ನಾಲ್ಕಾರು ಹಾಲಿ ಶಾಸಕರಿಗೆ ಬಿಜೆಪಿ ಟಿಕೆಟ್ ಇಲ್ಲವೆಂದ ಬಿಎಸ್‌ವೈ: ಈ ಶಾಸಕರಿಗೆ ಶುರುವಾಯ್ತು ಭಯ- ಯಾರಿರಬಹುದು ಲಿಸ್ಟ್ ಅಲ್ಲಿ?
ಮಂಗಳವಾರ ಹೇಳಿಕೆ ನೀಡಿರುವ ಮಾಜಿ ಸಿಂಎ ಬಿ ಎಸ್ ಯಡಿಯೂರಪ್ಪ, 'ನಾಲ್ಕರಿಂದ ಆರು ಬಿಜೆಪಿ ಶಾಸಕರು ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಅನ್ನು ಕಳೆದುಕೊಳ್ಳಲಿದ್ದಾರೆ' ಎಂದು ತಿಳಿಸಿದ್ದಾರೆ. ಈ ಶಾಸಕರು ಯಾರಿರಬಹುದು? ವರದಿ ಓದಿ
ಬೆಂಗಳೂರು, ಮಾರ್ಚ್ 07: ಕರ್ನಾಟಕ ವಿಧಾನಸಭೆ ಚುನಾವಣೆಗೆ ಎರಡು ತಿಂಗಳಷ್ಟೇ ಬಾಕಿ ಇದೆ. ಟಿಕೆಟ್‌ಗಾಗಿ ಹಲವಾರು ಮುಖಂಡರು ಹರಸಾಹಸ ಪಡುತ್ತಿದ್ದಾರೆ. ಜೆಡಿಎಸ್ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಶೀಘ್ರದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ಕಾಂಗ್ರೆಸ್ ಹೇಳಿದೆ. ಬಿಜೆಪಿಯು ಸಹ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದಗೊಳಿಸುತ್ತಿದೆ. ಇದೇ ವೇಳೆ, ಮಂಗಳವಾರ ಹೇಳಿಕೆ ನೀಡಿರುವ ಮಾಜಿ ಸಿಂಎ ಬಿ ಎಸ್ ಯಡಿಯೂರಪ್ಪ, 'ನಾಲ್ಕರಿಂದ ಆರು ಬಿಜೆಪಿ ಶಾಸಕರು ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಅನ್ನು ಕಳೆದುಕೊಳ್ಳಲಿದ್ದಾರೆ' ಎಂದು ತಿಳಿಸಿದ್ದಾರೆ.

ವಿಜಯ ಸಂಕಲ್ಪ ಯಾತ್ರೆಗೂ ಮುನ್ನ ಸುದ್ದಿಗೋಷ್ಠಿ
ಕಲಬುರಗಿಯಲ್ಲಿ ವಿಜಯ ಸಂಕಲ್ಪ ಯಾತ್ರೆಗೂ ಮುನ್ನ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 'ಈಗಿರುವ ನಾಲ್ಕರಿಂದ ಆರು ಹಾಲಿ ಶಾಸಕರಿಗೆ ಟಿಕೆಟ್ ಸಿಗುವುದಿಲ್ಲ. ಉಳಿದಂತೆ ಬಹುತೇಕ ಶಾಸಕರಿಗೆ ಟಿಕೆಟ್ ದೊರೆಯಲಿದೆ' ಎಂದು ಅವರು ಸ್ಪಷ್ಟ ಪಡಿಸಿದ್ದಾರೆ. ಮುಖ್ಯಮಂತ್ರಿ ಅಭ್ಯರ್ಥಿಗೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ನಾವು ಮೊದಲು ಸ್ಪಷ್ಟ ಬಹುಮತ ಪಡೆಯಬೇಕಿದೆ. ಆ ನಂತರ ಪಕ್ಷದ ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದನ್ನು ನಿರ್ಧರಿಸುತ್ತೇವೆ' ಎಂದು ಯಡಿಯೂರಪ್ಪ ಹೇಳಿದರು.

ಕನಿಷ್ಠ 140 ಸ್ಥಾನ ಗೆಲ್ಲಲಿದೆ ಬಿಜೆಪಿ
ಕನಿಷ್ಠ 140 ಸ್ಥಾನಗಳನ್ನು ಗೆಲ್ಲುವ ಮೂಲಕ ಪಕ್ಷವು ರಾಜ್ಯದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, 'ಬಿಜೆಪಿಯ ಉನ್ನತ ನಾಯಕರೊಂದಿಗೆ ಚರ್ಚಿಸಿದ ನಂತರ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಘೋಷಿಸಲಾಗುವುದು' ಎಂದು ಹೇಳಿದ್ದಾರೆ.

ಬಿಎಸ್‌ವೈ ಹೇಳಿಕೆ: ಹಲವಾರು ಉಹಾಪೋಹ
ಬಿಎಸ್‌ವೈ ಹೇಳಿಕೆ ಹಿಂದೆ ಹಲವಾರು ಉಹಾಪೋಹಗಳು ಹುಟ್ಟಿಕೊಂಡಿವೆ. ನಾಲ್ಕರಿಂದ ಆರು ಹಾಲಿ ಶಾಸಕರು ಯಾರಿರಬಹುದು ಎಂಬ ಪ್ರಶ್ನೆಗಳು ಎದ್ದಿವೆ. ಶಿಕಾರಿಪುರದಲ್ಲಿ ತಾವು ಸ್ಪರ್ಧಿಸುವುದಿಲ್ಲವೆಂದು ಬಿಎಸ್‌ವೈ ಈಗಾಗಲೇ ಹೇಳಿದ್ದಾರೆ. ಹೀಗಾಗಿ ಅವರ ಟಿಕೆಟ್ ಪುತ್ರ ಬಿವೈ ವಿಜಯೇಂದ್ರಗೆ ಸಿಗುವ ಸಾಧ್ಯತೆ ಇದೆ. ಇನ್ನು ಲಂಚ ಪ್ರಕರಣದ ಆರೋಪ ಹೊತ್ತಿರುವ ಚೆನ್ನಗಿರಿ ಶಾಸಕ ಮಾಡಾಳ್ ವಿರುಪಾಕ್ಷಪ್ಪಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆಗಳು ದಟ್ಟವಾಗಿವೆ.

ಕರ್ನಾಟಕದಲ್ಲಿಯೂ ಗುಜರಾತ್ ಮಾಡೆಲ್?
ಗುಜರಾತ್‌ನಲ್ಲಿ ಹಲವು ಬಾರಿ ಆಯ್ಕೆಯಾಗಿರುವ ಬಿಜೆಪಿಯ ಹಿರಿಯ ಶಾಸಕರಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ. ಇಂತಹ ಹಿರಿಯ ಶಾಸಕರಲ್ಲಿ ಶಿವಮೊಗ್ಗ ಶಾಸಕ ಕೆಎಸ್ ಈಶ್ವರಪ್ಪ ಒಬ್ಬರು. ಇನ್ನುಳಿದಂತೆ, ವಿವಾದಿತ ಹೇಳಿಕೆ ನೀಡುವ ಮೂಲಕ ಅಪಖ್ಯಾತಿಗೆ ಗುರಿಯಾಗಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳರಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆಗಳಿವೆ ಎಂಬ ಮಾತುಗಳು ಮುನ್ನೆಲೆಗೆ ಬಂದಿವೆ.

ರಾಹುಲ್ ಗಾಂಧಿ ಏಕೆ ಬಂದಿಲ್ಲ ಎಂದು ಬಿಎಸ್‌ವೈ
ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಇಲ್ಲ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ರಾಷ್ಟ್ರೀಯ ನಾಯಕರನ್ನು ಬಿಜೆಪಿ ಆಹ್ವಾನಿಸುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಇದಕ್ಕೆ ಪ್ರತಿಕ್ರಿಯಿಸಿದ ಅವರು, 'ಕಾಂಗ್ರೆಸ್‌ನ ನಾಯಕ ಯಾರು? ರಾಹುಲ್ ಗಾಂಧಿ ಏಕೆ ಬಂದಿಲ್ಲ' ಎಂದು ಪ್ರಶ್ನಿಸಿದರು. ರಾಹುಲ್ ಗಾಂಧಿ ವಿದೇಶಗಳಲ್ಲಿ ಭಾರತದ ಬಗ್ಗೆ ತುಂಬಾ ಹಗುರವಾಗಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂದು ಹೇಳಿದರು.

ಸಿದ್ದರಾಮಯ್ಯ, ಡಿಕೆಶಿ ವಿರುದ್ಧವೂ ವಾಗ್ದಾಳಿ
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧವೂ ವಾಗ್ದಾಳಿ ನಡೆಸಿದರು. 'ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ವಿಧಾನಸಭೆ ಚುನಾವಣೆಗೂ ಮುನ್ನ ತಾವೇ ಸಿಎಂ ಎಂಬಂತೆ ವರ್ತಿಸುತ್ತಿದ್ದಾರೆ. ನಮ್ಮ ಪಕ್ಷವು ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರದ್ದು ಕೇವಲ ಭಿಕ್ಷುಕನ ಕನಸು' ಎಂದು ಬಿಎಸ್ ಯಡಿಯೂರಪ್ಪ ಟೀಕಿಸಿದರು.












Click it and Unblock the Notifications