Karnataka Weather:2022, 2023 ಕ್ಕಿಂತಲೂ 2024ರಲ್ಲಿ ಕರ್ನಾಟಕದ 'ತಾಪಮಾನ' ಹೆಚ್ಚಳ: ನಕ್ಷೆ ಸಹಿತ ಮಾಹಿತಿ ಇಲ್ಲಿದೆ
ಬೆಂಗಳೂರು, ಏಪ್ರಿಲ್ 16: ಕರ್ನಾಟಕ ರಾಜ್ಯದಲ್ಲಿ ಒಂದು ವರ್ಷ ಮಳೆ ಉತ್ತಮವಾಗಿ ಸುರಿದರೆ, ಮತ್ತೊಂದು ವರ್ಷ ಬರಗಾಲ ಬೀಳುತ್ತಿದೆ. ಮಳೆಯಲ್ಲಿ ಏರಿಳಿಕೆ ಮುಂದುವರಿದಂತೆ, ತಾಪಮಾನದಲ್ಲಿ ಹಾಗೆ ಆಗುತ್ತಿಲ್ಲ. ಬದಲಾಗಿ ಉಷ್ಣಾಂಶ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಲೇ ಇದೆ.
ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಲ್ಲಿ (2022, 2023 & 2024) ಮಾರ್ಚ್ ತಿಂಗಳ ತಾಪಮಾನದಲ್ಲಿ ಹೆಚ್ಚಾಗುತ್ತಲೇ ಇದೆ. 2022 ವಾಡಿಕೆಯಷ್ಟಿದ್ದ ತಾಪಮಾನ ಮಾರನೇ ವರ್ಷ 2023ರಲ್ಲಿ ರಾಜ್ಯದ ಅರ್ಧದಷ್ಟು ಜಿಲ್ಲೆಗಳಲ್ಲಿ ಮಾತ್ರ ಏರಿಕೆ ಕಂಡು ಬಂತು. ಆದರೆ ಈ ವರ್ಷ (2024) ಬೇಸಿಗೆ ವೇಳೆ ಹಿಂದೆಂದಿಗಿಂತಲೂ ಹೆಚ್ಚು ಉಷ್ಣಾಂಶ ಕಂಡು ಬಂದಿದೆ. ಈ ಕುರಿತು ನೀವು 03 ವರ್ಷಗಳ ನಕ್ಷೆ ಸಹಿತ ರಾಜ್ಯದ ತಾಪಮಾನ ಮಾಹಿತಿ ಲೆಕ್ಕ ಹಾಕಬಹುದು.

ಈ ವರ್ಷ ಬಿಸಿಲಿಗೆ ತತ್ತರಿಸಿದ ರಾಜ್ಯ
2019ರಲ್ಲಿ ರಾಜ್ಯದಲ್ಲಿ ಅತ್ಯಧಿಕ ಮಳೆ ಬಂದು ಉತ್ತರ ಕರ್ನಾಟಕದಲ್ಲಿ ಎರಡೆರಡು ಭಾರಿ ಪ್ರವಾಹ ಉಂಟಾಗಿತ್ತು. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲೂ ಪ್ರವಾಹ, ಅತೀ ವೃಷ್ಟಿ ನಿರ್ಮಾಣವಾಗಿತ್ತು. ಕಳೆದ ವರ್ಷ ಐಟಿ ಕೇಂದ್ರದ ಮಹಾದೇವಪುರ ಅಕ್ಷರಶಃ ನಲುಗಿತ್ತು. ಆದರೆ ಈ ಭಾರಿ ಬೇಸಿಗೆಯಲ್ಲಿ ಬೆಂಗಳೂರು ಸೇರಿದಂತೆ ಎಲ್ಲ ಜಿಲ್ಲೆಗಳು ಬಿಸಿಲಿಗೆ ಬೆಂದಿವೆ.
ಮಳೆ ನೀರು ಇಂಗುವಿಕೆ ಕಡಿಮೆ
ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆ ಆಗುತ್ತಿದೆ. ಇದರೊಂದಿಗೆ ನೀರು ಬಳಕೆ, ಬೇಡಿಕೆ ಹೆಚ್ಚಾಗುತ್ತಿದೆ. ಮಳೆ ನೀರಿನ ರಕ್ಷಣೆ ಕ್ರಮ ಆಗುತ್ತಿಲ್ಲ. ಭೂಮಿಯ ಒಡಲು ನೀರಿಲ್ಲದೇ ಬರಿದಾಗುತ್ತಿದೆ. ಜೊತೆಗೆ ನಗರ ಸೇರಿ ಹಳ್ಳಿಗಾಡುಗಳಲ್ಲಿ ರಸ್ತೆಗಳಲ್ಲಿ ಕಾಂಕ್ರೀಟು ಹಾಕಲಾಗುತ್ತದೆ. ಇದರಿಂದ ಶಾಖದ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ. ಬೆಂಗಳೂರಿನಂತ ನಗರಗಳಲ್ಲಿ ನೀರು ಭೂಮಿಯಲ್ಲಿ ಇಂಗುವುದೇ ಇಲ್ಲ.
ಬಿಸಿ ಗಾಳಿ ವಾತಾವರಣ ಏರಿಕೆ
ಅಂತರ್ಜಲ ಕುಸಿತ, ಮಳೆ ಇಳಿಕೆಯಿಂದ ತೇವಾಂಶ ಕಡಿಮೆ ಆಗುತ್ತದೆ. ಜಲಾಶಯ ಬತ್ತಿ ಹೋಗಿವೆ. ಇನ್ನೂ ಬಿಸಲಿಗೆ ಕಾಂಕ್ರಿಟ್ ರಸ್ತೆಗಳು ಹೆಚ್ಚು ಕಾಯುತ್ತವೆ. ಇವು ಸಹ ಶಾಖಲೆ ಅಲೆಯ ಭಾಗವಾಗಿದೆ. ಇಡೀ ವಾತಾವರಣದಲ್ಲಿ ಒಂದಿಲ್ಲೊಂದು ಕಾರಣದಿಂದ ನೀರಿನ ತೇವಾಂಶ ಕಡಿಮೆ ಆಗುತ್ತಿದೆ. ಹೀಗಾಗಿ ಬಿಸಿಲು, ಶಾಖದ ಬಿಸಿ, ಬಿಸಿ ಗಾಳಿಯ ವಾತಾವರಣದಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಿದೆ.

ಕರ್ನಾಟಕದಲ್ಲಿ ಈ 3ವರ್ಷ ತಾಪಮಾನ ಹೇಗಿತ್ತು?
2022 ರಲ್ಲಿ ಹಾಸನ, ಚಿಕ್ಕಮಗಳೂರು, ಕೊಡಗು, ಚಾಮರಾಜನಗರ, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ವಾಡಿಕೆಯ ಆಸುಪಾಸು ತಾಪಮಾನ ಕಂಡು ಬಂದಿತ್ತು. ಉತ್ತರ ಕರ್ನಾಟಕ ಸೇರಿದಂತೆ ಉಳಿದ ಕೆಲವು ಜಿಲ್ಲೆಗಳಲ್ಲಿ ವಾಡಿಕೆಗಿಂತ ತುಸು ಹೆಚ್ಚು ಬಿಸಿಲು ದಾಖಲಾಗುತ್ತಿತ್ತು.
ನಂತರದ ವರ್ಷ 2023ರಲ್ಲಿ ಹಾಸನ, ಚಿಕ್ಕಮಗಳೂರು, ಕೊಡಗು, ಚಾಮರಾಜನಗರ ಜಿಲ್ಲೆ ಹಾಗೂ ಮೈಸೂರು, ಮಂಡ್ಯ, ಹಾವೇರಿ, ಕರಾವಳಿ ಮೂರು ಜಿಲ್ಲೆಗಳಲ್ಲಿ ಮಾತ್ರ ಹಿಂದಿನ ವರ್ಷದಷ್ಟೇ (2022) ತಾಪಮಾನ ಕಂಡು ಬಂದಿತ್ತು. ಉಳಿದಂತೆ ಕಲ್ಯಾಣ ಕರ್ನಾಟಕದ ಕೊಪ್ಪಳ, ಯಾದಗಿರಿ, ರಾಯಚೂರು, ಬೀದರ್, ಗದಗ, ದಾವಣಗೆರೆ, ಬಳ್ಳಾರಿ, ಚಿತ್ರದುರ್ಗ ಇನ್ನಿತರ ಜಿಲ್ಲೆಗಳಲ್ಲಿ ತಕ್ಕ ಮಟ್ಟಿಗೆ ಬಿಸಿಲಿನ ಆರ್ಭಟ ಇತ್ತು. ಹೆಚ್ಚು ತಾಪಮಾನ ದಾಖಲಾಗಿತ್ತು.
ಆದರೆ ಪ್ರಸಕ್ತ 2024ರ ವರ್ಷದ ಬೇಸಿಗೆಯಲ್ಲಿ ಹಿಂದಿನ ಎರಡು ವರ್ಷಗಳ ಬಹುತೇಕ ಎಲ್ಲ ದಾಖಲೆಗಳು ಮುರಿದಿದೆ. ಕಾರಣ ರಾಜ್ಯದ ಬಹತೇಕ ಎಲ್ಲ ಜಿಲ್ಲೆಗಳಲ್ಲಿಯೂ ಅತ್ಯಧಿಕ ತಾಪಮಾನ ದಾಖಲಾಗಿದೆ. ಅಂದರೆ ಈ ವರ್ಷ ವಾಡಿಕೆಗಿಂತಲೂ 3-4 ಡಿಗ್ರಿ ಸೆಲ್ಸಿಯಸ್ ಹೆಚ್ಚು ಉಷ್ಣಾಂಶ ದಾಖಲಾಗಿದೆ.
A year-by-year comparison of district-wise average maximum temperature for March 2022-2024.
— Karnataka State Natural Disaster Monitoring Centre (@KarnatakaSNDMC) April 16, 2024
The average maximum temperature in March 2024 was higher than it was in the last two years. pic.twitter.com/ePOUXsVLv3
ಭವಿಷ್ಯಕ್ಕಾಗಿ ಜಲಮೂಲ ರಕ್ಷಣೆ ಅಗತ್ಯ
ಈ ವಾತಾವರಣ ಹೀಗೆ ಸಾಗಿದರೆ ಭವಿಷ್ಯದಲ್ಲಿ ಶಾಖಲೆ ಅಲೆಗೆ ಜನರು ಸಾಯುವ ಸ್ಥಿತಿ ಎದುರಾಗಲಿದೆ. ನೀರಿನ ವ್ಯರ್ಥ ಬಳಕೆ, ಮಳೆ ಸಾಗರ ಸೇರುವುದನ್ನು ತಪ್ಪಿಸಬೇಕಿದೆ. ಕೆರೆಗಳ ಪುನಶ್ಚೇತನ ಜೊತೆಗೆ, ಮಳೆ ನೀರು ಕೊಯ್ಲು, ಮಳೆ ನೀರು ಸಂಗ್ರಹಣೆಯಂತೆ ಕ್ರಮಗಳಿಗೆ ಸರ್ಕಾರ ಅದ್ಯತೆ ಕೊಡಬೇಕಿದೆ. ಜಲಮೂಲಗಳನ್ನು ಭವಿಷ್ಯ ದೃಷ್ಟಿಯಿಂದ ಕಾಪಾಡಿಕೊಳ್ಳಬೇಕಿದೆ. ಇಲ್ಲವಾದರೆ ವರ್ಷದಿಂದ ವರ್ಷ ನೀರಿನ ಕೊರತೆ, ಮಳೆ ಕೊರೆತೆ ಆಗುವ ಜೊತೆಗೆ ಶಾಖಲೆ ಅಲೆ ಎದುರಿಸಬೇಕಾಗುತ್ತದೆ.












Click it and Unblock the Notifications