ಚುನಾವಣೆ ಸಮರ ಸಿದ್ಧತೆಯಲ್ಲಿ ಜೆಡಿಎಸ್ ಗೆ ಎಲ್ಲಿ ಪ್ಲಸ್ಸು, ಎಲ್ಲಿ ಮಿಸ್ಸು?
ಬೆಂಗಳೂರು, ಜುಲೈ 8: ಕರ್ನಾಟಕ ವಿಧಾನಸಭೆ ಚುನಾವಣೆ ಅದೆಲ್ಲೋ ಮುಂದಿನ ವರ್ಷ ಇದೆ ಎಂಬ ಸನ್ನಿವೇಶ ರಾಜ್ಯದಲ್ಲಿ ಕಂಡುಬರುತ್ತಿಲ್ಲ. ಅದಕ್ಕೆ ತಕ್ಕಂತೆ ರಾಜಕೀಯ ಪಕ್ಷಗಳು ಸಹ ಕದನಕ್ಕೆ ತಾಲೀಮು ಆರಂಭಿಸಿವೆ.
ಅದರಲ್ಲೂ ರಾಜ್ಯದ ದಕ್ಷಿಣ ಜಿಲ್ಲೆಗಳಲ್ಲಿ ನೆಲೆ ಹೊಂದಿರುವ ಜೆಡಿಎಸ್ ಇದೀಗ ಉತ್ತರ ಕರ್ನಾಟಕದ ಕಡೆಗೆ ಕಣ್ಣು ನೆಟ್ಟು ಕೂತಿದೆ. ದಕ್ಷಿಣ ಭಾಗದಲ್ಲಿ ಕಾಂಗ್ರೆಸ್ ಜತೆಗೆ ಜೆಡಿಎಸ್ ನ ನೇರ ಕದನ ಇದ್ದರೆ, ಉತ್ತರದಲ್ಲಿ ಬಿಜೆಪಿ ಜತೆಗೆ ಜಿದ್ದಾಜಿದ್ದಿ. ಕಳೆದ ಗುರುವಾರ ಜೆಡಿಎಸ್ ಘೋಷಿಸಿರುವಂತೆ ಬೆಳಗಾವಿಯಲ್ಲಿ ಇದೇ ತಿಂಗಳ 11 ಮತ್ತು 19ರಂದು ಮಹಾದಾಯಿ ಹೋರಾಟ ಹಮ್ಮಿಕೊಳ್ಳಲಿದೆ.
ಇಡೀ ಉತ್ತರ ಕರ್ನಾಟಕದಲ್ಲಿ ಬಿಜೆಪಿ ಮತ ಬುಟ್ಟಿಗೆ ಕೈ ಹಾಕುವ ಕಾರಣಕ್ಕೆ ಈ ಧರಣಿ ಹಮ್ಮಿಕೊಳ್ಳಲಾಗುತ್ತಿದೆ. ಮಹಾದಾಯಿ ವಿಚಾರ ಪ್ರಸ್ತಾವ ಮಾಡಿ, ಪ್ರಧಾನಿ ಮಧ್ಯಸ್ಥಿಕೆಗೆ ಒತ್ತಾಯಿಸಿ ಬಿಜೆಪಿಯವರ ಮೇಲೆ ಜನರ ಗಮನ ಈ ರೀತಿಯಾಗಿ ಹೋಗುವಂತೆ ಮಾಡುವುದು ಜೆಡಿಎಸ್ ಉದ್ದೇಶ.
ಒಂದು ವೇಳೆ ಕೇಂದ್ರದಿಂದ ಮಹಾದಾಯಿ ಸಮಸ್ಯೆಗೆ ಪರಿಹಾರ ದೊರೆಯದಿದ್ದಲ್ಲಿ ಅದನ್ನೇ ಮುಂದು ಮಾಡಿ, ಬಿಜೆಪಿ ವಿರುದ್ಧ ಅಭಿಯಾನ ಕೈಗೊಳ್ಳುವ ಇರಾದೆ ಇದೆ ಎಂದು ಅಭಿಯಾನದ ಬಗ್ಗೆ ಮಾಹಿತಿ ಇರುವ ಜೆಡಿಎಸ್ ನ ಸದಸ್ಯರೊಬ್ಬರು ತಿಳಿಸಿದ್ದಾರೆ.

1990ರ ಮಧ್ಯ ಭಾಗದವರೆಗೆ ಇಲ್ಲಿ ಜನತಾ ದಳಕ್ಕೆ ನೆಲೆಯಿತ್ತು
ಉತ್ತರದ ಜಿಲ್ಲೆಗಳಲ್ಲಿ ಪ್ರಾಬಲ್ಯ ಸಾಧಿಸಲು ಈಗ ನಡೆಸುತ್ತಿರುವ ಪ್ರಯತ್ನದ ಹಿಂದೆ ಕೂಡ ಕಾರಣಗಳಿವೆ. ಏಕೆಂದರೆ 1990ರ ಮಧ್ಯ ಭಾಗದವರೆಗೆ ಇಲ್ಲಿ ಜನತಾ ದಳಕ್ಕೆ ಪ್ರಬಲವಾದ ನೆಲೆಯಿತ್ತು. ಅದನ್ನು ಮತ್ತೆ ನವೀಕರಿಸುವ ಉದ್ದೇಶ ಜೆಡಿಎಸ್ ಗೆ ಇದೆ.

ಈದ್ಗಾ ಮೈದಾನ ವಿವಾದ
1995ಕ್ಕೂ ಮುಂಚೆ ಜನತಾದಳಕ್ಕೆ ಕರ್ನಾಟಕದ ನಾನಾ ಜಿಲ್ಲೆಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಮತದಾರರಿದ್ದರು. ಆದರೆ ಈದ್ಗಾ ಮೈದಾನ ವಿವಾದ ಬುಗಿಲೆದ್ದಾಗ ಪರಿಸ್ಥಿತಿ ಬದಲಾಯಿತು. ಆ ಸಂದರ್ಭದಲ್ಲಿ ಹುಬ್ಬಳ್ಳಿಯಲ್ಲಿ ದೊಡ್ಡ ಮಟ್ಟದ ಕೋಮು ಹಿಂಸಾಚಾರ ನಡೆಯಿತು.
ಅಂಜುಮನ್-ಇ-ಇಸ್ಲಾಂ (ಶಿಕ್ಷಣ ಸಂಸ್ಥೆ) ಹಾಗೂ ಹುಬ್ಬಳ್ಳಿ ಧಾರವಾಡ ಪಾಲಿಕೆ ಮಧ್ಯೆ ಈದ್ಗಾ ಮೈದಾನದ ಮಾಲೀಕತ್ವದ ಸಂಬಂಧ ತಿಕ್ಕಾಟ ಶುರುವಾಯಿತು. ಆ ನಂತರ ಕೋಮುಗಲಭೆಯಾಗಿ ಮಾರ್ಪಟ್ಟಿತು. 1994ರ ಸ್ವಾತಂತ್ರ್ಯ ದಿನಾಚರಣೆಯಂದು ಪೊಲೀಸರ ಗುಂಡಿಗೆ ಆರು ಮಂದಿ ಮೃತಪಟ್ಟಾಗ ವಿವಾದ ತಾರಕಕ್ಕೇರಿತು.

ಜನತಾದಳ ಸರಕಾರದ ನೇತೃತ್ವ
ಆಗ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಜನತಾದಳ ಸರಕಾರದ ನೇತೃತ್ವವನ್ನು ಎಚ್ ಡಿ ದೇವೇಗೌಡ ವಹಿಸಿಕೊಂಡಿದ್ದರು. ಆ ವಿಚಾರದಲ್ಲಿ ಸರಕಾರ ಮುಸ್ಲಿಮರ ಪರ ಎಂಬ ಭಾವನೆ ವ್ಯಕ್ತವಾಯಿತು. ತಜ್ಞರು ಹೇಳುವ ಪ್ರಕಾರ, ಆ ವಿಚಾರವೇ ಜೆಡಿಎಸ್ ಗೆ ಉಲ್ಟಾ ಹೊಡೆಯಿತು. ಹಿಂದೂ ಮತದಾರರು ಬಿಜೆಪಿ ಪರವಾಗಿ ನಿಂತರು.

ಜೆಡಿಎಸ್ ನ ಮತ ಬ್ಯಾಂಕ್ ನೊಳಗೆ ಬಿಜೆಪಿಯ ಕೈ
ಈ ಘಟನೆ ನಂತರ ಜೆಡಿಎಸ್ ನ ಮತ ಬ್ಯಾಂಕ್ ನೊಳಗೆ ಬಿಜೆಪಿಯ ಕೈ ತೂರಿತು. ಜೆಡಿಎಸ್ ಮುಸ್ಲಿಮರ ಪಕ್ಷ ಎಂಬ ಬ್ರ್ಯಾಂಡ್ ಆಯಿತು. ಆ ಕಾರಣಕ್ಕೆ ಪಕ್ಷವು ಹಿಂದೂ ಮತದಾರರನ್ನು ಕಳೆದುಕೊಂಡಿತು. ಅದರ ಅನುಕೂಲ ಆಗಿದ್ದು ಬಿಜೆಪಿಗೆ. ಕಳೆದುಕೊಂಡ ಮತದಾರರನ್ನು ಮತ್ತೆ ಪಡೆಯಲು ಜೆಡಿಎಸ್ ಈ ವರೆಗೆ ಹೆಣಗುತ್ತಲೇ ಇದೆ.

ಕರ್ನಾಟಕದ ಇತರ ಜಿಲ್ಲೆಗಳಲ್ಲೂ ಗೆಲ್ಲಬೇಕು
ದಕ್ಷಿಣದ ಜಿಲ್ಲೆಗಳಾದ ಮೈಸೂರು, ಹಾಸನ, ಮಂಡ್ಯ ಹಾಗೂ ತುಮಕೂರಿನಲ್ಲಿ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸುವ ಪಕ್ಷದವರು ಕರ್ನಾಟಕದ ಇತರ ಜಿಲ್ಲೆಗಳಲ್ಲೂ ಗೆಲ್ಲಬೇಕು ಅಂತಾರೆ. ಮತ್ತೆ ಅಧಿಕಾರ ಹಿಡಿಯಬೇಕು ಅಂದರೆ ಗದಗ, ಹಾವೇರಿ, ಬೆಳಗಾವಿ, ದಾವಣಗೆರೆ ಹಾಗೂ ಹುಬ್ಬಳ್ಳಿ-ಧಾರವಾಡಗಳಲ್ಲಿ ಜೆಡಿಎಸ್ ಗೆಲುವು ಸಾಧಿಸಬೇಕು.
ಆ ಕಾರಣಕ್ಕೆ ಅಂತಲೇ ಹುಬ್ಬಳ್ಳಿಯಲ್ಲಿ ಬಾಡಿಗೆ ಮನೆ ಹಿಡಿದಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ, ಹೈದರಾಬಾದ್ -ಕರ್ನಾಟಕ ಭಾಗದಲ್ಲಿ ಸುತ್ತಾಡಿ, ಪಕ್ಷವನ್ನು ಜನಪ್ರಿಯ ಮಾಡಲು ಶ್ರಮಿಸುತ್ತಿದ್ದಾರೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲೂ ಜೆಡಿಎಸ್ ತುಂಬ ಸಕ್ರಿಯವಾಗಿದೆ. ಮಾಧ್ಯಮ ಅಭಿಯಾನ ಆರಂಭಿಸಿದೆ.

ಐವತ್ತು ಟೆಕಿಗಳ ನೇಮಕ
ಐವತ್ತು ಟೆಕಿಗಳನ್ನು ಒಳಗೊಂಡ ತಂಡವೊಂದನ್ನು ಜೆಡಿಎಸ್ ನೇಮಿಸಿಕೊಂಡಿದೆ. ಅದಕ್ಕಾಗಿ ಸದಾಶಿವನಗರದಲ್ಲಿ ಕಚೇರಿಯಂಥದ್ದು ಆರಂಭಿಸಿ, ಕುಮಾರಸ್ವಾಮಿ ಪರ ಜನಾಭಿಪ್ರಾಯ ಸಂಗ್ರಹ ಇನ್ನೇನು ಕೆಲ ದಿನಗಳಲ್ಲೇ ಆರಂಭವಾಗಲಿದೆ. ದಿನದ ಇಪ್ಪತ್ನಾಲ್ಕು ಗಂಟೆ ಹಾಗೂ ವಾರದ ಎಲ್ಲ ದಿನವೂ ಈ ತಂಡ ಕೆಲಸ ಮಾಡಲಿದೆ.

ಒಕ್ಕಲಿಗರ ಪಕ್ಷ ಎಂಬ ಇಮೇಜು
ಆದರೆ, ಇಷ್ಟೆಲ್ಲ ಪ್ರಯತ್ನದ ನಂತರವೂ ಜೆಡಿಎಸ್ ಅಂದರೆ ಒಕ್ಕಲಿಗರ ಪಕ್ಷ ಎಂಬುದು ಜನರ ಮನಸಿನಲ್ಲಿ ಉಳಿದುಹೋಗಿದೆ. ಆ ಕಾರಣಕ್ಕೆ ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ತುಂಬ ಒಳ್ಳೆ ಯಶಸ್ಸು ಗಳಿಸುವ ಸಾಧ್ಯತೆಯೇ ಕಡಿಮೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ನಲವತ್ತಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವ ಸಾಧ್ಯತೆ ಇಲ್ಲ ಎಂದು ಸಮೀಕ್ಷೆಗಳು ಹೇಳುತ್ತಿವೆ.
ಹಾಗಾದಲ್ಲಿ ಜೆಡಿಎಸ್ ಕಿಂಗ್ ಮೇಕರ್ ಆಗುತ್ತದೆ. ಸ್ಪಷ್ಟ ಬಹುಮತ ಯಾವುದೇ ಪಕ್ಷಕ್ಕೆ ದೊರೆಯದಿದ್ದರೆ ಕಾಂಗ್ರೆಸ್ ಅಥವಾ ಬಿಜೆಪಿ ಜತೆ ಸೇರಿ ಸರಕಾರ ರಚನೆ ಮಾಡುತ್ತದೆ.

ತಡ ಮಾಡಿತು ಜೆಡಿಎಸ್
ಇನ್ನು ಉತ್ತರ ಕರ್ನಾಟಕದ ಭಾಗದಲ್ಲಿ ದಲಿತರ ಮನೆಗಳಿಗೆ ಭೇಟಿ ಕೊಟ್ಟು ಯಡಿಯೂರಪ್ಪನವರು ಬಿಜೆಪಿಗೊಂದು ಇಮೇಜ್ ತಂದುಕೊಟ್ಟಿದ್ದಾರೆ. ಈ ಹಂತದಲ್ಲಿ ಮಹಾದಾಯಿ ಹೋರಾಟಕ್ಕೆ ಜೆಡಿಎಸ್ ಧುಮುಕುತ್ತಿರುವುದು ತೀರಾ ನಿಧಾನದ ನಿರ್ಧಾರ ಎಂಬ ಮಾತು ಕೂಡ ಹರಿದಾಡುತ್ತಿದೆ.

ದೇವೇಗೌಡರು ಕಾಂಗ್ರೆಸ್, ಕುಮಾರಸ್ವಾಮಿ ಬಿಜೆಪಿ
ಮೈತ್ರಿ ಇಲ್ಲದೆ ಜೆಡಿಎಸ್ ಅಧಿಕಾರಕ್ಕೆ ಬರುವುದು ಕಷ್ಟ. ಒಂದು ವೇಳೆ ಅಂಥ ಸನ್ನಿವೇಶ ಏರ್ಪಟ್ಟರೆ ಯಾವ ಪಕ್ಷದ ಜತೆಗೆ ಎಂಬುದೇ ಗೊಂದಲದಲ್ಲಿದೆ. ದೇವೇಗೌಡರಿಗೆ ಕಾಂಗ್ರೆಸ್ ಮೇಲೆ ಪ್ರೀತಿ. ಆದರೆ ಕುಮಾರಸ್ವಾಮಿ ಅವರು ಬಿಜೆಪಿ ಪರ. ಆದರೆ ಕೊನೆಗೆ ಏನಾಗುತ್ತದೆ ಎಂಬ ಕುತೂಹಲ ಇದ್ದೇ ಇದೆ.












Click it and Unblock the Notifications