Karnataka 7th Pay Commission; ಮಹತ್ವದ ಅಪ್‌ಡೇಟ್
ಬೆಂಗಳೂರು, ಮೇ 16; ಕರ್ನಾಟಕ ಸರ್ಕಾರ ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಗಳನ್ನು ಪರಿಷ್ಕರಿಸಲು ಮತ್ತು ನೂತನ ವೇತನ ರಚನೆ ಇತ್ಯಾದಿಗಳನ್ನು ರೂಪಿಸಲು ರಾಜ್ಯ 7ನೇ ವೇತನ ಆಯೋಗ ನೇಮಕ ಮಾಡಿತ್ತು. ದಿನಾಂಕ 19/5/2023ರಿಂದ ಜಾರಿಗೆ ಬರುವಂತೆ ವೇತನ ಆಯೋಗದ ಅವಧಿಯನ್ನು 6 ತಿಂಗಳ ಕಾಲ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಮಂಗಳವಾರ ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಉಮಾ ಕೆ. ಸರ್ಕಾರದ ಉಪ ಕಾರ್ಯದರ್ಶಿ ಆರ್ಥಿಕ ಇಲಾಖೆ (ಸೇವೆಗಳು-2) ಈ ಕುರಿತು ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಸರ್ಕಾರದ ನಡಾವಳಿಗಳು, ಪ್ರಸ್ತಾವನೆಗಳನ್ನು ಉಲ್ಲೇಖಿಸಿ ಈ ಕುರಿತು ಆದೇಶ ಹೊರಡಿಸಲಾಗಿದೆ ಎಂದು ತಿಳಿಸಲಾಗಿದೆ.

ಸರ್ಕಾರಿ ಆದೇಶ ಸಂಖ್ಯೆ: ಆಇ45 ಎಸ್ಆರ್‌ಪಿ 2022,ಬೆಂಗಳೂರು ದಿನಾಂಕ 15ನೇ ಮೇ 2023ರ ಪ್ರಕಾರ ಈ ಆದೇಶ ಪ್ರಕಟಿಸಲಾಗಿದೆ. ಕರ್ನಾಟಕ 7ನೇ ರಾಜ್ಯ ವೇತನ ಆಯೋಗವು ತನ್ನ ಕಾರ್ಯಕಲಾಪಗಳನ್ನು ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲು ಅನುಕೂಲವಾಗುವಂತೆ 7ನೇ ರಾಜ್ಯ ವೇತನ ಆಯೋಗದ ಕಾಲಾವಧಿಯನ್ನು ದಿನಾಂಕ 19/5/2023 ರಿಂದ 6 ತಿಂಗಳವರೆಗೆ ವಿಸ್ತರಿಸಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಸ್ತಾವನೆ ಏನು?: ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಗಳನ್ನು ಪರಿಷ್ಕರಿಸಲು ಮತ್ತು ನೂತನ ವೇತನ ರಚನೆ ಇತ್ಯಾದಿಗಳನ್ನು ರೂಪಿಸಲು, ದಿನಾಂಕ 19/11/2022ರ ಸರ್ಕಾರಿ ಆದೇಶದಲ್ಲಿ ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ 7ನೇ ರಾಜ್ಯ ವೇತನ ಆಯೋಗವನ್ನು ರಚಿಸಿ, 6 ತಿಂಗಳ ಒಳಗಾಗಿ ವರದಿಯನ್ನು ಸಲ್ಲಿಸುವಂತೆ ಆದೇಶಿಸಲಾಗಿತ್ತು.

ದಿನಾಂಕ 8/3/2023ರ ಆದೇಶದಲ್ಲಿ 7ನೇ ವೇತನ ಆಯೋಗದ ಪರಿಶೀಲನಾರ್ಹ ಅಂಶಗಳಿಗೆ ಸೇರ್ಪಡೆ ಮಾಡಿ ಆದೇಶ ಹೊರಡಿಸಲಾಗಿರುತ್ತದೆ. ವೇತನ ಪರಿಷ್ಕರಣೆ ಕುರಿತಂತೆ ಸರ್ಕಾರದ ವಿವಿಧ ಇಲಾಖೆ/ ಸಂಸ್ಥೆಗಳೊಂದಿಗೆ ವೇತನ ಆಯೋಗದ ಸಮಾಲೋಚನಾ ಕಾರ್ಯಗಳು ಪ್ರಗತಿಯಲ್ಲಿರುವುದನ್ನು ಸರ್ಕಾರವು ಗಮನಿಸಿದೆ ಮತ್ತು ಈ ಕೆಳಕಂಡಂತೆ ಆದೇಶವನ್ನು ಹೊರಡಿಸಿದೆ ಎಂದು ಹೇಳಿದೆ.
7ನೇ ರಾಜ್ಯ ವೇತನ ಆಯೋಗ; ಕರ್ನಾಟಕದ ಸರ್ಕಾರಿ ನೌಕರರ ಬೇಡಿಕೆಯಂತರ ಕರ್ನಾಟಕ ಸರ್ಕಾರ 7ನೇ ರಾಜ್ಯ ವೇತನ ಆಯೋಗವನ್ನು ರಚನೆ ಮಾಡಿ ಆದೇಶ ಹೊರಡಿಸಿತ್ತು. ಆಯೋಗಕ್ಕೆ ಸುಧಾಕರ್ ರಾವ್ ಅಧ್ಯಕ್ಷರಾಗಿದ್ದಾರೆ. ಪಿ. ಬಿ. ರಾಮಮೂರ್ತಿ, ಶ್ರೀಕಾಂತ್ ಬಿ. ವನಹಳ್ಳಿ ಸದಸ್ಯರು. ಮೂಲಸೌಲಭ್ಯ ಇಲಾಖೆ ಜಂಟಿ ಕಾರ್ಯದರ್ಶಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ಕಾರ್ಯದರ್ಶಿಯಾಗಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ವೇತನ/ ಭತ್ಯೆಗಳ ಪರಿಷ್ಕರಣೆಗಾಗಿ 7ನೇ ವೇತನ ಆಯೋಗ ರಚಿಸಲಾಗಿದೆ. ವೇತನ ಆಯೋಗ 6 ತಿಂಗಳಿನಲ್ಲಿ ವರದಿ ನೀಡಬೇಕು ಎಂದು ತಿಳಿಸಲಾಗಿತ್ತು. ಆದರೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಬಂದಿದ್ದರಿಂದ ಆಯೋಗ ವರದಿ ತಯಾರು ಮಾಡುವುದು ತಡವಾಗಿದೆ. ಆದ್ದರಿಂದ ಈಗ ಆಯೋಗದ ಅವಧಿ ವಿಸ್ತರಣೆ ಮಾಡಲಾಗಿದೆ.
ಆಯೋಗದ ವರದಿ ಬಂದ ಬಳಿಕ ಸರ್ಕಾರ ತೆಗೆದುಕೊಳ್ಳುವ ತೀರ್ಮಾನದಿಂದ ರಾಜ್ಯದ 6 ಲಕ್ಷ ಸರ್ಕಾರಿ ಅಧಿಕಾರಿ, ನೌಕರರರು. 3.40 ಲಕ್ಷ ನಿಗಮ ಮಂಡಳಿ, ಪ್ರಾಧಿಕಾರ ಮತ್ತು ವಿಶ್ವವಿದ್ಯಾಲಯ, ಸರ್ಕಾರಿ ಸ್ವಾಯತ್ತ ಸಂಸ್ಥೆಗಳ ಸಿಬ್ಬಂದಿಗಳು ಹಾಗೂ 4 ಲಕ್ಷ ನಿವೃತ್ತ ನೌಕರರಿಗೆ ಲಾಭವಾಗಲಿದೆ. ಚುನಾವಣೆಗೂ ಮುನ್ನ ಮಧ್ಯಂತರ ವರದಿಯನ್ನು ಆಯೋಗ ನೀಡಲಿದೆ ಎಂದು ನೌಕರರು ನಿರೀಕ್ಷೆ ಮಾಡಿದ್ದರು. ಆದರೆ ವರದಿ ಸಲ್ಲಿಕೆಯಾಗಲಿಲ್ಲ.












Click it and Unblock the Notifications