Karnataka Bandh: ಅತ್ತಿಬೆಲೆ ಬಂದ್ ಬೆನ್ನಲ್ಲೆ ನಾಳೆ ಹುಬ್ಬಳ್ಳಿಯಲ್ಲಿ ಪ್ರತಿಭಟನೆ, "ರಾಜ್ಯ ಬಂದ್' ಫಿಕ್ಸ್: ವಾಟಾಳ್
ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದ ಮತ್ತು ಮೇಕೆದಾಟು ವಿಚಾರದಲ್ಲಿ ತಮಿಳುನಾಡು ಕರ್ನಾಟಕದೊಂದಿಗೆ ಮಾಡುತ್ತಿರುವ ರಾಜಕೀಯ ವಿರುದ್ಧ 'ಕನ್ನಡ ಒಕ್ಕೂಟ-ಕರ್ನಾಟಕ ರಾಜ್ಯ' ಸಂಘಟನೆ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ಇಂದು ಅತ್ತಿಬೆಲೆ ಬಂದ್ ನಡೆಸಲಾಯಿತು. ಕರ್ನಾಟಕ-ತಮಿಳುನಾಡು ಗಡಿ ಬಂದ್ ಮಾಡಿ, ವಾಹನ ತಡೆದು ಕನ್ನಡಪರ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದರು. ಈ ವೇಳೆ ಆಗಸ್ಟ್ 13ರಂದು 'ಕರ್ನಾಟಕ ಬಂದ್' ಮಾಡುವುದಾಗಿ ವಾಟಾಳ್ ನಾಗರಾಜ್ ಖಚಿತಪಡಿಸಿದ್ದಾರೆ.
ಆನೇಕಲ್ ತಾಲೂಕಿನ ಅತ್ತಿಬೆಲೆ ಗಡಿ ಬಂದ್ ಮಾಡುವ ಮುನ್ನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ವಾಟಾಳ್ ನಾಗರಾಜ್ ಅವರು ಜಾಗಟೆ ಬಾರಿಸಿದರು. ತಮಿಳುನಾಡು ವಿರುದ್ಧ 'ಕರ್ನಾಟಕ ಬಂದ್'ಗೆ ಎಲ್ಲ ಸಹಕರಿಸುವಂತೆ ಕೋರಿದರು. ಬಳಿಕ ವಾಟಾಳ್ ನಾಗರಾಜ್ ಅವರೊಂದಿಗೆ ಒಕ್ಕೂಟ ಪದಾಧಿಕಾರಿಗಳು, ಕನ್ನಡಪರ ಕಾರ್ಯಕರ್ತರು ಗಡಿ ಬಂದ್ ಮಾಡಿದರು. ಕಾವೇರಿ ವಿಚಾರದಲ್ಲಿ ನಿರಂತರವಾಗಿ ಅನ್ಯಾಯವಾಗುತ್ತಿದೆ ಎಂದು ಆಕ್ರೋಶದ ಘೋಷಣೆ ಕೂಗಿಸಿದರು. ವಾಹನಗಳ ತಡೆದರು. ಈ ವೇಳೆ ಈ ಭಾಗದಲ್ಲಿ ಕೆಲ ಕಾಲ ಸಂಚಾರ ಅಸ್ತವ್ಯಸ್ತವಾಯಿತು.

'ಕರ್ನಾಟಕ ಬಂದ್' ಫಿಕ್ಸ್": ಇದು ಕಾವೇರಿಗಷ್ಟೇ ಅಲ್ಲ! ವಾಟಾಳ್
ಪ್ರತಿಭಟನೆ ವೇಳೆ ಮಾತನಾಡಿದ ವಾಟಾಳ್ ನಾಗರಾಜ್ ಅವರು, ತಮಿಳುನಾಡಿನವರು ಕರ್ನಾಟಕದ ಜನತೆಗೆ ಮಾಡಿರುವ ಅನ್ಯಾಯದ ವಿರುದ್ಧ, ಮೇಕೆದಾಟು ಯೋಜನೆ ವಿರೋಧಿಸುತ್ತಿರುವುದರ ವಿರುದ್ಧ ರಾಜ್ಯ ಬಂದ್ ಮಾಡಲಾಗುತ್ತಿದೆ. ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ರಾಜ್ಯ ಸರ್ಕಾರದ ನಿಲುವು ಖಂಡಿಸಿ ಬಂದ್‌ಗೆ ಕರೆ ನೀಡಲಾಗಿದೆ. ಹೀಗಾಗಿ ಈ ಬಂದ್ ಕೇವಲ ಕಾವೇರಿ ನದಿ ನೀರಿಗಾಗಿ ಅಷ್ಟೇ ಅಲ್ಲ ಎಂದು ಅವರು ತಿಳಿಸಿದರು.
ತಮಿಳುನಾಡು ಉದ್ದೇಶಪೂರ್ವಕವಾಗಿ ಇದರಲ್ಲಿ ರಾಜಕೀಯ ಮಾಡುತ್ತಿದೆ. ಹೀಗಾಗಿ ನಮಗೆ 'ಕರ್ನಾಟಕ ಬಂದ್' ಅನಿವಾರ್ಯವಾಗಿದೆ. ಆಗಸ್ಟ್ 13ರಂದು ಯಾರು ಏನೇ ಹೇಳಿದರೂ ಬಂದ್ ಮಾಡಿಯೇ ತೀರುತ್ತೇವೆ. ಯಾವುದೇ ಕಾರಣಕ್ಕೂ ಬಂದ್ ವಾಪಾಸ್ ಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಅಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಬಂದ್ ಮಾಡಲಾಗುತ್ತದೆ. ಆಟೋ ರಿಕ್ಷಾ, ಅಂಗಡಿ ಮುಂಗಟ್ಟುಗಳು, ಹೋಟೆಲ್, ವಾಹನಗಳ ಸಂಚಾರ ಇರುವುದಿಲ್ಲ. ದಿನಸಿ, ಹಾಲು, ಮೆಡಿಕಲ್ ಶಾಪ್, ಆಸ್ಪತ್ರೆಗಳು ಸೇರಿದಂತೆ ಅಗತ್ಯ ವಸ್ತುಗಳು ಮಾತ್ರವೇ ಲಭ್ಯ ಇರಲಿವೆ ಎಂದರು.
ಮಂಗಳವಾರ ಹುಬ್ಬಳ್ಳಿಯಲ್ಲಿ ಪ್ರತಿಭಟನೆ
ಇಂದು ಅತ್ತಿಬೆಲೆ ಗಡಿ ಬಂದ್ ಮಾಡಿದ್ದೇವೆ. ನಾಳೆ ಬೆಳಗ್ಗೆ ಹುಬ್ಬಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಮಾಡಲಾಗುವುದು. ಅಲ್ಲಿ ರೈತರು, ಕನ್ನಡ ಪರ ಹೋರಾಟಗಾರರು, ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಇಡೀ ರಾಜ್ಯದ ಎಲ್ಲ ಕನ್ನಡ ಪರ ಸಂಘಟನೆಗಳು, ಜನರು ಬಂದ್ ್ಬೆಂಬೆಂಬಲಿಸುವಂತೆ ವಾಟಾಳ್ ನಾಗರಾಜ್ ಈ ವೇಳೆ ಕೋರಿದರು.
ಅತ್ತಿಬೆಲೆ ಬಂದ್ ವೇಳೆ ಕನ್ನಡಪರ ಕಾರ್ಯಕರ್ತರಾದ ಮಂಜುನಾಥ್ ದೇವ, ನಾರಾಯಣ ಸ್ವಾಮಿ, ಅಂಬುಜಮ್ಮ, ವಿಜಯಲಕ್ಷ್ಮೀ, ಗಿರೀಶ್ ಗೌಡ, ಮಹದೇವಪ್ಪ, ಕಲಿಂ ಪಾಷಾ ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು.


Click it and Unblock the Notifications
