ಬಿಜೆಪಿಗೆ ಬಿಸಿತುಪ್ಪವಾದ ಯತ್ನಾಳರನ್ನು ಸೋಲಿಸಲು ಬಿಜೆಪಿ ನಾಯಕರಿಂದಲೇ ಸಂಚು ನಡೆಯಲಿದೆಯೇ? ಇನ್‌ಸೈಡ್ ಸ್ಟೋರಿ ಓದಿ
ಬೆಂಗಳೂರು, ಜನವರಿ 18: ಪೈರ್‌ಬ್ರ್ಯಾಂಡ್ ಎಂದೇ ಗುರುತಿಸಲ್ಪಡುವ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಸೋಲಿಸಲು ಬಿಜೆಪಿ ನಾಯರಿಂದಲೇ ಸಂಚು ನಡೆಯಲಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ದಟ್ಟವಾಗಿವೆ. ಇದು ಮೇಲ್ನೋಟಕ್ಕೇ ಕಂಡುಬರುತ್ತಿದೆ. ಇದಕ್ಕೆ ಕಾರಣಗಳೂ ಹಲವು. ಕಳೆದ ಮೂರು ವರ್ಷಗಳಿಂದ ಯತ್ನಾಳರು ರಾಜ್ಯ ಬಿಜೆಪಿ ನಾಯಕರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸುತ್ತಾ ಬಂದಿದ್ದಾರೆ. ಇದು ಬಿಜೆಪಿಯ ಪ್ರಮುಖ ನಾಯಕರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಆದರೂ, ಬಿಜೆಪಿಯಿಂದ ಯತ್ನಾಳರನ್ನು ವಜಾಗೊಳಿಸುವ ಬಗ್ಗೆ ರಾಜ್ಯ ನಾಯಕರು ಮಾತನಾಡುತ್ತಿಲ್ಲ. ಕಾರಣ, ಹಿಂದೂ ರಾಷ್ಟ್ರವಾದದ ಸಿದ್ಧಾಂತವನ್ನು ಪ್ರತಿಪಾದಿಸುವ ಯತ್ನಾಳ ಅವರು ಹೈಕಮಾಂಡ್‌ನ ಆಶೀರ್ವಾದ ಹೊಂದಿದ್ದಾರೆ ಎನ್ನಲಾಗುತ್ತಿದೆ.

'ಹಿಂದೂ ಹುಲಿ' ಎಂದು ಖ್ಯಾತರಾಗಿರುವ ಯತ್ನಾಳ
ಯತ್ನಾಳ ಅವರು ಹಿಂದೂ ಹುಲಿ ಎಂದೇ ರಾಜ್ಯದಲ್ಲಿ ಖ್ಯಾತರಾಗಿದ್ದಾರೆ. ಅವರು ಮಾಜಿ ಪ್ರಧಾನಿ ವಾಜಪೇಯಿ ಅವರ ಕಾಲಾವಧಿಯಲ್ಲಿ ಕೇಂದ್ರ ಸಚಿವರಾಗಿದ್ದವರು. ಹಿಂದೂ ರಾಷ್ಟ್ರವಾದದ ಪ್ರಖರ ಪ್ರತಿಪಾದಕರೂ ಹೌದು. ಮುಸ್ಲಿಂ ಬಾಹುಳ್ಯದ ವಿಜಯಪುರ ನಗರದಲ್ಲಿ ಗೆದ್ದು ಶಾಸಕರಾಗಿದ್ದಾರೆ. ಮುಸ್ಲಿಮರು, ಬುದ್ದಿಜೀವಿಗಳನ್ನು ಗುರಿಯಾಗಿಸಿ ಪದೇಪದೇ ವಾಗ್ದಾಳಿ ನಡೆಸುವ ಯತ್ನಾಳರಿಗೆ ಹಿಂದೂವಾದಿ ಯುವಕರ ಬೆಂಬಲವಿದೆ. ಒಂದು ವೇಳೆ, ಯತ್ನಾಳರನ್ನು ಬಿಜೆಪಿಯಿಂದ ವಜಾಗೊಳಿಸಿದರೆ, ಹಿಂದೂ ಮತಗಳನ್ನು ಕಳೆದುಕೊಳ್ಳುವ ಆತಂಕದಲ್ಲಿಯೂ ಬಿಜೆಪಿ ಇದೆ ಎಂದು ಹೇಳಲಾಗುತ್ತಿದೆ.

ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಯತ್ನಾಳ್ ಪ್ರಹಾರ
ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ವಿರುದ್ಧ ಬಸನಗೌಡ ಪಾಟೀಲ ಯತ್ನಾಳ ಅವರು ಹಲವು ಆರೋಪಗಳನ್ನು ಮಾಡಿದ್ದಾರೆ. ಬಿಎಸ್‌ವೈ ಕುಟುಂಬ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂಬ ಗಂಭೀರ ಆರೋಪವನ್ನು ಯತ್ನಾಳ ಮಾಡುತ್ತಲೇ ಬಂದಿದ್ದಾರೆ. ನೀರಾವರಿ ಹಾಗೂ ಲೋಕೋಪಯೋಗಿ ಇಲಾಖೆಯಲ್ಲಿ ಬಿಎಸ್‌ವೈ ಪುತ್ರ ವಿಜಯೇಂದ್ರ ವ್ಯಾಪಕವಾಗಿ ಕಮಿಷನ್ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ. ಇದೇ ಕಾರಣಕ್ಕೆ, ಯತ್ನಾಳ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲವೆಂದೂ ಹೇಳಲಾಗುತ್ತಿದೆ. ಆದರೆ, ಬಿಎಸ್‌ವೈ ಆಗಲಿ, ವಿಜಯೇಂದ್ರ ಆಗಲಿ ಯತ್ನಾಳ್ ವಿರುದ್ಧ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತಪಡಿಸಿಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕಿದೆ.

ಸಚಿವ ಮುರುಗೇಶ ನಿರಾಣಿಗೆ ಪಿಂಪ್ ಎಂದ ಯತ್ನಾಳ
ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಹಾಗೂ ಬೀಳಗಿ ಶಾಸಕ ಮುರುಗೇಶ ನಿರಾಣಿ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಬಸನಗೌಡ ಪಾಟೀಲ ಯತ್ನಾಳ ಮಾಡಿಕೊಂಡು ಬಂದಿದ್ದಾರೆ. ನಿರಾಣಿ ಅವರು ಹಲವು ನಾಯಕರ ಸಿಡಿಗಳನ್ನು ಇಟ್ಟುಕೊಂಡು ಬೆದರಿಕೆ ಹಾಕುತ್ತಿದ್ದಾರೆ. ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಇದನ್ನೂ ಮಾಡಿಯೇ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ ಎಂಬುದು ಯತ್ನಾಳರ ಆರೋಪವಾಗಿದೆ. ಇನ್ನೂ ಮುಂದೆ ಹೋಗಿ, ಮುರುಗೇಶ ನಿರಾಣಿ ಅವರನ್ನು 'ಪಿಂಪ್' ಎಂದು ಯತ್ನಾಳ ಕರೆದಿದ್ದಾರೆ. ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ನಿರಾಣಿ ಬರದಿರುವುದಕ್ಕೆ ಯತ್ನಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಎಂ ಬೊಮ್ಮಾಯಿಯನ್ನೂ ಬಿಡದ ಯತ್ನಾಳ
ಶಾಸಕ ಯತ್ನಾಳ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧವೂ ಸಾರ್ವಜನಿಕವಾಗಿ ಮಾತನಾಡಿದ್ದಾರೆ. ಪಂಚಮಸಾಲಿ ಮೀಸಲಾತಿ ವಿಚಾರವಾಗಿ ಬೊಮ್ಮಾಯಿ ಸುಳ್ಳು ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಶಿಗ್ಗಾವಿ ಪಟ್ಟಣದಲ್ಲಿರುವ ಬೊಮ್ಮಾಯಿ ಮನೆ ಮುಂದೆ ನಿಂತು ಬೊಮ್ಮಾಯಿ ಅವರನ್ನೇ ಯತ್ನಾಳ ಹಿಗ್ಗಾಮುಗ್ಗಾ ಟೀಕಿಸಿದ್ದಾರೆ. ಬೊಮ್ಮಾಯಿ ಒಬ್ಬ ಸುಳ್ಳುಗಾರ ಮುಖ್ಯಮಂತ್ರಿ ಎಂದೂ ಕರೆದಿದ್ದಾರೆ.

ಯತ್ನಾಳ ವಿರುದ್ಧ ಬಿಜೆಪಿ ಕ್ರಮ
ಇಬ್ಬರು ಸಚಿವರಾದ ಮುರುಗೇಶ್ ನಿರಾಣಿ ಮತ್ತು ಸಿ ಸಿ ಪಾಟೀಲ್ ವಿರುದ್ಧ ಸಾರ್ವಜನಿಕ ವೇದಿಕೆಯಲ್ಲಿ ಹೇಳಿಕೆ ನೀಡಿದ್ದಕ್ಕಾಗಿ ಯತ್ನಾಳ್ ಅವರಿಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ನೋಟಿಸ್ ನೀಡಿದೆ. ಹಿರಿಯ ನಾಯಕರಾದ ಅವಿನಾಶ್ ರೈ ಖನ್ನಾ ಮತ್ತು ಓಂ ಪಾಠಕ್ ಅವರನ್ನೊಳಗೊಂಡ ಕೇಂದ್ರ ಬಿಜೆಪಿ ಶಿಸ್ತು ಸಮಿತಿ ಸೋಮವಾರ ಯತ್ನಾಳ್ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಒಂದು ವಾರದೊಳಗೆ ಉತ್ತರಿಸುವಂತೆ ಸೂಚಿಸಿದೆ. ಬಸವರಾಜ ಬೊಮ್ಮಾಯಿ ಸಂಪುಟದ ಕೆಲವು ಸಚಿವರ ವಿರುದ್ಧ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಯತ್ನಾಳ್ ಅವರು ಆಗಾಗ್ಗೆ ಹೇಳಿಕೆ ನೀಡುತ್ತಿರುವ ಬಗ್ಗೆ ರಾಜ್ಯ ಘಟಕವು ಕೇಂದ್ರ ನಾಯಕರ ಗಮನಕ್ಕೆ ತಂದ ನಂತರ ನೋಟಿಸ್ ನೀಡಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ರಾಜ್ಯ ಬಿಜೆಪಿಯಿಂದಲೂ ನೋಟಿಸ್
ಪಂಚಮಸಾಲಿ ಲಿಂಗಾಯತ ಕೋಟಾ ವಿವಾದಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಇತರ ನಾಯಕರ ವಿರುದ್ಧ ಯತ್ನಾಳ್ ಹೇಳಿಕೆ ನೀಡಿದ್ದಕ್ಕೆ ರಾಜ್ಯ ಬಿಜೆಪಿ ಈ ಹಿಂದೆ ಯತ್ನಾಳ್ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದರೂ, ಅವರು ಪ್ರಭಾವಿ ಪಂಚಮಸಾಲಿಯಾಗಿರುವುದರಿಂದ ಬಿಜೆಪಿ ವರಿಷ್ಠರು ಯತ್ನಾಳ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

ನಿರಾಣಿ-ಯತ್ನಾಳ್ ಜಟಾಪಟಿ ಬಗೆಹರಿಸಲು ಸಭೆ: ಕಟೀಲ್
ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡುವಿನ ಜಟಾಪಟಿ ಸಂಬಂಧ ಪಕ್ಷದ ವರಿಷ್ಠರು ಸಭೆ ನಡೆಸಲಿದ್ದಾರೆ ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಂಗಳವಾರ ಹೇಳಿದ್ದಾರೆ. 'ಯತ್ನಾಳ್ ಅವರು ನಿರಾಣಿ ಮತ್ತು ಪಿಡಬ್ಲ್ಯುಡಿ ಸಚಿವ ಸಿ ಸಿ ಪಾಟೀಲ್ ಅವರ ಮೇಲೆ ಪದೇಪದೇ ಮಾತಿನ ದಾಳಿ ನಡೆಸುತ್ತಿರುವ ಬಗ್ಗೆ ನಾನು ದೆಹಲಿಯಲ್ಲಿ ಪಕ್ಷದ ಮುಖಂಡರಿಗೆ ವಿವರಿಸಿದ್ದೇನೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಕರ್ನಾಟಕ ಉಸ್ತುವಾರಿ) ಅರುಣ್ ಸಿಂಗ್ ಅವರು ಶೀಘ್ರದಲ್ಲೇ ನಿರಾಣಿ ಮತ್ತು ಯತ್ನಾಳ್ ಅವರನ್ನು ಸಭೆಗೆ ಕರೆದು ಸಮಸ್ಯೆಯನ್ನು ಪರಿಹರಿಸಲಿದ್ದಾರೆ' ಎಂದು ಕಟೀಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಯತ್ನಾಳ್‌ಗೆ ಟಿಕೆಟ್ ಸಿಕ್ಕರೆ ಬಿಜೆಪಿಯಿಂದಲೇ ತೊಂದರೆ
ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಈ ಬಾರಿಯೂ ಬಿಜೆಪಿಯಿಂದ ಟಿಕೆಟ್ ಸಿಗಬಹುದು. ಒಂದು ವೇಳೆ, ಯತ್ನಾಳ ಅವರು ಚುನಾವಣೆಯಲ್ಲಿ ಕಣಕ್ಕಿಳಿದರೆ, ಬಿಜೆಪಿ ನಾಯಕರೇ ಅವರಿಗೆ ಅಡ್ಡಗಾಲಾಗುವ ಸಾಧ್ಯತೆಗಳು ಹೆಚ್ಚಿವೆ. ಸಚಿವರಾದ ಮುರುಗೇಶ ನಿರಾಣಿ ಹಾಗೂ ಸಿ ಸಿ ಪಾಟೀಲ ಅವರು ಪಂಚಮಸಾಲಿ ಪ್ರಭಾವಿ ಮುಖಂಡರು. ಅವರು ಸಂಪನ್ಮೂಲಗಳನ್ನೂ ಹೊಂದಿದ್ದಾರೆ. ನಿರಾಣಿ ಅವರು ಬಾಗಲಕೋಟೆ ಜಿಲ್ಲೆಯವರು ಹಾಗೂ ಸಿ ಸಿ ಪಾಟೀಲ ಗದಗ ಜಿಲ್ಲೆಯವರು. ಹೀಗಾಗಿ, ಈ ಚುನಾವಣೆಯಲ್ಲಿ ಯತ್ನಾಳರ ಗೆಲುವಿಗೆ ಬಿಜೆಪಿ ನಾಯಕರೇ ಅಡ್ಡಗಾಲಾಗುವ ಸಾಧ್ಯತೆಗಳಿರುವುದನ್ನು ಅಲ್ಲಗಳೆಯುವಂತಿಲ್ಲ.
-
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ












Click it and Unblock the Notifications