ಕಾಂಗ್ರೆಸ್ ಕಳ್ಳರ ಸಂತೆಯಲ್ಲಿ ಕಡುಭ್ರಷ್ಟ ಮಹಾರಾಜರು ಡಿ ಕೆ ಶಿವಕುಮಾರ್
ಬೆಂಗಳೂರು, ನವೆಂಬರ್ 24: ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಅಕ್ರಮ ಆಸ್ತಿಯ ಸಿಬಿಐ ತನಿಖೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಸಾರಸಗಟಾಗಿ ಹಿಂಪಡೆದು, ರಾಜ್ಯವನ್ನು ಗೂಂಡಾ, ಭ್ರಷ್ಟಚಾರಿಗಳ ಅಡುಗುದಾಣ ಮಾಡುತ್ತಿದೆ. ಕಾಂಗ್ರೆಸ್ ಕಳ್ಳರ ಸಂತೆಯಲ್ಲಿ ಕಡುಭ್ರಷ್ಟ ಮಹಾರಾಜರು ಡಿ ಕೆ ಶಿವಕುಮಾರ್ ಎಂದು ರಾಜ್ಯ ಬಿಜೆಪಿ ಕಿಡಿಕಾರಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ನ್ಯಾಯ, ಪ್ರಾಮಾಣಿಕತೆ ಎಂದು ಭಾಷಣ ಬಿಗಿಯುವ ಸಿದ್ದರಾಮಯ್ಯರವರೇ, ಡಿ. ಕೆ. ಶಿವಕುಮಾರ್ 5 ವರ್ಷಗಳಲ್ಲಿ 380 ಪಟ್ಟು ಅಕ್ರಮ ಆಸ್ತಿಯ ಗಂಟು ಮಾಡಿಕೊಂಡರೂ ಚಕಾರ ಎತ್ತದ ನೀವು, ಈಗ ಅವರ ಮೇಲಿನ ಸಿಬಿಐ ತನಿಖೆಯನ್ನೇ ಹಿಂಪಡೆದು ಭ್ರಷ್ಟರ ಮಹಾಪೋಷಣೆ ಮಾಡುತ್ತಿದ್ದೀರಿ. ಕಾಂಗ್ರೆಸ್ ಒಂದು ಭ್ರಷ್ಟರ ಕೂಟ ಎಂದು ವಾಗ್ದಾಳಿ ನಡೆಸಿದೆ.

ಈ ಕುರಿತು ನೂತನ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಟ್ವೀಟ್ ಮಾಡಿದ್ದು, ಹಿಂದಿನ ಬಿಜೆಪಿ ಸರ್ಕಾರ ಸೇಡಿನ ಭಾಗವಾಗಿ ತಮ್ಮ ವಿರುದ್ಧ ಸಿಬಿಐ ತನಿಖೆಗೆ ಅನುಮತಿ ನೀಡಿದ್ದು ಕೇಸ್ ವಜಾಗೊಳಿಸುವಂತೆ ಡಿ ಕೆ ಶಿವಕುಮಾರ್ ಅವರು ಮಾಡಿದ್ದ ಮನವಿಯನ್ನು ಘನ ಉಚ್ಚ ನ್ಯಾಯಾಲಯ ಈಗಾಗಲೇ ತಿರಸ್ಕರಿಸಿ ರಾಜ್ಯ ಸರ್ಕಾರದ ಕ್ರಮವನ್ನು ಎತ್ತಿ ಹಿಡಿದಿದೆ. ಆದಾಗ್ಯೂ ಕಾನೂನು ಸಚಿವ ಹೆಚ್ ಕೆ ಪಾಟೀಲ್ ಅವರು ತಮ್ಮ ಕಾಂಗ್ರೆಸ್ ಸರ್ಕಾರದ ಭ್ರಷ್ಟ ಪೋಷಣೆಯ ಕ್ರಮವನ್ನು ಸಮರ್ಥಿಸಲು ವ್ಯರ್ಥ ಪ್ರಯತ್ನ ನಡೆಸಿರುವುದು ಅವರ ನೈತಿಕತೆಯನ್ನು ಪ್ರಶ್ನಿಸುವಂತಾಗಿದೆ.
"ಕಾಂಗ್ರೆಸ್ ಕಳ್ಳರಸಂತೆಯಲ್ಲಿ
— BJP Karnataka (@BJP4Karnataka) November 24, 2023
ಕಡುಭ್ರಷ್ಟ ಮಹಾರಾಜರು"
ಶ್ರೀ @DKShivakumar #CorruptCongress #CongressFailsKarnataka pic.twitter.com/qDTfRYU5m1
ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆಯುವ ತೀರ್ಮಾನ ಸಂಪೂರ್ಣವಾಗಿ ಕಾನೂನು, ಸಂವಿಧಾನಕ್ಕೆ ವಿರುದ್ಧವಾದುದು. ಈ ತೀರ್ಮಾನವನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ. ಡಿ. ಕೆ. ಶಿವಕುಮಾರ್ ಅವರನ್ನು ರಕ್ಷಿಸಲು ಈ ತೀರ್ಮಾನ ಕೈಗೊಳ್ಳಲಾಗಿದೆ. ಡಿ. ಕೆ. ಶಿವಕುಮಾರ್ ಅವರು ಭ್ರಷ್ಟರಲ್ಲದಿದ್ದರೆ ಸಿಬಿಐ ತನಿಖೆ ಎದುರಿಸಿ ಹೊರಬರಲಿ ಎಂದು ವಿಜಯೇಂದ್ರ ಹೇಳಿದರು.
ಡಿ.ಕೆ.ಶಿವಕುಮಾರ್ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ರಾಜ್ಯ ಸಚಿವಸಂಪುಟ ಕೈಗೊಂಡ ನಿರ್ಧಾರವು ಸಂಪೂರ್ಣವಾಗಿ ಕಾನೂನುಬಾಹಿರ. ಆದಾಯ ತೆರಿಗೆ ಇಲಾಖೆ (ಐಟಿ) ದಾಳಿ ಆದಾಗ ಬೆಂಗಳೂರು ಮತ್ತು ದೇಶದ ವಿವಿಧೆಡೆ ಲಭಿಸಿದ ಹಣದ ವಿಷಯ ಎಲ್ಲರಿಗೂ ತಿಳಿದಿದೆ. ತದನಂತರ ಜಾರಿ ನಿರ್ದೇಶನಾಲಯವು (ಇಡಿ) ಕೂಡ ಹಲವು ವರ್ಷಗಳಿಂದ ತನಿಖೆ ನಡೆಸುತ್ತಿದೆ ಎಂದು ವಿವರಿಸಿದರು.
ಕ್ಯಾಬಿನೆಟ್ ತೀರ್ಮಾನವು ಸಂಪೂರ್ಣವಾಗಿ ತಪ್ಪು ನಿರ್ಧಾರ ಮತ್ತು ಕಾನೂನುಬಾಹಿರ ಎಂದು ಅವರು ಟೀಕಿಸಿದರು. ಕಾಂಗ್ರೆಸ್ ಪಕ್ಷದ ಈ ನಿರ್ಧಾರ ದುರದೃಷ್ಟಕರ ಮತ್ತು ಬಿಜೆಪಿ ಈ ನಿರ್ಧಾರವನ್ನು ಖಂಡಿಸುತ್ತದೆ. ಇದು ಕಾನೂನಿನ ವಿರುದ್ಧ ತೆಗೆದುಕೊಂಡ ನಿರ್ಧಾರ ಎಂದು ಟೀಕಿಸಿದರು.
ಡಿ.ಕೆ.ಶಿವಕುಮಾರ್ ಅವರು ಯಾಕಾಗಿ ತನಿಖೆಗೆ ಭಯ ಪಡುತ್ತಾರೆ? ಅವರಿಗೆ ಕಾನೂನಿನ ಮೇಲೆ ವಿಶ್ವಾಸ ಇಲ್ಲವೇ? ತಾವು ಹಲವು ವರ್ಷಗಳಿಂದ ನಿರಂತರವಾಗಿ ಕಾನೂನು ಹೋರಾಟ ಮಾಡುತ್ತ ಬರುತ್ತಿದ್ದೀರಿ. ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಜವಾಬ್ದಾರಿಯ ಸ್ಥಾನದಲ್ಲಿರುವ ಡಿ.ಕೆ.ಶಿವಕುಮಾರ್ ಅವರು ಪ್ರಾಮಾಣಿಕವಾಗಿ ಇದ್ದರೆ ಕ್ಯಾಬಿನೆಟ್ ಕೈಗೊಳ್ಳುವ ಈ ತೀರ್ಮಾವನ್ನು ವಿರೋಧಿಸಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯ ಸರಕಾರವು ಮಾಡಿದ ಕ್ಯಾಬಿನೆಟ್ ತೀರ್ಮಾನವನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ ಎಂದ ಅವರು, ಇದರ ವಿರುದ್ಧ ಪಕ್ಷದ ಮುಂದಿನ ಕ್ರಮವನ್ನು ಹಿರಿಯರ ಜೊತೆ ಕುಳಿತು ಚರ್ಚಿಸಿ ಕೈಗೊಳ್ಳುತ್ತೇವೆ ಎಂದು ಪ್ರಕಟಿಸಿದರು.












Click it and Unblock the Notifications