Karnataka 7th Pay Commission; ಸರ್ಕಾರಿ ನೌಕರರಿಗೆ ಸಿಹಿಸುದ್ದಿ
ಸರ್ಕಾರಿ ನೌಕರರು 7ನೇ ರಾಜ್ಯ ವೇತನ ಆಯೋಗವು ಹೊರಡಿಸಿರುವ ಪ್ರಶ್ನಾವಳಿಗಳಿಗೆ ಉತ್ತರಿಸಲು ಫೆಬ್ರವರಿ 28ರ ತನಕ ಅವಕಾಶ ನೀಡಿ ಆದೇಶ ಹೊರಡಿಸಲಾಗಿದೆ.
ಬೆಂಗಳೂರು, ಫೆಬ್ರವರಿ 15; ಕರ್ನಾಟಕ ಸರ್ಕಾರ 7ನೇ ರಾಜ್ಯ ವೇತನ ಆಯೋಗವನ್ನು ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ ರಚನೆ ಮಾಡಿತ್ತು. ವೇತನ ಆಯೋಗವು ಪ್ರಶ್ನಾವಳಿಗಳನ್ನು ಸಿದ್ಧಪಡಿಸಿ ಉತ್ತರ ನೀಡುವಂತೆ ರಾಜ್ಯ ಸರ್ಕಾರಿ ನೌಕರರಿಗೆ ಮನವಿ ಮಾಡಿತ್ತು.
ಆಯೋಗಕ್ಕೆ ವಹಿಸಲಾಗಿರುವ ಪರಿಶೀಲನಾಂಶಗಳ ಕುರಿತಂತೆ ಸಾರ್ವಜನಿಕರು, ಸೇವಾ ಸಂಘಗಳು ಹಾಗೂ ಸರ್ಕಾರಿ ನೌಕರರು ಅಲ್ಲದೇ, ಇಲಾಖೆಗಳಿಂದ, ಸಂಸ್ಥೆಗಳಿಂದ ಮಾಹಿತಿ ಹಾಗೂ ಮುಕ್ತ ಸಲಹೆಗಳನ್ನು ಪಡೆಯುವ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಪ್ರಶ್ನಾವಳಿಗಳನ್ನು ಬಿಡುಗಡೆ ಮಾಡಲಾಗಿತ್ತು.
ಈ ಪ್ರಶ್ನಾವಳಿಗಳಿಗೆ ಫೆಬ್ರವರಿ 10ರ ತನಕ ಉತ್ತರ ನೀಡಲು ಅವಕಾಶ ನೀಡಲಾಗಿತ್ತು. ದಿನಾಂಕ 17/01/2023ರ ಆದೇಶದಲ್ಲಿ ವಿವಿಧ ಪ್ರಶ್ನಾವಳಿಗಳನ್ನು ರಚಿಸಿದ್ದು, ಸಂಬಂಧಪಟ್ಟ ಪ್ರಶ್ನಾವಳಿಗಳಿಗೆ ಸರ್ಕಾರದ ಅಮುಕಾ/ ಪುಕಾ / ಕಾರ್ಯದರ್ಶಿಗಳು, ಇಲಾಖಾ ಮುಖ್ಯಸ್ಥರು, ವಿಶ್ವವಿದ್ಯಾನಿಲಯಗಳು, ಅನುದಾನಿತ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು, ಸರ್ಕಾರಿ ನೌಕರರು, ನಿವೃತ್ತ ವೇತನದಾರರು ಹಾಗೂ ಆಸಕ್ತರು ಉತ್ತರ ನೀಡುವಂತೆ ಕೋರಲಾಗಿತ್ತು.

ಆಯೋಗವು ಹೊರಡಿಸಿದ ಪ್ರಶ್ನಾವಳಿಗಳಿಗೆ ಸಂಬಂಧಿಸಿದ ಎಲ್ಲ ವರ್ಗಗಳಿಂದ ಪ್ರತಿಕ್ರಿಯೆ ಹಾಗೂ ಉತ್ತರಗಳು ಸ್ವೀಕೃತವಾಗಿರುವುದಿಲ್ಲ. ಅಲ್ಲದೇ ಇಲಾಖೆಗಳು ಹಾಗೂ ಸಂಘಸಂಸ್ಥೆಗಳಿಂದ ಉತ್ತರ ಹಾಗೂ ಸಲಹೆಗಳನ್ನು ಸಲ್ಲಿಸಲು ಹೆಚ್ಚುವರಿ ಕಾಲಾವಕಾಶವನ್ನು ಕೋರಿರುವುದನ್ನು ಆಯೋಗವು ಗಮನಿಸಿತ್ತು.
ಆದ್ದರಿಂದ ಪ್ರಶ್ನಾವಳಿಗಳಿಗೆ ಉತ್ತರ ನೀಡುವ ಕಾಲಾವಕಾಶವನ್ನು ವಿಸ್ತರಿಸುವುದು ಅಗತ್ಯವೆಂದು ಆಯೋಗವು ಮನಗಂಡಿತ್ತು. ಈ ಹಿನ್ನಲೆಯಲ್ಲಿ 7ನೇ ರಾಜ್ಯ ವೇತನ ಆಯೋಗದ ಕಾರ್ಯದರ್ಶಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಬುಧವಾರ ಆದೇಶವೊಂದನ್ನು ಹೊರಡಿಸಿದ್ದಾರೆ.
ಸರ್ಕಾರದ ಅಮುಕಾ/ ಪುಕಾ/ ಕಾರ್ಯದರ್ಶಿಗಳು, ಇಲಾಖಾ ಮುಖ್ಯಸ್ಥರು, ಸಂಘ ಸಂಸ್ಥೆಗಳು ಹಾಗೂ ಇತರರಿಂದ ವಿವಿಧ ಪ್ರಶ್ನಾವಳಿಗಳಿಗೆ ಉತ್ತರಿಸಲು ಈ ಹಿಂದೆ ನಿಗದಿಪಡಿಸಿದ ಕಾಲಾವಧಿಯನ್ನು ದಿನಾಂಕ 28/02/2023 ವರೆಗೆ ವಿಸಸ್ತರಣೆ ಮಾಡಲಾಗಿದೆ.

7ನೇ ರಾಜ್ಯ ವೇತನ ಆಯೋಗ ರಚನೆ; ಕರ್ನಾಟಕ ಸರ್ಕಾರ ಸರ್ಕಾರಿ ನೌಕರರು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು, ಸ್ಥಳೀಯ ಸಂಸ್ಥೆಗಳ ನೌಕರರು ಹಾಗೂ ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗಳ ವೇತನ, ತುಟ್ಟಿಭತ್ಯೆ ಹಾಗೂ ಇತರ ಸೌಲಭ್ಯಗಳ ಬಗ್ಗೆ ಪರಿಶೀಲಿಸಿ, ಪರಿಷ್ಕರಿಸಿ ಸರ್ಕಾರಕ್ಕೆ ವರದಿ ನೀಡಲು 19/11/2022ರಲ್ಲಿ 7ನೇ ರಾಜ್ಯ ವೇತನ ಆಯೋಗವನ್ನು ಸುಧಾಕರ್ ರಾವ್ ಭಾ.ಆ.ಸೇ (ನಿವೃತ್ತ) ಇವರ ಅಧ್ಯಕ್ಷತೆಯಲ್ಲಿ ರಚನೆ ಮಾಡಿದೆ.
ಆಯೋಗಕ್ಕೆ ವಹಿಸಲಾಗಿರುವ ಪರಿಶೀಲನಾಂಶಗಳ ಕುರಿತಂತೆ ಸಾರ್ವಜನಿಕರು, ಸೇವಾ ಸಂಘಗಳು ಹಾಗೂ ಸರ್ಕಾರಿ ನೌಕರರು ಅಲ್ಲದೇ, ಇಲಾಖೆಗಳಿಂದ, ಸಂಸ್ಥೆಗಳಿಂದ ಮಾಹಿತಿ ಹಾಗೂ ಮುಕ್ತ ಸಲಹೆಗಳನ್ನು ಪಡೆಯುವ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಆಯೋಗವು ಪ್ರಶ್ನಾವಳಿಗಳನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ತಯಾರಿಸಿದ್ದು ರಾಜ್ಯ ಪತ್ರದ ಮೂಲಕ ಪ್ರಕಟಿಸಿದೆ.
ಆಯೋಗದ ಪ್ರಶ್ನಾವಳಿಗಳಿಗೆ ಈಗಾಗಲೇ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಉತ್ತರಗಳನ್ನು ನೀಡಿದೆ. ಸಿ. ಎಸ್. ಷಡಾಕ್ಷರಿ ರಾಜ್ಯಾಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
7ನೇ ವೇತನ ಆಯೋಗವು ಪ್ರಶ್ನಾವಳಿಗಳಿಗೆ ಮಾತ್ರ ಉತ್ತರವನ್ನು ಕೋರಿದ್ದು, ಅದರನ್ವಯ ಮಾಹಿತಿಗಳನ್ನು ಒದಗಿಸಲಾಗಿದೆ. ಆಯೋಗವು ಶೀಘ್ರದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ವೃಂದವಾರು ಹಾಗೂ ಇಲಾಖಾವಾರು ಮಾಹಿತಿಗಳನ್ನು ಪ್ರತ್ಯೇಕವಾಗಿ ಸಲ್ಲಿಸಲು ಸಮಯವನ್ನು ನೀಡಲಿದೆ ಎಂದು ಸಿ. ಎಸ್. ಷಡಾಕ್ಷರಿ ಅವರು ಸ್ಪಷ್ಟಪಡಿಸಿದ್ದರು.
ಬಹಳಷ್ಟು ಇಲಾಖೆಗಳು ಹಾಗೂ ವೃಂದ ಸಂಘಗಳ ಸೇವಾ ವಿಷಯಗಳ ಕುರಿತು ನೀಡಿರುವ ಮಾಹಿತಿಗಳನ್ನು ರಾಜ್ಯ ಸಂಘದಿಂದ ಸಂಗ್ರಹ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಎಲ್ಲಾ ಇಲಾಖೆಗಳ-ವೃಂದವಾರು ಕ್ರೋಢೀಕೃತ ಮಾಹಿತಿಯನ್ನು ಪೂರಕ ದಾಖಲೆಗಳೊಂದಿಗೆ ವಾಸ್ತವ ಅಂಶಗಳನ್ನೊಳಗೊಂಡ ಸಮಗ್ರ ಮಾಹಿತಿಯನ್ನು ಆಯೋಗದ ಮುಂದೆ ಮಂಡಿಸಲಾಗುವುದು ಎಂದು ಹೇಳಿದ್ದರು.












Click it and Unblock the Notifications