Karnataka Election: ಹಿಜಾಬ್ ವಿವಾದ, ನೆಟ್ಟಾರು ಕೊಲೆ ಪ್ರಕರಣ- ಕರಾವಳಿಯಲ್ಲಿ ಬಿಜೆಪಿಯ ಭವಿಷ್ಯ ನಿರ್ಧರಿಸಲಿವೆಯೇ?
ದೇಶದಾದ್ಯಂತ ಸಂಚಲಯ ಸೃಷ್ಟಿಸಿದ್ದ ಹಿಜಾಬ್ ವಿವಾದ ಹಾಗೂ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಗಳು ಕರಾವಳಿಯ ಮತದಾರರನ್ನು ಧ್ರುವೀಕರಿಸಲಿವೆ ಎಂದು ಹೇಳಲಾಗುತ್ತಿದೆ. ಈ ವರದಿ ಹಾಗೂ ವಿಶ್ಲೇಷಣೆ ಓದಿ
ಬೆಂಗಳೂರು, ಮಾರ್ಚ್ 09: ಕರ್ನಾಟಕ ಚುನಾವಣೆಗೆ ಎರಡು ತಿಂಗಳು ಬಾಕಿ ಇದೆ. ಈ ಬಾರಿಯ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ, ವಿರೋಧ ಪಕ್ಷ ಕಾಂಗ್ರೆಸ್ ಹಾಗೂ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಪಕ್ಷಗಳು ತೀವ್ರ ಸೆಣಸಾಟ ನಡೆಸಿವೆ. ಅರವಿಂದ್ ಕೇಜ್ರಿವಾಲರ ಆಮ್ ಆದ್ಮಿ ಪಕ್ಷ ಮೊದಲ ಬಾರಿಗೆ ರಾಜ್ಯದಲ್ಲಿ ಚುನಾವಣಾ ಕಣಕ್ಕೆ ಇಳಿದಿದೆ. ಕಳೆದ ಸಾರಿಯಂತೆಯೇ ಈ ಸಾರಿಯೂ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಪೈಪೋಟಿ ಇದೆ. ಕರಾವಳಿ, ಮಧ್ಯ, ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ.

ಹಿಂದುತ್ವ ಪ್ರಯೋಗಕ್ಕೆ ಸಾಕ್ಷಿಯಾಗಿರುವ ಕರಾವಳಿ
2018ರ ಚುನಾವಣೆಯಲ್ಲಿ ಕರಾವಳಿ ಕರ್ನಾಟಕವು ಕಟ್ಟರ್ ಹಿಂದುತ್ವದ ಪ್ರಯೋಗಕ್ಕೆ ಸಾಕ್ಷಿಯಾಯಿತು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ 13 ಕ್ಷೇತ್ರಗಳ ಪೈಕಿ ಬಿಜೆಪಿಯು 12 ಸ್ಥಾನಗಳಲ್ಲಿ ಗೆದ್ದು ಬೀಗಿತು. ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಹಾಗೂ ಹಿಂದೂ ಮತ ಬ್ಯಾಂಕ್ ರಾಜಕೀಯದಿಂದ ಬಿಜೆಪಿಗೆ ಬಹುದೊಡ್ಡ ಲಾಭವಾಗಿತು. ಕಾಂಗ್ರೆಸ್‌ನಿಂದ ಕೇವಲ ಒಬ್ಬ ಶಾಸಕ ಆಯ್ಕೆಯಾದರು. ಅದು ಮುಸ್ಲಿಮರ ಬಾಹುಳ್ಯದ ಕ್ಷೇತ್ರದಿಂದ ಮಾಜಿ ಸಚಿವ ಯುಟಿ ಖಾದರ್ ಜಯಗಳಿಸಿದರು.

ಕರಾವಳಿಯಲ್ಲಿ ಆಡಳಿತ ವಿರೋಧಿ ಅಲೆ?
2023ರ ಚುನಾವಣೆಯು ಕರಾವಳಿ ಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆಗೆ ಸಾಕ್ಷಿಯಾಗಬಹುದು ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ದೇಶದಾದ್ಯಂತ ಸಂಚಲಯ ಸೃಷ್ಟಿಸಿದ್ದ ಹಿಜಾಬ್ ವಿವಾದ ಹಾಗೂ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಗಳು ಕರಾವಳಿಯ ಮತದಾರರನ್ನು ಧ್ರುವೀಕರಿಸಲಿವೆ ಎಂದು ಹೇಳಲಾಗುತ್ತಿದೆ. ನೆಟ್ಟಾರು ಹತ್ಯೆ ಪ್ರಕರಣದ ಕಾರಣ ಕರಾವಳಿಯ ಕಟು ಹಿಂದುತ್ವವಾದಿಗಳು ಬಿಜೆಪಿ ವಿರುದ್ಧ ಕೆಂಡ ಕಾರುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಇನ್ನು ಹಿಜಾಬ್ ವಿವಾದದ ಲಾಭ ಪಡೆಯಲು ಕಾಂಗ್ರೆಸ್ ಹಾಗೂ ಎಸ್‌ಡಿಪಿಐ ಯತ್ನ ನಡೆಸುತ್ತಿವೆ ಎಂದು ಹೇಳಲಾಗುತ್ತಿದೆ.

ನಾರಾಯಣ ಗುರುಗಳ ಸ್ತಬ್ಧಚಿತ್ರ ಪ್ರಕರಣ
ಈ ಬಾರಿ ಕರಾವಳಿಯಲ್ಲಿ ಜಾತಿ ರಾಜಕಾರಣವು ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದೆ ಎಂದು ಹೇಳಲಾಗುತ್ತಿದೆ. ಕೇಂದ್ರ ಸರ್ಕಾರವು ಅವರ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಸಮಾಜ ಸುಧಾರಕ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಮನ್ನಣೆ ನೀಡಿರಲಿಲ್ಲ. ಈ ಹಿನ್ನೆಲಯಲ್ಲಿ ನಾರಾಯಣ ಗುರುಗಳ ಅನುಯಾಯಿಗಳು ಬಿಜೆಪಿ ವಿರುದ್ಧ ಆಕ್ರೋಶಗೊಂಡಿದ್ದಾರೆ. ಅವರನ್ನು ಓಲೈಸಲು ಬಿಜೆಪಿ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ. ಆದರೂ, ಬಿಜೆಪಿಗೆ ಇದರಿಂದ ಲಾಭವಾಗುವುದು ಅಷ್ಟಕ್ಕಷ್ಟೇ ಎಂದು ನಂಬಲಾಗಿದೆ.

ಮುನ್ನೆಲೆಗೆ ಬಂದ ಜಾತಿ ರಾಜಕಾರಣ
ಕರಾವಳಿಯಲ್ಲಿ ಮೊಗವೀರರು, ಬಂಟರು, ಬಿಲ್ಲವರು ಮತ್ತು ಇತರ ಪ್ರಮುಖ ಸಮುದಾಯಗಳ ಪ್ರಾತಿನಿಧ್ಯವನ್ನು ಬಯಸಿ ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್ ಯತ್ನಿಸುತ್ತಿದೆ. ಹಿಂದಿನ ಚುನಾವಣೆಗಳಲ್ಲಿ ಕರಾವಳಿಯ ಬಹುತೇಕ ಕ್ಷೇತ್ರಗಳಲ್ಲಿ ಜಾತಿ ರಾಜಕಾರಣ ಅಷ್ಟೊಂದು ಕೆಲಸ ಮಾಡಿರಲಿಲ್ಲ. ಬಿಜೆಪಿ ಸರ್ಕಾರವು ವಿವಿಧ ಜಾತಿಗಳಿಗೆ ನಿಗಮಗಳನ್ನು ಘೋಷಿಸಿರುವುದು ಇದಕ್ಕೆ ಕಾರಣವಾಗಿದೆ. ಕೋಮು ಹತ್ಯಾ ಸರಣಿಯಲ್ಲಿ ಹತ್ಯೆಗೀಡಾದವರು ಹಿಂದೂಳಿದ ಜಾತಿಯವರೇ ಎಂಬ ನಿರೂಪಣೆಯನ್ನು ಕಟ್ಟಿಕೊಡುವ ಯತ್ನಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಜಾತಿ ರಾಜಕಾರಣ ಈ ಬಾರಿಯ ಚುನಾವಣೆಯಲ್ಲಿ ಕೆಲಸ ಮಾಡಲಿದೆ ಎಂದು ವಿಶ್ಲೇಷಕರು ನಂಬಿದ್ದಾರೆ.

ಜನರನ್ನು ತಲುಪುವ ಯತ್ನದಲ್ಲಿ ಅಭ್ಯರ್ಥಿಗಳು
ಕಂಬಳ, ಕಬಡ್ಡಿ, ವಾಲಿಬಾಲ್ ಟೂರ್ನಿಗಳು, ಆರೋಗ್ಯ ಶಿಬಿರಗಳು, ಬೀಚ್ ಫೆಸ್ಟ್‌ಗಳು ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜನರನ್ನು ತಲುಪು ಪ್ರಯತ್ನದಲ್ಲಿ ಅಭ್ಯರ್ಥಿಗಳು ತೊಡಗಿದ್ದಾರೆ. ಬಂಟ್ವಾಳ, ಪುತ್ತೂರು, ಉಡುಪಿ, ಕಾರ್ಕಳ, ಮಂಗಳೂರು ಕ್ಷೇತ್ರಗಳಲ್ಲಿ ಈ ಬಾರಿ ಜಿದ್ದಾಜಿದ್ದಿನ ಕದನ ಏರ್ಪಡುವ ಸಾಧ್ಯತೆಗಳು ಹೆಚ್ಚಿವೆ. ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸದಿದ್ದರೂ, ಬಂಟ್ವಾಳದಲ್ಲಿ ಹಾಲಿ ಬಿಜೆಪಿ ಶಾಸಕ ರಾಜೇಶ್ ನಾಯ್ಕ್ ವಿರುದ್ಧ ಆರು ಬಾರಿ ಆಯ್ಕೆಯಾಗಿರುವ ಮಾಜಿ ಸಚಿವ ರಮಾನಾಥ್ ರೈ ಹೆಸರು ಬಹುತೇಕ ಖಚಿತವಾಗಿದೆ.

ಮಂಗಳೂರಿನಲ್ಲಿ ಯುಟಿ ಖಾದರ್
ಮಂಗಳೂರು ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಯುಟಿ ಖಾದರ್ ಸ್ಪರ್ಧಿಸಲಿದ್ದಾರೆ. ಖಾದರ್ ವಿರುದ್ಧ ಎಸ್‌ಡಿಪಿಐ ತನ್ನ ಅಭ್ಯರ್ಥಿ ರಿಯಾಜ್ ಫರಂಗಿಪೇಟೆಯನ್ನು ಈಗಾಗಲೇ ಘೋಷಿಸಿದೆ. ಇದು ಖಾದರ್‌ಗೆ ಸ್ಪಲ್ಪ ಮಟ್ಟಿಗೆ ಹೊಡೆತ ನೀಡಲಿದೆ ಎಂದು ನಂಬಲಾಗಿದೆ. ಮಂಗಳೂರು ದಕ್ಷಿಣ ಹಾಗೂ ಉತ್ತರದಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರಿದ ಬಿಗಿ ಹಿಡಿತವಿರುವುದು ಕಂಡುಬಂದಿದೆ. ಆದರೆ, ನೆಟ್ಟಾರು ಹತ್ಯೆ ಪ್ರಕರಣವು ಇಲ್ಲಿನ ಸಂಘ ಪರಿವಾರದ ಕೆಲವರನ್ನು ಕೆರಳಿಸಿದೆ ಎಂಬ ಅಭಿಪ್ರಾಯಗಳಿವೆ. ಪ್ರಸ್ತುತ ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ.

ಪುತ್ತೂರಿನಲ್ಲಿಯೂ ಕಾಂಗ್ರೆಸ್- ಬಿಜೆಪಿ ಸಮರ
ಬಿಜೆಪಿಯ ಮಾಜಿ ಮುಖಂಡ ಅಶೋಕ್ ರೈ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸುವ ಸಾಧ್ಯತೆಗಳಿವೆ. ಹೀಗಾದರೆ ಬಿಜೆಪಿಯ ಹಾಲಿ ಶಾಸಕ ಸಂಜೀವ್ ಮಠಂದೂರು ಅವರ ಗೆಲುವು ಕಷ್ಟವಾಗಲಿದೆ ಎಂಬ ಮಾತುಗಳು ಕೇಳಿಬಂದಿವೆ. ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಶಾಫಿ ಬೆಳ್ಳಾರೆಯನ್ನು ಎಸ್‌ಡಿಪಿಐ ಕಣಕ್ಕಿಳಿಸಿದರೆ ಪುತ್ತೂರಿನಲ್ಲಿ ಕಾಂಗ್ರೆಸ್‌ಗೆ ಅಪಾಯವಾಗಬಹುದು ಎಂದು ಹೇಳಲಾಗುತ್ತಿದೆ.

ಕಾರ್ಕಳದಲ್ಲಿ ಮುತಾಲಿಕ್ ಸ್ಪರ್ಧೆ
ಕಾರ್ಕಳದಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸ್ಪರ್ಧಿಸಲಿದ್ದಾರೆ. ಇದು ಇಂಧನ ಸಚಿವ ವಿ ಸುನಿಲ್ ಕುಮಾರ್ ಅವರ ಕ್ಷೇತ್ರವಾಗಿದೆ. ಹಿಂದೂ ಮತಗಳನ್ನು ತಮ್ಮದಾಗಿಸಿಕೊಳ್ಳುವ ನಿಟ್ಟಿನಲ್ಲಿ ಮುತಾಲಿಕ್ ಕೆಲಸ ಮಾಡಲಿದ್ದಾರೆ. ಇದು ಬಿಜೆಪಿಗೆ ಹಿನ್ನೆಡೆ ತಂದಿಡಲಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications