ಕರ್ನಾಟಕ ಬಜೆಟ್ 2019 : ಬಿಜೆಪಿ ಸದಸ್ಯರಿಂದ ಸಭಾತ್ಯಾಗ!
ಬೆಂಗಳೂರು, ಫೆಬ್ರವರಿ 08 : ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಜೆಟ್ ಭಾಷಣ ಆರಂಭಿಸುತ್ತಿದ್ದಂತೆ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು. ಬಜೆಟ್ ಪ್ರತಿಯನ್ನು ನೀಡಿಲ್ಲ ಎಂದು ಘೋಷಣೆ ಕೂಗುತ್ತಾ ಪ್ರತಿಪಕ್ಷದ ಸದಸ್ಯರು ಸದನದಿಂದ ಹೊರ ನಡೆದರು.
ಶುಕ್ರವಾರ ಮಧ್ಯಾಹ್ನ 12.30ಕ್ಕೆ ಎಚ್.ಡಿ.ಕುಮಾರಸ್ವಾಮಿ ಅವರು ಬಜೆಟ್ ಭಾಷಣ ಆರಂಭಿಸುತ್ತಿದ್ದಂತೆ ಬಿಜೆಪಿ ಸದಸ್ಯರು ಗದ್ದಲ ಆರಂಭಿಸಿದರು. ಸದನದ ಬಾವಿಗಿಳಿದು ಸರ್ಕಾರದ ವಿರುದ್ಧ ಧರಣಿ ಆರಂಭಿಸಿದರು. ಆದರೆ, ಬಜೆಟ್ ಭಾಷಣ ಮುಂದುವರೆಯಿತು.

ಪ್ರತಿಪಕ್ಷದ ಸದಸ್ಯರಿಗೆ ಬಜೆಟ್ ಪ್ರತಿಯನ್ನು ನೀಡಿಲ್ಲ. ಬಜೆಟ್ ಭಾಷಣ ಮುಗಿಯುವ ತನಕ ಪ್ರತಿ ನೀಡುವುದಿಲ್ಲ ಎಂದು ಗುರುವಾರವೇ ಸುತ್ತೋಲೆ ಹೊರಡಿಸಲಾಗಿತ್ತು. ಬಜೆಟ್ ಪ್ರತಿ ಕೊಟ್ಟಿಲ್ಲ ಎಂದು ಆರೋಪಿಸಿ ಬಿಜೆಪಿ ಸಭಾತ್ಯಾಗ ನಡೆಸಿತು.
ಕಲಾಪದಿಂದ ಹೊರ ನಡೆದ ಬಿಜೆಪಿ ಸದಸ್ಯರು ವಿಧಾನಸೌಧದ ಮುಂಭಾಗವಿರುವ ಕೆಂಗಲ್ ಹನುಮಂತಯ್ಯ ಪ್ರತಿಮೆ ಮುಂದೆ ಸರ್ಕಾರದ ವಿರುದ್ಧ ಧರಣಿ ನಡೆಸುತ್ತಿದ್ದಾರೆ.
ಮೈತ್ರಿ ಸರ್ಕಾರಕ್ಕೆ ಬಹುಮತವಿಲ್ಲ ಎಂದು ಬುಧವಾರ ರಾಜ್ಯಪಾಲರ ಭಾಷಣಕ್ಕೂ ಬಿಜೆಪಿ ಸದಸ್ಯರು ಅಡ್ಡಿ ಪಡಿಸಿದ್ದರು. ಗದ್ದಲದಿಂದಾಗಿ ಭಾಷಣವನ್ನು ಮೊಟಕುಗೊಳಿಸಲಾಗಿತ್ತು.
ಕರ್ನಾಟಕ ಬಜೆಟ್ ಅಧಿವೇಶನ, ಎಚ್ಡಿಕೆ ಬಜೆಟ್ ಮಂಡನೆ, ಬಿಜೆಪಿ ಪ್ರತಿಭಟನೆ : ಚಿತ್ರಗಳು
ಗುರುವಾರ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯ ಸಂದರ್ಭದಲ್ಲಿಯೂ ಬಿಜೆಪಿ ಸದಸ್ಯರು ಕಲಾಪಕ್ಕೆ ಅಡ್ಡಿ ಪಡಿಸಿದ್ದರು. ಆದ್ದರಿಂದ, ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಲಾಗಿತ್ತು.












Click it and Unblock the Notifications