ಗುರುವಾರದ ವಿಧಾನಸಭೆ ಕಲಾಪದ ಮುಖ್ಯಾಂಶಗಳು
ಬೆಂಗಳೂರು, ಫೆ. 13 : ಗುರುವಾರದ ವಿಧಾನಪರಿಷತ್ ಸದಸ್ಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆಟ್ ದೋಸೆ, ನಾಟಿ ಕೋಳಿ, ಮುದ್ದೆ, ಕಾಲುಸೂಪು ಹಾಗೂ ದೊನ್ನೆ ಬಿರಿಯಾನಿಯನ್ನು ನೆನಪು ಮಾಡಿಕೊಟ್ಟರು. ಜಂಟಿ ಅಧಿವೇಶನದ 10 ದಿನಗಳ ಕಲಾಪ ಶುಕ್ರವಾರ ಅಂತ್ಯಗೊಳ್ಳಲಿದೆ. ಗುರುವಾರದ ಕಲಾಪದ ಮುಖ್ಯಾಂಶಗಳು ಇಲ್ಲಿವೆ.
ಸ್ವತ್ತುಗಳು ಪಾಲಿಕೆಗೆ ಹಸ್ತಾಂತರ : ಬೆಂಗಳೂರು ಮಹಾನಗರಪಾಲಿಕೆಗೆ ನಗರ ಸಭೆಯ ಒಟ್ಟು 1,688 ಸ್ವತ್ತುಗಳನ್ನು ಹಸ್ತಾಂತರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನ ಪರಿಷತ್ತಿನಲ್ಲಿ ತಿಳಿಸಿದ್ದಾರೆ. ಇಂದು ಬೆಂಗಳೂರು ಮಹಾನಗರ ಪಾಲಿಕೆಯು 110 ಹಳ್ಳಿಗಳು 7 ನಗರಸಭೆ ಹಾಗೂ 1 ಪಟ್ಟಣ ಪಂಚಾಯಿತಿಯನ್ನು ಸೇರಿದಂತೆ 800 ಚದರ ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು.

ವಿಧಾನ ಪರಿಷತ್ ಸದಸ್ಯ ರಾಮಚಂದ್ರಗೌಡ ಅವರು 2007 ನೇ ಸಾಲಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಹೊಸ ಪ್ರದೇಶಗಳು ಸೇರಿದ್ದರೂ ಸಹ ಇದುವರೆವಿಗೂ ಸರ್ಕಾರಿ ಆಸ್ತಿಗಳನ್ನು ಪಾಲಿಕೆ ವ್ಯಾಪ್ತಿಗೆ ಹಸ್ತಾಂತರವಾಗದಿರುವ ಬಗ್ಗೆ ಪ್ರಸ್ತಾಪಿಸಿದಾಗ ಸಿಎಂ ಉತ್ತರ ನೀಡಿದರು.
ಮೈಸೂರಿನ ತಿಂಡಿಗಳ ನೆನಪು : ವಿಧಾನ ಪರಿಷತ್ತಿನ ಕಲಾಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆ ದಿನಗಳಲ್ಲಿ ಮೈಸೂರಿನಲ್ಲಿ ದೊರೆಯುತ್ತಿದ್ದ ರುಚಿಕರ ತಿಂಡಿ ತಿನಿಸುಗಳ ವರ್ಣನೆಯನ್ನು ಮಾಡುವ ಮೂಲಕ ಸದಸ್ಯರಿಗೆ ಸವಿರುಚಿ ಉಣಬಡಿಸಿದ ಪ್ರಸಂಗ ನಡೆಯಿತು. [ಪರಿಷತ್ತಿನಲ್ಲಿ ದೋಸೆ, ಮುದ್ದೆ, ದೊನ್ನೆ ಬಿರಿಯಾನಿ]
ಎಎಸ್‌ಎಸ್‌ಸಿ ಪರೀಕ್ಷೆ ಬರೆಯಲು ಅವಕಾಶ : ಅನಧಿಕೃತ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಎಸ್ಎಸ್ಎಲ್‌ಸಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ. ವಿಧಾನ ಪರಿಷತ್‍ನ ಸದಸ್ಯ ಪ್ರೊ. ಪಿ.ವಿ. ಕೃಷ್ಣ ಭಟ್ ಮತ್ತು ವೈ.ಎ. ನಾರಾಯಣ ಸ್ವಾಮಿ ಅವರ ಪ್ರಸ್ತಾಪಿಸಿದ ವಿಷಯಕ್ಕೆ ಸಚಿವರು ಉತ್ತರ ನೀಡಿದರು.
ಕಾಲುಬಾಯಿ ಜ್ವರದಿಂದ ಜಾನುವಾರು ಮೃತಪಟ್ಟಿಲ್ಲ : ರಾಜ್ಯದಲ್ಲಿ ಕಾಲುಬಾಯಿ ಜ್ವರದಿಂದ 2014-15 ನೇ ಸಾಲಿನಲ್ಲಿ ಯಾವುದೇ ಜಾನುವಾರು ಕೂಡ ಮೃತಪಟ್ಟಿಲ್ಲ ಎಂದು ಪಶುಸಂಗೋಪನಾ ಸಚಿವ ಟಿ.ಬಿ. ಜಯಚಂದ್ರ ಅವರು ವಿಧಾನ ಪರಿಷತ್ತಿಗೆ ತಿಳಿಸಿದ್ದಾರೆ. ಸದಸ್ಯ ವಿ. ಸೋಮಣ್ಣ ಅವರ ಪ್ರಶ್ನೆಗೆ ಉತ್ತರಿಸಿರುವ ಅವರು 2013-14 ನೇ ಸಾಲಿನಲ್ಲಿ ಕಾಲುಬಾಯಿ ಕಾಯಿಲೆಯಿಂದ 14677 ಜಾನುವಾರುಗಳು ಮೃತಪಟ್ಟಿದ್ದವು. ಆದರೆ ಪ್ರಸಕ್ತ ಸಾಲಿನಲ್ಲಿ ಈ ಕಾಯಿಲೆಗೆ ಜಾನುವಾರು ಮೃತಪಟ್ಟಿಲ್ಲ ಎಂದರು.
ರೈಲ್ವೆ ಯೋಜನೆಗಳು ಕೈತಪ್ಪಲ್ಲ : ಕೇಂದ್ರದ ರೈಲ್ವೆ ಯೋಜನೆಗಳು ರಾಜ್ಯದಿಂದ ಕೈತಪ್ಪಿಹೋಗಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನ ಪರಿಷತ್ತಿನಲ್ಲಿ ಹೇಳಿದ್ದಾರೆ. ಸದಸ್ಯ ಅಮರನಾಥ್ ಪಾಟೀಲ್ ಅವರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಅವರು, ರೈಲ್ವೆ ಯೋಜನೆಗಳು ವಿಳಂಬವಾಗುವುದಕ್ಕೆ ರಾಜ್ಯ ಸರ್ಕಾರ ಜವಾಬ್ದಾರಿಯಲ್ಲ ಎಂದರು. [ರೈಲ್ವೆ ಯೋಜನೆಗಳಿಂದ ರಾಜ್ಯಕ್ಕೆ ಹೊರೆ : ಸಿದ್ದರಾಮಯ್ಯ]
ತಿರುಪತಿ ಭೂ ವಿವಾದ ಶೀಘ್ರ ಪರಿಹಾರ : ತಿರುಪತಿಯಲ್ಲಿರುವ ಕರ್ನಾಟಕ ಸರ್ಕಾರಕ್ಕೆ ಸೇರಿದ 7.05 ಎಕರೆ ಸ್ಥಳದ ಕುರಿತ ವಿವಾದ ಶೀಘ್ರದಲ್ಲೇ ಬಗೆಹರಿಯಲಿದೆ ಎಂದು ಮುಜರಾಯಿ ಸಚಿವ ಟಿ.ಬಿ.ಜಯಚಂದ್ರ ಅವರು ವಿಧಾನಪರಿಷತ್ತಿನಲ್ಲಿ ಹೇಳಿದ್ದಾರೆ. ಕರ್ನಾಟಕದ ಬಗ್ಗೆ ಕಳಕಳಿ ಹೊಂದಿರುವ ಆಂಧ್ರಪ್ರದೇಶದ ಶಾಸಕರು ನಡೆಸಿದ ಪ್ರಯತ್ನದಿಂದ ಮತ್ತು ಅಲ್ಲಿನ ಮುಜರಾಯಿ ಸಚಿವರ ಜತೆಗೆ ನಡೆಸಿದ ಮಾತುಕತೆಯಿಂದ ಬಿಕ್ಕಟ್ಟು ಬಗೆಹರಿಯುವ ಸಾಧ್ಯತೆ ಇದೆ ಎಂದರು.












Click it and Unblock the Notifications