ಇಂದಿನಿಂದ ಸದನ ಕದನ: ಹೊಸ ಸರ್ಕಾರ ವಿರುದ್ಧ ವಿಪಕ್ಷಗಳ ಕೈಯಲ್ಲಿ ಗ್ಯಾರಂಟಿ ಅಸ್ತ್ರ
ಬೆಂಗಳೂರು, ಜುಲೈ 03: ರಾಜ್ಯ ವಿಧಾನಮಂಡಲ ಅಧಿವೇಶನ ಇಂದಿನಿಂದ (ಜುಲೈ 3) ಆರಂಭವಾಗಲಿದ್ದು, ನೂತನ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳ ನಡುವೆ ಜಟಾಪಟಿಗೆ ವೇದಿಕೆ ಸಿದ್ಧವಾಗಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಹಲವು ವಿವಾದಿತ ವಿಧೇಯಕಗಳನ್ನು ಹಿಂಪಡೆಯುವ ಕಾಂಗ್ರೆಸ್ ಸರ್ಕಾರದ ನಿರ್ಧಾರ ಹಾಗೂ ಗ್ಯಾರಂಟಿ ಅನುಷ್ಠಾನದಲ್ಲಿನ ಗೊಂದಲ ಮತ್ತು ಷರತ್ತುಗಳ ವಿರುದ್ಧ ಹೋರಾಟ ನಡೆಸಲು ವಿಪಕ್ಷಗಳು ಸಿದ್ಧವಾಗಿದೆ.
ಕಾಂಗ್ರೆಸ್ ಸರ್ಕಾರದ ವಿರುದ್ಧ ಸದನದ ಒಳಗೆ ಹಾಗೂ ಹೊರಗೆ ಹೋರಾಟ ನಡೆಸಲು ಬಿಜೆಪಿ ತೀರ್ಮಾನಿಸಿದೆ. ವಿಧಾನ ಮಂಡಲ ಅಧಿವೇಶನದ ಹಿನ್ನೆಲೆಯಲ್ಲಿ ಸದನದ ಒಳಗೆ ಮತ್ತು ಹೊರಗೆ ಸರ್ಕಾರದ ಬೋಗಸ್ ಗ್ಯಾರಂಟಿ ಯೋಜನೆಗಳ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಲಿದೆ. ಕಾಂಗ್ರೆಸ್ ಸರ್ಕಾರದ ಜನವಿರೋಧಿ ಯೋಜನೆಗಳ ವಿರುದ್ಧ ಹೋರಾಟ ನಡೆಸುತ್ತೇವೆ. ರಾಜ್ಯ ಸರ್ಕಾರ 10 ಕೆಜಿ ಅಕ್ಕಿಯ ಹಣ ಕೊಡಬೇಕು, ಇಲ್ಲವೇ ಕ್ಷಮೆ ಕೇಳಬೇಕು. ಕೇಂದ್ರದಿಂದ 5 ಕೆಜಿ ಅಕ್ಕಿ ಹಣ ಕೊಡುತ್ತಿರುವ ಬಗ್ಗೆ ಸತ್ಯ ಹೇಳಿ ಕ್ಷಮೆ ಕೇಳಬೇಕು ಎಂದು ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದ್ದರು.

ಇನ್ನು ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿ ಘೋಷಿಸಿತ್ತು. ಆದರೆ, ಈಗ ಅಧಿಕಾರಕ್ಕೆ ಬಂದು ಒಂದು ತಿಂಗಳಾದರೂ ಬೇಡಿಕೆ ಈಡೇರಿಸಿಲ್ಲ. ಕೆಲ ಷರತ್ತು ವಿಧಿಸಿ ಶಕ್ತಿ ಯೋಜನೆ ಜಾರಿ ಬಿಟ್ಟರೆ ಉಳಿದ ಭರವಸೆಗಳ ಈಡೇರಿಸುವ ಲಕ್ಷಣ ಗೋಚರಿಸುತ್ತಿಲ್ಲ. ಗ್ಯಾರಂಟಿ ಅನುಷ್ಠಾನಗೊಳಿಸದಿದ್ದರೆ, ಬೆಂಗಳೂರಿನ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕೂಡ ಘೋಷಿಸಿದ್ದರು.
ಒಟ್ಟಾರೆ ವಿಧಾನಸಭಾ ಚುನಾವಣೆಗೂ ಮುನ್ನ ಗ್ಯಾರಂಟಿಗಳನ್ನು ಘೋಷಿಸಿದ್ದ ಕಾಂಗ್ರೆಸ್, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಗ್ಯಾರಂಟಿ ಯೋಜನೆಗಳಿಗೆ ಷರತ್ತುಗಳನ್ನು ಹಾಕಿ ಜನರನ್ನು ವಂಚಿಸುತ್ತಿದೆ ಎಂದು ಬಿಜೆಪಿ ಗಂಭೀರವಾಗಿ ಆರೋಪಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಸದನದ ಒಳಗೂ ಹೊರಗೂ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸಲು ಬಿಜೆಪಿ ಸಜ್ಜಾಗಿದೆ.












Click it and Unblock the Notifications