲ್ಲವಿಸಿತ್ತು ನೋಡಾ ಎಂಬ ಬಸವಣ್ಣನ ವಚನನ್ನು ಬಜೆಟ್‌ ಭಾಷಣದಲ್ಲಿ ಉಲ್ಲೇಖಿಸಿದರು.
      2:10 PM, 4 Mar

      ಬೆಂಗಳೂರು ನಗರದ ವೃಷಭಾವತಿ ಕಣಿವೆಯಿಂದ ಸಂಸ್ಕರಿಸಿದ 308 ದಶಲಕ್ಷ ಲೀಟರ್ ನೀರನ್ನು ಬೆಂಗಳೂರು ನಗರ ಮತ್ತು ಗ್ರಾಮಾಂತರ, ತುಮಕೂರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ 234 ಕೆರೆಗಳಿಗೆ ತುಂಬಿಸುವ ಯೋಜನೆಯನ್ನು ಮೊದಲ ಹಂತದಲ್ಲಿ 865 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೈಗೊಳ್ಳಲಾಗುತ್ತದೆ
      2:07 PM, 4 Mar

      ಸಾಹಿತಿಗಳಾದ ಡಾ. ಸಿದ್ದಲಿಂಗಯ್ಯ, ಡಾ. ಎಂ. ಚಿದಾನಂದಮೂರ್ತಿ, ಚನ್ನವೀರ ಕಣವಿ, ಡಾ. ಚಂದ್ರಶೇಖರ ಪಾಟೀಲ್ ಸಾಹಿತ್ಯ ಪ್ರಚಾರಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ.
      2:05 PM, 4 Mar

      ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು 20 ಕೋಟಿ ರೂ. ಅನುದಾನ ಮೀಸಲು. ರಾಜ್ಯ ಮಟ್ಟದಲ್ಲಿ ಯಕ್ಷಗಾನ ಸಮ್ಮೇಳನ ಆಯೋಜಿಸಲಾಗುತ್ತದೆ. ಕಾಸರಗೋಡು, ಅಕ್ಕಲಕೋಟೆ, ಗೋವಾದಲ್ಲಿ ಕನ್ನಡ ಭವನ ಸ್ಥಾಪನೆ ಮಾಡಲಾಗುತ್ತದೆ.
      2:03 PM, 4 Mar

      ರಾಜ್ಯದಲ್ಲಿ ರೇಷ್ಮೆ ಬೆಳೆಗಾರರಿಗೆ ಅತ್ಯಾಧುನಿಕ ಮಾರುಕಟ್ಟೆ ಸೌಲಭ್ಯವನ್ನು ಒದಗಿಸಲಾಗುತ್ತದೆ. ಇದಕ್ಕಾಗಿ ಕಲಬುರಗಿ ಮತ್ತು ಹಾವೇರಿ ಜಿಲ್ಲೆಯಲ್ಲಿ ನಬಾರ್ಡ್ ನೆರವಿನೊಂದಿಗೆ 30 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣ ಮಾಡಲಾಗುತ್ತದೆ. ರೇಷ್ಮೆ ಬೆಳೆಗಾರರ ಆದಾಯವನ್ನು ಹೆಚ್ಚಿಸಲು ದ್ವಿತಳಿ ಬಿತ್ತನೆ ಗೂಡಿಗೆ ನೀಡುತ್ತಿರುವ ಪ್ರೋತ್ಸಾಹಧನವನ್ನು ಪ್ರತಿ ಕೆಜಿಗೆ 50 ರೂ.ಗಳಷ್ಟು ಹೆಚ್ಚಿಸಲಾಗುತ್ತದೆ. ಮಂಡ್ಯದ ಕೆ. ಆರ್. ಪೇಟೆಯಲ್ಲಿ ರೇಷ್ಮೆ ಎಲ್ಲಾ ಉತ್ಪಾದನಾ ಚಟುವಟಿಕೆಗಳಿಗೆ ಸಂಬಂಧಿಸಿದ ಕೇಂದ್ರವನ್ನು ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪನೆ ಮಾಡಲಾಗುತ್ತದೆ.
      Advertisement
      1:58 PM, 4 Mar

      ರಾಜ್ಯ ಸರ್ಕಾರ ಮೀನುಗಾರರಿಗೆ ಅಗತ್ಯ ಸಹಕಾರ ನೀಡುತ್ತಿದೆ. 1880 ಕೋಟಿಯನ್ನು ಬಂದರುಗಳ ಅಭಿವೃದ್ಧಿ, ಕಡಲು ವ್ಯಾಪಾರಕ್ಕೆ ಮೀಸಲಿಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಮಾಜಾಳಿಯಲ್ಲಿ ಆಧುನಿಕ ಬಂದರು ನಿರ್ಮಾಣ ಮಾಡಲಾಗುತ್ತದೆ. ಮಂಗಳೂರು ವಿಮಾನ ನಿಲ್ದಾಣವನ್ನು 350 ಕೋಟಿ ರೂ. ವೆಚ್ಚದಲ್ಲಿ ವಿಸ್ತರಣೆ ಮಾಡಲಾಗುತ್ತದೆ. ಕಾಳಿನದಿಯಿಂದ ಉತ್ತರ ಕನ್ನಡ ಜಿಲ್ಲೆಗಳ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತದೆ.
      1:54 PM, 4 Mar

      ಕೊಪ್ಪಳದ ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿಗೆ 100 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಮಾಡಲಾಗುತ್ತದೆ. ನಂದಿ ಬೆಟ್ಟದಲ್ಲಿ 93 ಕೋಟಿ ರೂ. ವೆಚ್ಚದಲ್ಲಿ ರೋಪ್ ವೇ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ. ಜೋಗ ಜಲಪಾತದಲ್ಲಿ 116 ಕೋಟಿ ಅಂದಾಜು ವೆಚ್ಚದಲ್ಲಿ ಹೋಟೆಲ್, ರೋಪ್ ವೇ ಅಭಿವೃದ್ಧಿ ಪಡಿಸಲಾಗುತ್ತದೆ.
      1:51 PM, 4 Mar

      ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ ಮಾಡಲಾಗುತ್ತದೆ. ದಾವಣಗೆರೆ ಮತ್ತು ಕೊಪ್ಪಳದಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಕಾರ್ಯ ಸಾಧ್ಯತಾ ವರದಿಯನ್ನು ತಯಾರು ಮಾಡಲಾಗುತ್ತದೆ. ರಾಯಚೂರಿನಲ್ಲಿ 186 ಕೋಟಿ ರೂ. ವೆಚ್ಚದಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ಸ್ಥಾಪನೆ ಮಾಡಲಾಗುತ್ತದೆ.
      1:49 PM, 4 Mar

      ಬೆಂಗಳೂರು ನಗರದ ನಾಲ್ಕು ಭಾಗದಲ್ಲಿ 500 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುತ್ತದೆ. ಅಸಾಂಕ್ರಮಿಕ ರೋಗಗಳ ತಪಾಸಣೆಗೆ ಬಿಬಿಎಂಪಿ ಎಲ್ಲಾ ವಾರ್ಡ್‌ಗಳಲ್ಲಿ ನಮ್ಮ ಕ್ಲಿನಿಕ್ ಸ್ಥಾಪನೆ ಮಾಡಲಾಗುತ್ತದೆ. ಕಟ್ಟಡ ಕಾರ್ಮಿಕರಿಗಾಗಿ 100 ಹೈಟೆಕ್ ಸಂಚಾರಿ ಕ್ಲಿನಿಕ್ ಆರಂಭಿಸಲಾಗುತ್ತದೆ. ಕೇಂದ್ರ ಸರ್ಕಾರದ ಸಹಯೋಗದಿಂದ ಹುಬ್ಬಳ್ಳಿ ಮತ್ತು ದಾವಣಗೆರೆ ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆಗಳ ಹಾಸಿಗೆಗಳನ್ನು 100ಕ್ಕೆ ಏರಿಕೆ ಮಾಡಲಾಗುತ್ತದೆ.
      1:44 PM, 4 Mar

      ಮೈಸೂರಿನ ಚಾಮುಂಡಿ ಬೆಟ್ಟ, ಚಿಕ್ಕಬಳ್ಳಾಪುರದ ನಂದಿಗಿರಿಧಾಮ, ಚಿಕ್ಕಮಗಳೂರಿನ ದತ್ತಪೀಠದಲ್ಲಿ ರೋಪ್ ವೇ ನಿರ್ಮಾಣಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ಕಾಶಿ ಯಾತ್ರಾರ್ಥಿಗಳಿಗೆ ತಲಾ 5 ಸಾವಿರ ರೂ. ಸಹಾಯಧನ ನೀಡಲಾಗುತ್ತದೆ.
      1:41 PM, 4 Mar

      ಮಹಿಳೆಯರ ಆರ್ಥಿಕ ಪ್ರಗತಿಗೆ ಸರ್ಕಾರ ಆದ್ಯತೆ ನೀಡಲಿದೆ. ಆಯ್ದ ಸ್ವ-ಸಹಾಯ ಸಂಘಗಳಿಗೆ ಆರ್ಥಿಕ ಸ್ವತಂತ್ರ್ಯಕ್ಕಾಗಿ 1.5 ಲಕ್ಷ ರೂ. ನೆರವು ನೀಡಲಾಗುತ್ತದೆ. ಇದಕ್ಕಾಗಿ 500 ಕೋಟಿ ರೂ. ಅನುದಾನ ಮೀಸಲು.
      1:39 PM, 4 Mar

      ಬಜೆಟ್‌ನಲ್ಲಿ ಯಾವುದೇ ತೆರಿಗೆ ಹೆಚ್ಚಳ ಮಾಡುವುದಿಲ್ಲ. ಸಾರಿಗೆ ಇಲಾಖೆಯಿಂದ 8,007 ಕೋಟಿ, ಅಬಕಾರಿ ಇಲಾಖೆಯಿಂದ 29,000 ಕೋಟಿ, ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ 15,000 ಕೋಟಿ ರೂ. ಆದಾಯ ಸಂಗ್ರಹಣೆ ಮಾಡುವ ಗುರಿ ಹೊಂದಲಾಗಿದೆ.
      1:37 PM, 4 Mar

      ಉದ್ಯಮಿಗಳಿಗೆ ತರಬೇತಿ ನೀಡಲು ಕ್ರಮ ವಹಿಸಲಾಗುತ್ತದೆ. ರಾಜ್ಯಕ್ಕೆ ಬಂಡವಾಳ ಆಕರ್ಷಣೆ ಮಾಡಲು ನವೆಂಬರ್ 2 ರಿಂದ 4ರ ತನಕ ಇನ್ವೆಸ್ಟ್ ಕರ್ನಾಟಕ ಕಾರ್ಯಕ್ರಮವನ್ನು ನಡೆಸಲಾಗುತ್ತದೆ ಎಂದು ಮುಖ್ಯಮಂತ್ರಿಗಳು ಘೋಷಣೆ ಮಾಡಿದರು.
      1:35 PM, 4 Mar

      ನಮ್ಮ ಸರ್ಕಾರ ಹಾಲು ಉತ್ಪಾದಕರಿಗೆ ಅಗತ್ಯ ಪ್ರೋತ್ಸಾಹವನ್ನು ನೀಡುತ್ತಿದೆ. ರಾಜ್ಯದಲ್ಲಿ 100 ಹೊಸ ಪಶು ಚಿಕಿತ್ಸಾಲಯಗಳನ್ನು ಆರಂಭಿಸಲಾಗುತ್ತದೆ. ರಾಜ್ಯದಲ್ಲೇ ಮೊದಲ ಬಾರಿಗೆ ಕ್ಷೀರ ಸಮೃದ್ಧಿ ಬ್ಯಾಂಕ್ ಸ್ಥಾಪನೆ ಮಾಡಲಾಗುತ್ತದೆ. ಗೋಶಾಲೆಗಳಲ್ಲಿರುವ ಗೋವುಗಳನ್ನು ದತ್ತು ಪಡೆಯಲು ಪ್ರೋತ್ಸಾಹ ನೀಡಲು ರಾಜ್ಯದಲ್ಲಿ ಮೊದಲ ಬಾರಿಗೆ ಪಣ್ಯಕೋಟಿ ಯೋಜನೆಗೆ ಚಾಲನೆ ನೀಡಲಾಗುತ್ತದೆ.
      1:32 PM, 4 Mar

      ಈ ವರ್ಷ ರಾಜ್ಯದ 1000 ಕೆರೆಗಳನ್ನು ಅಭಿವೃದ್ಧಿ ಮಾಡಲಾಗುತ್ತದೆ. 10 ಲಕ್ಷ ರೂ. ವೆಚ್ಚದಲ್ಲಿ ಕೆರೆಗಳನ್ನು ಅಭಿವೃದ್ಧಿ ಮಾಡಲಾಗುತ್ತದೆ. ಜನರ ಮನೆ ಬಾಗಿಲಿಗೆ ಸೇವೆಗಳನ್ನು ತಲುಪಿಸಲು ಗ್ರಾಮ ಒನ್ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗುತ್ತದೆ.
      1:31 PM, 4 Mar

      ಮುಂದಿನ ಎರಡು ವರ್ಷದಲ್ಲಿ 25 ಲಕ್ಷ ಮನೆಗಳಿಗೆ ನಲ್ಲಿಗಳ ಮೂಲಕ ನೀರಿನ ಸಂಪರ್ಕ ಕಲ್ಪಿಸಲಾಗುತ್ತಿದೆ. ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ 1,600 ಕೋಟಿ ಮೀಸಲಿಡಲಾಗಿದೆ. ಮಳೆಗಾಲದಲ್ಲಿ ಹಾನಿಯಾದ ರಸ್ತೆಗಳನ್ನು ಅಭಿವೃದ್ಧಿಗೊಳಿಸಲು 300 ಕೋಟಿ ರೂ. ಮೀಸಲಿಡಲಾಗಿದೆ.
      1:28 PM, 4 Mar

      ಸರ್ಕಾರಿ ಶಾಲೆಗಳ ಮೂಲ ಸೌಕರ್ಯ ಅಭಿವೃದ್ಧಿಗೆ 500 ಕೋಟಿ ರೂ. ಅನುದಾನ. ಪ್ರೌಢ ಶಾಲೆಗಳು, ಪದವಿ ಪೂರ್ವ ಕಾಲೇಜುಗಳಿಗೆ ಪಿಠೋಪಕರಣ ಒದಗಿಸಲು 100 ಕೋಟಿ ರೂ. ಅನುದಾನ ಹಂಚಿಕೆ
      1:25 PM, 4 Mar

      ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದೇಶದಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ ಆರಂಭಿಸಲಾಗುತ್ತಿದೆ. ಪೂರ್ವ ಪ್ರಾಥಮಿಕ, ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣ, ಶಿಕ್ಷಕರ ಶಿಕ್ಷಣ ಹಾಗೂ ವಯಸ್ಕರ ಶಿಕ್ಷಣಕ್ಕೆ ನೂತನ ಪಠ್ಯ ಕ್ರಮ ರಚನೆ ಮಾಡಲಾಗುತ್ತದೆ.
      1:23 PM, 4 Mar

      ರಾಮನಗರದ ಅರ್ಚಕರಹಳ್ಳಿಯಲ್ಲಿ 600 ಕೋಟಿ ರೂ. ವೆಚ್ಚದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಆರಂಭಿಸಲಾಗುತ್ತದೆ. ನೀಟ್ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲಾಗುತ್ತದೆ.
      1:21 PM, 4 Mar

      5 ಲಕ್ಷ ಮನೆಗಳನ್ನು ಸರ್ವರಿಗೂ ಸೂರು ಯೋಜನೆ ಅಡಿ 6,612 ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತದೆ. ಮನೆಗಳನ್ನು ಹಂಚಿಕೆ ಮಾಡುವಾಗ ಕುರಿಗಾಹಿಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲೆಮಾರಿ, ಅರೆ ಅಲೆಮಾರಿ ಜನಾಂಗ ಹಾಗೂ ಮೀನುಗಾರರು ಮತ್ತು ತೃತೀಯ ಲಿಂಗಿಗಳಿಗೂ ಆದ್ಯತೆ ನೀಡಲಾಗುತ್ತದೆ.
      1:18 PM, 4 Mar

      ಅಸಂಕ್ರಾಮಿಕ ರೋಗಳ ಪತ್ತೆಗಾಗಿ ನಮ್ಮ ಕ್ಲಿನಿಕ್ ನಿರ್ಮಾಣ, ಬೆಂಗಳೂರು ನಗರದಲ್ಲಿ ಎಲ್ಲಾ ವಾರ್ಡ್‌ಗಳಲ್ಲಿ ಈ ಕ್ಲಿನಿಕ್ ನಿರ್ಮಾಣ ಮಾಡಲಾಗುತ್ತದೆ ಎಂದು ಘೋಷಣೆ ಮಾಡಿದರು.
      1:17 PM, 4 Mar

      ಮುಂದಿನ ಎರಡು ವರ್ಷ ಸರ್ಕಾರದಿಂದಲೇ ಮೈಷುಗರ್ ಸಕ್ಕರೆ ಕಾರ್ಖನೆ ನಡೆಸಲು ತೀರ್ಮಾನ. ಕಾರ್ಖನೆ ಯಂತ್ರೋಪಕರಣ ದುರಸ್ತಿಗೆ 50 ಕೋಟಿ ರೂ. ನೆರವು.
      1:15 PM, 4 Mar

      ತುಂಗಭದ್ರಾ ಜಲಾಶಯ ಭರ್ತಿಯಾದ ಬಳಿಕ ಹೊರ ಹೋಗುವ ನೀರನ್ನು ಸಂಗ್ರಹ ಮಾಡಲು ನವಲೆ ಬಳಿ ಸಮತೋಲನಾ ಜಲಾಶಯ ನಿರ್ಮಾಣ. ಇದರ ಯೋಜನಾ ವರದಿ ತಯಾರಾಗುತ್ತಿದ್ದು, ಇದಕ್ಕೆ 1 ಸಾವಿರ ಕೋಟಿ ರೂ. ಅನುದಾನ ನೀಡಲಾಗಿದೆ.
      READ MORE

      English summary
      Karnataka Budget 2022 Live Updates and Highlights : Check out the Karnataka Budget 2022 CM Basavaraj Bommai Budget Speech highlights and key announcements.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X