ರಾಜ್ಯ ಬಿಜೆಪಿ ನಾಯಕರಿಗೆ ಶುರುವಾಯ್ತು ಢವಢವ; ಯಾಕೆ?
ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಕೋವಿಡ್ ಅಕ್ರಮಗಳ ವರದಿಯು ಇದೀಗ ಕಾಂಗ್ರೆಸ್ ಪಾಲಿಗೆ ಅಸ್ತ್ರವಾಗಲಿದೆ ಎನ್ನಲಾಗುತ್ತಿದೆ. ಕೋವಿಡ್ ಹೆಸರಿನಲ್ಲಿ ನೂರಾರು ಕೋಟಿ ಲೂಟಿ ಮಾಡಿರುವ ಗಂಭೀರ ಆರೋಪವೂ ಜೋರಾಗಿ ಕೇಳಿಬರುತ್ತಿದ್ದು, ಇದು ರಾಜ್ಯ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಲಿದೆ ಎಂದು ಹೇಳಲಾಗುತ್ತಿದೆ.
ಕೋವಿಡ್ ಹೆಸರಿನಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಕುರಿತು ಜಸ್ಟೀಸ್ ಜಾನ್ ಮೈಕೆಲ್ ಡಿ ಕುನ್ಹಾ ಅವರ ನೇತೃತ್ವದ ಆಯೋಗದ ಮಧ್ಯಂತರ ವರದಿಯ ಅಧ್ಯಯನಕ್ಕೆ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಮತ್ತೊಂದು ಸಮಿತಿ ರಚಿಸಲಾಗಿದೆ. ಈಗ ಇದೇ ವರದಿಯನ್ನು ಕಾಂಗ್ರೆಸ್ ತನ್ನ ವಿರೋಧಿಗಳ ವಿರುದ್ಧ ಅಸ್ತ್ರವಾಗಿ ಬಳಸಲು ಮುಂದಾಗಿದೆ ಎನ್ನಲಾಗಿದೆ.

ಕಳೆದ ವಾರ ಜಸ್ಟೀಸ್ ಡಿ ಕುನ್ಹಾ ಅವರು ಕೋವಿಡ್ ಅಕ್ರಮಗಳ ಕುರಿತಾದ ವರದಿಯನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಸಿದ್ದರು. ಇನ್ನು ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲೂ ಈ ವರದಿಯ ಬಗ್ಗೆ ಚರ್ಚೆ ನಡೆದಿದೆ. ಕಾನೂನು ಸಚಿವ ಎಚ್.ಕೆ.ಪಾಟೀಲ್ ಹೇಳಿರುವಂತೆ, ʼಕೋವಿಡ್ ಸಮಯದಲ್ಲಿ ನೂರಾರು ಕೋಟಿ ರೂಪಾಯಿಗೂ ಹೆಚ್ಚು ಅಕ್ರಮ ನಡೆದಿರುವುದು ಹಾಗೂ ಈ ಸಂಬಂಧದ ಫೈಲ್‌ಗಳು ನಾಪತ್ತೆ ಆಗಿರುವುದು ಈ ವರದಿಯಲ್ಲಿ ಸ್ಪಷ್ಟವಾಗಿದೆ. ಹಾಗಾಗಿ, ಈ ವರದಿಯ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತು ಹೆಚ್ಚುವರಿ ಮುಖ್ಯ ಕಾರ್ಯರ್ಶಿ ಎಲ್.ಕೆ.ಅತೀಕ್ ನೇತೃತ್ವದ ಸಮಿತಿಗೆ ಅಧ್ಯಯನ ನಡೆಸಿ ವರದಿ ಕೊಡಲು ಸೂಚಿಸಿದ್ದೇವೆ ಎಂದಿದ್ದಾರೆ.
ಇನ್ನು ಒಂದು ತಿಂಗಳ ಒಳಗಾಗಿ ಈ ಸಮಿತಿಯು ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸಲಿದೆ. ಈ ವರದಿಯ ಆಧಾರದಲ್ಲಿ ತಪ್ಪಿತಸ್ಥರ ವಿರುದ್ಧ ಸರ್ಕಾರ ಕಾನೂನು ಕ್ರಮ ತೆಗೆದುಕೊಳ್ಳಲಿದೆ. ಈ ವಿಚಾರಣಾ ಆಯೋಗದ ಅವಧಿಯನ್ನು ಮುಂದಿನ ಆರು ತಿಂಗಳು ಮುಂದುವರೆಸಲು ಸಂಪುಟ ಒಪ್ಪಿದೆ. ಮುಂದಿನ ವಿಧಾನಮಂಡಲದ ಅಧಿವೇಶನದಲ್ಲೂ ಈ ಆಯೋಗದ ವರದಿಯನ್ನು ಮಂಡಿಸುವುದಾಗಿ ಹೇಳಿದ್ದಾರೆ.

ʼಕೋವಿಡ್ ಸಮಯದಲ್ಲಿ ಆರೋಗ್ಯ ಇಲಾಖೆಯಲ್ಲಿ ಯಾವ ಅಧಿಕಾರಿಗಳು ಇದ್ದರು? ಅವರು ವಿಚಾರಣಾ ಆಯೋಗದ ಮುಂದೆ ಯಾವ ಕಾರಣಕ್ಕಾಗಿ ದಾಖಲೆಗಳನ್ನು ನೀಡಿಲ್ಲ? ಎನ್ನುವುದರ ಬಗ್ಗೆಯೂ ತನಿಖೆ ನಡೆಯಲಿದೆ. ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ವರದಿಯನ್ನೂ ವಿಚಾರಣಾ ಆಯೋಗ ಗಂಭೀರವಾಗಿ ಪರಿಗಣಿಸಿದೆ. ಆದರೆ, ಈ ಅಕ್ರಮದಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬ ಹೆಸರುಗಳನ್ನು ಬಹಿರಂಗವಾಗಿ ಸಭೆಯಲ್ಲಿ ಪ್ರಸ್ತಾಪಿಸಲಿಲ್ಲ ಎಂದು ಪಾಟೀಲ್ ಹೇಳಿದ್ದಾರೆ.
ಕೋವಿಡ್ ಅಕ್ರಮಗಳ ಬಗ್ಗೆ ರಾಜ್ಯ ಸರ್ಕಾರವು ಗಂಭೀರವಾಗಿ ಪರಿಗಣಿಸಿದ್ದು, ಆ ಸಮಯದಲ್ಲಿ ಆರೋಗ್ಯ ಸಚಿವರೂ ಆಗಿದ್ದ ಈಗಿನ ಬಿಜೆಪಿ ಸಂಸದ ಕೆ.ಸುಧಾಕರ್ ಅವರ ವಿರುದ್ಧ ಈ ಅಕ್ರಮಗಳ ಆರೋಪ ಕೇಳಿಬಂದಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಸುಧಾಕರ್, ನಾನು ಯಾವ ತಪ್ಪನ್ನೂ ಮಾಡಿಲ್ಲʼ ಎಂದು ಸ್ಪಷ್ಟನೆ ನೀಡಿದ್ದರು.

ಈಗಾಗಲೇ ವರದಿಯಲ್ಲಿ ಕೋವಿಡ್ ಹೆಸರಲ್ಲಿ ಅಕ್ರಮ ಎಸಗಿರುವ ಕೆಲವರ ಹೆಸರು ಕೂಡ ಉಲ್ಲೇಖವಾಗಿದ್ದು, ಇದರಲ್ಲಿ ಬಿಜೆಪಿಯ ಹಲವು ನಾಯಕರು ಹಾಗೂ ಅಧಿಕಾರಿಗಳ ಹೆಸರುಗಳು ಕೂಡ ಇದೆಯಂತೆ. ಆ ಹೆಸರುಗಳನ್ನು ರಾಜ್ಯ ಸರ್ಕಾರ ಬಹಿರಂಗ ಪಡಿಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಬಿಜೆಪಿ ನಾಯಕರಿಗೆ ಢವಢವ ಶುರುವಾಗಿದೆ.












Click it and Unblock the Notifications