ರಾಜ್ಯ ಬಿಜೆಪಿಯ ಎರಡು ಒಡೆದ ಮನಸ್ಸುಗಳು ಮತ್ತಷ್ಟು ದೂರ..ದೂರ?
ರಾಜ್ಯ ಪ್ರಭಾರಿ ಮರಳೀಧರ್ ರಾವ್ ಅವರನ್ನು ಬೆಂಗಳೂರಿಗೆ ಕಳುಹಿಸಿದ್ದರೂ, ಕರ್ನಾಟಕ ಬಿಜೆಪಿ ಘಟಕದ ಭಿನ್ನಮತ ಸರಿದಾರಿಗೆ ಬರುವ ಲಕ್ಷಣಗಳು ಕಾಣಿಸುತ್ತಿಲ್ಲ.
ಯಡಿಯೂರಪ್ಪ ಹೇಳಿದ್ರು.. ಈಶ್ವರಪ್ಪ ಹೇಳಿದ್ರೂಂತಾ.. ಶಿಸ್ತುಕ್ರಮ ತೆಗೆದುಕೊಳ್ಳುವ ವರ್ಕಿಂಗ್ ಸ್ಟೈಲ್ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರದ್ದಲ್ಲ, ವಸ್ತುಸ್ಥಿತಿ ಅರಿತೇ ಅಮಿತ್ ಶಾ ಮುಂದಿನ ಹೆಜ್ಜೆಯಿಡುವುದು ಎನ್ನುವ ಮಾತು ಬಿಜೆಪಿ ವಲಯದಲ್ಲಿ ಚಾಲ್ತಿಯಲ್ಲಿರುವ ಮಾತು.
ಪ್ರಯತ್ನ ಪಟ್ಟರೆ ಕರ್ನಾಟಕದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬಹುದು ಎನ್ನುವ ಲೆಕ್ಕಾಚಾರದಲ್ಲಿರುವ ಬಿಜೆಪಿ ಹೈಕಮಾಂಡಿಗೆ, ಯಡಿಯೂರಪ್ಪ ಮತ್ತು ಈಶ್ವರಪ್ಪನವರ ಜಗಳ ಬಹುದೊಡ್ಡ ತಲೆನೋವಾಗಿ ಪರಿಣಮಿಸಿದೆ. ತುರ್ತಾಗಿ ಮರಳೀಧರ್ ರಾವ್ ಅವರನ್ನು ಬೆಂಗಳೂರಿಗೆ ಸಂಧಾನಕ್ಕೆ ಕಳುಹಿಸಿದರೂ ಶಿಸ್ತು ಸರಿದಾರಿಗೆ ಬರುವ ಲಕ್ಷಣಗಳು ಕಾಣಿಸುತ್ತಿಲ್ಲ. (ಬಿಜೆಪಿ ಬಿಕ್ಕಟ್ಟು ಸಂಪೂರ್ಣ ಬೆಳವಣಿಗೆ)
ಇತ್ತಂಡಗಳ ಇಬ್ಬರು ಮುಖಂಡರನ್ನು ಸೇವೆಯಿಂದ ಮುಕ್ತಿಗೊಳಿಸಿದ ನಂತರ, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ ಎನ್ನುವುದು ವಾಸ್ತವತೆ. ಯಡಿಯೂರಪ್ಪ ಮತ್ತು ಈಶ್ವರಪ್ಪ ಇಬ್ಬರೂ ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಮುರಳೀಧರ್ ರಾವ್ ಭೇಟಿಯ ವೇಳೆ ಯಡಿಯೂರಪ್ಪ ತನ್ನ ಅಸಮಾಧಾನ ವ್ಯಕ್ತಪಡಿಸಿದ್ದೂ ಆಗಿದೆ.
ತಮ್ಮ ಬಣದ ಇಬ್ಬರು ಮುಖಂಡರಾದ ಭಾನುಪ್ರಕಾಶ್ ಮತ್ತು ನಿರ್ಮಲ್ ಕುಮಾರ್ ಸುರಾನ ಅವರನ್ನು ಪದಾಧಿಕಾರಿ ಹುದ್ದೆಯಿಂದ ವಜಾಗೊಳಿಸಿದ ರಾಜ್ಯ ಪ್ರಭಾರಿ ಮುರಳೀಧರ್ ರಾವ್ ಕ್ರಮಕ್ಕೆ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ ಈಶ್ವರಪ್ಪ, ನೇರ ಅಮಿತ್ ಶಾ ಅವರನ್ನು ಭೇಟಿಯಾಗುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.
ತಮ್ಮ ಬಣದಲ್ಲಿ ಗುರುತಿಸಿಕೊಂಡಿರುವ ಗೋ.ಮಧುಸೂಧನ್ ಮತ್ತು ರೇಣುಕಾಚಾರ್ಯ ಅವರನ್ನು ವಜಾಗೊಳಿಸಿರುವುದಕ್ಕೆ, ಸಂಘಟನಾ ಕಾರ್ಯದರ್ಶಿ ಸಂತೋಷ್ ನೀಡಿದ ವರದಿ ಕಾರಣ ಎಂದು ಬಿಎಸ್ವೈ ತಮ್ಮ ಆಪ್ತರಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಜೊತೆಗೆ, ಸಂತೋಷ್ ಕಾರ್ಯವೈಖರಿಯ ಬಗ್ಗೆ ಕೂಡಾ ಯಡಿಯೂರಪ್ಪ, ಮುರಳೀಧರ್ ರಾವ್ ಜೊತೆ ನಡೆದ ಮಾತುಕತೆಯ ವೇಳೆ ಅಸಮಾಧನ ವ್ಯಕ್ತ ಪಡಿಸಿದ್ದಾರೆ ಎನ್ನುವ ಮಾಹಿತಿಯಿದೆ. ಬಿಎಸ್ವೈ ನೇತೃತ್ವದಲ್ಲೇ ಮುಂದಿನ ಚುನಾವಣೆ ಎಂದು ಮುರಳೀಧರ್ ರಾವ್ ಘೋಷಿಸಿದ್ದರೂ, ಈಶ್ವರಪ್ಪ ಬಣ ಅಮಿತ್ ಶಾ ಅವರನ್ನು ನೇರವಾಗಿ ಭೇಟಿಯಾಗುವ ಸಾಧ್ಯತೆಯಿದೆ.

ಮೈಸೂರು ಕಾರ್ಯಕಾರಿಣಿ
ಬಿಜೆಪಿ ಕೇಂದ್ರ ಮುಖಂಡರು ಮೈಸೂರಿನಲ್ಲಿ ಮೇ ಆರರಂದು ಆರಂಭವಾಗಲಿರುವ ರಾಜ್ಯ ಕಾರ್ಯಕಾರಿಣಿಯೊಳಗೆ ಭಿನ್ನಮತವನ್ನು ಸರಿದಾರಿಗೆ ತರುವ ಅನಿವಾರ್ಯತೆಯಲ್ಲಿದ್ದಾರೆ. ಮುಂದಿನ ಅಸೆಂಬ್ಲಿ ಚುನಾವಣೆಗೆ ಕಾರ್ಯತಂತ್ರ ರೂಪಿಸಲು ಈ ಕಾರ್ಯಕಾರಿಣಿ ಮಹತ್ವದ್ದಾಗಿದೆ.

ಅತೃಪ್ತರ ಜೊತೆ ಈಶ್ವರಪ್ಪ ಮಾತುಕತೆ
ಭಾನುಪ್ರಕಾಶ್ ಮತ್ತು ನಂದೀಶ್ ಮನೆಯಲ್ಲಿ ಭಾನುವಾರ (ಏ 30) ಸಭೆ ನಡೆಸಿದ ಈಶ್ವರಪ್ಪ, ಮುರಳೀಧರ್ ರಾವ್ ಅವರ ಜೊತೆ ಮಾತುಕತೆ ನಡೆಸುವ ಬದಲು, ಅಗತ್ಯ ಬಿದ್ದಲ್ಲಿ ನೇರವಾಗಿ ಅಮಿತ್ ಶಾ ಅವರನ್ನು ಭೇಟಿಯಾಗಿ ತಮ್ಮ ನೋವನ್ನು ತೋಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.

ತುಮಕೂರು ಸಭೆ ರದ್ದು
ತುಮಕೂರಿನಲ್ಲಿ ಸೋಮವಾರ (ಮೇ 1) ಈಶ್ವರಪ್ಪ ಬಣ ಆಯೋಜಿಸಿದ್ದ ಸಭೆಯನ್ನು ರದ್ದುಗೊಳಿಸಲಾಗಿದೆ. ವರಿಷ್ಠರ ಮುಂದಿನ ನಡೆಯೇನು ಎಂದು ತಿಳಿದುಕೊಂಡು ಮುಂದಿನ ಹೆಜ್ಜೆಯಿಡುವ ನಿರ್ಧಾರಕ್ಕೆ ಬರಲಾಗಿದೆ.

ಮೂರು ಬಾರಿ ರಾಜ್ಯಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ
ಯಡಿಯೂರಪ್ಪ ಬಿಜೆಪಿ ಬಿಟ್ಟಾಗಲೂ ನಾನು ಪಕ್ಷದಲ್ಲಿದ್ದೆ, ಈಗಲೂ ಇದ್ದೇನೆ. ಮೂರು ಬಾರಿ ರಾಜ್ಯಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ನನ್ನ ಮೇಲೆ ಶಿಸ್ತಿನ ಕ್ರಮ ತೆಗೆದುಕೊಳ್ಳಬಹುದು ಎಂದು ನನಗನಿಸುವುದಿಲ್ಲ. ಸಂಘಟನೆ ಕಟ್ಟಿದವರನ್ನೇ ಮೂಲೆಗುಂಪು ಮಾಡಿದರೆ, ಇನ್ನು ಸಾಮಾನ್ಯ ಕಾರ್ಯಕರ್ತರ ಪಾಡೇನು ಎಂದು ಈಶ್ವರಪ್ಪ ಬೇಸರ ವ್ಯಕ್ತ ಪಡಿಸಿದ್ದಾರೆ.

ಪಕ್ಷದಲ್ಲಿ ಅಶಿಸ್ತನ್ನು ಸಹಿಸಲಾಗುವುದಿಲ್ಲ, ರಾವ್
ರಾಜ್ಯ ಬಿಜೆಪಿಯ ಮುಖಂಡರಾದ ಅರವಿಂದ್ ಲಿಂಬಾವಳಿ, ಅಶೋಕ್ ಸೇರಿ ಹಲವು ಮುಖಂಡರು ಅಭಿಪ್ರಾಯ ಪಡೆದಿರುವ ರಾಜ್ಯ ಪ್ರಭಾರಿ ಮುರಳೀಧರ್ ರಾವ್, ಅಮಿತ್ ಶಾ ಅವರಿಗೆ ವರದಿ ಸಲ್ಲಿಸಲಿದ್ದಾರೆ. ಪಕ್ಷಕ್ಕೆ ಸಡ್ಡು ಹೊಡೆಯುವ ಸಭೆ ನಡೆಸಬಾರದು, ಮಾಧ್ಯಮಗಳ ಮುಂದೆ ಹೇಳಿಕೆ ನೀಡಬಾರದು, ಪಕ್ಷದಲ್ಲಿ ಅಶಿಸ್ತನ್ನು ಸಹಿಸಲಾಗುವುದಿಲ್ಲ ಎಂದು ರಾವ್ ಹೇಳಿದ್ದಾರೆ.

ಈಶ್ವರಪ್ಪ - ಯಡಿಯೂರಪ್ಪ
ರಾಜ್ಯ ಘಟಕದ ಭಿನ್ನಮತ ಕಮ್ಮಿಯಾಗದಿದ್ದರೆ ಮೈಸೂರು ಕಾರ್ಯಕಾರಿಣಿಗೆ ಹಾಜರಾಗುವುದಿಲ್ಲ ಎನ್ನುವ ಮಾಹಿತಿಯನ್ನೂ ಅಮಿತ್ ಶಾ, ಮುರಳೀಧರ್ ರಾವ್ ಮೂಲಕ ರವಾನಿಸಿದ್ದಾರೆ. ಎರಡು ಬಣದ ಪದಾಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಿ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮೇಲ್ನೋಟಕ್ಕೆ ಕಂಡರೂ, ಇದರಿಂದ ಈಶ್ವರಪ್ಪ ಬಣ ಮತ್ತಷ್ಟು ಸಿಟ್ಟಾಗಿರುವುದಂತೂ ಹೌದು.












Click it and Unblock the Notifications