ವಿಧಾನಸಭೆ ಅಧಿವೇಶನ : ಮಂಗಳವಾರದ ಹೈಲೈಟ್ಸ್
ಬೆಂಗಳೂರು, ಫೆ.3 : ಬಿಬಿಎಂಪಿ ಮಾದರಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ( ಬಿಡಿಎ)ಯನ್ನು ವಿಭಜಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಹೇಳಿದ್ದಾರೆ. ಮೀಟರ್ ಖರೀದಿಗೆ ಸಂಬಂಧಪಟ್ಟಂತೆ ವಿಧಾನಪರಿಷತ್ತಿನಲ್ಲಿ ಕೆ.ಎಸ್.ಈಶ್ವರಪ್ಪ ಮತ್ತು ಡಿಕೆ ಶಿವಕುಮಾರ್ ನಡುವೆ ಜಟಾಪಟಿ ನಡೆದಿದೆ.
ಜಂಟಿ ಅಧಿವೇಶನದ ಎರಡನೇ ದಿನದ ಕಲಾಪದ ವೇಳೆ ನಾಗಮಂಗಲ ಶಾಸಕ ಚೆಲುವರಾಯ ಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ ಅವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಂತೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನು ವಿಭಜಿಸುವ ಚಿಂತನೆ ಇದೆ ಎಂದು ಹೇಳಿದರು.

ಗೃಹ ರಕ್ಷಕದಳದ ಸಿಬ್ಬಂದಿಗೆ ವೇತನ ಹೆಚ್ಚಳ : ಗೃಹ ರಕ್ಷಕದಳ ಸಿಬ್ಬಂದಿಗಳಿಗೆ ವೇತನ ಹೆಚ್ಚಿಸಲಾಗುತ್ತದೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ವಿಧಾನಸಭೆಯಲ್ಲಿ ಹೇಳಿದ್ದಾರೆ. ತುಮಕೂರು ಕ್ಷೇತ್ರದ ಶಾಸಕ ಡಾ.ರಫೀಕ್ ಅಹಮದ್ ಪ್ರಶ್ನೆಗೆ ಉತ್ತರ ನೀಡಿದ ಅವರು, ಮೊದಲು ನಗರ ಪ್ರದೇಶದವರಿಗೆ 200 ರೂ, ಗ್ರಾಮೀಣ ಭಾಗದವರಿಗೆ 175 ರೂ. ನೀಡಲಾಗುತ್ತಿತ್ತು. [ಚಿತ್ರಗಳಲ್ಲಿ : ರಾಜ್ಯಪಾಲರ ಭಾಷಣದ ಚಿತ್ರಗಳು]
ನಮ್ಮ ಸರ್ಕಾರ ಬೆಂಗಳೂರಿನಲ್ಲಿ ಕೆಲಸ ಮಾಡುವವರಿಗೆ 300 ರೂ. ಗ್ರಾಮೀಣ ಭಾಗದಲ್ಲಿ 250 ರೂ.ಗೆ ಹೆಚ್ಚಿಸಿದೆ. ಇದನ್ನು ಇನ್ನು ಹೆಚ್ಚು ಮಾಡುವ ಪ್ರಸ್ತಾವನೆ ಇದ್ದು, ಬಜೆಟ್‌ನಲ್ಲಿ ಈ ಕುರಿತ ಘೋಷಣೆ ಮಾಡಲಾಗುವುದು ಎಂದರು. [ರಾಜ್ಯಪಾಲರ ಭಾಷಣದ ಮುಖ್ಯಾಂಶಗಳು]
ಇನ್ನಷ್ಟು ಹೆಚ್ಚಿಸಬೇಕು ಎಂಬ ಬೇಡಿಕೆಯಿದೆ. ಈ ಪ್ರಸ್ತಾವನೆಯನ್ನು ಪರಿಶೀಲನೆ ನಡೆಸಿ ಆರ್ಥಿಕ ಇಲಾಖೆಗೆ ಕಳುಹಿಸಲಾಗುವುದು. ಮುಖ್ಯಮಂತ್ರಿಯವರೆ ಆರ್ಥಿಕ ಸಚಿವರಾಗಿರುವುದರಿಂದ ಭತ್ಯೆ ಹೆಚ್ಚಳವಾಗಲಿದೆ ಎಂದು ಹೇಳಿದರು.
ನ್ಯಾಯಾಲಯಗಳಲ್ಲಿನ ಹುದ್ದೆಗಳ ಭರ್ತಿ : ರಾಜ್ಯದ ಅಧೀನ ನ್ಯಾಯಾಲಯಗಳಲ್ಲಿ ವಿವಿಧ ವೃಂದದ 6,849 ಹುದ್ದೆಗಳು ಖಾಲಿ ಇವೆ ಹಾಗೂ 254 ನ್ಯಾಯಾಂಗ ಸೇವಾ ಅಧಿಕಾರಿಗಳ ಹುದ್ದೆಗಳೂ ಖಾಲಿ ಇವೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ. ಬಿ. ಜಯಚಂದ್ರ ಅವರು ವಿಧಾನಸಭೆಯಲ್ಲಿ ಹೇಳಿದ್ದಾರೆ. ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ ಆದೇಶ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಕಾನೂನು ಬದಲಾವಣೆ ಅಗತ್ಯವಾಗಿರುವುದರಿಂದ ಅಂತಿಮ ತಿದ್ದುಪಡಿ ಮಾಡಿದ ಬಳಿಕ ವಿಳಂಬವಿಲ್ಲದೆ ನೇಮಕಾತಿ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ ಎಂದು ತಿಳಿಸಿದರು.
ರಾಜ್ಯ ಉಚ್ಛ ನ್ಯಾಯಾಲಯ ನೀಡಿರುವ ನಿರ್ದೇಶನದಂತೆ ಹೆಚ್ಚುವರಿಯಾಗಿ 172 ಸಿವಿಲ್ ಜಡ್ಜ್ ಹುದ್ದೆಗಳು ದೊರೆಯಲಿದ್ದು, ಇವುಗಳನ್ನೂ ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು. ಈಗಾಗಲೇ ಹಣಕಾಸು ಇಲಾಖೆ ವಿವಿಧ ಹಂತದ 850 ನ್ಯಾಯಾಂಗ ಅಧಿಕಾರಿಗಳ ನೇಮಕಾತಿಗೆ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.
ದೇವಾಲಯಗಳ ಅಭಿವೃದ್ಧಿಗೆ 300 ಕೋಟಿ : ದೇವಾಲಯಗಳ ಜೀರ್ಣೋದ್ಧಾರಕ್ಕಾಗಿ 300 ಕೋಟಿ ರೂ.ಗಳನ್ನು ನೀಡುವುದಾಗಿ ಸರ್ಕಾರ ಘೋಷಿಸಿದೆ. ಮುಜರಾಯಿ ಸಚಿವ ಟಿ.ಬಿ.ಜಯಚಂದ್ರ ಅವರು. ರಾಜ್ಯದಲ್ಲಿರುವ ದೇವಾಲಯಗಳ ಅಭಿವೃದ್ಧಿಗಾಗಿ 300 ಕೋಟಿ ರೂ.ಗಳನ್ನು ಸದ್ಯದಲ್ಲೇ ಒದಗಿಸುತ್ತೇವೆ. ಯಾವುದೇ ಜಿಲ್ಲೆಗೂ ತಾರತಮ್ಯವಾಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದರು.












Click it and Unblock the Notifications